top of page

ವಾಕ್-ಶ್ರವಣ ದೋಷವುಳ್ಳ ಮಕ್ಕಳ ಸಬಲೀಕರಣದಲ್ಲಿ ಮಾಧ್ಯಮದ ಪಾತ್ರ -ತುಮಕೂರು ಜಿಲ್ಲೆಯ ಅಧ್ಯಯನ

ಶ್ವೇತ ಎಂ. ಪಿ.

ಸಂಶೋಧನಾರ್ಥಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-570 005, ಕರ್ನಾಟಕ

& ಪುಟ್ಟಸ್ವಾಮಿ ಸಿ. ಕೆ.

ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು - 570 005, ಕರ್ನಾಟಕ.


ಸಾರಾಂಶ: ವಿವಿಧತೆಯಲ್ಲಿ ಏಕತೆ ಇರುವ ರಾಷ್ಟç ನಮ್ಮದು. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುವ ಜನರು ಒಂದೆಡೆಯಾದರೆ, ಈ ರೀತಿಯ ಸದೃಢತೆ ಇಲ್ಲದ ಜನರು ಮತ್ತೊಂದೆಡೆ. ಅಂಗವಿಕಲರು, ವಿಕಲಾಂಗರು, ದೈಹಿಕ ನ್ಯೂನತೆ ಹೊಂದಿದವರು, ವಿಕಲಚೇತನರು, ದಿವ್ಯಾಂಗರು, ವಿಶೇಷಚೇತನರು ಹೀಗೆ ಹಲವಾರು ಹೆಸರುಗಳಿಂದ ಅಂಗವಿಕಲರನ್ನು ಗುರುತಿಸಲಾಗಿದೆ. ಹದಿನೆಂಟು ವರ್ಷದೊಳಗಿನವರನ್ನು ಮಕ್ಕಳೆಂದು ಗುರುತಿಸಲಾಗಿದೆ. ಈ ರೀತಿಯ ವಿಶೇಷಚೇತನ ಮಕ್ಕಳ ಸಬಲೀಕರಣದಲ್ಲಿ ಮಾಧ್ಯಮದ ಪಾತ್ರ ಅರಿಯುವುದು ಈ ಅಧ್ಯಯನದ ಉದ್ದೇಶ. ಸಬಲೀಕರಣ ಎಂದರೆ ಅವರವರ ಜೀವನದ ಮೇಲೆ ಅವರವರಿಗೆ ನಿಯಂತ್ರಣವನ್ನು ಸಾಧಿಸುವ ಮತ್ತು ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ಸ್ವತಃ ನಿಭಾಯಿಸಲು ಬೇಕಿರುವ ಶಕ್ತಿಯನ್ನು ತುಂಬುವುದು. ಈ ರೀತಿಯ ಶಕ್ತಿಯನ್ನು ವಿಶೇಷಚೇತನರಿಗೆ ನೀಡಬೇಕಾದರೆ ವಿಶೇಷ ನೆರವು ವiತ್ತು ಯೋಜನೆಗಳು ಬೇಕಾಗುತ್ತವೆ ಮತ್ತು ಈ ಯೋಜನೆಗಳನ್ನು ತಲುಪಿಸುವುದು ಕೂಡ ಮುಖ್ಯವಾಗುತ್ತದೆ. ಯೋಜನೆಗಳನ್ನು ತಲುಪಿಸುವಲ್ಲಿ ಮಾದ್ಯಮಗಳ ಪಾತ್ರವೂ ಮಹತ್ವದ್ದು. ವಿಶೇಷಚೇತನರನ್ನು ಮಕ್ಕಳ ಹಂತದಲ್ಲಿಯೇ ಗುರುತಿಸಿ ಅವರಿಗೆ ಸೂಕ್ತ ಸೌಲಭ್ಯ ಸಹಕಾರಗಳನ್ನು ನೀಡಿದಲ್ಲಿ ಸಮಾಜದ ಮುಖ್ಯವಾಹಿನಿಗೆ ತರಲು ಅನುಕೂಲವಾಗುವುದು. ನಮ್ಮ ಸಮಾಜದಲ್ಲಿನ ಎಲ್ಲರೂ ಪ್ರಗತಿ ಸಾಧಿಸಿದರೆ ಮಾತ್ರ ರಾಷ್ಟç ಅಭಿವೃದ್ಧಿಯ ಪಥದಲ್ಲಿ ಸಾಗುವುದು. ಈ ನಿಟ್ಟಿನಲ್ಲಿ ವಿಶೇಷಚೇತನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವುದು ಮತ್ತು ಆ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುವುದು ಅತ್ಯಾವಶ್ಯಕ. ವಿಶೇಷಚೇತನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದರಲ್ಲಿ ಮಾಧ್ಯಮದ ಪಾತ್ರವನ್ನು ಅರಿಯುವುದು ಈ ನಿಟ್ಟಿನಲ್ಲಿ ಅವಶ್ಯಕ. ಪ್ರಸ್ತುತ ಅಧ್ಯಯನದಲ್ಲಿ ತುಮಕೂರು ಜಿಲ್ಲೆಯಲ್ಲಿ ವಿಶೇಷಚೇತನರ ಅದರಲ್ಲೂ ವಾಕ್-ಶ್ರವಣ ದೋಷವುಳ್ಳ ಮಕ್ಕಳ ಸಬಲೀಕರಣದಲ್ಲಿ ಮಾಧ್ಯಮದ ಪಾತ್ರವನ್ನು ಅರಿಯಲು ಪ್ರಯತ್ನಿಸಲಾಗಿದೆ.


ಮುಖ್ಯಪದಗಳು: ವಿಶೇಷಚೇತನರು, ವಿಕಲಚೇತನರು, ವಾಕ್-ಶ್ರವಣ ದೋಷ, ಸಬಲೀಕರಣ, ಮಾಧ್ಯಮ, ಯೋಜನೆಗಳು.


ಪೀಠಿಕೆ

ನಮ್ಮ ಸಮಾಜದಲ್ಲಿ ವಿವಿಧ ಭಾಷೆಯ, ಪ್ರಾಂತ್ಯದ, ಆಚಾರ-ವಿಚಾರ, ಉಡುಗೆ-ತೊಡುಗೆ, ಸಮುದಾಯ, ಆಹಾರ ಪದ್ಧತಿಗಳು, ವೇಷ-ಭೂಷಣಗಳು, ಹೀಗೆ ಎಲ್ಲದರಲ್ಲೂ ವಿವಿಧತೆ ಹೊಂದಿರುವ ಜನದಿದ್ದಾರೆ. ವಿವಿಧತೆಯಲ್ಲೂ ಏಕತೆ ಇರುವ ರಾಷ್ಟ್ರ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡರಾಗಿರುವ ಜನರಿಗೆ ಸರ್ಕಾರ ಅನೇಕ ಸವಲತ್ತುಗಳನ್ನು, ಯೋಜನೆಗಳನ್ನು ಒದಗಿಸಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಧೃಡತೆಯಿಲ್ಲದ ಜನರಿಗೂ ಅನೇಕ ಸವಲತ್ತುಗಳನ್ನು ಮತ್ತು ಯೋಜನೆಗಳನ್ನು ಒದಗಿಸಿವೆ. ಅಂಗವಿಕಲರು, ವಿಕಲಾಂಗರು, ದೈಹಿಕ ನ್ಯೂನತೆ ಹೊಂದಿರುವವರು, ವಿಕಲಚೇತನರು, ದಿವ್ಯಾಂಗರು, ವಿಶೇಷಚೇತನರು ಹೀಗೆ ಹಲವಾರು ಹೆಸರುಗಳಿಂದ ಅಂಗವಿಕಲರನ್ನು ಗುರುತಿಸಲಾಗಿದೆ.


ಕರ್ನಾಟಕ ಸರ್ಕಾರ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ 2021ರ ಹೊಂಬೆಳಕು ಯೋಜನೆಗಳ ಕೈಪಿಡಿಯಲ್ಲಿರುವಂತೆ, ಅಂಗವಿಕಲತೆ ಎಂದರೆ, ದೀರ್ಘಕಾಲದಿಂದ ಮಾನಸಿಕ, ಬೌದ್ಧಿಕ, ಅಥವಾ ಇಂದ್ರಿಯಗಳ ದುರ್ಬಲತೆ ಹಾಗೂ ಆ ತೊಡಕುಗಳ ಪರಿಣಾಮದಿಂದಾಗಿ ಸಮಾಜದಲ್ಲಿ ಇತರರೊಂದಿಗೆ ಸಮಾನವಾಗಿ ಮತ್ತು ಸಂಪೂರ್ಣ ರೀತಿಯಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಸಾಧ್ಯವಾಗದಂತೆ ಇರುವ ಸ್ಥಿತಿಯೇ ಅಂಗವಿಕಲತೆ. ವಿಕಲಚೇತನರು ಎಂದರೆ ಅಂಗವೈಕಲ್ಯದೊಂದಿಗೆ ಜನಿಸಿದವರು ಅಥವಾ ಅವರ ನಿಯಂತ್ರಣಕ್ಕೆ ಮೀರಿದ ಸಂದರ್ಭಗಳಿಗೆ ಬಲಿಯಾದವರು, ಮತ್ತು ಇತರೆ ಸಮರ್ಥ ವ್ಯಕ್ತಿಗಳಿಗೆ ಹೋಲಿಸಿದರೆ ವಿಕಲಚೇತನರ ಪರಿಸ್ಥಿತಿ ಅನನುಕೂಲಕರ, ಮತ್ತು ಅನೇಕ ಸಂದರ್ಭಗಳಲ್ಲಿ ತಮ್ಮ ಸ್ವಂತ ಕೆಲಸಗಳನ್ನು ತಾವು ಮಾಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಇರುವವರು.



2021ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 9,40,643 ಮಂದಿ ಅಂಗವಿಕಲರಿದ್ದಾರೆ. ಅದರಲ್ಲಿ 6,61,139 ಜನರು ಹಳ್ಳಿಗಳಲ್ಲಿ ಮತ್ತು 2,78,904 ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 4,73,844 ಮಂದಿ ಸಾಕ್ಷರ ವಿಕಲಚೇತನರಿದ್ದಾರೆ. ಒಟ್ಟು ಅಂಗವಿಕಲರಲ್ಲಿ ಶೇಕಡಾ ೫೧.೪೦ರಷ್ಟು ಸಾಕ್ಷರ ವಿಕಲಚೇತನರಿದ್ದಾರೆ. 2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ 13,24,205 ವಿವಿಧ ರೀತಿಯ ವಿಕಲಚೇತನರು ಇದ್ದಾರೆ. ಹಾಗೂ ಒಟ್ಟು ಜನಸಂಖ್ಯೆಯ ಶೇ.7.72ರಷ್ಟು ಇದ್ದಾರೆ. ಇವರಲ್ಲಿ ಶ್ರವಣದೋಷವುಳ್ಳವರು 2,25,691 ಮತ್ತು ವಾಕ್ ದೋಷವುಳ್ಳವರು 20,741 ಮಂದಿ ಇದ್ದಾರೆ.


ಅಂಗವಿಕಲರನ್ನು ಹೊಂದಿರುವ ಹೆಚ್ಚಿನ ಕುಟುಂಬಗಳು ಬಡತನದ ರೇಖೆಗಿಂತ ಕೆಳಗಿವೆ. ಅವಕಾಶಗಳ ಮತ್ತು ಸೌಲಭ್ಯಗಳ ಕೊರತೆಗಳೂ ಅಂಗವಿಕಲರನ್ನು ಕಾಡುತ್ತಿವೆ. ಅಂಗವಿಕಲರಿಗೆ ಶಿಕ್ಷಣ, ವಿಶೇಷ ತರಬೇತಿ, ನಂತರ ನುರಿತ ಉದ್ಯೋಗ, ಇವೆಲ್ಲವೂ ಇಂದಿಗೂ ಒಂದು ಪ್ರಮುಖ ಸವಾಲಾಗಿಯೇ ಉಳಿದಿದೆ.ಅಂಗವಿಕಲರಲ್ಲಿ ನಿಷ್ಕ್ರಿಯತೆ, ಬಹುಅಂಗ ವೈಕಲ್ಯಯೂ, ಖಿನ್ನತೆಗೆ ಕಾರಣವಾಗುತ್ತವೆ. ಕೌಶಲ್ಯ ಕೇಂದ್ರಗಳಲ್ಲಿ ಅವರಿಗೆ ಸೂಕ್ತ ತರಬೇತಿ ನಂತರ ಉದ್ಯೋಗಗಳನ್ನು ಪಡೆಯಲು ಅವಕಾಶಗಳನ್ನು ಒದಗಿಸುವುದು ಅತ್ಯಾವಶ್ಯಕ, ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಅವರಿಗೆ ಅನುಕೂಲಕರ ವಾತಾವರಣವನ್ನು ಒದಗಿಸುವುದು ಅವಶ್ಯಕ.


ಸರ್ಕಾರದ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರದ ಅಂಗಸಂಸ್ಥೆಗಳಿoದ ಮಾತ್ರ ಸಾಧ್ಯವಿಲ್ಲ. ಕೆಲವು ಸರ್ಕಾರೇತರ ಸಂಸ್ಥೆಗಳು, ಶಿಕ್ಷಣ ಮತ್ತು ಪುನರ್ವಸತಿ ಕ್ಷೇತ್ರಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಒದಗಿಸಲು ಮತ್ತು ಪ್ರಸಾರ ಮಾಡಲು ಯಾವುದೇ ತಳಮಟ್ಟದ ಏಜೆನ್ಸಿ ಅಥವಾ ವ್ಯವಸ್ಥೆ ಇಲ್ಲ. ಈ ಕೊರತೆಯನ್ನು ತುಂಬಬೇಕಾಗಿದೆ. ವಿಲಕಚೇತನರಿಗೆ ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆಯ ಅಗತ್ಯವೂ ಇರುವುದರ ಬಗ್ಗೆಯೂ ವಿಕಲಚೇತನರ ಮತ್ತು ಹಿರಿಯ ಸಬಲೀಕರಣ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ತಿಳಿಸಲಾಗಿದೆ.


ಅಂಧ ಮಕ್ಕಳಿಗಾಗಿ ಮೈಸೂರು, ಗುಲ್ಬರ್ಗ, ಹುಬ್ಬಳ್ಳಿ, ದಾವಣಗೆರೆಗಳಲ್ಲಿ ಶಾಲೆಗಳಿವೆ. ಕಿವುಡ ಮಕ್ಕಳಿಗಾಗಿ ಮೈಸೂರು, ಗುಲ್ಬರ್ಗ, ಬೆಳಗಾವಿ, ಬಳ್ಳಾರಿಗಳಲ್ಲಿ ಶಾಲೆಗಳಿವೆ. ಅಂಗವಿಕಲರಿಗಾಗಿ ತರಬೇತಿ ಕೇಂದ್ರಗಳು, ಮತ್ತು ಉದ್ಯೋಗಿಗಳಿಗೆ ವಸತಿನಿಲಯಗಳಿವೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿನಿಲಯಗಳಿವೆ. ಮೈಸೂರಿನಲ್ಲಿ ಶಿಕ್ಷಣ ತರಬೇತಿ ಕೇಂದ್ರಗಳಿವೆ.


2016ರ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಪ್ರಕಾರ ಒಟ್ಟು 21 ಬಗೆಯ ಅಂಗವಿಕಲತೆಯನ್ನು ಗುರುತಿಸಲಾಗಿದೆ.ಮತ್ತು ಈ ಅಧಿನಿಯಮದ ಉದ್ದೇಶ ವಿಕಲಚೇತನರ ಸರ್ವತೋಮುಖ ಅಭಿವೃದ್ಧಿ ಅಂದರೆ ಶಿಕ್ಷಣ, ಪುನರ್ವಸತಿ, ಸಾಮಾಜಿಕ ಭದ್ರತೆ, ಉದ್ಯೋಗಗಳಲ್ಲಿ ಅವಕಾಶಗಳನ್ನು ಕಲ್ಪಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ.


ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ಪ್ರಕಾರ ಶ್ರವಣ ದೋಷ ಅಂದರೆ ಕಿವುಡುತನ ಮತ್ತು ಹೆಚ್ಚಿನ ಶ್ರವಣ ದೋಷ. ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು 1988ರಿಂದ ಪ್ರತ್ಯೇಕ ಇಲಾಖೆಯಾಗಿ ವಿವಿಧ ಅಧಿನಿಯಮ/ ನಿಯಮಾವಳಿ/ ಆದೇಶ/ ಸುತ್ತೋಲೆಗಳನ್ವಯ ಕಾರ್ಯ ನಿರ್ವಹಿಸುತ್ತಿವೆ. ಇಲಾಖೆಯ ಮುಖ್ಯಸ್ಥರಾಗಿ ನಿರ್ದೇಶಕರಿದ್ದು, ಅವರಿಗೆ ಸಹಾಯಕವಾಗಿ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಮತ್ತು ಪತ್ರಾಂಕಿತ ಕಛೇರಿ ವ್ಯವಸ್ಥಾಪಕರು ಹಾಗೂ ಇತರೆ ಸಹಾಯಕ ಸಿಬ್ಬಂದಿಗಳು ಇರುತ್ತಾರೆ.


ಜಿಲ್ಲಾ ಮಟ್ಟದಲ್ಲಿ 30 ಜಿಲ್ಲೆಗಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಅಂಧ ಮಕ್ಕಳಿಗಾಗಿ ೪ ವಿಶೇಷ ವಸತಿಯುತ ಶಾಲೆಗಳು, ಶ್ರವಣದೋಷವುಳ್ಳ ಮಕ್ಕಳಿಗಾಗಿ ೫ ವಿಶೇಷ ಶಾಲೆಗಳು, 2 ಉದ್ಯೋಗಸ್ಥ ವಿಕಲಚೇತನ ಮಹಿಳೆಯರ/ ಪುರುಷರ ವಸತಿ ನಿಲಯಗಳು, ನಿರ್ಗತಿಕ ಮಂದಮತಿ ಮಹಿಳೆಯರಿಗಾಗಿ ಹುಬ್ಬಳ್ಳಿ ಮತ್ತು ಬೇಂಗಳೂರಿನಲ್ಲಿ ಅನುಪಾಲನಾ ಗೃಹಗಳು ಮತ್ತು ನಿರ್ಗತಿಕ ಬುದ್ಧಿಮಾಂದ್ಯ ಪುರುಷರಿಗಾಗಿ ಸಮಾಜ ಸೇವಾ ಸಂಕೀರ್ಣ ಸಂಸ್ಥೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಮಾನಸಿಕ ಅಸ್ವಸ್ಥರಿಗಾಗಿ ಬೆಳಗಾವಿ ಜಿಲ್ಲೆಯ ಕಣಗಾವಿಯಲ್ಲಿ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾನಸ ಕೇಂದ್ರಗಳನ್ನು ನಡೆಸಲಾಗುತ್ತಿದೆ.


ವಿವಿಧ ರೀತಿಯ ಅಂಗವಿಕಲತೆಯನ್ನು ಹೊಂದಿರುವ ವ್ಯಕ್ತಿಗಳು ಮತ್ತು ಹಿರಿಯ ನಾಗರೀಕರು ಸರ್ಕಾರದಿಂದ ಅನುಷ್ಠಾನವಾಗುವ ಯೋಜನೆಗಳ ಲಾಭ ಪಡೆದು ಸಾಮಾನ್ಯರಂತೆ ಜೀವನ ನಡೆಸಲು ಅನುಕೂಲವಾಗುವಂತೆ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು, ಸ್ವಯಂ ಸೇವಾ ಸಂಸ್ಥೆಗಳು, ಹಾಗೂ ಇತರೆ ಇಲಾಖೆಗಳ ಸಹಕಾರದೊಂದಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಿದೆ.


ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ ಮತ್ತು ಪ್ರಚಾರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ವಿಕಲಚೇತನರ ಇಲಾಖೆಯಿಂದ ದೊರೆಯುವ ಯೋಜನೆಗಳ ವಿವರ ವಿಕಲಚೇತನರಿಗೆ ಮತ್ತು ಅವರ ಪೋಷಕರಿಗೆ ದೊರೆಯದಿದ್ದಲ್ಲಿ ಯೋಜನೆಗಳ ಉದ್ದೇಶ ಸಫಲವಾಗದು.ಈ ನಿಟ್ಟಿನಲ್ಲಿ ಯೋಜನೆಗಳ ಮಾಹಿತಿ ವಿಕಲಚೇತನರಿಗೆ ಯಾವ ಮಾಧ್ಯಮದ ಮೂಲಕ ದೊರೆತರೆ ಅನುಕೂಲ ಎನ್ನುವುದು ತಿಳಿದರೆ ಮುಂದಿನ ಯೋಜನೆಗಳ ಅನುಷ್ಠಾನ ಸುಲಭ ಮತ್ತು ಫಲಪ್ರದ.ಅಧ್ಯಯನದಲ್ಲಿ ಇದನ್ನು ತಿಳಿಯಲು ಯತ್ನಿಸಲಾಗುವುದು.


ಸಾಹಿತ್ಯ ವಿಮರ್ಶೆ

ದೀಪಿಕಾ ಅರೋರಾ, “ರೋಲ್ ಆಫ್ ಸ್ಕೂಲ್ಸ್ ಅಂಡ್ ಪೇರೆಂಟ್ಸ್ ಇನ್ ಕಮ್ಯುನಿಕೇಷನ್ ಡೆವೆಲಪ್ಮೆಂಟ್-ಎ ಸ್ಟಡಿ ಆಫ್ ಹಿಯರಿಂಗ್ ಇಂಪೈರಡ್ ಚಿಲ್ಡ್ರನ್” ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ, ಪಂಜಾಬ್, (2020), ವಾಕ್_ಶ್ರವಣ ದೋಷವುಳ್ಳ ಮಕ್ಕಳ ಸಂವಹನ ವೃದ್ಧಿಸಲು ಪೋಷಕರು ಮತ್ತು ಶಿಕ್ಷಕರು ಸನ್ನೆ ಭಾಷೆಯನ್ನು ಸರಿಯಾದ ಕ್ರಮದಲ್ಲಿ ಹೇಳಿಕೊಡಬೇಕಾಗುತ್ತದೆ. ಪಾಠದಲ್ಲಿ ಇರುವ ಪ್ರತಿಯೊಂದು ಅಂಶವನ್ನು ಸನ್ನೆಯ ಮುಖಾಂತರ ಹೇಳಿಕೊಡಲು ಆಗುವುದಿಲ್ಲ, ಹಾಗಾಗಿ ಶಿಕ್ಷಕರಿಗೂ ಇದೊಂದು ಸವಾಲು ಎನ್ನುವುದು ಸಂಶೋಧಕರ ಅಭಿಪ್ರಾಯ.


ದೀಪ್‌ಶಿಖಾ ಸಿಂಗ್, “ರ‍್ಲಿ ಇಂಟರ್ ವೇಷನ್ ಫಾರ್ ಚಿಲ್ಡ್ರನ್” ವಿತ್ ಸ್ಪೆಷಲ್ ನೀಡ್ಸ್: ರೋಲ್ ಆಫ್ ಗರ‍್ನಮೆಂಟ್ ಅಂಡ್ ನಾನ್-ಗರ‍್ನಮೆಂಟ್ ಸರ್ವೀಸ್ ಪ್ರೊವೈರ‍್ಸ್”, ನ್ಯಾಷನಲ್ ಯೂನಿವರ್ಸಿಟಿ ಆಫ್ ಎಜುಕೇಷನಲ್ ಪ್ಲಾನಿಂಗ್ ಅಂಡ್ ಅಡ್ಮಿನಿಸ್ತ್ರೇಷನ್ ನ್ಯೂ ಡೆಲ್ಲಿ, (2015), ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರ್ತಿಸಿ ಅವರ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪಾತ್ರವನ್ನು ಸಂಶೋಧಕರು ಅಧ್ಯಯನದಲ್ಲಿ ಗುರುತಿಸಿದ್ದಾರೆ.


ಪ್ರಿಯಾಂಕ ಪತಕ್, “ಡಯಾಗ್ನೋಸಿಸ್ ಅಂಡ್ ರೆಮಿಡಿಯೇಷನ್ ಆಫ್ ಸೋಷಿಯಲ್ ಸ್ಕಿಲ್ಸ್ ಡೆಫಿಸಿಟ್ಸ್ ಆಫ್ ಸ್ಟೂಡೆಂಟ್ಸ್ ವಿತ್ ಲರ್ನಿಂಗ್ ಡಿಸೆಬಿಲಿಟೀಸ್”, ಎಂ.ಜೆ.ಪಿ.ರೋಹಿಲ್ಖಂಡ್ ಯೂನಿವರ್ಸಿಟಿ, ಬರೇಲಿ,(2007), ಸಾಮಾಜಿಕ ವರ್ತನೆಯನ್ನು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕಲಿಸುವಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದ್ದು ಎಂದು ಸಂಶೋಧಕರು ತಮ್ಮ ಅಧ್ಯಯನದಲ್ಲಿ ಅಭಿಪ್ರಾಯ ಪಡುತ್ತಾರೆ.


ಸಂತೋಷ್ ಕುಮಾರ್ ಬಿಸ್ವಾಲ್, “ರೆಪ್ರೆಸೆಂಟೇಷನ್ ಆಫ್ ಡಿಸೇಬಲ್ಡ್ ಪೀಪಲ್ ಇನ್ ಪ್ರಿಂಟ್ ಮೀಡಿಯಾ”, ಉಸ್ಮಾನಿಯಾ ಯೂನಿವರ್ಸಿಟಿ, ಹೈದರಾಬಾದ್, (2015), “ಭಾರತದಲ್ಲಿ ವಿಕಲಚೇತನರು ಮತ್ತು ಅವರ ಹಕ್ಕುಗಳ ಸ್ಥಿತಿಗತಿ, ಅವರ ಹಕ್ಕುಗಳನ್ನು ರಕ್ಷಿಸುವಲ್ಲಿ ಮಾಧ್ಯಮದ ಪಾತ್ರ, ಮಾಧ್ಯಮಗಳಲ್ಲಿ ವಿಕಲಚೇತನರನ್ನು ಬಿಂಬಿಸುತ್ತಿರುವ ರೀತಿ, ಭಾರತದ ಪತ್ರಿಕೆಗಳಲ್ಲಿ ವಿಕಲಚೇತನರ ಕುರಿತಾದ ಸುದ್ದಿಗಳು, ಭಾರತದ ಮಾಧ್ಯಮಗಳಲ್ಲಿ ವಿಕಲಚೇತನರ ಸುದ್ದಿಗಳ ಬಿಂಬನೆಯಲ್ಲಿ ಪ್ರಭಾವಿಸುವ ಅಂಶಗಳು, ಮುಂತಾದ ವಿಷಯಗಳ ಬಗ್ಗೆ ಅಧ್ಯಯನದಲ್ಲಿ ಚರ್ಚಿಸಲಾಗಿದೆ. ಅಧ್ಯಯನದಲ್ಲಿ “ದ ಹಿಂದು” ಮತ್ತು “ಟೈಮ್ಸ್ ಆಫ್ ಇಂಡಿಯಾ” ಪತ್ರಿಕೆಗಳಲ್ಲಿ ವಿಕಲಚೇತನರ ಸುದ್ದಿಗಳ ಪ್ರಮಾಣ ಕಡಿಮೆ. ಮಾಧ್ಯಮ ವಿಕಲಚೇತನರ ಸುದ್ದಿಸ್ನೇಹಿಯಾಗಿಲ್ಲ. ಮಾಧ್ಯಮದ ಕಾರ್ಯಸೂಚಿ ಇಂದು ವ್ಯಾವಹಾರಿಕ ಕಾರ್ಯಸೂಚಿಯಾಗಿ ಬದಲಾಗಿದೆ. ಇಂದಿನ ಮಾಧ್ಯಮ ಕಾರ್ಯಕ್ರಮ ಕೇಂದ್ರಿತವಾಗಿದೆಯೇ ಹೊರತು ಜನ ಕೇಂದ್ರಿತವಾಗಿಲ್ಲ. ಸುದ್ದಿಗಾರರು ಕೂಡ ವಿಕಲಚೇತನರ ಸುದ್ದಿಗಳಿಗೆ ಹೆಚ್ಚಿನ ಮೌಲ್ಯ ನೀಡುವುದಿಲ್ಲ ಎನ್ನುವುದನ್ನು ಸಂಶೋಧಕರು ತಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.


ಅಧ್ಯಯನದ ಮಹತ್ವ: ವಿಕಲಚೇತನರ ಸಬಲೀಕರಣದಲ್ಲಿ ಸರ್ಕಾರಿ ಯೋಜನೆಗಳ ಪಾತ್ರ ಮುಖ್ಯವಾದುದು.ವಾಕ್-ಶ್ರವಣ ದೋಷವುಳ್ಳ ಮಕ್ಕಳ ಸಬಲೀಕರಣ ಎಷ್ಟು ಮುಖ್ಯವೋ ಅದಕ್ಕೆ ಸರ್ಕಾರಿ ಯೋಜನೆಗಳ ಅನುಷ್ಠಾನವೂ ಅಷ್ಟೇ ಮುಖ್ಯ.ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ತಿಳಿಸಿದಂತೆ ತಳಮಟ್ಟದಲ್ಲಿ ಯೋಜನೆಯ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ.ಈ ನಿಟ್ಟಿನಲ್ಲಿ ಯೋಜನೆಯ ಪ್ರಚಾರದಲ್ಲಿ ಮಾಧ್ಯಮದ ಪಾತ್ರವನ್ನು ಅರಿತರೆ ಯೋಜನೆಯ ಅನುಷ್ಟಾನಕ್ಕೆ ಅನುಕೂಲವಾಗಬಹುದು, ಹಾಗಾಗಿ ಈ ಅಧ್ಯಯನ ಮಹತ್ವವಾದುದು.


ರಾಷ್ಟ್ರದ ಅಭಿವೃದ್ಧಿ ಎಲ್ಲಾ ವರ್ಗದ ಜನರ ಸರ್ವತೋಮುಖ ಅಭಿವೃದ್ಧಿಯಲ್ಲಿ ಅಡಗಿದೆ. ವಿಕಲಚೇತನರ ಸರ್ವತೋಮುಖ ಅಭಿವೃದ್ಧಿ ಅಂದರೆ ಶಿಕ್ಷಣ, ಪುನರ್ವಸತಿ, ಸಾಮಾಜಿಕ ಭದ್ರತೆ, ಉದ್ಯೋಗಗಳಲ್ಲಿ ಅವಕಾಶಗಳನ್ನು ಕಲ್ಪಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ.ಈ ಎಲ್ಲಾ ರಂಗಗಳಲ್ಲಿ ವಿಕಲಚೇತನರಿಗೆ ಸಹಾಯ ಮತ್ತು ಸಹಕಾರದ ಅಗತ್ಯವಿದೆ. ವಿಕಲಚೇತನರಿಗೆ ಸಹಾಯ ಮತ್ತು ಸಹಕಾರ ನೀಡಲೆಂದೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡೂ ಅನೇಕ ಯೋಜನೆಗಳನ್ನು ರೂಪಿಸಿವೆ. ಈ ಯೋಜನೆಗಳ ಲಾಭ ವಿಕಲಚೇತನರಿಗೆ ದೊರೆಯಬೇಕಾದರೆ, ಮಾಧ್ಯಮಗಳು ಸಮರ್ಥವಾಗಿ ಯೋಜನೆಗಳ ವಿವರಗಳನ್ನು ವಿಕಲಚೇನತನರು ಮತ್ತು ಅವರ ಕುಟುಂಬದವರಿಗೆ ತಲುಪಿಸಬೇಕಾಗುತ್ತದೆ.


ಪ್ರಾಕಲ್ಪನೆ

  • ವಾಕ್-ಶ್ರವಣ ದೋಷವುಳ್ಳ ಮಕ್ಕಳಿಗೆ ಮಾಧ್ಯಮಗಳ ಮೂಲಕ ಯೋಜನೆಗಳ ವಿವರ ದೊರೆಯುತ್ತಿದೆ.

  • ವಾಕ್-ಶ್ರವಣ ದೋಷವುಳ್ಳ ಮಕ್ಕಳು ಮಾದ್ಯಮಗಳನ್ನು ಸಮರ್ಥವಾಗಿ ಬಳಸಬಲ್ಲರು ಮತ್ತು ಯೋಜನೆಯ ಲಾಭ ಪಡೆಯಬಲ್ಲರು.


ಅಧ್ಯಯನದ ವಿಧಾನ

ಪ್ರಸ್ತುತ ಅಧ್ಯಯನಕ್ಕೆ ಬೇಕಾಗಿರುವ ದತ್ತಾಂಶವನ್ನು ಗುಣಾತ್ಮಕ ಮತ್ತು ಪರಿಮಾಣಾತ್ಮಕ ವಿಧಾನದಲ್ಲಿ ಕಲೆ ಹಾಕಲಾಗಿದೆ.


ಗುಣಾತ್ಮಕ ವಿಧಾನದಲ್ಲಿ ತುಮಕೂರು ಜಿಲ್ಲೆಯ ಬೆಳಗುಂಬ ಹೋಬಳಿ, ಚಿಕ್ಕನಾಯಕನ ಹಳ್ಳಿ, ಮಧುಗಿರಿ ತಾಲ್ಲೂಕಿನಲ್ಲಿರುವ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಶಾಲಾ ಮುಖ್ಯಶಿಕ್ಷಕರನ್ನು, ಶಿಕ್ಷಕರನ್ನು, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿ ಮತ್ತು ಇತರೆ ಸಿಬ್ಬಂದಿಯವರನ್ನು ಗುಣಾತ್ಮಕ ವಿಧಾನದಲ್ಲಿ ಆಳ ಸಂದರ್ಶನಗಳ ಮೂಲಕ ಸಂದರ್ಶಿಸಿ, ಮಾಹಿತಿಯನ್ನು ಕಲೆ ಹಾಕಲಾಗಿದೆ.


ಪರಿಮಾಣಾತ್ಮಕ ವಿಧಾನದಲ್ಲಿ ತುಮಕೂರು ಜಿಲ್ಲೆಯ ಬೆಳಗುಂಬ ಹೋಬಳಿ, ಚಿಕ್ಕನಾಯಕನ ಹಳ್ಳಿ, ಮಧುಗಿರಿ ತಾಲ್ಲೂಕಿನಲ್ಲಿರುವ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಪೋಷಕರನ್ನು ಮತ್ತು ಮಕ್ಕಳನ್ನು ಪರಿಮಾಣಾತ್ಮಕ ವಿಧಾನದಲ್ಲಿ ಪ್ರಶ್ನಾವಳಿಗಳ ಮೂಲಕ ಸಮೀಕ್ಷೆ ಮಾಡಿ ದತ್ತಾಂಶಗಳನ್ನು ಕಲೆ ಹಾಕಲಾಗಿದೆ.


ಅಧ್ಯಯನದ ವ್ಯಾಪ್ತಿ

  • ತುಮಕೂರು ಜಿಲ್ಲೆಯ ವಾಕ್-ಶ್ರವಣ ದೋಷವುಳ್ಳ 1ರಿಂದ 10ನೇ ತರಗತಿ ಮಕ್ಕಳನ್ನು ಅಧ್ಯಯನದ ವ್ಯಾಪ್ತಿಗೆ ಒಳಪಡಿಸಲಾಗಿದೆ.

  • ವಿಕಲಚೇತನರಲ್ಲಿ ಸಾಮಾನ್ಯರಂತೆ ಕಾಣುವ ವಾಕ್-ಶ್ರವಣ ದೋಷವುಳ್ಳ ಮಕ್ಕಳು ಅದರಲ್ಲೂ 1ರಿಂದ 10ನೇ ತರಗತಿ ಮಕ್ಕಳನ್ನು (ಇತರೆ ವಿಕಲಚೇತನರನ್ನು ಹೊರತುಪಡಿಸಿ) ಅಧ್ಯಯನದ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದೆ.


ಅಧ್ಯಯನದ ಇತಿ ಮಿತಿ

  • ವಾಕ್-ಶ್ರವಣ ದೋಷವುಳ್ಳ ಮಕ್ಕಳ ಸಂಖ್ಯೆ

  • ಅಧ್ಯಯನದ ಕಾಲ ಮಿತಿ

  • ತುಮಕೂರು ಜಿಲ್ಲೆ ಮಾತ್ರ ಸಂಶೋಧಕರ ಕಾರ್ಯಕ್ಷೇತ್ರವಾಗಿರುವುದರಿಂದ ಇತರೆ ಜಿಲ್ಲೆಗಳ ಮಾಹಿತಿ ಅಧ್ಯಯನದ ವ್ಯಾಪ್ತಿಗೆ ಒಳಪಡುವುದಿಲ್ಲ.

  • ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಕುರಿತು, ಶಿಕ್ಷಣ ರಂಗದಲ್ಲಿ ಅಂಗವಿಕಲ ಮಕ್ಕಳ ಕುರಿತು, ಮನಶಾಸ್ತ್ರ ಶಿಕ್ಷಣ ವಿಷಯದಲ್ಲಿ ಹೆಚ್ಚಿನ ಅಧ್ಯಯನಗಳು ನಡೆದಿವೆ. ಮಾಧ್ಯಮ ರಂಗದಲ್ಲಿ ವಿಕಲಚೇತನ ಮಕ್ಕಳ ಕುರಿತು ನಡೆದಿರುವ ಅಧ್ಯಯನಗಳು ಕಡಿಮೆ. ಇದೂ ಒಂದು ಅಧ್ಯಯನದ ಇತಿ ಮಿತಿ.

  • ವಾಕ್-ಶ್ರವಣ ದೋಷವುಳ್ಳ ಮಕ್ಕಳ ಕುರಿತು ನಡೆದಿರುವ ಅಧ್ಯಯನಗಳು ಕಡಿಮೆ. ಈ ನಿಟ್ಟಿನಲ್ಲಿ ಅಧ್ಯಯನಕ್ಕೆ ಅವಶ್ಯಕವಿರುವ ಪೂರಕ ಮಾಹಿತಿಯ ಕೊರತೆಯೂ ಒಂದು ಇತಿ ಮಿತಿ.


ಮಾಹಿತಿ ಸಂಗ್ರಹಣೆ: ತುಮಕೂರು ಜಿಲ್ಲೆಯ ವಾಕ್-ಶ್ರವಣ ದೋಷವುಳ್ಳ ಮಕ್ಕಳ ಶಾಲೆಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.


  • ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ನಡೆಸುತ್ತಿರುವ ಬೆಳಗುಂಬದಲ್ಲಿರುವ ವಸತಿಯುತ ಪಾಠಶಾಲೆ.

  • ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರ, ಶಿಕ್ಷಕರ ಆಳ ಸಂದರ್ಶನಗಳನ್ನು ಮಾಡಲಾಗಿದೆ.

  • ತುಮಕೂರಿನ ಜಯನಗರದಲ್ಲಿರುವ ಹೆಲೆನ್ ಕೆಲ್ಲರ್ ಖಾಸಗಿ ಶಾಲೆ.

  • ಶಾಲೆಯ ಸ್ಥಾಪಕರು ಮತ್ತು ಮುಖ್ಯೋಪಾಧ್ಯಾಯಿನಿಯವರನ್ನು ಸಂದರ್ಶಿಸಲಾಗಿದೆ.

  • ಮಧುಗಿರಿಯ ವಾಕ್-ಶ್ರವಣ ದೋಷವುಳ್ಳ ಮಕ್ಕಳ ಶಾಲೆ.

  • ಶಾಲೆಯ ಶಿಕ್ಷಕರನ್ನು ಮತ್ತು ಪೋಷಕರನ್ನು ದೂರವಾಣಿ ಮೂಲಕ ಕರೆ ಮಾಡಿ ಸಂದರ್ಶಿಸಲಾಗಿದೆ.

  • ಚಿಕ್ಕನಾಯಕನಹಳ್ಳಿಯ ವಾಕ್-ಶ್ರವಣ ದೋಷವುಳ್ಳ ಮಕ್ಕಳ ಶಾಲೆ.

  • ಶಾಲೆಯ ಶಿಕ್ಷಕರನ್ನು ಮತ್ತು ಪೋಷಕರನ್ನು ದೂರವಾಣಿ ಮೂಲಕ ಕರೆ ಮಾಡಿ ಸಂದರ್ಶಿಸಲಾಗಿದೆ.

  • ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಿಬ್ಬಂದಿಯವರ ಸಂದರ್ಶನ ಮಾಡಲಾಗಿದೆ.

ಫಲಿತಾಂಶಗಳು ಮತ್ತು ಮಾಹಿತಿ ವಿಶ್ಲೇಷಣೆ

ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕೃತ ಜಾಲತಾಣದಲ್ಲಿರುವಂತೆ ಸರ್ಕಾರದ ಯೋಜನೆಗಳನ್ನು ವಿಕಲಚೇತನರಿಗೆ ತಿಳಿಸಲು ಯಾವುದೇ ತಳಮಟ್ಟದ ವ್ಯವಸ್ಥೆ ಇರಲಿಲ್ಲ. ಆದರೆ ಇಲಾಖೆಯ ಸಿಬ್ಬಂದಿಯವರ ಪ್ರಕಾರ ಗ್ರಾಮೀಣ ಮತ್ತು ಪಂಚಾಯಿತಿ ಮಟ್ಟದಲ್ಲಿ ಇರುವ ಪ್ರತಿಯೊಬ್ಬ ವಿಕಲಚೇತನರಿಗೂ ಸರ್ಕಾರದ ಯೋಜನೆಯ ಬಗ್ಗೆ ತಿಳಿಸಲಾಗುತ್ತದೆ ಮತ್ತು ಅರ್ಹರಿಗೆ ಆ ಯೋಜನೆ ತಲುಪುವಂತೆ ಮಾಡಲಾಗುತ್ತಿದೆ.


ಶಾಲೆಯ ಬಹುತೇಕ ವಿಕಲಚೇತನ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಯೋಜನೆಯ ಮಾಹಿತಿ ಇಲಾಖೆಯ ಸಿಬ್ಬಂದಿಯವರಿಂದ, ಆಶಾ ಕಾರ್ಯಕರ್ತೆಯರಿಂದ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆಗೆ ಹೋದಾಗ ದೊರೆತಿದೆಯೇ ಹೊರತು ಮಾಧ್ಯಮದ ಪ್ರಚಾರದಿಂದ ದೊರೆತಿಲ್ಲ. ವಿಕಲಚೇತನ ಮಕ್ಕಳ ಪೋಷಕರಿಗೆ ಯೋಜನೆಗಳ ಮಾಹಿತಿ ಸಂಪೂರ್ಣವಾಗಿ ದೊರೆತಿಲ್ಲ.


ಬೆಳಗುಂಬದ ವಾಕ್-ಶ್ರವಣ ದೋಷವುಳ್ಳ ಮಕ್ಕಳ ವಸತಿಯುತ ಶಾಲೆಯಲ್ಲಿರುವ 100 ಮಂದಿ ಮಕ್ಕಳು ಬಹುತೇಕ ಸರ್ಕಾರದ ಎಲ್ಲಾ ಯೋಜನೆಗಳನ್ನು ಪಡೆದುಕೊಂಡಿದ್ದಾರೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿನ ವಾಕ್-ಶ್ರವಣ ದೋಷವುಳ್ಳ ಶಾಲೆಯಲ್ಲಿ 25 ಮಂದಿ ವಿಕಲಚೇತನ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ಮಾತ್ರ ಸರ್ಕಾರಿ ಯೋಜನೆಗಳ ಲಾಭ ಪಡೆದುಕೊಂಡಿದ್ದಾರೆ.


ಚಿಕ್ಕನಾಯಕನಹಳ್ಳಿಯ ವಾಕ್-ಶ್ರವಣ ದೋಷವುಳ್ಳ ಮಕ್ಕಳ ಶಾಲೆಯಲ್ಲಿ ೪೬ ವಿಕಲಚೇತನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ಶೇ. 40ರಷ್ಟು ಮಂದಿ ವಿದ್ಯಾರ್ಥಿಗಳು ಮಾತ್ರ ಸರ್ಕಾರಿ ಯೋಜನೆಗಳ ಲಾಭ ಪಡೆದುಕೊಂಡಿದ್ದಾರೆ.


ವಾಟ್ಸಾಪ್ ಗ್ರೂಪ್ ಮೂಲಕ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಿಬ್ಬಂದಿ ಅರ್ಹ ವಿಕಲಚೇತನರನ್ನು ಗುರುತಿಸಿ ಯೋಜನೆಗಳನ್ನು ತಲುಪಿಸಿದ್ದಾರೆ. ವಿದ್ಯಾರ್ಥಿ ವೇತನಗಳನ್ನು ಆನ್ ಲೈನ್ ಮೂಲಕ ಸಲ್ಲಿಸುವಂತೆ ಅರ್ಹ ವಿಕಲಚೇತನರಿಗೆ ಸೂಚನೆಗಳನ್ನು ವಾಟ್ಸಾಪ್ ಗ್ರೂಪ್ ಮೂಲಕ ನೀಡಿದ್ದಾರೆ. 21 ತರಹದ ಅಂಗವಿಕಲರಿಗೆಇಲಾಖೆ ಸಿಬ್ಬಂದಿಯೋಜನೆಗಳನ್ನು ತಲುಪಿಸುತ್ತಾರೆಮತ್ತು ವಿಕಲತೆ ಶೇ.40ಕ್ಕಿಂತ ಹೆಚ್ಚಿರುವ ವಿಕಲಚೇತನರು ಮಾತ್ರ ಯೋಜನೆಯ ಫಲಾನುಭವಿಗಳು.


ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಿದ ವಿಕಲಚೇತನರಿಗೆ ಮಾಸಾಶನ ಮತ್ತು ಪ್ರೋತ್ಸಾಹ ಧನಗಳನ್ನು ನೀಡಲಾಗಿದೆ. ಇಲಾಖೆಯು ಪ್ರತಿವರ್ಷ ಗಣತಿಯ ಮೂಲಕ ವಿಕಲಚೇತನರನ್ನು ಗುರುತಿಸಿ ಸೌಲಭ್ಯ ನೀಡುವುದರ ಜೊತೆಗೆ ಸವಲತ್ತು ಪಡೆದವರ ಬಗ್ಗೆಯೂ ಮಾಹಿತಿಯನ್ನು ನಿರ್ವಹಿಸುತ್ತದೆ. ಪತ್ರಿಕೆಗಳಲ್ಲಿ ಬರುವ ಸುದ್ದಿಯ ಮೂಲಕವೂ ಕೆಲಮಟ್ಟಿನ ಪ್ರಚಾರ ಆಗಬಹುದು.


ಉಪಸಂಹಾರ

ಮಾಧ್ಯಮಗಳು ಅಪರಾಧ ವೈಭವೀಕರಣ, ವಿವಾದಗಳು, ರಾಜಕೀಯ ಇತ್ಯಾದಿ ವಿಷಯಗಳಿಗೆ ನೀಡಲಾದ ಪ್ರಾಮುಖ್ಯತೆಯನ್ನು ವಿಕಲಚೇತನ ಮಕ್ಕಳ ಕುರಿತಾದ ಯೋಜನೆಗಳ ಮಾಹಿತಿ ನೀಡುವಲ್ಲಿ ನೀಡಿಲ್ಲ ಎನ್ನುವುದು ಈ ಅಧ್ಯಯನದಿಂದ ದೃಢಪಟ್ಟಿದೆ. ಪತ್ರಿಕೆ, ರೇಡಿಯೊ, ಟಿ.ವಿ. ಹಾಗೂ ನವ ಮಾಧ್ಯಮಗಳಲ್ಲಿ ವಿಕಲಚೇತನರ ಜನಸಂಖ್ಯೆಯ ಪ್ರಮಾಣವಾರು ಆದ್ಯತೆಯನ್ನು ಅವರಿಗೆ ಸಂಬಂಧಿಸಿದ ಸುದ್ದಿಗೆ ನೀಡಿದಲ್ಲಿ ಅವರನ್ನು ಪೂರ್ಣ ಸಬಲರನ್ನಾಗಿಸಲು ಸಹಾಯಕವಾಗುತ್ತದೆ. ಇದನ್ನು ನಿರ್ಲಕ್ಷಿಸದೇ ಮಾಧ್ಯಮಗಳು ವಿಕಲಚೇತನರ ಕುರಿತಾದ ವಿಶೇಷ ಮಾಹಿತಿಯನ್ನು ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ, ಸಮಯದಲ್ಲಿ ನೀಡುವುದು ಅತ್ಯಗತ್ಯ ಎನ್ನುವುದು ಈ ಅಧ್ಯಯನದಿಂದ ತಿಳಿಯುತ್ತದೆ. ಯೋಜನೆಗಳು ಸರಿಯಾಗಿ ಸಂಬಂಧಿಸಿದವರನ್ನು ತಲುಪದೇ ಇರುವುದಕ್ಕೆ ಮುಖ್ಯ ಕಾರಣಗಳಲ್ಲಿ ಮಾಧ್ಯಮ ನೀಡಬಲ್ಲ ಮಾಹಿತಿಯ ಕೊರತೆಯೂ ಒಂದು ಎನ್ನಬಹುದು. ಹೀಗಾಗಿ ಮಾಧ್ಯಮವು ಈ ನಿಟ್ಟಿನಲ್ಲಿ ಸಕ್ರಿಯವಾಗುವ ಅಗತ್ಯವಿದೆ.




bottom of page