top of page

‘ಕರ್ನಾಟಕ ನಂದಿನಿ’: ಕನ್ನಡ ಮಹಿಳಾ ಪತ್ರಿಕೋದ್ಯಮದ ಆರಂಭದ ಕಥನ

  • Writer: The Social Science Dialogue TSSD
    The Social Science Dialogue TSSD
  • Nov 24
  • 11 min read

ರೂಪ. ಕೆ, ಸಂಶೋಧನಾ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.


ನಿರಂಜನ, ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.



ಸಾರಾಂಶ:

ಕನ್ನಡ ಪತ್ರಿಕಾಲೋಕದಲ್ಲಿ ಮಹಿಳೆಯರಿಗಾಗಿಯೇ ‘ಕರ್ನಾಟಕ ನಂದಿನಿ’ ಎಂಬ ಮಾಸಿಕವನ್ನು ೧೯೧೬ರ ಅಕ್ಟೋಬರ್‌ನಲ್ಲಿ ಪ್ರಾರಂಭಿಸುವ ಮೂಲಕ ನಂಜನಗೂಡು ತಿರುಮಲಾಂಬ ಅವರು ಕನ್ನಡದ ಮೊಟ್ಟ ಮೊದಲ ಮಹಿಳಾ ಸಂಪಾದಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ‘ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. ಮಹಿಳೆಯರು ಮನೆಗೇ ಸೀಮಿತರಾಗಿರಬೇಕಾಗಿತ್ತು. ೧೯೧೬ರ ಸುಮಾರಿಗೆ ಪತ್ರಿಕೆಯೊಂದನ್ನು ಪ್ರಾರಂಭಿಸಿ, ನಡೆಸುವುದು ಪುರುಷರಿಗೂ ಸುಲಭದ ಮಾತಾಗಿರಲಿಲ್ಲ. ಇಂತಹ ಕಾಲಘಟ್ಟದಲ್ಲಿ ಮಹಿಳೆಯರಿಗಾಗಿಯೇ ಪತ್ರಿಕೆಯೊಂದನ್ನು ಪ್ರಾರಂಭಿಸಿ ನಡೆಸುವುದು ಅತ್ಯಂತ ಸಾಹಸದ, ಸವಾಲಿನ ಕೆಲಸವಾಗಿತ್ತು. ನಂಜನಗೂಡು ತಿರುಮಲಾಂಬ ಅವರು ಹತ್ತಾರು ಅಡಚಣೆಗಳ ನಡುವೆಯೂ ಮೂರು ವರ್ಷಗಳ ಕಾಲ ‘ಕರ್ಣಾಟಕ ನಂದಿನಿಯನ್ನು’ ಹೊರತಂದರು. ಪತ್ರಿಕೆಯು ಸ್ತ್ರೀ ಶಿಕ್ಷಣ, ಮಹಿಳಾ ಅಭ್ಯುದಯಕ್ಕಾಗಿ ಶ್ರಮಿಸಿತು. ಬಾಲ್ಯವಿವಾಹ, ವಿಧವೆಯರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿತು. ಪತ್ರಿಕೆ ಪ್ರಕಟವಾದ ಕಾಲಘಟ್ಟಕ್ಕೆ ಇದೊಂದು ಮಹತ್ವದ ಹೆಜ್ಜೆಯಾಗಿತ್ತು. ಕನ್ನಡ ಮಹಿಳಾ ಪತ್ರಿಕೋದ್ಯಮದ ಮುಂದಿನ ಪ್ರಯತ್ನಗಳಿಗೆ ಬಲುದೊಡ್ಡ ಪ್ರೇರಣೆಯಾಯಿತು. ಕನ್ನಡ ಮಹಿಳಾ ಪತ್ರಿಕೋದ್ಯಮದ ಪ್ರಪ್ರಥಮ ಪತ್ರಿಕೆಯನ್ನು ಇಂದಿನ ಓದುಗರಿಗೆ ಪರಿಚಯಿಸುವುದು ಮತ್ತು ಕನ್ನಡ ಮಹಿಳಾ ಪತ್ರಿಕೋದ್ಯಮಕ್ಕೆ ‘ಕರ್ಣಾಟಕ ನಂದಿನಿ’ಯ ಕೊಡುಗೆಯನ್ನು ತಿಳಿಸಿಕೊಡುವುದು ಪ್ರಸ್ತುತ ಅಧ್ಯಯನದ ಉದ್ದೇಶ. ಈ ಅಧ್ಯಯನಕ್ಕೆ ಸ್ತ್ರೀವಾದಿ ಸಂಶೋಧನಾ ವಿಧಾನ ಮತ್ತು ಐತಿಹಾಸಿಕ ಸಂಶೋಧನಾ ವಿಧಾನ ಹಾಗೂ ಲಭ್ಯವಿರುವ ಪತ್ರಿಕೆಯ ಸಂಚಿಕೆ, ಅವುಗಳ ವಿಷಯ ವಿಶ್ಲೇಷಣೆ ಮತ್ತು ಅನುಷಂಗಿಕ ಮಾಹಿತಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.


ಮುಖ್ಯ ಪದಗಳು: ಕರ್ಣಾಟಕ ನಂದಿನಿ, ಸನ್ಮಾರ್ಗ ದರ್ಶಿ, ಮಹಿಳಾ ಮಾಸ ಪತ್ರಿಕೆ, ಮಹಿಳಾ ಅಭ್ಯುದಯ, ಮಹಿಳಾ ಶಿಕ್ಷಣ, ಮಹಿಳೆಯರ ಸಮಸ್ಯೆಗಳು

ree

ಪ್ರಸ್ತಾವನೆ:

ಮಹಿಳೆಯರಿಗಾಗಿ ಮಹಿಳೆಯರೇ ಪತ್ರಿಕೆಯೊಂದನ್ನು ತರುವ ಅಗತ್ಯವನ್ನು ಅರಿತಿದ್ದ ನಂಜನಗೂಡು ತಿರುಮಲಾಂಬ ಅವರು ೧೯೧೬ ರ ಅಕ್ಟೋಬರ್‌ನಲ್ಲಿ ‘ಕರ್ಣಾಟಕ ನಂದಿನಿ’ ಮಾಸಪತ್ರಿಕೆ ಪ್ರಕಟಿಸುವ ಮೂಲಕ ಕನ್ನಡ ಮಹಿಳಾ ಪತ್ರಿಕೋದ್ಯಮಕ್ಕೆ ಬುನಾದಿ ಹಾಕಿದರು. ಈ ಮಾಸಿಕವು ೧೯೨೦ರವರೆಗೆ ನಡೆಯಿತು. ಇದರಿಂದ ಸ್ಫೂರ್ತಿ, ಪ್ರೇರಣೆ ಪಡೆದು ಬೆಂಗಳೂರಿನಲ್ಲಿ ಆರ್. ಕಲ್ಯಾಣಮ್ಮ ಅವರು ಮಹಿಳೆಯರಿಗಾಗಿಯೇ ‘ಸರಸ್ವತಿ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ್ದನ್ನು ಪತ್ರಿಕಾ ಇತಿಹಾಸದಲ್ಲಿ ನಾವು ಕಾಣಬಹುದಾಗಿದೆ.


ಕರ್ಣಾಟಕ ನಂದಿನಿ ಪತ್ರಿಕೆಗೆ ಅಗತ್ಯವಿರುವ ಬರಹಗಳು, ಪತ್ರಿಕೆಯ ಕರಡು ತಿದ್ದುವಿಕೆ, ಪತ್ರಿಕೆಯ ಮುದ್ರಣಕ್ಕೆ ಸಂಬಂಧಿಸಿದ ಸಮಸ್ತ ಕೆಲಸಗಳಿಗಾಗಿ ತಿರುಮಲಾಂಬ ಒಬ್ಬರೇ ಅಹರ್ನಿಶಿ ಶ್ರಮಿಸುತ್ತಿದ್ದರು. ಪತ್ರಿಕೆಯು ಧಾರವಾಡದ ಬಿಂದುರಾವ್ ಮುತಾಲಿಕ್ ದೇಸಾಯಿ ಅವರ ಕೃಷ್ಣ ಮುದ್ರಣಾಲಯದಲ್ಲಿ ಮುದ್ರಣವಾಗುತ್ತಿತ್ತು. ಆಗ ಮುಂಬೈ ಪ್ರಾಂತ್ಯಕ್ಕೆ ಸೇರಿದ ಉತ್ತರಕರ್ನಾಟಕ ಮೈಸೂರಿಗೆ ಬಹಳ ದೂರದಲ್ಲಿತ್ತು. ಇದರಿಂದಾಗಿ ತಿರುಮಲಾಂಬ ಅವರು ನಂಜನಗೂಡಿನಿಂದ ಒಬ್ಬರೇ ಧಾರವಾಡಕ್ಕೆ ಯಾತ್ರೆ ಹೊರಡಬೇಕಾಗುತ್ತಿತ್ತು. ಹೀಗೆ ಪತ್ರಿಕೆಯ ಕೆಲಸ ಏಕಾಂಗಿ ಹೋರಾಟವಾಗಿತ್ತು. ತಿರುಮಲಾಂಬ ಕಾಯಾ, ವಾಚಾ, ಮನಸ್ಸಾ ಸಂಪೂರ್ಣವಾಗಿ ಅದನ್ನೊಂದು ತಪಸ್ಸಿನಂತೆಯೇ ಕೈಗೊಂಡರು.


ಪತ್ರಿಕೆ ತಾನು ಪ್ರಾರಂಭವಾದ ಕಾಲಘಟ್ಟಕ್ಕೆ ಸಂಬಂಧಿಸಿದಂತೆ, ಅಂದಿನ ಪಿತೃಪ್ರಧಾನ ವ್ಯವಸ್ಥೆ, ಸಾಂಪ್ರದಾಯಿಕ ಪರಿಸ್ಥಿತಿಗಳಿಗನುಗುಣವಾಗಿ ಕಾರ್ಯನಿರ್ವಹಿಸಿದೆ. ಅಂದಿನ ಅನೇಕ ಬರಹಗಾರರಿಗೆ, ವಿಶೇಷವಾಗಿ ಲೇಖಕಿಯರಿಗೆ ವೇದಿಕೆಯಾಗಿದೆ. ಈ ಎಲ್ಲ ಇತಿಮಿತಿಗಳ ಮಧ್ಯೆಯೂ ಪತ್ರಿಕೆ ಮಹಿಳಾ ಅಭ್ಯುದಯಕ್ಕೆ, ಮಹಿಳೆಯರ ಸಮಸ್ಯೆಗಳಿಗೆ ಅದರಲ್ಲೂ ಮುಖ್ಯವಾಗಿ ಬಾಲ್ಯವಿವಾಹ, ವಿಧವೆಯರ ಸಮಸ್ಯೆ, ಸ್ತ್ರೀ ಶಿಕ್ಷಣ ಕುರಿತು ದನಿ ಎತ್ತಿದೆ. ಪ್ರಗತಿಪರವಾದ, ದೃಢವಾದ ನಿಲುವನ್ನು ಹೊಂದಿದೆ. ಆದರೆ ವಿಧವಾ ವಿವಾಹ, ಇಂಗ್ಲೀಷ್ ಶಿಕ್ಷಣ, ಮಹಿಳೆಯರ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಪತ್ರಿಕೆ ಮತ್ತು ತನ್ಮೂಲಕ ತಿರುಮಲಾಂಬ ಅವರು ಸಂಪ್ರದಾಯಶೀಲತೆಗೆ ಮೊರೆಹೋಗಿದ್ದಾರೆ ಮತ್ತು ಪ್ರತಿಗಾಮಿಯಾದ ನಿಲುವುಗಳನ್ನು ತಳೆದಿರುವುದು ಪತ್ರಿಕೆಯ ಮಿತಿಯಾಗಿದೆ.


ಅದೇನೆ ಇದ್ದರೂ, ತಮ್ಮ ಅಚಲವಾದ ಶ್ರದ್ಧೆ, ಅಪಾರ ಜೀವನ ಪ್ರೀತಿಯಿಂದ ಎರಡು ಪತ್ರಿಕೆಗಳು, ಬರವಣಿಗೆ ಮತ್ತು ಪ್ರಕಾಶನದ ಮೂಲಕ ಕನ್ನಡ ನಾಡು, ನುಡಿಗಳಿಗೆ ಮತ್ತು ಸ್ವಾತಂತ್ರö್ಯ ಪೂರ್ವ ಕನ್ನಡ ಪತ್ರಿಕೋದ್ಯಮಕ್ಕೆ ನಂಜನಗೂಡು ತಿರುಮಲಾಂಬ ಅವರು ಸಲ್ಲಿಸಿದ ಸೇವೆ ಮತ್ತು ಕೊಟ್ಟ ಕೊಡುಗೆ ಅವಿಸ್ಮರಣೀಯ ಮತ್ತು ಚಾರಿತ್ರಿಕವಾದುದಾಗಿದೆ.


ಈ ಹಿನ್ನೆಲೆಯಲ್ಲಿ ‘ಕರ್ಣಾಟಕ ನಂದಿನಿ’ಗೆ ಕನ್ನಡ ಮಹಿಳಾ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಬಹಳ ವಿಶಿಷ್ಟವಾದ ಸ್ಥಾನವಿದೆ. ೨೦೨೬ಕ್ಕೆ ಪತ್ರಿಕೆ ಪ್ರಾರಂಭವಾಗಿ ೧೨೦ ವರ್ಷಗಳನ್ನು ಪೂರೈಸುತ್ತದೆ. ಜೊತೆಗೆ ಕನ್ನಡ ಮಹಿಳಾ ಪತ್ರಿಕೋದ್ಯಮದ ಇತಿಹಾಸಕ್ಕೂ ೧೨೦ರ ಸಂಭ್ರಮ. ಇದು ಕರ್ಣಾಟಕದ ಮಹಿಳಾ ಪತ್ರಿಕೋದ್ಯಮದ ಮಹತ್ವದ ದಾಖಲೆಯಾಗಿದೆ.


ಅಧ್ಯಯನದ ಉದ್ದೇಶಗಳು:

ಕನ್ನಡ ಮಹಿಳಾ ಪತ್ರಿಕೋದ್ಯಮಕ್ಕೆ ನಂಜನಗೂಡು ತಿರುಮಲಾಂಬ ಮತ್ತು ‘ಕರ್ಣಾಟಕ ನಂದಿನಿ’ ಪತ್ರಿಕೆಯ ಕೊಡುಗೆಯನ್ನು ಪರಿಚಯಿಸುವುದು. ಪ್ರಾರಂಭಿಕ ಪ್ರಯತ್ನವೊಂದು ತನ್ನ ಉಳಿವಿಗಾಗಿ ಎದುರಿಸಿದ ಸಮಸ್ಯೆ, ಸವಾಲುಗಳನ್ನು ವಿಷದಪಡಿಸುವುದು. ತಿರುಮಲಾಂಬ ಅವರ ಹಲವು ಮೊದಲುಗಳ ಈ ಸಾಹಸ ಕನ್ನಡ ಮಹಿಳಾ ಪತ್ರಿಕೋದ್ಯಮದಲ್ಲಿ ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿ ದಾರಿದೀಪವಾಗಿದ್ದನ್ನು ಗುರುತಿಸುವುದು.


ಕನ್ನಡ ಮಹಿಳಾ ಪತ್ರಿಕೋದ್ಯಮವನ್ನು ಅಧ್ಯಯನ ಮಾಡುವಾಗ ಸಂಪಾದಕೀಯ ಕೌಟುಂಬಿಕ, ಶೈಕ್ಷಣಿಕ ಮತ್ತು ಸಾಮಾಜಿಕ, ಸಾಂಸ್ಕೃತಿಕ ಪ್ರೇರಣೆಗಳನ್ನೂ ಗಮನಿಸಬೇಕಾದ ಅನಿವಾರ್ಯತೆ ಇದೆ. ಸಂಪಾದಕಿಯ ಪರಿಚಯಾತ್ಮಕ ನೆಲೆ ಮತ್ತು ಅವರನ್ನು ಪ್ರಭಾವಿಸಿದ ಅಂಶಗಳನ್ನು ನೋಡಬೇಕಿದೆ. ಸ್ವಾತಂತ್ರ್ಯ ಪೂರ್ವದ ಮಹಿಳಾ ಪತ್ರಿಕೋದ್ಯಮವನ್ನು ವಿಶೇಷವಾಗಿಯೇ ಪರಿಗಣಿಸಬೇಕಾಗಿದೆ.



ಬರವಣಿಗೆಯಲ್ಲಿ ತೊಡಗಿಕೊಳ್ಳುವ ಕ್ರಿಯೆ ಮಹಿಳೆಯರಿಗೆ ಬಹಳ ಆಕಸ್ಮಿಕವಾಗಿ ಬಂದಿಲ್ಲ, ದೇಶಕಾಲದ ಪರಿಸ್ಥಿತಿ ಪ್ರಭಾವ, ಪ್ರೇರಣೆ ಮತ್ತು ಒತ್ತಡಗಳು ಇಲ್ಲಿ ಕೆಲಸ ಮಾಡಿವೆ. ೧೯ನೇ ಶತಮಾನದ ಆರಂಭಿಕ ಕಾಲಘಟ್ಟದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆಯ ಜೊತೆಗೆ ರಾಷ್ಟ್ರೀಯತೆಯ ಪ್ರಭಾವವನ್ನೂ ನಾವು ಕಾಣಬಹುದು. ಜೊತೆಗೆ ಮಹಿಳೆಯರಿಗೆ ಸಂಬಂಧಿಸಿದಂತೆ ಬಾಲ್ಯವಿವಾಹ, ವಿಧವಾ ಪದ್ಧತಿ, ಸತಿಪದ್ಧತಿಗಳ ವಿರುದ್ಧ ಮಹಿಳೆಯರ ಸಮಸ್ಯೆಗಳ ಸುಧಾರಣೆ ಕಡೆಗೆ ಒಲವು ತೋರಲಾರಂಭಿಸಿದ್ದು ಮಹತ್ವದ ಪ್ರೇರಣೆಯಾಗಿದೆ.


ಅಧ್ಯಯನದ ವ್ಯಾಪ್ತಿ:

ಕರ್ಣಾಟಕ ನಂದಿನಿ ಪತ್ರಿಕೆಯ ಲಭ್ಯವಿರುವ ಸಂಚಿಕೆಗಳು, ಅವುಗಳ ವಿಷಯ ವಿಶ್ಲೇಷಣೆ ಮತ್ತು ನಂಜನಗೂಡು ತಿರುಮಲಾಂಬ ಅವರ ಪತ್ರಿಕೋದ್ಯಮ, ಪ್ರಕಾಶನ, ಜೀವನ ಸಾಧನೆ, ಬರಹ, ಕೊಡುಗೆ ಕುರಿತಾದ ಲಭ್ಯವಿರುವ ಅನುಷಂಗಿಕ ಮಾಹಿತಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.


ಸಾಹಿತ್ಯ ವಿಮರ್ಶೆ:

ವಿಜಯಾದಬ್ಬೆ(೧೯೯೨) ಅವರು ಸಂಪಾದಿಸಿರುವ “ಹಿತೈಷಿಣಿಯ ಹೆಜ್ಜೆಗಳು” ಕೃತಿಯಲ್ಲಿ ನಂಜನಗೂಡು ತಿರುಮಲಾಂಬ ಅವರ ಸಮಗ್ರ ಸಾಹಿತ್ಯ, ಜೀವನ ಮತ್ತು ಅವರ ಒಟ್ಟಾರೆ ಕೆಲಸಗಳನ್ನು ದಾಖಲಿಸಿದ್ದಾರೆ. ಕನ್ನಡ ಸಾಹಿತ್ಯ, ಪ್ರಕಾಶನ ಮತ್ತು ಪತ್ರಿಕೋದ್ಯಮಕ್ಕೆ ಅವರು ಸಲ್ಲಿಸಿರುವ ಅಪಾರ ಸೇವೆಯನ್ನು, ಕೊಡುಗೆಯನ್ನು ಗುರುತಿಸಿದ್ದಾರೆ. ಸಂಪಾದಕರು ನಂಜನಗೂಡು ತಿರುಮಲಾಂಬ ಅವರ ಲಭ್ಯವಿರುವ ಕಾದಂಬರಿ, ಪ್ರಬಂಧಗಳು ಮತ್ತು ಗೀತಾವಳಿಗಳನ್ನು ಈ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ.


ಉಷಾರಾಣಿ ಎನ್(೨೦೦೨) ಅವರು ಬರೆದಿರುವ “ಮಹಿಳೆ ಮತ್ತು ಮಾಧ್ಯಮ” ಪುಸ್ತಕದಲ್ಲಿ ಮಹಿಳೆಯರು ಮಾಧ್ಯಮಗಳಲ್ಲಿ ರಾಷ್ಟçಮಟ್ಟದಲ್ಲಿ, ಪ್ರಾದೇಶಿಕ ಭಾಷೆಗಳಲ್ಲಿ ಮಹಿಳೆಯರೇ ಪ್ರಾರಂಭಿಸಿದ, ಸಂಪಾದಕೀಯರಾಗಿ, ಪತ್ರಕರ್ತರಾಗಿ ಅಪರೂಪದ ತನಿಖಾ ವರದಿಗಾರಿಕೆಗಳು, ಅವರು ಬೆಳಕಿಗೆ ತಂದ ಪ್ರಕರಣಗಳು, ಮಾಧ್ಯಮದ ವಿವಿಧ ವೃತ್ತಿಗಳಲ್ಲಿನ ಸಾಧಕಿಯರನ್ನು ಉಲ್ಲೇಖಿಸಿದ್ದಾರೆ.


ಮಹಿಳಾ ಪತ್ರಿಕೆಗಳ ಆರಂಭ, ವಿಕಾಸ, ಮಹಿಳಾ ಬರಹಗಾರ್ತಿಯರಿಗೆ ವೇದಿಕೆ ಒದಗಿಸಿದವು. ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಿ ಆಧುನಿಕ ಮಹಿಳೆಯರನ್ನು ಆಲ್ರೌಂಡರ್ ಆಗಿ ರೂಪಿಸುವಲ್ಲಿ ನೆರವಾದವು. ನಿಯತಕಾಲಿಕೆಗಳ ಪ್ರಕಟಣೆಯಲ್ಲಿ ಕಂಡು ಬಂದ ಏರಿಕೆ ೧೯೭೦ ಮತ್ತು ೧೯೮೦ರ ದಶಕವನ್ನು “ಮ್ಯಾಗಜೀನ್‌ಬೂಮ್” ಎಂದು ಲೇಖಕಿ ಗುರುತಿಸುತ್ತಾರೆ. ಇದೇ ದಶಕಗಳಲ್ಲಿ ಮಹಿಳಾ ಪತ್ರಿಕೆಗಳ ಸಂಖ್ಯೆಯೂ ಏರಿದ್ದನ್ನು, ಹಲವಾರು ಮಹಿಳಾ ಪತ್ರಿಕೆಗಳು ಪ್ರಾರಂಭವಾಗಿದ್ದನ್ನು ದಾಖಲಿಸುತ್ತಾರೆ.


ಎನ್.ಎಸ್.ಸೀತಾರಾಮ ಶಾಸ್ತ್ರೀ (೧೯೯೮), ಅವರು ರಚಿಸಿದ “ಕನ್ನಡ ಪತ್ರಿಕೋದ್ಯಮ ಒಂದು ಪರಿಚಯ” ಪುಸ್ತಕದಲ್ಲಿ ಕನ್ನಡದಲ್ಲಿ ೧೮೪೩ ರಿಂದ ೧೯೮೭ ರವರೆಗೆ ಸುಮಾರು ೧೬೦೦ ಕ್ಕೂ ಹೆಚ್ಚು ಪತ್ರಿಕೆಗಳು ವೈವಿಧ್ಯಮಯ ಪತ್ರಿಕಾ ವ್ಯವಸಾಯ ನಡೆಸಿವೆ ಎಂದು ವಿವರಿಸಿದ್ದಾರೆ.


ಈ ಕಾಲಘಟ್ಟದಲ್ಲಿ ಧಾರವಾಡದಲ್ಲಿ ೨೦೦ ಪತ್ರಿಕೆಗಳು, ಮಂಗಳೂರು ಮತ್ತು ಮೈಸೂರುಗಳಲ್ಲಿ ತಲಾ ೧೫೦ ಪತ್ರಿಕೆಗಳು, ಶಿವಮೊಗ್ಗದಲ್ಲಿ ೧೦೦ ಕ್ಕೂ ಹೆಚ್ಚು ಪತ್ರಿಕೆಗಳು ಜನ್ಮ ತಳೆದಿವೆ. ಮುಖ್ಯವಾಗಿ ಶಿವಮೊಗ್ಗದಲ್ಲಿ ೫೦ ಮಂದಿ ಮಹಿಳೆಯರು ಪತ್ರಿಕೋದ್ಯೋಗದಲ್ಲಿ ತೊಡಗಿಸಿಕೊಂಡಿದ್ದರು ಎಂದು ದಾಖಲಿಸಿದ್ದಾರೆ.


ಸುಶೀಲಾ ಕೊಪ್ಪರ (೧೯೮೯), ಅವರು ಬರೆದ “ಪತ್ರಿಕೋದ್ಯಮಕ್ಕೆ ಮಹಿಳೆಯರ ಕೊಡುಗೆ” ಕೃತಿಯಲ್ಲಿ ಜಗತ್ತಿನಾದ್ಯಂತ ಸಮಾನತೆ, ಸಮಾನ ಅವಕಾಶಗಳಿಂದ ವಂಚಿತರಾದರೂ ಛಲ ಬಿಡದ ಹೋರಾಟದಿಂದ ಸಿಕ್ಕ ಸಣ್ಣ ಸಣ್ಣ ಅವಕಾಶಗಳಲ್ಲೇ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾಳೆ. ಮಾಧ್ಯಮ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ, ಪ್ರಾದೇಶಿಕ ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಗಮನಾರ್ಹ ಕೆಲಸ ಮಾಡಿದ ಪತ್ರಕರ್ತೆಯರು, ಪತ್ರಿಕಾ ಸಂಪಾದಕೀಯರು, ಪತ್ರಿಕೋದ್ಯೋಗ ನಿರತ ಮಹಿಳೆಯರು ಮತ್ತು ಮಹಿಳಾ ಪತ್ರಿಕೆಗಳ ಕುರಿತು ಲೇಖಕಿ ಚರ್ಚಿಸಿದ್ದಾರೆ.


ಡಾ.ವಿಜಯಾ ದಬ್ಬೆ (೨೦೧೩), ಅವರ ಮಹಿಳಾ ಸಂಶೋಧನೆ ಪುಸ್ತಕದಲ್ಲಿ ಪ್ರಕಟವಾದ “ನಂಜನಗೂಡು ತಿರುಮಲಾಂಬ: ಆಘಾತದ ಒಡಲಲ್ಲೇ ಅರಳಿದ ಜೀವ” ಲೇಖನದಲ್ಲಿ ತಿರುಮಲಾಂಬ ಅವರ ಜೀವನ ಸಾಧನೆಗಳನ್ನು ಪರಿಚಯಿಸಿದ್ದಾರೆ.


೧೯೧೩ ರಲ್ಲಿ ಬರವಣಿಗೆ ಪ್ರಾರಂಭಿಸಿ ಕಾದಂಬರಿ ಬರೆದು, ಸತೀ ಹಿತೈಷಿಣಿ ಗ್ರಂಥಮಾಲೆ ಪ್ರಾರಂಭಿಸಿದರು. ೧೯೧೬ ರಲ್ಲಿ ಮಹಿಳೆಯರಿಗಾಗಿ “ಕರ್ನಾಟಕ ನಂದಿನಿ” ಪತ್ರಿಕೆ ನಂತರ “ಸನ್ಮಾರ್ಗದರ್ಶಿನಿ’ ಪತ್ರಿಕೆಗಳಿಗೆ ಸಂಪಾದಕೀಯಾಗಿ ಕೆಲಸ ಮಾಡಿದರು. ಪ್ರಕಾಶನ ಸಂಸ್ಥೆ ಪ್ರಾರಂಭಿಸಿದರು. ಅಗತ್ಯವಿದ್ದವರಿಗೆ ಸಹಾಯ ಹಸ್ತ ಚಾಚುತ್ತಿದ್ದ, ರಾತ್ರಿ ಶಾಲೆ, ನಾಟಕ ಸಂಘಗಳನ್ನು ಸ್ಥಾಪಿಸಿ ಬಿಡುವಿರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ತಿರುಮಲಾಂಬ ಅವರನ್ನು ಕನ್ನಡ ಸಾರಸ್ವತ ಲೋಕ ಕಡೆಗಣಿಸಿದ್ದು ದುರಂತ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


ವಿಷಯ ವಿಶ್ಲೇಷಣೆ:

ನಂಜನಗೂಡು ತಿರುಮಲಾಂಬ ೧೯೧೬ರಲ್ಲಿ ಕರ್ಣಾಟಕ ನಂದಿನಿ ಪತ್ರಿಕೆಯನ್ನು ಆರಂಭಿಸುವ ಸಮಯಕ್ಕೆ ಕನ್ನಡ ಪತ್ರಿಕೋದ್ಯಮ ತನ್ನ ಸುವರ್ಣ ಸಂಭ್ರಮವನ್ನು ದಾಖಲಿಸಿತ್ತು. ೧೮೪೩ ರಿಂದ ೧೯೧೬ರ ನಡುವೆ ಸುಮಾರು ಪತ್ರಿಕೆಗಳು ಆಗಿಹೋಗಿದ್ದವು. ಕನ್ನಡದಲ್ಲಿ ಮಹಿಳೆಯರಿಂದ ಮಹಿಳೆಯರಿಗಾಗಿ ಮೊಟ್ಟ ಮೊದಲ ಪತ್ರಿಕೆ ‘ಕರ್ಣಾಟಕ ನಂದಿನಿ’ಯನ್ನು ೧೯೧೬ರ ಅಕ್ಟೋಬರ್‌ನಲ್ಲಿ ತಿರುಮಲಾಂಬ ಪ್ರಾರಂಭ ಮಾಡಿದರು. ಸಮಕಾಲೀನ ಬರಹಗಾರರ, ಪತ್ರಿಕೆಗಳ ಬೆಂಬಲವಿಲ್ಲದೆ ಸಂಪಾದಕೀಯೂ, ಪ್ರಕಾಶಕಿಯೂ ಆಗಿ ಪತ್ರಿಕೆಯ ಚುಕ್ಕಾಣಿ ಹಿಡಿದರು.


ಕನ್ನಡ ಪತ್ರಿಕೋದ್ಯಮ ತಂತ್ರಜ್ಞಾನ, ಆರ್ಥಿಕ ಚೈತನ್ಯ, ಮೂಲಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದ ಸಮಯದಲ್ಲಿ ಪತ್ರಿಕೆಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಡೆಸುವುದು ಅತ್ಯಂತ ಕಷ್ಟಕರವಾಗಿತ್ತು. ಉದ್ಯೋಗದಲ್ಲಿದ್ದು ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದ ಎಷ್ಟೋ ಪುರುಷರೇ ಪತ್ರಿಕೆ ಪ್ರಾರಂಭಿಸಿ ಕೆಲವು ತಿಂಗಳುಗಳು ನಡೆಸುವಷ್ಟರಲ್ಲೇ ಆರ್ಥಿಕ ಸಮಸ್ಯೆಗಳಿಂದ ಬಳಲಿ ವಾರಪತ್ರಿಕೆಗಳಿಂದ ಪಾಕ್ಷಿಕಕ್ಕೆ, ಹೆಚ್ಚಿನವು ಮಾಸಪತ್ರಿಕೆಗಳಾಗಿ ರೂಪಾಂತರವಾದವು. ಇನ್ನೂ ಕೆಲವು ಪತ್ರಿಕೆಗಳು ಪ್ರಕಟಣೆಯನ್ನೇ ಸ್ಥಗಿತಗೊಳಿಸಿದವು.


ಹೀಗೆ ಪುರುಷಪ್ರಧಾನ ಸಮಾಜದಲ್ಲಿ ಆರ್ಥಿಕವಾಗಿ ಸ್ವಾವಲಂಬನೆ, ಉದ್ಯೋಗ ಹೊಂದಿದ್ದ ಪುರುಷರು, ಅವರಲ್ಲಿ ಎಷ್ಟೋ ಖ್ಯಾತನಾಮರಿಗೂ ಯಶಸ್ವಿಯಾಗಿ ಪತ್ರಿಕೆ ನಡೆಸುವುದಾಗಿರಲಿಲ್ಲ. (ಉದಾ: ಕಾದಂಬರೀ ಸಂಗ್ರಹ ಮಾಸಪತ್ರಿಕೆ.) ಇಂತಹ ಸವಾಲಿನ, ಬಿಕ್ಕಟ್ಟಿನ ಕಾಲಘಟ್ಟದಲ್ಲಿ ನಂಜನಗೂಡಿನಂತಹ ಸಣ್ಣ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬಳು, ಅದರಲ್ಲೂ ಸಂಪ್ರದಾಯಸ್ಥ ಕುಟುಂಬದ ಬಾಲವಿಧವೆ, ನಾಲ್ಕನೆ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದಿದ್ದ ನಂಜನಗೂಡು ತಿರುಮಲಾಂಬ ಸಂಪಾದಕಿ, ಪ್ರಕಾಶಕಿಯಾಗಿ ಮಹಿಳೆಯರಿಗಾಗಿ, ಅವರ ಆಭ್ಯುದಯಕ್ಕಾಗಿಯೇ ‘ಕರ್ಣಾಟಕ ನಂದಿನಿ’ ಎಂಬ ಮಹಿಳಾ ಪತ್ರಿಕೆಯೊಂದನ್ನು ಪ್ರಾರಂಭಿಸಿದರು. ಈ ಮೂಲಕ ನಂಜನಗೂಡು ತಿರುಮಲಾಂಬ ಕನ್ನಡ ಪತ್ರಿಕೋದ್ಯಮದ ಮೊಟ್ಟ ಮೊದಲ ಮಹಿಳಾ ಸಂಪಾದಕಿ, ಕನ್ನಡ ಮಹಿಳಾ ಪತ್ರಿಕೋದ್ಯಮದ ಪ್ರಪ್ರಥಮ ಸಂಪಾದಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಂಜನಗೂಡು ತಿರುಮಲಾಂಬ ಅವರನ್ನು ‘ಕನ್ನಡ ಮಹಿಳಾ ಪತ್ರಿಕೋದ್ಯಮದ ಮಾತೆ’ ಎಂದು ಕರೆಯಬಹುದು. ಇದು ಅಂದಿನ ಕಾಲಮಾನದ ಅಸಾಮಾನ್ಯ ಸಾಹಸದ ಸಂಗತಿ ಎಂದರೆ ಉತ್ಪೇಕ್ಷೆಯಲ್ಲ.


ಇದಲ್ಲದೆ, ತಿರುಮಲಾಂಬ ಕನ್ನಡದ ಮೊದಲ ಮಹಿಳಾ ಪ್ರಕಾಶಕಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯದ ಮೊದಲ ಕಾದಂಬರಿಗಾರ್ತಿ, ಆಧುನಿಕ ಕನ್ನಡ ಸಾಹಿತ್ಯದ ಪ್ರಥಮ ನಾಟಕಕಾರ್ತಿಯಾಗಿದ್ದಾರೆ. ಹೀಗೆ ನಂಜನಗೂಡು ತಿರುಮಲಾಂಬ ಕನ್ನಡ ಮಹಿಳಾ ಸಾರಸ್ವತ ಲೋಕದ ಹಲವು ಮೊದಲುಗಳ ಆದ್ಯ ಪ್ರವರ್ತಕಿಯಾಗಿದ್ದಾರೆ.


ಮೈಸೂರು ಭಾಗದಲ್ಲಿ ಪ್ರಕಟಿಸಲ್ಪಡುತ್ತಿದ್ದ ‘ಹಿತಬೋಧಿನಿ’ (೧೮೮೩), ‘ಭಾರತಮಿತ್ರ’ (೧೯೦೮) ‘ಆರ್ಯ ಮಹಿಳೆ’ ಮತ್ತಿತ್ತರ ಪತ್ರಿಕೆಗಳು ಮಹಿಳಾ ಶಿಕ್ಷಣ, ಮಹಿಳೆಯರ ಪ್ರಗತಿ ಮತ್ತು ಮಹಿಳೆಯರ ಸಮಸ್ಯೆಗಳನ್ನು ಕುರಿತ ಬರಹಗಳನ್ನು ಪ್ರಕಟಿಸುತ್ತಿದ್ದವು. ಈ ಪತ್ರಿಕೆಗಳ ಮಹತ್ವ, ಉದ್ದೇಶ, ಸ್ವರೂಪಗಳ ಬಗ್ಗೆ ತಿಳುವಳಿಕೆ ಇದ್ದ ತಿರುಮಲಾಂಬ ಮಹಿಳೆಯರಿಗಾಗಿ ಮಹಿಳೆಯರೇ ಪ್ರಕಟಿಸುತ್ತಿರುವ ಯಾವೊಂದು ಪತ್ರಿಕೆಯೂ ಇಲ್ಲದಿರುವುದನ್ನು ಗಮನಿಸಿ ಮಹಿಳೆಯರಿಗೆಂದೇ ಪತ್ರಿಕೆಯೊಂದನ್ನು ಪ್ರಾರಂಭಿಸಬೇಕಾದ ಅಗತ್ಯವರಿತು ಕರ್ಣಾಟಕ ನಂದಿನಿ ಪತ್ರಿಕೆಯನ್ನು ಪ್ರಾರಂಭ ಮಾಡಿದರು.


ಕರ್ಣಾಟಕ ನಂದಿನಿ ಪ್ರಪ್ರಥಮ ಸಂಚಿಕೆಯಲ್ಲಿ ೧೪ ಪುಟಗಳ ಸವಿವರವಾದ ‘ನಿವೇದನೆ’, ‘ನಂದಿನಿಯ ಕೋರಿಕೆ’, ‘ಭಗಿನಿಯರಲ್ಲಿ ಭಿಕ್ಷೆ’, ‘ಭರವಸೆ’, ‘ಸಂದೇಶ’ ಎನ್ನುವ ತಲೆಬರಹಗಳಲ್ಲಿ ಪತ್ರಿಕೆಯ ಧ್ಯೇಯ, ಧೋರಣೆಗಳನ್ನು ಓದುಗರ ಮುಂದಿಟ್ಟು ಅವರ ಬೆಂಬಲಕ್ಕಾಗಿ ವಿನಂತಿಸಿದ್ದಾರೆ. ಮಹಿಳೆಯರು ಮನೆಗೆಲಸಕ್ಕೆ ಮಾತ್ರ ಸೀಮಿತ, ಸಾಹಿತ್ಯ, ಸಾಮಾಜಿಕ ಕಾರ್ಯಗಳಲ್ಲಿ ಸಲ್ಲದವರು ಎಂಬ ಜನರ ಮನಸ್ಥಿತಿಯನ್ನು ಬದಲಾಯಿಸುವುದು ನಂದಿನಿಯ ಆದ್ಯ ಕರ್ತವ್ಯವೆಂದು ಸ್ಪಷ್ಟಪಡಿಸುತ್ತಾರೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಜವಾಬ್ದಾರಿಯನ್ನು ಜಾಗೃತಗೊಳಿಸುವ ಸಲುವಾಗಿ ಮಹಿಳೆಯರಿಗೆ ತಿಳಿಸುವುದು, ಮಹಿಳೆಯರ ಪ್ರಗತಿಗೆ, ಸಬಲೀಕರಣಕ್ಕೆ ಸಮಾಜದ ಹೊಣೆಗಾರಿಕೆ ಮುಂತಾದವುಗಳನ್ನು ಚರ್ಚಿಸುವುದಾಗಿತ್ತು.


“ತಿರುಮಲಾಂಬ ಅವರ ಪತ್ರಿಕೆಯ ಲೇಖನಗಳಲ್ಲಿ, ಕೃತಿಗಳಲ್ಲಿ ಅರ್ಧಸಂಖ್ಯಾಕರಾದ ಸ್ತ್ರೀಯರನ್ನು ಸಮಾಜ ನೋಡುವ ದೃಷ್ಟಿಕೋನದ ಬಗ್ಗೆ ಪ್ರತಿಭಟನೆಯಿದೆ. ಸ್ತ್ರೀಯರ ಹಕ್ಕುಗಳನ್ನಾಕೆ ಗುರುತಿಸುತ್ತಾರೆ. ಆದರೂ ಅವರಿದ್ದ ಕಾಲಮಿತಿ ಹಾಗೂ ಸಂಪ್ರದಾಯಶೀಲತೆ ಈ ಹಕ್ಕುಗಳ ಪೂರ್ಣ ಅಭಿವ್ಯಕ್ತಿಯನ್ನು ನಿಯಂತ್ರಿಸುತ್ತದೆ. ಹೀಗಿದ್ದೂ ವೈಯಕ್ತಿಕ ಬದುಕಿನಲ್ಲಿ ಸಂಪ್ರದಾಯದ ಜಡತೆ ತೊರೆದು, ಕ್ರಿಯಾಶೀಲತೆ ಮೆರೆದ ತಿರುಮಲಾಂಬ ವಿಶಿಷ್ಟ ಚೇತನವಾಗುತ್ತಾರೆ.”


“ನಮ್ಮ ಕರ್ಣಾಟಕದಲ್ಲಿ ಸ್ತ್ರೀಯರ ಲೇಖನ ಕಾರ್ಯದಲ್ಲಿಯಾಗಲೀ, ಸಮಾಜ ಕಲ್ಯಾಣಕ್ಕೆ ಬೇಕಾಗುವ ಸುಧಾರಣಾ ವಿಷಯಗಳಲ್ಲಿ ಅಭಿಪ್ರಾಯವನ್ನು ಕೊಡುವದರಂಲ್ಲಾಗಲೀ ಅರ್ಹರಾಗಿಲ್ಲವೆಂದೂ, ಸ್ತ್ರೀಯರು ಗೃಹಕಾರ್ಯವೊಂದಲ್ಲದೇ ಮತ್ತಾವುದರಲ್ಲಿಯೂ ಅನುಭವವಿಲ್ಲದವರೆಂದೂ ಅಪವಾದ ಉಂಟಾಗಿದೆಯಷ್ಟೆ? ಅದನ್ನು ತಪ್ಪಿಸಲೆಂದೇ ನಂದಿನಿ ಹುಟ್ಟಿದೆ” ಎನ್ನುತ್ತಾರೆ. ಮಹಿಳೆಯರ ಅಭ್ಯುದಯಕ್ಕಾಗಿ ದುಡಿಯುವ ಮತ್ತೊಂದು ಪತ್ರಿಕೆ ಆಗ ಇರದಿದ್ದುದರಿಂದ “ನಂದಿನಿಯಂತೆ ಸೋದರೀ ಸೇವೆಯನ್ನೇ ಧ್ಯೇಯವಾಗಿಟ್ಟು, ಸೋದರಿಯರ ಪರಸ್ಪರ ಸೌಜನ್ಯಾಭಿವೃದ್ಧಿಯೇ ತನ್ನ ಶ್ರಮಕ್ಕೆ ಪ್ರತಿಫಲವೆಂದು ನಂಬಿ ನಂದಿನಿಯಂತೆ, ಸ್ತ್ರೀಯಾಗಿ ಸ್ತ್ರೀಯಿಂದ ಇತಿಕರ್ತವ್ಯತಾ ಪರಿಪಾಲನ ರೂಪದಿಂದ ಸ್ತ್ರೀಯರ ಅಭ್ಯುದಯ,ವ ಆಕಾಂಕ್ಷೆಗಳನ್ನು ನಿರುಪಾಧಿಕ, ನಿರವಧಿಕ ತೇಜೋರೂಪಗಳಿಂದ ಪ್ರಕಟ ಮಾಡಬೇಕೆಂಬ ಗುರಿಯು ಮತ್ತೆಲ್ಲಿ” ಎಂಬ ಮಾತುಗಳಲ್ಲಿ ತಿರುಮಲಾಂಬ ಅವರಿಗೆ ಪತ್ರಿಕೆಯ ಕುರಿತಾಗಿದ್ದ ಸ್ಪಷ್ಟತೆ, ವಿಶಿಷ್ಟತೆ ಪತ್ರಿಕೆಯ ಧ್ಯೇಯೋದ್ದೇಶ ಬಹಳ ಕರಾರುವಾಕ್ಕಾಗಿವೆಂದು ತಿಳಿಯುತ್ತದೆ.


ಪತ್ರಿಕೆಗೆ ಪಾರ್ವತಾಂಬ ಚಂದ್ರಶೇಖರ್ ಅಂದಿನ ಕೌನ್ಸಿಲರ್ ಆಗಿದ್ದ ಚಂದ್ರಶೇಖರ್ ಅವರ ಪತ್ನಿ ಅಂದಿನ ಅಮಲ್ದಾರರ ಪತ್ನಿಯಾಗಿದ್ದ ರಂಗನಾಯಕಮ್ಮ ಮುಂತಾದವರು ಬೆಂಬಲವಾಗಿದ್ದರು. ತಿರುಮಲಾಂಬ ಅವರ ಎಲ್ಲ ಸಾಧನೆಗೂ ಅವರ ತಂದೆ ವೆಂಟಕಕೃಷ್ಣ ಅಯ್ಯಂಗಾರ್ ಬೆಂಬಲ ಮತ್ತು ಪ್ರೇರಣೆಯಾಗಿದ್ದರು. ಮೈಸೂರಿನ ಮಧುರವಾಣಿ ಪತ್ರಿಕೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ತಿರುಮಲಾಂಬ ಅವರ ‘ಸದಾಚಾರ’ ಎಂಬ ಪ್ರಬಂದಕ್ಕೆ ಬಹುಮಾನ ಬಂದಿತ್ತು. ಪತ್ರಿಕೆಯ ಸಂಪಾದಕರಾದ ಹನುಮಾನ್ ಅವರು ನಂಜನಗೂಡಿನ ತಿರುಮಲಾಂಬ ಅವರ ಮನೆಗೆ ಭೇಟಿ ನೀಡಿ ತಿರುಮಲಾಂಬರನ್ನು ಅಭಿನಂದಿಸಿ ಬರವಣಿಗೆ ಮುಂದುವರಿಸುವಂತೆ ಪ್ರೋತ್ಸಾಹಿಸಿದರು. ತದನಂತರದಲ್ಲಿ ೧೯೧೩ರಲ್ಲಿ ತಿರುಮಲಾಂಬ ಸತೀಹಿತೈಷಿಣಿ ಗ್ರಂಥಮಾಲೆಯನ್ನು ಆರಂಭ ಮಾಡಿದರು.


ಪತ್ರಿಕೆಯಲ್ಲಿ ಸ್ಥಳೀಯರಾಗಿದ್ದ ಪಾರ್ವತಮ್ಮ, ರಂಗಮ್ಮ, ಬಾಲಕಿಯರ ಶಾಲೆಯ ವೆಂಕಟ ಸುಬ್ಬಮ್ಮ, ಇಂದೋರಿನ ರಾಣಿ ಅಹಲ್ಯಾಬಾಯಿ ಹೋಳ್ಕರ್, ತಾರಾಬಾಯಿ ಮತ್ತು ಬಂಗಾಳಿ ಕವಯತ್ರಿ ಗಿರೀಂದ್ರ ಮೋಹಿನಿದೇವಿ ಇನ್ನು ಮುಂತಾದ ಮಹಿಳೆಯರ ಸಾಧನೆಗಳನ್ನು ಕುರಿತು ಬರೆಯಲಾಗಿತ್ತು. ಪ್ರತಿ ತಿಂಗಳು ಪತ್ರಿಕೆಯ ಹೊಸ ಸಂಚಿಕೆಯನ್ನು ಓದುಗರ ಮುಂದಿಡಬೇಕಾದ ಜವಾಬ್ದಾರಿ ಹೊತ್ತ ನಂಜನಗೂಡು ತಿರುಮಲಾಂಬ ಅದರ ಸಂಪಾದನೆ, ಸಂಪಾದಕೀಯ ಮತ್ತು ಲೇಖನಗಳ ಬರವಣಿಗೆ, ಸಂಚಿಕೆಗೆ ಬೇಕಾದ ಎಲ್ಲ ಬರಹಗಳನ್ನು ಲೇಖಕ/ಕಿಯರಿಂದ ಬರೆಸುವುದು, ಬರಹಗಳ ಕೊರತೆಯಾದಾಗ ಅದನ್ನು ಸರಿದೂಗಿಸಲು ತಾವೇ ಬೇರೇ ಬೇರೆ ಹೆಸರುಗಳಲ್ಲಿ ಪುಟಗಳನ್ನು ತುಂಬಿಸುವುದು, ಮುದ್ರಣವಾಗಿ ಬಂದ ಪತ್ರಿಕೆಗಳಿಗೆ ಚಂದಾದಾರರ ವಿಳಾಸ ಬರೆಯುವುದು, ಅಂಚೆ ಕಛೇರಿಗೆ ತೆಗೆದುಕೊಂಡು ಹೋಗುವುದು, ಪ್ರಸರಣ ಹಾಗೂ ಪತ್ರಿಕೆಗೆ ಸಂಬಂಧಿಸಿದ್ದ ಎಲ್ಲಾ ಕೆಲಸಗಳನ್ನೂ ಏಕಾಂಗಿಯಾಗಿ, ಸಮರ್ಪಕವಾಗಿ ಮಾಡುತ್ತಿದ್ದರು. ಅವರು ಅಹರ್ನಿಶಿ ಶ್ರಮಿಸಿದರೂ ‘ಕರ್ಣಾಟಕ ನಂದಿನಿ’ಯ ಸಂಚಿಕೆಗಳನ್ನು ಸಕಾಲದಲ್ಲಿ ಹೊರತರಲಾಗಲಿಲ್ಲ. ೩ ವರ್ಷಗಳಲ್ಲಿ ಪತ್ರಿಕೆ ಹತ್ತು ಹಲವು ಏಳು ಬೀಳುಗಳನ್ನು ಕಂಡಿತು. ಪತ್ರಿಕೆಯ ಮುದ್ರಣದ ಕೆಲಸಕ್ಕಾಗಿ ಧಾರವಾಡಕ್ಕೆ ಎಡತಾಕಬೇಕಾಗುತ್ತಿತ್ತು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ತಿರುಮಲಾಂಬರ ಉತ್ಸಾಹ ಕುಂದಿರಲಿಲ್ಲ.


ನಂದಿನಿಯ ಮುದ್ರಣ ಕಾರ್ಯ ನಡೆಯುತ್ತಿದ್ದ ಕೃಷ್ಣ ಮುದ್ರಣಾಲಯದೊಂದಿಗೆ ಬಾಲಗಂಗಾಧರ ತಿಲಕರ ಸಂಬಂಧವಿತ್ತು. ಇದರಿಂದಾಗಿ ರಾಷ್ಟ್ರೀಯವಾದಿಗಳ ಮೇಲೆ ಸರ್ಕಾರದ ಕಣ್ಣಿಟ್ಟಿದ್ದುದ್ದರಿಂದ ನಂದಿನಿಯೂ ಇದರ ಪರಿಣಾಮವನ್ನೆದುರಿಸಬೇಕಾಯ್ತು. ಕರ್ನಾಟಕ ನಂದಿನಿ ಮಹಿಳೆಯರು, ಸಾಹಿತ್ಯಕ್ಕೆ ಸಂಬಂಧಿಸಿದ ಪತ್ರಿಕೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿದ ಮೇಲೆ ಅನುಮತಿ ಸಿಕ್ಕಿದರೂ ಆ ವೇಳೆಗಾಗಲೇ ತಿರುಮಲಾಂಬರ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತ್ತು. ಪತ್ರಿಕೆಯ ಹೊಣೆಯಿಂದಾಗಿ ಅನೇಕ ಕಷ್ಟಗಳನ್ನು, ಇವೆಲ್ಲವುಗಳಿಗಿಂತ ಮುಖ್ಯವಾಗಿ ಆರ್ಥಿಕವಾಗಿ ಹೊಡೆತ ಅನುಭವಿಸಬೇಕಾಯ್ತು. ಹೀಗೆ ಪತ್ರಿಕೆ ಹಲವಾರು ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತಲೇ ನಿಂತು ಹೋಯಿತು. ಅಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೆ ಮುಂದೆ ಎಂದಾದರೊಂದು ದಿನ ಕರ್ನಾಟಕ ನಂದಿನಿಯನ್ನು ಮತ್ತೆ ಓದುಗರಿಗೆ ತಲುಪಿಸುವ ಆಶಾವಾದ ನಂಜನಗೂಡು ತಿರುಮಲಾಂಬ ಅವರದ್ದಾಗಿತ್ತು.


ಇಷ್ಟೆಲ್ಲಾ ಆದ ಮೇಲೂ ೧೯೨೨ ರಲ್ಲಿ ಮಕ್ಕಳಿಗಾಗಿ(ಬಾಲಕ-ಬಾಲಕಿಯರಿಗಾಗಿ) ‘ಸನ್ಮಾರ್ಗದರ್ಶಿನಿ’ ಮಾಸ ಪತ್ರಿಕೆಯನ್ನು ಪ್ರಾರಂಭಿಸಿ ಮೊದಲ ವರ್ಷದಲ್ಲೇ ೫೯೬ ರೂಗಳ ನಷ್ಟ ಅನುಭವಿಸಿದರು. ‘ಸನ್ಮಾರ್ಗದರ್ಶಿನಿ’ ಯ ಮೊದಲ ವರ್ಷದ ಖರ್ಚು ೮೭೮ ರೂ. ೮ ಆಣೆ, ಪತ್ರಿಕೆಯಿಂದ ಬಂದ ಗಳಿಕೆ/ಲಾಭ ೨೮೨, ಅಂದು ಕಳೆದುಕೊಂಡದ್ದು ೫೯೬ ರೂಗಳು ಇವತ್ತಿಗೆ ನಮಗೆ ಬಹಳ ಸಣ್ಣ ಮೊತ್ತ ಎನಿಸಬಹುದು. ಆದರೆ ಅಂದಿಗೆ ಆ ಹಣಕ್ಕೆ ಕನಿಷ್ಟ ಅರ್ಧ ಕೆ.ಜಿ ಚಿನ್ನ ಖರೀದಿಸಬಹುದಾಗಿತ್ತು.


ಪರಿಣಾಮಗಳೇನೆ ಇರಲಿ, ಧೀಮಂತ ಪತ್ರಕರ್ತೆಯಾಗಿದ್ದ ತಿರುಮಲಾಂಬ ಇವುಗಳೇನನ್ನು ಲೆಕ್ಕಿಸದೇ ಮಹಿಳೆಯರಿಗಾಗಿ, ಮಕ್ಕಳಿಗಾಗಿ ಪತ್ರಿಕೆಗಳನ್ನು ನಡೆಸಿದರು. ಸಂಪಾದಕಿಯಾಗಿ ತಮ್ಮ ಪತ್ರಿಕೆಗಳ ಮೇಲೆ, ತಮ್ಮ ಅಭಿಪ್ರಾಯಗಳ ಮೇಲೆ ಸಂಪೂರ್ಣವಾಗಿ, ಸ್ವತಂತ್ರರಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅವರು ಪತ್ರಿಕೆಯ ಕೆಲಸಗಳಿರಲಿ, ಜವಾಬ್ದಾರಿ ನಿರ್ವಹಣೆ ಇರಲಿ ಇವುಗಳಿಗೆ ಯಾರನ್ನೂ ಅವಲಂಬಿಸಿರಲಿಲ್ಲ.


ಕರ್ಣಾಟಕ ನಂದಿನಿಯಲ್ಲಿ ಓದುಗರ ಮನರಂಜನೆಗಾಗಿ ಕಾದಂಬರಿ, ನಾಟಕ, ಕಥೆ ಮತ್ತು ಕವಿತೆಗಳನ್ನೂ ಪ್ರಕಟಿಸಲಾಗುತ್ತಿತ್ತು. ಇದಲ್ಲದೆ, ಪತ್ರಿಕೆಗಳಲ್ಲಿ ಸಲಹೆ, ಸೂಚನೆಗಳನ್ನು, ಹಲವಾರು ಪತ್ರಿಕೆಗಳಿಂದ ಕೆಲವಾರು ಮುಖ್ಯವೆನಿಸಿದ ಬರಹಗಳನ್ನು ಸಂಗ್ರಹಿಸಿ ಬರೆಯುತ್ತಿದ್ದರು.


ಪತ್ರಿಕೆಯ ಸ್ವರೂಪದ ಕುರಿತು ಹೇಳುವುದಾದರೆ ಪತ್ರಿಕೆಯ ಮೊದಲ ಪುಟದಲ್ಲಿ ಮಾಸ್ಟ್ ಹೆಡ್ ನ ಕೆಳಗೆ

“ಸಿದ್ಧಿಂ ಸರ್ವಾಣಿ ಭೂತಾನಿ ಭೂತಾನಾಂಚೈವ ಯ:ಪ್ರಭುಃ|

ದಾಸ್ಯನ್ತಿ ಮಮಯೇಚಾನ್ಯೇಹ್ಯದೃಷ್ಟಾಃ ಪಥಿಗೋಚರಾಃ”

ಎಂಬ ಶ್ಲೋಕವಿದೆ. ಅದರ ಕೆಳಗೆ ಪೊಲಿಯೊ(ದಿನ, ದಿನಾಂಕ, ಸಂಪುಟ, ಸಂಚಿಕೆ, ವರ್ಷ ಮುಂತಾದ ವಿವರಗಳನ್ನೊಳಗೊಂಡ ಸೂಚಿ) ಹಾಗೂ

ಪಾಲಿಸೆನ್ನನು ಜಾನಕಿ- ಅರವಿಂದ ನಾಯಕಿ- ಪಾಲಿಸೆನ್ನನು ||ಪ||

ಎಂಬ ಪ್ರಾರ್ಥನೆ ಇದೆ.ಇದನ್ನು ರಮಾನಂದ ಎಂಬುವರು ರಚಿಸಿದ್ದಾರೆ. ಪತ್ರಿಕೆಯಲ್ಲಿ ಪರಿವಿಡಿ ಪುಟವಿಲ್ಲ ಒಳಪುಟಗಳಲ್ಲಿ ‘ಬಿನ್ನಹ- ಸಂಪಾದಕೀಯ’, ‘ಕನ್ನಡದ ರನ್ನಗನ್ನಡಿ’ (ಮಣಿ-೫) ವ್ಯಕ್ತಿ ಪರಿಚಯ, ‘ದೇಶೋನ್ನತಿ-ವೃತ್ತಮಣಿ ವೆಂಕಟಕೃಷ್ಣಯ್ಯಂಗಾರ್’, ‘ಕೃತಜ್ಞತೆ-ಮಹಿಳಾ ಸೇವಾ ಸಮಾಜ, ಬೆಂಗಳೂರು ೧೯೧೬-೧೭ನೇ ಸಾಲಿನ ವಾರ್ಷಿಕ ವರದಿ’, ‘ನಮ್ಮ ನೂತನ ಸೋದರಿ ಸರಸ್ವತಿಗೆ ಸುಸ್ವಾಗತವೂ’, ‘ಪುಸ್ತಕ ಪರಿಚಯ- ಸ್ವೀಕಾರ ಮತ್ತು ಸ್ವಾಭಿಪ್ರಾಯವೂ’ ಎಂಬ ಬರಹಗಳನ್ನು ಒಳಗೊಂಡಿದೆ.


ಈವರೆಗೆ ನಂದಿನಿಯಲ್ಲಿ ಅಪೂರ್ಣವಾಗಿಯೇ ಉಳಿದಿರುವ ‘ಭಾವನಾ ಲೋಕ’, ‘ಅಬಲಾ ದೌರ್ಜನ್ಯ’, ‘ನಾನು ಏನಾಗಿರುವೆನು’, “ಸ್ತ್ರೀಯರ ನೈಸರ್ಗಿಕ ಸೇವೆ ಇತ್ಯಾದಿ ಲೇಖನಗಳು ‘ಆಳ್ವಾರರ ವೈಭವವು’ ಎಂಬ ಭಕ್ತರ ಚರಿತ್ರೆಗಳು ಮುಂದಿನ ವರ್ಷದಲ್ಲಿ ಪ್ರಕಟವಾಗುವುವು ಎಂದು ಪತ್ರಿಕೆಯಲ್ಲಿ ತಿರುಮಲಾಂಬ ಬರೆದುಕೊಂಡಿದ್ದರಾದರೂ ಅದು ಸಾಧ್ಯವಾಗಲಿಲ್ಲ.


“ನೀವು ಹೆಣ್ಣು ಮಕ್ಕಳಿಗೆ ಒಡವೆಗಳನ್ನ ಮಾಡಿಸುವುದಕ್ಕಾಗಿ ಕೆಲವು ರೂಪಾಯಿಗಳನ್ನು ತೆಗೆದಿಟ್ಟಿರಬಹುದಲ್ಲವೆ? ಈ ಹಣವನ್ನು ವೆಚ್ಚ ಮಾಡಿ ನಿಮ್ಮ ಮಗಳಿಗೆ ಚೆನ್ನಾಗಿ ವಿದ್ಯೆ ಕಲಿಸಿಟ್ಟರೆ ಮುಂದೆ ಅದರಿಂದ ಎಷ್ಟು ಲಾಭವುಂಟೆಂಬುದನ್ನೂ ಯೋಚಿಸಿ ನೋಡಿ. ಒಂದು ವೇಳೆ ನೀವು ನಿಮ್ಮ ಮಗಳಿಗೆ ಆಭರಣ ರೂಪದಲ್ಲಿ ಸ್ವಲ್ಪ ಆಸ್ತಿಯನ್ನು ಮಾಡಿಟ್ಟರೆ ಅವಳ ಗಂಡನು ತನ್ನಾಸ್ತಿಯನ್ನು ಹಾಳು ಮಾಡಿಕೊಂಡರೂ ಅವಳ ಕುಟುಂಬದ ಜೀವನಕ್ಕೆ ಅನುಕೂಲವಾಗಬಹುದೆಂದು ಯೋಚಿಸಬಹುದು. ಆದರೆ ಒಡವೆಗಳ ರೂಪವಾಗಿ ನೀವು ಆಸ್ತಿಯನ್ನು ಮಾಡಿಕೊಂಡಿರುವುದರಿಂದ ಮತ್ತಷ್ಟು ಅಪಾಯವೇ ಹೊರತು ಪ್ರಯೋಜನವಿಲ್ಲ. ಏಕೆಂದರೆ ತನ್ನ ಆಸ್ತಿಯನ್ನೆಲ್ಲ ಹಾಳುಮಾಡಿಕೊಳ್ಳುವಷ್ಟು ಅವಿವೇಕಿ ಗಂಡ, ಹೆಂಡತಿಯ ಒಡವೆಗಳನ್ನೂ ಹಾಳುಮಾಡದೆ ಬಿಡುವನೆ? ಅದರಿಂದ ನೀವು ನಿಮ್ಮ ಮಕ್ಕಳಿಗೆ ಒಡವೆಗಳನ್ನು ಮಾಡಿಡುವುದರ ಬದಲು ಆ ಹಣಕ್ಕೆ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲವು ಷೇರುಗಳನ್ನೂ, ಕ್ಯಾಷ್ ಸರ್ಟಿಫಿಕೇಟುಗಳನ್ನೂ ಅವರ ಹೆಸರಿನಲ್ಲಿಯೇ ತೆಗೆದು ಅವರಿಗೆ ಆಸ್ತಿ ಮಾಡಿಕೊಡಿ.”


ಈ ಉದ್ಧರಣವನ್ನು ಗಮನಿಸಿದರೆ ೧೦೫ ವರುಷಗಳ ನಂತರವೂ ಪ್ರಸ್ತುತದಲ್ಲಿ ‘ನಾವಿನ್ನೂ ಬೇಟಿ ಬಚಾವೊ, ಬೇಟಿ ಪಡಾವೋ’ ಎಂಬ ಯೋಜನೆಗಳನ್ನು ನೋಡುತ್ತಿರುವಾಗ ಶತಮಾನಕ್ಕೂ ಮುಂಚೆಯೇ ತಿರುಮಲಾಂಬ ಅವರ ಆಲೋಚನೆಗಳು ಹೇಗಿದ್ದವು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲಬಲ್ಲದು. ತಿರುಮಲಾಂಬ ಅವರಿಗೆ ತಾವು ಕೈಗೆತ್ತಿಕೊಂಡ ಪತ್ರಿಯೊಂದು ಕೆಲಸದ ಬಗ್ಗೆಗೂ ಸ್ಪಷ್ಟತೆ ಇತ್ತು. ಪತ್ರಿಕೆಯೂ ಇದಕ್ಕೆ ಹೊರತಾಗಿರಲಿಲ್ಲ.


“ನಂದಿನಿಯ ಜನ್ಮಧಾರಣೆಯು ಆರಿಗೂ ಆವ ಆಗ್ರಹಕ್ಕೂ ಕಾರಣವಾಗದಂತೆ, ಸ್ತ್ರೀ ಜನಾಂಗದಲ್ಲಿ ಪರಸ್ಪರೈಕಮತ್ಯವುಂಟಾಗುವುದರಿಂದ ನಮ್ಮ ದೇಶದ ವಿದ್ಯಾ ಸಂಪದಭ್ಯುದಯಗಳು ಹೆಚ್ಚುವಂತೆ ಮಾಡಬೇಕೆಂಬುದೇ ನಮ್ಮ ಮುಖ್ಯ ಗುರಿಯಾಗಿರುವುದು. ಇದಕ್ಕಾಗಿ ಈ ನಿಯಮಗಳನ್ನು ಆಚರಣೆಗೆ ತರಲು ಸಂಕಲ್ಪಿಸಿರುವೆವು”

೧. ನಮ್ಮ ದೇಶದ ಏಳಿಗೆಗೆ ಸ್ತ್ರೀ ಜನಾಂಗದ ಕರ್ತವ್ಯ ತತ್ಪರತೆಯೇ ಕಾರಣ ಎಂಬುದನ್ನು ನಮ್ಮ ಎಳೆದಂಗಿಯರ ತಿಳಿವಿಗೆ ತರಬೇಕಾದುದು.

೨. ನಮ್ಮ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಯಾವ ಬಗೆಯದಾಗಿರಬೇಕು? ಈಗಿನ ಶಾಲಾ ಶಿಕ್ಷಣದಿಂದಲೇ ನಮ್ಮವರು ಏಳಿಗೆಗೆ ಬರಬಹುದೆ? ಅಥವಾ ಈಗಿನ ಶಾಲಾ ಶಿಕ್ಷಣದಲ್ಲಿ ಮಾಡಬೇಕಾದ ಸುಧಾರಣೆಗಳು ಏನಾದರೂ ಉಂಟೆ? ಎಂಬ ವಿಚಾರದಲ್ಲಿ ನಮ್ಮವರ ಅಭಿಪ್ರಾಯವನ್ನು ಪ್ರಕಟಪಡಿಸುವುದು.

೩. ನಮ್ಮವರ ಆಚಾರ ವ್ಯವಹಾರದಲ್ಲಿ ಸೇರಿಸುವ ಅನರ್ಥಕರ ಇಲ್ಲವೇ ಪ್ರಯಾಸಕರ ಅಂಶಗಳನ್ನು ಕ್ರಮಪಡಿಸಿ ನಮ್ಮವರ ಸ್ವರೂಪ ಕರ್ತವ್ಯಗಳಿಗೆ ಅವಶ್ಯಕವಾದ ವಿಚಾರಗಳನ್ನು ಸಕಾರಣವಾಗಿ ವಿಮರ್ಶಿಸುವುದು.

೪. ನಮ್ಮ ಬಾಲಿಕಾ ಶಿಕ್ಷಣದ ಕಡೆಗೂ ಸ್ತ್ರೀಯರ ನಿತ್ಯ ಸೇವಾ ವಿಚಾರದ ಕಡೆಗೂ ನಮ್ಮ ದೇಶಬಾಂಧವರು ಕೊಡಬೇಕಾದ ಆಸಕ್ತಿ ಮತ್ತು ಅನಾಥೆಯರಾಗಿ, “ಸಮಾಜ ಶಾಸನಕ್ಕೆ ಬಲಿ ಬಿದ್ದು” ಕ್ಲೇಶ ರೋಷಗಳಿಂದ ನರಳುತ್ತಿರುವ ದಿನ ದುಃಖಿನಿಯರಾದ ವಿತಂತು ಭಗಿನಿಯರಲ್ಲಿ ನಮ್ಮವರೂ, ನಮ್ಮ ಭ್ರಾತೃವರ್ಗೀಯರು ತೋರಿಸಬಹುದಾದ ವಿಶ್ವಾಸ ಗೌರವ ಇವನ್ನು ಕುರಿತು ವಿಚಾರ ಮಾಡುವುದು......


“ಈ ನಾಲ್ಕು ಅಂಶಗಳು ಮುಖ್ಯವಾಗಿದ್ದು ಕಾಲೋಚಿತವಾಗಿ ಇತರ ವಿಮರ್ಶೆಗಳ ಕಡೆಗೂ ಗಮನ ಕೊಡಬೇಕೆಂದು ಮಾಡಿರುವೆವು.” ಎಂಬುದಾಗಿ ನಳ ಸಂವತ್ಸರ ಅಶ್ವಯುಜ ಮಾಸ ದ ಸಂಚಿಕೆಯ ಸಂಪಾದಕೀಯದಲ್ಲಿ ಉಲ್ಲೇಖಿಸಿದ್ದಾರೆ.


ಪ್ರಾರಂಭದ ವರ್ಷ ಪತ್ರಿಕೆಯು ಕ್ರೌನ್ ಚತುರ್ಥ ೩೨ ಪುಟಗಳಿದ್ದವು. ಎರಡು ಮತ್ತು ಮೂರನೇ ವರ್ಷದಲ್ಲಿ ಕ್ರೌನ್ ಅಷ್ಟಪತ್ರದ ಅಳತೆಯಲ್ಲಿದ್ದು ೪೮ ಪುಟಗಳನ್ನು ಹೊಂದಿತ್ತು. ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೨ ಆಣೆ, ವಾರ್ಷಿಕ ಚಂದಾ ದರ ೨ ರೂಗಳಾಗಿತ್ತು. ಕರ್ಣಾಟಕ ನಂದಿನಿ ಪತ್ರಿಕೆಗೆ ೩೦೦ ಚಂದಾದಾರರ ಸಂಖ್ಯೆ ಹೊಂದಿತ್ತು, ಪತ್ರಿಕೆಯೂ ಮುಂಬಯಿ, ಕಲ್ಕತ್ತಾ, ಆಗ್ರಾ ಮತ್ತು ಮಂಗಳೂರಿನಲ್ಲಿ ವಿಶೇಷ ಪ್ರಸರಣವಿತ್ತು. ಮಹಿಳಾ ಪತ್ರಿಕೆಯೆಂದಿದ್ದರೂ ಪುರುಷರೂ ಪತ್ರಿಕೆಗೆ ಬರೆಯಲು ಅವಕಾಶವಿತ್ತು.


“ಅವರೊಬ್ಬರೇ ಪತ್ರಿಕೆಯ ಎಲ್ಲ ಜವಾಬ್ದಾರಿಯನ್ನೂ ಹೊತ್ತಿದ್ದು ಆ ಪತ್ರಿಕೆಗೆ ಸ್ಪಷ್ಟ ಆಕಾರ ರೂಪುರೇಷೆಗಳನ್ನು ಉಂಟು ಮಾಡಲಿಲ್ಲ, ಬದಲಿಗೆ ಪುಟ ಸಂಖ್ಯೆ, ವಸ್ತುವಿನ ಆಯ್ಕೆ, ಅದರ ಅಂಕಣದಲ್ಲಿ ಯಾವುದೇ ಸ್ಥಿರತೆ ಇಲ್ಲ. ಒಂದೊAದು ಸಂಚಿಕೆ ಒಂದೊಂದು ಬಗೆಯಾಗಿ ಬಂದಿದೆ. ಆರಂಭದಲ್ಲೇ ಪತ್ರಿಕೆಯ ವಿಷಯ ಸೂಚಿಯನ್ನು ಅವರು ನೀಡಿಲ್ಲ. ಹೀಗೆ ನಿಶ್ಚಿತ ಕ್ರಮವು ಇಲ್ಲದಿದ್ದರೂ ಸ್ತಿçÃಯರಿಗೆ ಸಂಬAಧಿಸಿದ ವಿಷಯಗನ್ನು ಮಾತ್ರ ಧರ್ಮ, ಚರಿತ್ರೆ, ಗ್ರಂಥಗಳು, ಪತ್ರಿಕೆಗಳಿಂದ ಒಗ್ಗೂಡಿಸಿ, ಪ್ರಕಟಿಸುವಲ್ಲಿ ಬಲವಾದ ಆಸಕ್ತಿ ಅವರಿಗಿತ್ತೆಂದು ಕಾಣಬಹುದು. ಪ್ರಸಿದ್ಧರಾದ ಪುರುಷರು, ಮಹಿಳೆಯರ ಚರಿತ್ರೆಗಳನ್ನೂ, ವಿಮರ್ಶೆಗೆಂದು ಕಳಿಸಲಾದ ಗ್ರಂಥಗಳ ಸ್ವೀಕೃತಿ, ಪರಿಚಯಾದಿಗಳನ್ನೂ ನಂದಿನಿಯಲ್ಲಿ ಕಾಣುತ್ತೇವೆ.”


“ ಈ ಪತ್ರಿಕೆಗಳ ಸಂಚಿಕೆಯ ಪ್ರತಿ ಪುಟಗಳಲ್ಲಿ ವೈವಿಧ್ಯವಿದೆ. ‘ಸ್ತ್ರೀ ವಿದ್ಯಾಭ್ಯಾಸ’, ‘ಶಿಶುಮರಣ ನಿವಾರಣೆ’, ‘ಮೋಸದ ೧೦೦ ರೂ ನೋಟಿನ ಬಗ್ಗೆ ಎಚ್ಚರಿಕೆ’, ‘ಪುರಾತನ ಹಿಂದೂ ಸ್ತ್ರೀಯರ ಔನ್ನತ್ಯ’, ‘ಆಂಧ್ರ ಕವಯತ್ರಿ ವೆಂಕಮ್ಮ’, ‘ವಿಮರ್ಶೆಗಾಗಿ ಬಂದಿರುವ ಪುಸ್ತಕಗಳು’, ‘ಲೋಕಮಾನ್ಯ ಬಾಲಗಂಗಾಧರ ತಿಲಕ ಸ್ಮರಣಂ’ ಎಂಬಂತಹ ಲೇಖನಗಳು, ಧಾರಾವಾಹಿ, ಕಥೆಗಳು, ಕಾವ್ಯ, ಯಕ್ಷಗಾನ ರೂಪಕಗಳು ಇತ್ಯಾದಿಗಳನ್ನು ಪ್ರಕಟಿಸಲಾಗಿದೆ. ‘ಪಿತೃವಾಕ್ಯ ಪರಿಪಾಲನಂ’, ಎಂಬ ಮಾಲೆಯಲ್ಲಿ ಪರಶುರಾಮ, ಪುರು ಚಕ್ರವರ್ತಿ, ಗೌತಮ ಅಹಲ್ಯೆಯರ ಪುತ್ರ ಚಿರಕಾರ ಇತ್ಯಾದಿ ಪುರಾಣ ನಾಯಕರ ಪಾತ್ರ ಚಿತ್ರಣವಿದೆ. ತಂದೆ-ಮಗ, ಅಕ್ಕ- ತಂಗಿ ಹಾಗೂ ಪತಿ-ಪತ್ನಿ ಮಧ್ಯೆ ಪತ್ರ ಸಂವಾದಗಳ ಮೂಲಕ ಮಧ್ಯಮವರ್ಗದ ಪ್ರಚಲಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಅನೇಕ ಪೋಟೊಗಳ ಬ್ಲಾಕ್ ಬಳಸಲಾಗಿದೆ.”


ತಿರುಮಲಾಂಬ ತಾವು ಪ್ರಾರಂಭಿಸಿದ ಎರಡೂ ಪತ್ರಿಕೆಗಳಿಂದ ಕರ್ನಾಟಕದ ವಿವಿಧ ಊರುಗಳ ಲೇಖಕ-ಲೇಖಕಿಯರನ್ನು ಕನ್ನಡಿಗರಿಗೆ ಪರಿಚಯಿಸಿದರು. ಕರ್ಣಾಟಕ ನಂದಿನಿಯಲ್ಲಿ ‘ಕನ್ನಡಿಗರ ಕೈಗನ್ನಡಿ’ ಬರಹಮಾಲೆಯಲ್ಲಿ ಮೈಸೂರು, ಮಂಗಳೂರು ಮತ್ತು ಧಾರವಾಡದ ಕನ್ನಡಿಗರು, ಸುಶಿಕ್ಷಿತ ಮಹಿಳೆಯರನ್ನೆಲ್ಲ ಒಂದುಗೂಡಿಸಿ ಅವರನ್ನು ದೇಶ, ಭಾಷೆಯ ಹೆಸರಲ್ಲಿ ಭಾವೈಕ್ಯವಾಗಿ ಬೆಸೆಯಬೇಕೆಂಬುದು ಅವರ ಅದಮ್ಯವಾದ ಹಂಬಲವಾಗಿತ್ತು. ಈ ನಿಟ್ಟಿನಲ್ಲಿ ವೆಂಕಟಕೃಷ್ಣ ಅಯ್ಯಂಗಾರ್, ವೆಂಕಟರಂಗೋಕಟ್ಟಿ, ರಾಜಕವಿ ತಾತಾ, ಅಣ್ಣಾರಾವ್ ಸನದಿ ಮತ್ತು ಕಡೆಂಗೋಡ್ಲು ಶಂಕರಭಟ್ಟ ಮೊದಲಾದವರ ಲೇಖನಗಳನ್ನು ಪ್ರಕಟಿಸಿದರು.


ನೆಲ್ಲಿಕಾರಿನ ಜೈನಮಹಿಳೆ(ರಾಧಾಬಾಯಿ), ರಂಗನಾಯಕಮ್ಮ, ಎಸ್, ಸುಂದರಮ್ಮ, ಸುರಮಾಬಾಯಿ, ಅಹಲ್ಯಾಬಾಯಿ, ಸರಸ್ವತಿ ಮತ್ತು ‘ಮಲ್ಲಿಗೆ’ ಎಂಬ ಹೆಸರಿನಿಂದ ಬರೆದ ತುಳಸೀಬಾಯಿ ಮುಂತಾದ ಬರಹಗಾರ್ತಿಯರನ್ನು ಬೆಳಕಿಗೆ ತಂದರು. ಎನ್.ತಿಮಪ್ಪಯ್ಯ, ಭಾರದ್ವಾಜ, ಕೆ.ಆರ್.ರಾಘವಾಚಾರ್, ಬಿ.ಎನ್ ಕೃಷ್ಣಮೂರ್ತಿ ಮತ್ತು ಶೇಷ ಬಿ.ಪಾರಿಷವಾಡ, ಸರಗೂರು ವೆಂಕಟವರದಾಚಾರ್ಯ, ಎಚ್.ಚನ್ನಕೇಶವ ಅಯ್ಯಂಗಾರ್, ಹಲಗೂರು ವೆಂಕಟರಮಣಯ್ಯ ಮತ್ತು ಮಲ್ಲಿಕಾಗ್ರಜ ಮುಂತಾದ ಬರಹಗಾರರಿಗೆ ತಮ್ಮ ಕರ್ಣಾಟಕ ನಂದಿನಿ ಮತ್ತು ಸನ್ಮಾರ್ಗದರ್ಶಿ ಪತ್ರಿಕೆಗಳಲ್ಲಿ ವೇದಿಕೆ ಸೃಷ್ಟಿಸಿದ್ದರು.


“ಪತ್ರಕರ್ತೆ, ಲೇಖಕಿ ಸುಶೀಲಾ ಕೊಪ್ಪರ ಪತ್ರಿಕೆಯ ಪುಟಗಳಲ್ಲಿ ಪ್ರಕಟವಾಗುತ್ತಿದ್ದ ಹೂರಣದ ಕುರಿತು ಹೀಗೆ ಹೇಳಿದ್ದಾರೆ. “ ಪದ್ಯಗಳಲ್ಲಿ ದೇವರ ಕತೆಗಳು, ನಾಮಾವಳಿ, ದೇವರ ಮಹಾತ್ಮೆ, ತುಳಸೀ ಸ್ತೋತ್ರ, ಐತಿಹಾಸಿಕ ಹಾಗೂ ಸಾಮಾಜಿಕ ಧಾರಾವಾಹಿ, ಕಾದಂಬರಿ ಹಾಗೂ ಕತೆಗಳು ಜಾನಪದ ಗೀತೆಗಳು, ಸತ್ಯ, ಅಹಿಂಸೆ, ಶಿಕ್ಷಣ ಮುಂತಾದ ವಿವಿಧ ಬಗೆಯ ಲೇಖನಗಳಿಂದ ಕರ್ಣಾಟಕ ನಂದಿನಿ ಮತ್ತು ಸನ್ಮಾರ್ಗದರ್ಶಿನಿಗಳು ಬಿಗಿಯಾಗಿ ತುಂಬಿದ್ದು ಕಂಡು ಬಂದರೂ ಜಾಹಿರಾತಿನ ಸಂಪರ್ಕವಿಲ್ಲ. ಪುಟವಿನ್ಯಾಸ, ಅಲಂಕಾರ ಇಲ್ಲದಿದ್ದರೂ ತುಂಬು ಮುತೈದೆಯ ಲಕ್ಷಣವಿದೆ.”

ತಾವು ಆರಂಭಿಸಿದ ಎರಡೂ ಮಾಸಪತ್ರಿಕೆಗಳೂ ಸೇರಿ ಸುಮಾರು ೬ ವರ್ಷಗಳ ಕಾಲ ಪತ್ರಿಕೋದ್ಯಮಿಯಾಗಿ ದುಡಿದ ನಂಜನಗೂಡು ತಿರುಮಲಾಂಬ ನಿರಂತರವಾಗಿ ಹತ್ತಾರು ತೊಂದರೆಗಳನ್ನನುಭವಿಸಿಯೂ ಪತ್ರಿಕೆಗಳನ್ನು ನಡೆಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಜನರ ಅಸಹನೆ, ಕುಹಕ ಮತ್ತು ಕೆಲ ಖ್ಯಾತ ಸಾಹಿತಿಗಳ ಕಟುವಿಮರ್ಶೆ ಎಲ್ಲವನ್ನೂ ದಿಟ್ಟವಾಗಿ ಎದುರಿಸುತ್ತಲೇ ತಾವಂದುಕೊAಡದ್ದನ್ನು ಸಾಧಿಸಿದರು. ಆದರೂ ಅವರಲ್ಲಿ ಎಂದಿಗೂ ಮಾಸದ ನೋವೊಂದು ಉಳಿದು ಹೋಗಿತ್ತು. ಸುಪ್ರಸಿದ್ಧ ಹಿರಿಯ ಸಾಹಿತಿಯೊಬ್ಬರು “ಈಕೆಯೂ ಪತ್ರಿಕೆ ನಡೆಸುತ್ತಾಳೆಯೇ? ಹೆಂಗಸು ಎಂದು ಜನ ಕೊಂಡುಕೊಳ್ಳುತ್ತಾರೆ. ಅದರಲ್ಲೇನೂ ಹುರುಳಿಲ್ಲ ಪ್ರಚಾರ ಮಾಡಿದ್ದರಂತೆ”


‘ಪತ್ರಿಕೋದ್ಯಮದಲ್ಲಿ ಹೆಣ್ಣು ಹೊಸಬಳು’ ಎಂಬ ಅಭಿಪ್ರಾಯ ಪ್ರಚಲಿತವಿರುವ ಸಂದರ್ಭದಲ್ಲಿ ಈ ಶತಮಾನದ ಆದಿಭಾಗದಲ್ಲಿ ಪತ್ರಿಕೆ ಪ್ರಕಟಣೆ ಹಾಗೂ ಪುಸ್ತಕ ಪ್ರಕಾಶನ ಕೈಗೊಂಡು ಯಶಸ್ವಿಯಾಗಿ ನಡೆಸಿದುದು ಈ ಧೀಮಂತ ಮಹಿಳೆಯ ವಿಶಿಷ್ಟತೆ ಇಂತಹ ವಿಶಿಷ್ಟ ವ್ಯಕ್ತಿತ್ವಗಳು ಮಹಿಳಾ ಚಳವಳಿಯ ಹೊಸ ಹೆಜ್ಜೆಗಳಿಗೆ ನೆಲೆಯಾಗುವಂತಹವು: ಪರಂಪರೆಯ ಬೇರುಗಳಾಗುವಂತಹವು.”


•ತಿರುಮಲಾಂಬ ಅವರು ೧೪ ಕಾದಂಬರಿ, ೪ ನಾಟಕಗಳು, ೩ ಗೀತಾವಳಿಗಳು ಮತ್ತು ಹಲವು ಪ್ರಬಂಧ ಸಂಕಲನ ಗಳನ್ನು ರಚಿಸಿದ್ದರು. ಇವುಗಳಲ್ಲಿ ಕೆಲವು ಕರ್ಣಾಟಕ ನಂದಿನಿ ಮತ್ತು ಸನ್ಮಾರ್ಗದರ್ಶಿ ಪತ್ರಿಕೆಗಳಲ್ಲಿ ಕಂತುಗಳಾಗಿ(ಧಾರಾವಾಹಿ) ಪ್ರಕಟವಾದವು. ಇವರ ಬರಹ/ಕೃತಿಗಳಿಗೆ ಬಂದ ಟೀಕೆ/ವಿಮರ್ಶೆಗಳಿಗೆ ತಿರುಮಲಾಂಬ ಹೀಗೆ ಉತ್ತರ ನೀಡುತ್ತಾರೆ.


“ಸ್ತ್ರೀಯರು ಲೇಖನ ಕ್ರಿಯೆಗೆ ಅನರ್ಹರೆಂದೂ, “ಸ್ತ್ರೀಯರಿಂದ ಇಂತಹ ಗ್ರಂಥಗಳು ಎಂದಿಗೂ ಬರೆಯಲ್ಪಡಲಾರವೆಂದೂ, ಆರೋ ಸುಶಿಕ್ಷಿತರಾದ ಪುರುಷರೇ ಇದನ್ನು ಹೀಗೆ ಸ್ತ್ರೀ ಕರ್ತೃತ್ವದಲ್ಲಿ ಹೊರಡುವಂತೆ ಗುಪ್ತವಾಗಿದ್ದು ವಿಚಾರಿಸುತ್ತಿರುವರೆಂದೂ, ಇನ್ನೂ ಹಲವು ಸಂದೇಹಗಳಿಂದ ಹುಚ್ಚು ಹುರುಳಾಗಿ ಹೇಳುತ್ತಿರುವಲ್ಲಿ ಇಂತಹ ಆಕ್ಷೇಪವುಂಟಾಗುವುದೇನೂ ಅತಿಶಯವಲ್ಲ.ಆದರೆ ನಮ್ಮ ಸಮಾಧಾನವಿಷ್ಟೆ. ಸಂಶಯ ರೋಗಕ್ಕೆ ಚಿಕಿತ್ಸೆಯಿಲ್ಲ. ಪ್ರಯತ್ನ ಮತ್ತು ಅಭ್ಯಾಸಗಳಿಗೆ ಅಸಾಧ್ಯವಾದ ಕೆಲಸಗಳು ಪ್ರಾಯಶಃ ಇರಲಾರವು. ಪುರುಷನಿಗೆ ಇರುವಷ್ಟು ಮೇಧಾಶಕ್ತಿ, ಪ್ರತಿಭಾಸಂಪನ್ನತೆಗಳು “ಸ್ತ್ರೀಯರಲ್ಲಿಯೂ ಸ್ವಾಭಾವಿಕ ಗುಣಗಳಾಗಿದ್ದು ಕೆಲವು ಸಂದರ್ಭಗಳಲ್ಲಿ ಅಧಿಕತರವಾಗಿಯೇ ಕೌಶಲ್ಯದಂತೆ ಹೊರಹೊಮ್ಮುವುದು ಉಂಟು. ಇದೇನೂ ಅಜ್ಞಾನದ ವಿಷಯವಲ್ಲ. ಹಾಗಿದ್ದೂ ಹಿತೈಷಿಣಿಯ ವಿಷಯದಲ್ಲಿ ಆಕ್ಷೇಪಿಸುವವರು ಇಲ್ಲವೆ ಅನುಮಾನಿಸುವವರು ಇರುವುದಾದರೇ ನಾವು ಮಾಡುವುದೇನು?


ತಿರುಮಲಾಂಬ ಅವರ ಬರಹಗಳಲ್ಲಿನ ಬಂಡಾಯ, ಪ್ರತಿಭಟನೆ ಸಂಪ್ರದಾಯದ ಬೇರುಗಳನ್ನು ಅಲುಗಿಸುವಂತದ್ದಾಗಿರಲಿಲ್ಲ. ಅವರು ಅನಿಷ್ಟ ಸಂಪ್ರದಾಯ, ಅಮಾನವೀಯ ಆಚರಣೆ, ಮೌಢ್ಯಗಳ ವಿರುದ್ಧ ಗಟ್ಟಿದನಿ, ಸ್ಪಷ್ಟ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಮಹಿಳಾ ಸಂವೇದನೆಯನ್ನು ಅವರ ಬರಹಗಳು ಎತ್ತಿಹಿಡಿದಿವೆ. ತಿರುಮಲಾಂಬರು ಮಾಡಿದ ಕೆಲಸಗಳಿಗೆ ಸೂಕ್ತವಾದ ಮನ್ನಣೆ ದೊರೆಯಲ್ಲಿಲ್ಲ. ಲೇಖಕಿ ಚಿ.ನ ಮಂಗಳಾ ಅವರು ಗುರುತಿಸಿ ಗೌರವಿಸಿದರು. ಆದರೆ ಬಹಳ ತಡವಾಗಿಯಾದರೂ ೧೯೭೯ರಲ್ಲಿ ಕನ್ನಡಸಾಹಿತ್ಯ ಪರಿಷತ್ತು ಸನ್ಮಾನಿಸಿ ಗೌರವಿಸಿತು. ೧೯೮೦ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿತು.


ತಿರುಮಲಾಂಬರ ವಿಚಾರಗಳಲ್ಲಿ ವೈರುಧ್ಯಗಳಿದ್ದರೂ ಸಹ ಅವರು ಮಹಿಳೆಯರಿಗೆ ಪ್ರವೇಶವೇ ಇಲ್ಲದ ಹಲವಾರು ಕಾರ್ಯಕ್ಷೇತ್ರಗಳಲ್ಲಿ ಮುನ್ನುಗ್ಗಿ ತಾವು ಹೆಜ್ಜೆ ಇಟ್ಟಲ್ಲೆಲ್ಲಾ ಮಹಿಳೆಯರಿಗೆ ಅವಕಾಶ ಸೃಷ್ಟಿಸಿದ ಏಕಾಂಗಿ ಸಾಹಸಿ, ಧೀಮಂತೆ. ತಾವು ಕಾಲೂರಿದಲ್ಲೆಲ್ಲಾ ಪುರೋಗಾಮಿಯಾಗಿ ಕಾರ್ಯಶೀಲರಾಗಿ ದುಡಿದು ಮಾದರಿಯಾದರು.


ಉಪಸಂಹಾರ:

ಮಹಿಳಾ ಪತ್ರಿಕೆ/ಪತ್ರಿಕೋದ್ಯಮವನ್ನು ಪ್ರತ್ಯೇಕವಾಗಿ ನೋಡುವ ಕ್ರಮದಿಂದ ಹಲವು ಹೊಸ ಅಧ್ಯಯನ ಸಾಧ್ಯತೆಗಳು ಗೋಚರಿಸುತ್ತವೆ. ಮಹಿಳಾ ಪತ್ರಿಕೋದ್ಯಮ ಅವಗಣನೆಗೆ ಒಳಗಾಗಿರುವುದು, ಮಹಿಳಾ ಪತ್ರಿಕೋದ್ಯಮ ನಡೆದು ಬಂದ ಇತಿಹಾಸ ದಾಖಲಾಗದಿರುವುದಕ್ಕೆ ಮಹಿಳೆಯರ ತೊಡಗಿಸಿಕೊಳ್ಳುವಿಕೆ ಕಾರಣವಲ್ಲ, ಆಕೆಯ ಶಿಕ್ಷಣ, ಬದುಕು, ಬರಹವನ್ನು ಪ್ರತಿಬಂಧಿಸಿದ ಸಾಮಾಜಿಕ ಕಟ್ಟುಪಾಡುಗಳು ಇದರಲ್ಲಿ ಪ್ರಮುಖ ಪಾತ್ರವಹಿಸಿವೆ ಎಂಬುದನ್ನು ಸೂಕ್ಷö್ಮವಾಗಿ ಗಮನಿಸಿದೆ.


‘ಕರ್ಣಾಟಕ ನಂದಿನಿ’ ಪತ್ರಿಕೆಯು ಪ್ರಕಟವಾಗುವ ಕಾಲಕ್ಕೆ ‘ಮಹಿಳಾ ಪತ್ರಿಕೆ’ ಎಂಬ ಪರಿಕಲ್ಪನೆಯಾಗಲೀ, ಆ ಕುರಿತು ಸ್ಪಷ್ಟ ಅರಿವಾಗಲೀ ಇರಲಿಲ್ಲ. ಇಂತಹ ಪತ್ರಿಕೆಯಿಂದ ಯಾವ ತರಹದ ಬರಹಗಳನ್ನು ಎದುರು ನೋಡಬಹುದು ಎಂಬ ತಿಳುವಳಿಕೆ ಓದುಗರಾದವರಿಗೂ ಇದ್ದಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ವಿವೇಚನೆಯಿಂದ ಹೊಸದೊಂದು ಮಾರ್ಗ ಸೃಷ್ಟಿಸಿದ್ದು ತಿರುಮಲಾಂಬ ಅವರ ಬೌದ್ಧಿಕ ತೀಕ್ಷ÷್ಣತೆ, ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.


‘ಕರ್ಣಾಟಕ ನಂದಿನಿ’ ಪತ್ರಿಕೆಯನ್ನು ಅದು ಪ್ರಾರಂಭವಾದ ಕಾಲ, ಸಂಪಾದಕಿಯಾಗಿದ್ದ ತಿರುಮಲಾಂಬರಿಗಿದ್ದ ಶಿಕ್ಷಣ, ಅವರು ಬೆಳೆದ ಪರಿಸರ, ಸಾಂಪ್ರದಾಯಿಕ ಹಿನ್ನೆಲೆಯ ನೆಲೆಯಲ್ಲಿ ಹಲವಾರು ಮಿತಿಗಳು ಕಂಡು ಬಂದರೂ ಅಂದಿನ ಸನ್ನಿವೇಶಕ್ಕೆ ಎರಡೆರಡು ಪತ್ರಿಕೆಗಳನ್ನು ಪ್ರಾರಂಭಿಸಿ ನಡೆಸಿದ ತಿರುಮಲಾಂಬರ ಸಾಹಸ, ಸಂಪ್ರದಾಯಶೀಲ ಸಮಾಜದೊಳಗಿದ್ದು ಅವರ ಮಿತಿಯಲ್ಲಿ ದಿಟ್ಟತನ, ಗಟ್ಟಿದನಿಯಲ್ಲಿ ಮಹಿಳಾ ಶಿಕ್ಷಣ, ಮಹಿಳಾ ಅಭ್ಯುದಯ ಮತ್ತು ಮಹಿಳೆಯರ ಸಮಸ್ಯೆಗಳ ಕುರಿತು ಬರೆದಿದ್ದಾರೆ. ಅಂದಿನ ಹಲವಾರು ಬರಹಗಾರರಿಗೆ ಪತ್ರಿಕೆಯಲ್ಲಿ, ತಮ್ಮ ಗ್ರಂಥಮಾಲೆಯಲ್ಲಿ ವೇದಿಕೆ ಒದಗಿಸಿದ್ದಾರೆ.


ಯಾವ ನಿಂದೆ, ಕುಹಕ, ಟೀಕೆಗೂ ಎದೆಗುಂದದೆ, ಆರ್ಥಿಕ ನಷ್ಟಗಳಿಗೆ ದಿಕ್ಕುಗೆಡದೇ ತಮ್ಮ ಏಕಾಂಗಿ ಹೋರಾಟದಿಂದ, ಅಚಲ ಜೀವನ ಪ್ರೀತಿಯಿಂದ ಕನ್ನಡ ಮಹಿಳಾ ಪತ್ರಿಕೋದ್ಯಮ, ಆಧುನಿಕ ಕನ್ನಡ ಮಹಿಳಾ ಸಾಹಿತ್ಯ, ನಾಟಕ ಮತ್ತು ಪ್ರಕಾಶನ ಕ್ಷೇತ್ರಗಳನ್ನು ತಮ್ಮ ಅಸೀಮ ಕೊಡುಗೆಯಿಂದ ಸಂಪದ್ಭರಿತವನ್ನಾಗಿಸಿ ಸ್ವಾತಂತ್ರದ ಪೂರ್ವ ಕನ್ನಡ ಪತ್ರಿಕೋದ್ಯಮ, ಸಾಹಿತ್ಯ, ಪ್ರಕಾಶನ ರಂಗಕ್ಕೆ ಮತ್ತು ಕನ್ನಡ ನಾಡು, ನುಡಿಗಳಿಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಣೆ ಮಾಡಿಕೊಂಡ ಧೃವತಾರೆಯಾಗಿದ್ದಾರೆ.


ಪರಾಮರ್ಶನ ಗ್ರಂಥಗಳು:

ಚಿ.ನ, ಮಂಗಳಾ.(೨೦೦೯). ತಿರುಮಲಾಂಬಾ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ದಬ್ಬೆ, ವಿಜಯಾ.(೧೯೯೨). ಹಿತೈಷಿಣಿಯ ಹೆಜ್ಜೆಗಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.

ಸಿ.ಜಿ, ಮಂಜುಳಾ.(೧೯೮೬). ‘ಸಂವೇದನಾಶೀಲ ಲೇಖಕಿ ನಂಜನಗೂಡು ತಿರುಮಲಾಂಬ’. ಮಾನವಿ. ಸಂಪುಟ ೧.

ಸಂಚಿಕೆ ೨ ಪು.ಸಂ ೧೧.

ಹಾವನೂರ, ಶ್ರೀನಿವಾಸ.(೨೦೦೪). ಕನ್ನಡ ಪತ್ರಿಕಾ ಸೂಚಿ (೧೮೪೩-೧೯೭೨). ಪ್ರಸಾರಾಂಗ. ಮೈಸೂರು

ವಿಶ್ವವಿದ್ಯಾನಿಲಯ. ಮೈಸೂರು.

ಕೊಪ್ಪರ, ಸುಶೀಲಾ.(೧೯೮೯). ಕನ್ನಡ ಪತ್ರಿಕೋದ್ಯಮಕ್ಕೆ ಮಹಿಳೆಯರ ಕೊಡುಗೆ. ಪತ್ರಿಕೋದ್ಯಮ ಮತ್ತು ಸಮೂಹ

ಸಂವಹನ ಅಧ್ಯಯನ ವಿಭಾಗ. ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಸಿ.ಜಿ, ಮಂಜುಳಾ.(೨೦೧೫). ಕನ್ನಡ ಪತ್ರಿಕಾಲೋಕದಲ್ಲಿ ಮಹಿಳೆಯ ಹೆಜ್ಜೆಗುರುತು. ಕರ್ನಾಟಕ ಮಾಧ್ಯಮ ಅಕಾಡೆಮಿ.

ಬೆಂಗಳೂರು.

ಹಾವನೂರ, ಶ್ರೀನಿವಾಸ.(೨೦೨೧). ಹೊಸಗನ್ನಡದ ಅರುಣೋದಯ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು

ಎಚ್, ಹೇಮಲತಾ.(೨೦೧೨). ಗಂಡು ಪಾಳಯದಲ್ಲಿ ಸ್ತಿçÃಲೇಖ. ಮಾಧ್ಯಮ ಕರ್ನಾಟಕ: ಪತ್ರಕರ್ತರ ಇಂದು -ನಾಳಿನ ಸವಾಲುಗಳು. ಸಂಪಾದಕ - ನಾಗೇಶ್ ಹೆಗಡೆ. ಉದಯಭಾನು ಕಲಾಸಂಘ (ನೋ). ಉದಯಭಾನು ಉನ್ನತ ಅಧ್ಯಯನ ಕೇಂದ್ರ. ಬೆಂಗಳೂರು.

ಕರ್ಣಾಟಕ ನಂದಿನಿ ಸಂಚಿಕೆಗಳು

ಕನ್ನಡ ಪತ್ರಿಕಾಲೋಕದ ಧೀಮಂತರು- ೧-೨.(೨೦೦೧). ಕರ್ನಾಟಕ ಪತ್ರಿಕಾ ಅಕಾಡೆಮಿ. ಬೆಂಗಳೂರು.

ಕರ್ನಾಟಕ ಪತ್ರಿಕಾ ಇತಿಹಾಸ ಸಂಪುಟ ೧, ೨ ಮತ್ತು ೩.(೧೯೯೯). ಕರ್ನಾಟಕ ಪತ್ರಿಕಾ ಅಕಾಡೆಮಿ. ಬೆಂಗಳೂರು.

ಚಿ.ನಾ, ಮಂಗಳಾ.(೧೯೯೧). ತಿರುಮಲಾಂಬ ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ಬಿ.ಎನ್, ಸುಮಿತ್ರಾಬಾಯಿ.(೨೦೧೧). ನಂಜನಗೂಡು ತಿರುಮಲಾಂಬ. ಸಾಹಿತ್ಯ ಅಕಾಡೆಮಿ. ಬೆಂಗಳೂರು.

ಭರಣ್ಯ, ಹರಿಕೃಷ್ಣಭಟ್.(೧೯೯೦) ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ. ಮಧುರೈ.

ಶಿವರುದ್ರಪ್ಪ, ಜಿ.ಎಸ್.(೧೯೭೯). ಮಹಿಳೆ ಮತ್ತು ಕನ್ನಡ ಸಾಹಿತ್ಯ. ಬೆಂಗಳೂರು ವಿಶ್ವವಿದ್ಯಾಲಯ. ಬೆಂಗಳೂರು.

Comments


bottom of page