top of page

ಪ್ರಗತಿಶೀಲ ಸಾಹಿತ್ಯದ ತಾತ್ವಿಕ ನೆಲೆಗಳು: ಒಂದು ವಿಶ್ಲೇಷಣೆ

  • Writer: The Social Science Dialogue TSSD
    The Social Science Dialogue TSSD
  • 6 days ago
  • 4 min read

ಆಶಿಕ್, ಸಂಶೋಧನಾರ್ಥಿ, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ-೫೭೭೪೫೧,

ದೂರವಾಣಿ: ೯೧೧೩೫೯೦೭೩೬, ಮಿಂಚಂಚೆ: koppaashik999@gmail.com


ಸಾರಾಂಶ:

ಪ್ರಗತಿಶೀಲ ಸಾಹಿತ್ಯ ಚಳುವಳಿಯ ತಾತ್ವಿಕತೆಯೇ ಬೇರೆಯಾಗಿದೆ. ಇಲ್ಲಿನ ಲೇಖಕರು ಕಿತ್ತುತಿನ್ನುವ ಬಡತನ, ಜಾತೀಯತೆ, ವರದಕ್ಷಿಣೆ ಮೊದಲಾದವುಗಳನ್ನು ಸಾಮಾಜಿಕ ವಾಸ್ತವಿಕ ನೆಲೆಯಲ್ಲಿ ರಚಿಸಲು ಪ್ರಯತ್ನಿಸಿದರು. ಕಾದಂಬರಿ ಜನಪ್ರಿಯವಾಗಲು ಮತ್ತು ಓದುಗ ವರ್ಗವನ್ನು ಸಾಹಿತ್ಯದೆಡೆಗೆ ಸೆಳೆದುಕೊಂಡದ್ದು ಪ್ರಗತಿಶೀಲ ಸಾಹಿತ್ಯದ ಬಹುದೊಡ್ಡ ಯಶಸ್ಸು ಎನ್ನಬಹುದು. ಮಾರ್ಕ್ಸ್ವಾದ ಮತ್ತು ಸಮತಾವಾದದ ಪ್ರಭಾವ ಪ್ರಗತಿಶೀಲ ಲೇಖಕರನ್ನು ಹೆಚ್ಚಾಗಿ ಆವರಿಸಿಕೊಂಡಿತು. ಕನ್ನಡ ಸಾಹಿತ್ಯದ ನೆಲೆಯಲ್ಲಿ ‘ಮಾನವೀಯತೆಗಾಗಿ ಕಲೆ’ ಎನ್ನುವ ದೃಷ್ಟಿಕೋನದಿಂದ ರೂಪುಗೊಂಡದ್ದು ಪ್ರಗತಿಶೀಲ ಸಾಹಿತ್ಯದ ವಿಶೇಷತೆಯಾಗಿದೆ. ಪ್ರಗತಿಶೀಲರ ಪ್ರಧಾನ ಆಶಯ ವರ್ಗ, ಬಡತನ, ಹಸಿವು, ಗಂಡು-ಹೆಣ್ಣಿನ ಸಂಬಂಧ, ಕಾಮ ವಿಶ್ಲೇಷಣೆಯೂ ಪ್ರಧಾನ ನೆಲೆಯಾದರೆ, ಸಾಮಾಜಿಕ ವಿಷಮತೆ, ಹೆಣ್ಣಿನ ಸ್ಥಾನಮಾನ, ಅವಳು ಅನುಭವಿಸುವ ಮಾನಸಿಕ ಹಿಂಸೆ, ವಿಷಮದಾಂಪತ್ಯದ ತಪ್ಪು ಗ್ರಹಿಕೆಗಳಿಂದ ಬಿಡುಗಡೆ ಹೊಂದಿ ಸುಖಾಂತ್ಯದೆಡೆಗೆ ಬದುಕು ತೆರೆದುಕೊಳ್ಳುವುದಾಗಿದೆ. ಇದು ಸಮಕಾಲೀನ ಬದುಕಿನ ಕ್ರೂರ ನೆಲೆಗಳನ್ನು ಹಿಡಿದಿಡುತ್ತದೆ.


ಪ್ರಮುಖ ಪರಿಕಲ್ಪನೆಗಳು: ಪ್ರಗತಿಶೀಲ ಸಾಹಿತ್ಯ, ಆಶಯ, ತಾತ್ವಿಕತೆ, ಹೆಣ್ಣಿನ ಸ್ಥಾನಮಾನ, ಸಮಾನತೆ.

ree

ಪೀಠಿಕೆ:

ಸಾಹಿತ್ಯವು ನಿಂತ ನೀರಲ್ಲ; ಅದು ನಿರಂತರವಾಗಿ ಹರಿಯುತ್ತಿರುತ್ತದೆ. ಅದು ಕಾಲದಿಂದ ಕಾಲಕ್ಕೆ ಬದಲಾವಣೆಯನ್ನು ಹೊಂದುತ್ತಾ ಹೊಸ ರೂಪವನ್ನು ಪಡೆದುಕೊಂಡು ಬರುತ್ತಿರುತ್ತದೆ. ಕನ್ನಡ ಸಾಹಿತ್ಯದಲ್ಲಿ ‘ಹೊಸಗನ್ನಡ ಸಾಹಿತ್ಯ’ ಎಂದು ಗುರುತಿಸಿದ ನಂತರ ನವೋದಯ, ಪ್ರಗತಿಶೀಲ, ನವ್ಯ ಮತ್ತು ದಲಿತ-ಬಂಡಾಯ ಎಂಬ ಪ್ರಮುಖ ನಾಲ್ಕು ಘಟ್ಟವನ್ನು ಕಾಣುತ್ತೇವೆ. ೧೯೪೦ ರಿಂದ ೧೯೫೦ರ ವರಗೆ ‘ಪ್ರಗತಿಶೀಲ ಸಾಹಿತ್ಯ’ ದವ್ಯಾಪ್ತಿ ಕಂಡುಬರುತ್ತದೆ. ನವೋದಯ ಸಾಹಿತ್ಯವು ‘ಕಾವ್ಯ’ ಪ್ರಕಾರಕ್ಕೆ ಹೆಚ್ಚು ಒತ್ತನ್ನು ನೀಡಿದರೆ, ಪ್ರಗತಿಶೀಲ ಸಾಹಿತ್ಯವು ಕಾದಂಬರಿ ಮತ್ತು ಕಥೆ ಪ್ರಕಾರಗಳಿಗೆ ಹೆಚ್ಚಿನ ಗಮನಹರಿಸಿತು. ಕಾದಂಬರಿ ಜನಪ್ರಿಯವಾಗಲು ಮತ್ತು ಓದುಗವರ್ಗವನ್ನು ಸಾಹಿತ್ಯದೆಡೆಗೆ ಸೆಳೆದುಕೊಂಡದ್ದು ಪ್ರಗತಿಶೀಲ ಸಾಹಿತ್ಯದ ಬಹುದೊಡ್ಡಯಶಸ್ಸು ಎನ್ನಬಹುದು. ಮಾರ್ಕ್ಸ್ವಾದ ಮತ್ತು ಸಮತಾವಾದದ ಪ್ರಭಾವ ಪ್ರಗತಿಶೀಲ ಲೇಖಕರನ್ನು ಹೆಚ್ಚಾಗಿ ಆವರಿಸಿಕೊಂಡಿತು.


‘ಪ್ರಗತಿ’ ಎಂದರೆ ‘ಮುನ್ನಡೆ’ ಎಂದು ಹೇಳಬಹುದಾದರೂ, ‘ಗತಿ’ ಎಂಬುದು ‘ಚಲನೆ’ಯನ್ನು ಸೂಚಿಸುತ್ತದೆ. ಇದ್ದುದ್ದರಲ್ಲಿಯ ಲೋಪದೋಷಗಳನ್ನು ಕಳಚಿ ಹೊಸ ಆಯಾಮಗಳನ್ನು ಪಡೆಯುತ್ತಾ ಸಾಗುವುದಾಗಿದೆ. ಪ್ರಗತಿಶೀಲ ಸಾಹಿತ್ಯವನ್ನು ಕುರಿತು ಅ.ನ.ಕೃ. ರವರು “ಸಮಾಜದ ಮೇಲೆ ಕಾಲಕಾಲಕ್ಕೆ ಕೂಡುವ ಧೂಳನ್ನು ನಿವಾರಿಸಿ ಅದರ ಶುಷ್ಕ ಜೀವನಕ್ಕೆ ಬದುಕನ್ನು ಯಾವುದು ಧಾರೆಯೆರೆಯುವುದೋ ಅದೇ ಪ್ರಗತಿಶೀಲ ಸಾಹಿತ್ಯ”.


ಪ್ರಗತಿಶೀಲ ಸಾಹಿತ್ಯದ ಇತಿಹಾಸವನ್ನು ಗಮನಿಸುವುದಾದರೆ, ‘ಅಖಿಲ ಭಾರತ ಪ್ರಗತಿಶೀಲ ಲೇಖಕರ ಸಂಘದ’ ಮೊದಲ ಅಧಿವೇಶನವು ೧೯೩೬ರಲ್ಲಿ ಲಕ್ನೋ ನಗರದಲ್ಲಿ ಪ್ರೇಮ್ ಚಂದ್ರರ ಅಧ್ಯಕ್ಷತೆಯಲ್ಲಿ ನಡೆಯಿತು. ಇವರ ಜೊತೆ ಆಚಾರ್ಯ ನರೇಂದ್ರ ದೇವ ಅವರು ಭಾಗವಹಿಸಿದ್ದರು. ೧೯೩೮ರಲ್ಲಿ ಕಲ್ಕತ್ತಾದಲ್ಲಿ, ೧೯೪೩ರಲ್ಲಿ ಮುಂಬೈಯಲ್ಲಿ ‘ಪ್ರಗತಿಶೀಲ ಲೇಖಕರ’ ಸಮಾವೇಶ ನಡೆಯಿತು. ಈ ಮೂರು ಸಮಾವೇಶದಲ್ಲಿ ದೊರಕದ ಯಶಸ್ಸು ನಾಲ್ಕನೇ ಸಮ್ಮೇಳನದಲ್ಲಿ ಪ್ರಗತಿಶೀಲ ಲೇಖಕರಿಗೆ ಹೆಚ್ಚಿನ ಮಟ್ಟದಲ್ಲಿ ಮನ್ನಣೆದೊರಕಿತು. ಜೊತೆಗೆ ಚಳವಳಿಗೆ ಒಂದು ಹೊಸ ರೂಪದೊರಕಿತು. ಈ ಸಮಾವೇಶವು ೧೯೪೩ರ ಮೇ ತಿಂಗಳ ೨೨, ೨೩ ಮತ್ತು ೨೪ರಲ್ಲಿ ಮುಂಬೈಯಲ್ಲಿ ನಡೆಯಿತು. ಈ ಸಮ್ಮೇಳನಕ್ಕೆ ಜನ ಬೆಂಬಲ ನೀಡಿದರು ಮತ್ತು ಈ ಮೂಲಕ ದೇಶಾದ್ಯಂತ ಪ್ರಗತಿಶೀಲ ಲೇಖಕರ ಅಸ್ತಿತ್ವವನ್ನು ಗುರುತಿಸುವಂತಾಯಿತು.


ಈ ಸಮ್ಮೇಳನದಿಂದ ಪ್ರಭಾವಿತರಾದ ಲೇಖಕರು ಕರ್ನಾಟಕದಲ್ಲೂ ಈ ಚಳವಳಿಯನ್ನು ಪ್ರಾರಂಭಿಸಿದರು. ೧೯೪೩ರ ಡಿಸೆಂಬರ್ ತಿಂಗಳಿನಲ್ಲಿ ‘ಕನ್ನಡ ನಾಡಿನ ಪ್ರಗತಿಶೀಲ ಲೇಖಕರ ಸಂಘ’ ಅಸ್ತಿತ್ವಕ್ಕೆ ಬಂದಿತು. ಕನ್ನಡ ಪ್ರಾಂತ್ಯದ ಪ್ರಗತಿಶೀಲ ಲೇಖಕರ ಸಂಘದ ಅಧ್ಯಕ್ಷರಾಗಿ ಅ.ನ.ಕೃ,ಗೌರವ ಕಾರ್ಯದರ್ಶಿಗಳಾಗಿ ನಾಡಿಗೇರ ಕೃಷ್ಣರಾಯ ಮತ್ತು ಅನಂತ ಪದ್ಮನಾಭ ಸೋಗಲ್ ಅವರು ಆಯ್ಕೆಯಾದರು. ಅ.ನ.ಕೃ ಮತ್ತು ಸಂಘದ ಸದಸ್ಯರು ಕನ್ನಡ ನಾಡಿನಾದ್ಯಂತ ಸಂಚರಿಸಿ ಸಭೆ, ಸಮಾರಂಭ, ವಿಚಾರ-ಬರಹ, ವಿಚಾರಗೋಷ್ಠಿ ಮೊದಲಾದ ಕ್ರಿಯಾತ್ಮಕ ತೆಯೊಂದಿಗೆ ಪ್ರಗತಿಶೀಲ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶ್ರಮವಹಿಸಿ ಯಶಸ್ವಿಯಾದರು.


ಪ್ರಗತಿಶೀಲ ಬರಹಗಾರರಿಗೆ ಸಾಮಾಜಿಕ ಸಮಸ್ಯೆಗಳು, ಜ್ವಲಂತ ಸಮಸ್ಯೆಗಳ ವಸ್ತುಗಳು ಸಾಕಷ್ಟಿದ್ದು ಅವುಗಳನ್ನೇ ವಸ್ತುವಾಗಿಸಿಕೊಂಡು ಬರೆದ ಬರಹಗಳೆಲ್ಲವೂ ಪ್ರಗತಿಶೀಲವೆಂದು ಕರೆಸಿಕೊಳ್ಳುವಂತಾಯಿತು. ಆದರೆ ಇವೆಲ್ಲವನ್ನೂ ಪ್ರಗತಿಶೀಲ ಎಂದು ಕರೆಯುವುದು ಅಸಮರ್ಪಕ ವೆನಿಸುತ್ತದೆ. ಕನ್ನಡ ಸಾಹಿತ್ಯದ ನೆಲೆಯಲ್ಲಿ ‘ಮಾನವೀಯತೆಗಾಗಿ ಕಲೆ’ ಎನ್ನುವ ದೃಷ್ಟಿಕೋನದಿಂದ ರೂಪುಗೊಂಡದ್ದು ಪ್ರಗತಿಶೀಲ ಸಾಹಿತ್ಯದ ವಿಶೇಷತೆಯಾಗಿದೆ. ಕರ್ನಾಟಕಕ್ಕೆ ೧೯೪೦ರ ಹೊತ್ತಿಗೆ ಬಂದ ಪ್ರಗತಿಶೀಲ ಚಳವಳಿ ತೀವ್ರರೂಪ ಪಡೆದುಕೊಂಡು ಬೀಸಿ ಹೋದ ಗಾಳಿಯಂತೆ ಬಹುಬೇಗನೆ ಮರೆಯಾಯಿತು. ೧೯೪೩ರ ಹೊತ್ತಿಗೆ ಪ್ರಗತಿಶೀಲ ಸಾಹಿತ್ಯ ಒಂದು ಸ್ಪಷ್ಟಗೊತ್ತು-ಗುರಿಯನ್ನು ಪಡೆದುಕೊಂಡಿತು. ೧೯೪೩ ರಿಂದ ೧೯೪೭ರ ವರೆಗೆ ಅನೇಕ ಸ್ಥಿತ್ಯಂತರಗಳನ್ನು ಮಾಡಿದ ಈ ಚಳವಳಿ ಬದುಕಿ ಬಾಳಿದ ಸಮಯ ಅತಿಕಡಿಮೆ.


ನವೋದಯ ಲೇಖಕರು ಸಾಮಾಜಿಕ ಸಮಸ್ಯೆಗಳನ್ನು ಚಿತ್ರಿಸುವಾಗ ನೈತಿಕ ಎಳೆಯಿಂದ ರಚಿಸಿದರು. ಆದರೆ ಪ್ರಗತಿಶೀಲ ಸಾಹಿತ್ಯ ಚಳುವಳಿಯ ತಾತ್ವಿಕತೆಯೇ ಬೇರೆಯಾಗಿದೆ. ಇಲ್ಲಿನ ಲೇಖಕರು ಕಿತ್ತುತಿನ್ನುವ ಬಡತನ, ಜಾತೀಯತೆ, ವರದಕ್ಷಿಣೆ ಮೊದಲಾದವುಗಳನ್ನು ಸಾಮಾಜಿಕ ವಾಸ್ತವಿಕ ನೆಲೆಯಲ್ಲಿ ರಚಿಸಲು ಪ್ರಯತ್ನಿಸಿದರು.


ಕನ್ನಡದ ಪ್ರಗತಿಶೀಲ ಲೇಖಕರು ಜಾಗತಿಕ ಮತ್ತು ಭಾರತೀಯ ಪ್ರಗತಿಶೀಲ ಸಾಹಿತ್ಯದ ಗಾಢವಾದ ಪ್ರಭಾವಕ್ಕೆ ಒಳಗಾಗಿದ್ದರು. ಅವರಿಗೆ ಮಾರ್ಕ್ಸ್ವಾದ, ಸಮತಾವಾದ, ಕಮ್ಯೂನಿಜ಼ಂ ಕಡೆಗೆ ಹೆಚ್ಚಿನ ಒಲವಿತ್ತು. ಪಾಶ್ಚಾತ್ಯ ಲೇಖಕರಾದ ಲಿಯೋಟಾಲ್‌ಸ್ಟಾಯ್, ಎಮಿಲಿ ಜೋಲಾ, ಮ್ಯಾಕ್ಸಿಂಗಾರ್ಕಿ ಮೊದಲಾದವರಿಂದ ಪ್ರೇರಿತರಾಗಿದ್ದರು. ಪ್ರಗತಿಶೀಲದ ಆಶಯವನ್ನು ಅನುಸರಿಸಿ ರಚಿತವಾದಕಥೆಗಳು ಒಂದು ಭಾಗವಾದರೆ,ಇನ್ನು ಕೆಲವು ಲೈಂಗಿಕತೆ, ವೇಶ್ಯಾಜೀವನ, ಬಡತನ, ಬಂಡವಾಳ ಶಾಹಿತ್ವದ ವಸ್ತುವನ್ನುಆಯ್ದುಕೊಂಡುರಚನೆಯಾದವು.


ಪ್ರಗತಿಶೀಲರು ಸಾಹಿತ್ಯದಲ್ಲಿ ಬಳಸುವ ಭಾಷೆಯಲ್ಲಿ ವೈವಿಧ್ಯತೆಇದೆ. ಅದರ ಜೀವಂತಿಕೆ ಇರುವುದು ನಿರೂಪಣ ಕ್ರಮದಲ್ಲಿ. ಇದು ಸಹಜವೂ, ಆಕರ್ಷಕವೂ ಆಗಿದ್ದು ಯಾವುದೇ ಚಿತ್ರಣವನ್ನು ಕಣ್ಣಿಗೆಕಟ್ಟುವಂತೆ ವಾಸ್ತವದ ವಿವರಗಳನ್ನು, ಕಥಾಜಗತ್ತನ್ನು ನೈಜ ನೆಲೆಗಟ್ಟಿನಲ್ಲಿ ಪ್ರಗತಿಶೀಲರು ನಿರೂಪಿಸಬಲ್ಲರು. ಪ್ರಗತಿಶೀಲರು ಚಿತ್ರಿಸುವ ಸ್ತ್ರೀ ಪಾತ್ರಗಳು ರೂಪಕ ಉಪಮೆಗಳನ್ನು ಮೀರಿಅವರ ವ್ಯಕ್ತಿತ್ವವನ್ನು, ಬದುಕನ್ನು ವಿಶಿಷ್ಟವಾದ ಭಾಷಾ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.


ಅ.ನ.ಕೃ.ಅವರ ‘ಹಳದಿಯ ಬಾಗಿಲು’ ಕಥೆಯನ್ನು ನೋಡುವುದಾದರೆ, ಇದು ವೇಶ್ಯೆಯೊಬ್ಬಳ ಕಥೆಯಾಗಿದ್ದು ಅವಳ ಜೀವನದ ವ್ಯಥೆಯನ್ನು ನಾಯಿಯ ಜೀವನದೊಂದಿಗೆ ಹೋಲಿಸಿ ರಚಿಸಲಾಗಿದೆ. ಇದರಕೇಂದ್ರ ಪಾತ್ರ‘ನಾಗಸಾನಿ’. ಇವಳು ವೇಶ್ಯೆಯಾಗಿದ್ದು, ಕಾರ್ಪೊರೇಷನ್‌ರವರು ಬೀದಿ ನಾಯಿಗಳನ್ನು ಕೊಲ್ಲುತ್ತಿದ್ದಾಗಅವರ ಬಳಿ ವಿನಂತಿಸಿ ಒಂದು ನಾಯಿಯನ್ನು ತಂದು ಸಾಕುತ್ತಾಳೆ. ನಾಗಸಾನಿ ಯೌವ್ವನದಲ್ಲಿದ್ದಾಗ ನಾಯಿಗೂ ಹೊಟ್ಟೆತುಂಬ ಊಟ ಸಿಗುತ್ತಿತ್ತು. ಅವಳ ರೂಪ, ಸೌಂದರ್ಯ, ವಯಸ್ಸು ಇರುವವರೆಗೂ ಜನ ಬರುತ್ತಿದ್ದರು. ದಿನ ಕಳೆದಂತೆ ನಾಗಸಾನಿಯ ಸಂಪಾದನೆ ಕಡಿಮೆಯಾಗಿ ಅವಳ ಬದುಕು ಬೀದಿಗೆ ಬರುತ್ತದೆ. ನಾಗಸಾನಿಯ ಜೊತೆ ಅವಳು ಸಾಕಿದ ನಾಯಿಯು ಮತ್ತೆ ಬೀದಿ ಪಾಲಾಗುತ್ತದೆ. ಕೊನೆಗೆ ಆಹಾರವಿಲ್ಲದೆ ನಾಗಸಾನಿಯೂ ಅಸುನೀಗುತ್ತಾಳೆ. ಅವಳನ್ನು ಕಂಡು ಯಾರೂ ಮರುಕ ಪಡದಿದ್ದಾಗಲೂ ನಾಯಿ ದುಃಖಿಸುತ್ತದೆ. ಮುನ್ಸಿಪಾಲಿಟಿಯ ಗಾಡಿ ಬಂದು ಅವಳ ಶವವನ್ನು ತೆಗೆದುಕೊಂಡು ಹೋಗುತ್ತದೆ. ಮರುದಿನ ನಾಯಿಯು ಅದೇ ಸ್ಥಳದಲ್ಲಿ ಪ್ರಾಣ ಬಿಡುತ್ತದೆ. ಈ ಕಥೆ ವೇಶ್ಯೆಯರ ಬದುಕಿನ ಕುರಿತ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ. ನಾಗಸಾನಿ ವೇಶ್ಯೆಯಾದರೂ ಕೂಡ ಅವಳಲ್ಲಿ ಮಾನವೀಯತೆಯ ಅಂತಃಕರಣವಿದೆ, ಕಷ್ಟಕ್ಕೆ ಸ್ಪಂದಿಸುವ ಮನಸ್ಸಿದೆ. ಅವಳು ಕೂಡ ಸಮಾಜದಲ್ಲಿ ಸಮಾನ ಸ್ಥಾನಮಾನಕ್ಕೆ ಒಳಪಡಬೇಕಾದವಳು.


ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವ ಈ ಕಥೆ ಸಮಾಜದ ವಾಸ್ತವತೆಯ ಅಂಶಗಳನ್ನು ಎಳೆ ಎಳೆಯಾಗಿ ಚಿತ್ರಿಸುತ್ತದೆ.ಇಂತಹ ಸಾಮಾಜಿಕ ಸಮಸ್ಯೆಗಳನ್ನು ಸಣ್ಣಕಥೆಯ ಮೂಲಕ ಅದರಲ್ಲೂ ಎರಡೇ ಪಾತ್ರಗಳ ಮೂಲಕ ತಾನು ಚಿತ್ರಿಸಲು ಬಯಸುವ ವಿಷಯವನ್ನು ಹೇಳಿ ಮುಗಿಸುವುದೇ ಕಲೆಗಾರಿಕೆ. ಈ ಕಥೆಯಲ್ಲಿ ವಸ್ತು ಮತ್ತು ನಿರೂಪಣ ದೃಷ್ಟಿಯಿಂದ ಬಳಸಿಕೊಂಡ ತಂತ್ರ ಕಥೆಯ ಯಶಸ್ಸಿಗೆ ಕಾರಣವಾಗುತ್ತದೆ.


ಪ್ರಗತಿಶೀಲರ ಪ್ರಧಾನ ಆಶಯ ವರ್ಗ, ಬಡತನ, ಹಸಿವು, ಗಂಡು-ಹೆಣ್ಣಿನ ಸಂಬಂಧ, ಕಾಮ ವಿಶ್ಲೇಷಣೆಯೂ ಪ್ರಧಾನ ನೆಲೆಯಾದರೆ, ಸಾಮಾಜಿಕ ವಿಷಮತೆ, ಹೆಣ್ಣಿನ ಸ್ಥಾನಮಾನ, ಅವಳು ಅನುಭವಿಸುವ ಮಾನಸಿಕ ಹಿಂಸೆ, ವಿಷಮ ದಾಂಪತ್ಯದ ತಪ್ಪು ಗ್ರಹಿಕೆಗಳಿಂದ ಬಿಡುಗಡೆ ಹೊಂದಿ ಸುಖಾಂತ್ಯದೆಡೆಗೆ ಬದುಕು ತೆರೆದುಕೊಳ್ಳುವುದಾಗಿದೆ. ಇದು ಸಮಕಾಲೀನ ಬದುಕಿನಕ್ರೂರ ನೆಲೆಗಳನ್ನು ಹಿಡಿದಿಡುತ್ತದೆ. ಸಾಮಾನ್ಯರನ್ನು ಅನಕ್ಷರಸ್ಥರನ್ನು ಶ್ರೀಮಂತ ವರ್ಗದವರು ಶೋಷಣೆಗೆ ಒಳಪಡಿಸಿಕೊಂಡಿದ್ದರು. ಪ್ರಗತಿಶೀಲರು “ಕನ್ನಡ ಸಾಹಿತ್ಯಕ್ಕೆ ಗ್ರಾಮ ಜೀವನ ಮತ್ತು ಕಾರ್ಮಿಕ ವರ್ಗದ ಜೀವನವನ್ನು ಪರಿಚಯಿಸಿಕೊಟ್ಟರು. ಜೊತೆಗೆ ಭಾಷೆಗೆ ಹೊಸ ಕಸುವನ್ನು ತಂದು ಕೊಟ್ಟರು” ಎಂದು ಹೇಳುವಲ್ಲಿ ಮಾರ್ಕ್ಸ್ವಾದದ ನೆಲೆಯನ್ ನುಗುರುತಿಸಬಹುದು. ಹಿಂದಿನ ಯಾವ ಸಾಹಿತ್ಯವು ಚಿತ್ರಿಸದ ಹೊಸ ಕೇಂದ್ರ ಭಾವವೊಂದನ್ನು ಸಾಹಿತ್ಯಕ್ಕೆ ಪರಿಚಯಿಸಿತು. ಪರಂಪರಾಗತವಾಗಿ ಬಂದಗೊಡ್ಡು ಸಂಪ್ರದಾಯಗಳನ್ನು ವೈಚಾರಿಕದೃಷ್ಟಿಯಿಂದ ಪ್ರಶ್ನಿಸುವುದು, ಧರ್ಮ ದೇವರುಗಳ ಹೆಸರಿನಲ್ಲಿ ನಡೆಯುವ ಶೋಷಣೆಯ ವಿರುದ್ಧಧ್ವನಿ ಎತ್ತುವುದು, ಅಸಂಖ್ಯಾತ ಸಾಮಾಜಿಕ ಸಮಸ್ಯೆಗಳ ವಿರುದ್ಧ, ಶೋಷಕರು ಹಾಗೂ ಬಂಡವಾಳಶಾಹಿಗಳ ವಿರುದ್ಧ ಸಮರ ಸಾರುವುದರ ಮೂಲಕ ಸಮಾನತೆಯುಳ್ಳ ಸಮಾಜವಾದಿ ಸಮಾಜದ ರಚನೆಗೆ ಪ್ರಯತ್ನಿಸುವುದು ಪ್ರಗತಿಶೀಲ ಸಾಹಿತ್ಯದ ಮುಖ್ಯಧ್ಯೇಯವಾಗಿದೆ.


ಸಮಾಜದ ಸಮಸ್ಯೆಗಳನ್ನು ಒಳಗೊಂಡಿರುವ ಸಾಮಾಜಿಕ ಕಾದಂಬರಿಗಳು ನವೋದಯದ ಸಂದರ್ಭದಲ್ಲಿ ಸೂಕ್ಷ್ಮ ವಾಗಿ ಕಾಣಿಸಿಕೊಂಡಿದೆ. ಆದರೆ ಸಮಸ್ಯೆಯ ಮೂಲ ಬೇರನ್ನು ಮುಕ್ತವಾಗಿ ಚರ್ಚಿಸಲು ಸಾಧ್ಯವಾಗಲಿಲ್ಲ. ನವೋದಯ ಸಾಹಿತ್ಯದಲ್ಲಿ ಹೆಣ್ಣಿನ ಸೂಕ್ಷö್ಮ ಸಂವೇದನೆ, ತಳಮಳಗಳನ್ನು ಗುರುತಿಸಿದ್ದರೂ ಕೂಡ, ಪ್ರಗತಿಶೀಲ ಸಾಹಿತ್ಯ ವಾಸ್ತವದ ನೆಲೆಗಟ್ಟಿನಲ್ಲಿ ಸಾಹಿತ್ಯ ಸೃಷ್ಟಿಸಲು ಪ್ರಯತ್ನಿಸಿತು. ಅ.ನ.ಕೃ., ನಿರಂಜನ, ಕಟ್ಟೀಮನಿ, ತ.ರಾ.ಸು. ಮೊದಲಾದ ಬರಹಗಾರರು ಶೋಷಣೆಯ ಮೂಲ ನೆಲೆಯನ್ನು ಸಾಹಿತಿಕವಾಗಿ ಗುರುತಿಸಿದರು. ಪ್ರಗತಿಶೀಲದ ಸಾಮಾಜಿಕ ಕಾದಂಬರಿಗಳು ಪ್ರಸ್ತುತ ಸಮಾಜದ ಶೋಷಣಾ ನೆಲೆಗಳನ್ನು ಪರಿಚಯಿಸುವುದರಜೊತೆಗೆ ಸ್ತ್ರೀ ಬದುಕಿನ ಅಸ್ತಿತ್ವವನ್ನು ಕುರಿತು ವಿವೇಚಿಸುತ್ತದೆ. ಸಮಾನತೆಯನ್ನು ಮೌಲ್ಯವೆಂದು ಸ್ವೀಕರಿಸಿ ಆ ಮೌಲ್ಯಗಳ ಕಡೆಗೆತುಡಿಯುತ್ತ ಭವಿಷ್ಯದಕಡೆಗೆ ಮುಖಮಾಡಿರುವುದನ್ನುಕಾಣಬಹುದು.


ಪರಾಮರ್ಶನ ಗ್ರಂಥಗಳು:

ಬಸವರಾಜ ಸಾದರ,(ಸಂ).(೨೦೧೯). ಇಪ್ಪತ್ತನೆಯ ಶತಮಾನ ದಕನ್ನಡ ಸಾಹಿತ್ಯ ಘಟ್ಟಗಳು, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ.

ಬಸವರಾಜ ಸಾದರ.(೨೦೧೯). ಬಸವರಾಜಕಟ್ಟೀ ಮನಿಯವರ ಕಾದಂಬರಿಗಳು, ಪ್ರಸಾರಾಂಗ, ಬಸವರಾಜಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ.

ಬಸವರಾಜ ಸಬರದ.(೨೦೨೨). ಪ್ರಗತಿಶೀಲ ಕಾದಂಬರಿಗಳು, ಪ್ರಸಾರಾಂಗ, ಬಸವರಾಜಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ.

ದೇಜಗೌ, ಸಿ.ಪಿ.ಕೆ,(ಸಂ).(೨೦೨೩). ಕಟ್ಟೀಮನಿ ಬದುಕು-ಬರಹ, ಪ್ರಸಾರಾಂಗ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ.

ರಾಘವೇಂದ್ರ ರಾವ್ ಎಚ್.ಎಸ್.(೨೦೨೧). ಪ್ರಗತಿ ಶೀಲತೆ, ಕರ್ನಾಟಕ ಸಾಹಿತ್ಯ ಆಕಾಡೆಮಿ, ಬೆಂಗಳೂರು,

ಶೇಷಗಿರಿ ರಾವ್ ಎಲ್.ಎಸ್.(೨೦೨೦). ಹೊಸಗನ್ನಡ ಸಾಹಿತ್ಯ ಚರಿತ್ರೆ, ಸಪ್ನ ಬುಕ್ ಹೌಸ್, ಬೆಂಗಳೂರು.

Comments


bottom of page