‘ಕಾಂತಾರ’ ಸಿನಿಮಾದಲ್ಲಿ ತುಳು ಸಂಸ್ಕೃತಿಯ ಅಭಿವ್ಯಕ್ತಿ- ಒಂದು ಅಧ್ಯಯನ
- The Social Science Dialogue TSSD

- Nov 25
- 15 min read
*ಹರ್ಷವರ್ಧನ ಪಿ.ಆರ್., **ಪ್ರೊ.ಸತೀಶ್ ಕುಮಾರ್ ಅಂಡಿಂಜೆ
Abstract
ಸಂಸ್ಕೃತಿ ಎಂದರೆ ಒಂದು ಸಂಕೀರ್ಣ ವ್ಯವಸ್ಥೆ. ಜೀವನ ವಿಧಾನದ ಪ್ರತಿಬಿಂಬ. ಮನುಷ್ಯನ ನಡತೆ. ಸಿದ್ಧಾಂತ, ನೀತಿ- ನಿಯಮ, ಕಲೆ, ಸಂಪ್ರದಾಯ, ಆಚರಣೆ, ಮೌಲ್ಯ, ಆದರ್ಶ, ರಾಜಕೀಯ, ವ್ಯವಹಾರ ಎಲ್ಲವೂ ಸೇರಿ ಸಂಸ್ಕೃತಿಯಾಗುತ್ತದೆ. ಅದು ಜೀವನ ಶೈಲಿ. ಭಾರತೀಯ ಸಂಸ್ಕೃತಿಯ ಭಾಗವಾಗಿರುವ ತುಳು ಸಂಸ್ಕೃತಿಯೂ ಒಂದು ಸಂಕೀರ್ಣ ಸಂಸ್ಕೃತಿಯಾಗಿದೆ. ಒಂದು ನೆಲದ ಸಂಸ್ಕೃತಿಯು ಅಲ್ಲಿನ ವಾಯುಗುಣ, ಭೌಗೋಳಿಕ ಲಕ್ಷಣ ಮತ್ತಿತರ ಪದ್ಧತಿಗೆ ಪೂರಕವಾಗಿ ಬೆಳೆದಿರುತ್ತದೆ. ಭಾಷಿಕ ತುಳುನಾಡಿನ ಮೇರೆಗಳನ್ನು ಪಶ್ಚಿಮದಲ್ಲಿ ಅರಬೀ ಸಮುದ್ರ, ಪೂರ್ವದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿ, ದಕ್ಷಿಣದಲ್ಲಿ ಚಂದ್ರಗಿರಿ ಹೊಳೆ ಹಾಗೂ ಉತ್ತರದಲ್ಲಿ ಸೀತಾನದಿ ಎಂಬುದಾಗಿ ಗುರುತಿಸಲಾಗಿದೆ.
ಉತ್ತರ ರೇಖಾಂಶ ೧೨ ರಿಂದ ೧೩.೫ ಡಿಗ್ರಿ ಹಾಗೂ ಪೂರ್ವಅಕ್ಷಾಂಶ ೭೪ ರಿಂದ ೭೫ರ ನಡುವಿನ ಭೌಗೋಳಿಕ ವ್ಯಾಪ್ತಿ ಹೊಂದಿದೆ. ದಕ್ಷಿಣಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಇಲ್ಲಿನ ನೆಲದ ಸಂಸ್ಕೃತಿಯನ್ನು ತುಳು ಸಂಸ್ಕೃತಿ ಎಂದೇ ಕರೆಯಲಾಗುತ್ತದೆ. ತುಳುನಾಡಿನಲ್ಲಿ ತುಳು ಪ್ರಮುಖ ಸಂವಹನ ಭಾಷೆಯಾಗಿದ್ದು, ಇಲ್ಲಿನ ೪೫.೭೪ ಲಕ್ಷ ಜನಸಂಖ್ಯೆಯಲ್ಲಿ ಬ್ಯಾರಿ, ಕೊಂಕಣಿ, ಕನ್ನಡ ಮತ್ತಿತರ ಮಾತೃ ಭಾಷಿಗರೂ ತುಳು ಬಲ್ಲವರಾಗಿದ್ದಾರೆ. ಇತರೆ ರಾಜ್ಯಗಳು ಹಾಗೂ ವಿದೇಶದಲ್ಲಿ ನೆಲೆಗೊಂಡವರನ್ನು ಸೇರಿಸಿದರೆ ಸುಮಾರು ೧ ಕೋಟಿಗೂ ಹೆಚ್ಚು ತುಳುವರು ಇದ್ದಾರೆ ಎನ್ನುವುದು ತುಳು ಅಧ್ಯಯನಕಾರರ ವಾದವಾಗಿದೆ. ಬಹುಭಾಷೆಗಳ ಆಡಂಬೋಲವಾದ ಈ ಪ್ರದೇಶದಲ್ಲಿ ಜಾತಿ, ಧರ್ಮ, ವರ್ಗಗಳಿಗೆ ಅತೀತವಾಗಿ ಬಹುತೇಕರು ಮಾತನಾಡುವ, ವ್ಯವಹರಿಸುವ ಭಾಷೆ ತುಳು. ಜನಪದ ಕಲೆ, ಸಂವಹನ ಮಾಧ್ಯಮಗಳ ಜೊತೆಗೆ ಭೂತಾರಾಧನೆ, ಪಾಡ್ದನ, ಯಕ್ಷಗಾನ, ಕೃಷಿ, ಕಂಬಳ, ಕೋಳಿ ಅಂಕ ಮತ್ತಿತರ ಗುಣಲಕ್ಷಣಗಳಿಂದ ತುಳುನಾಡು ಗುರುತಿಸಿಕೊಂಡಿದೆ.
ಈ ತುಳು ಸಂಸ್ಕೃತಿಯನ್ನು ತಜ್ಞರು ‘ಬೆನ್ನಿ ಸಂಸ್ಕೃತಿ (ಕೃಷಿ ಸಂಸ್ಕೃತಿ)’, ‘ಜಲ ಸಂಸ್ಕೃತಿ’ ಹಾಗೂ ‘ಮಾತೃಮೂಲೀಯ ಸಂಸ್ಕೃತಿ’ ಎಂದು ಗುರುತಿಸಿದ್ದಾರೆ.
ಭಾರತವು ವೈವಿಧ್ಯಮಯ ಸಂಸ್ಕೃತಿಯ ನೆಲವಾಗಿದ್ದು, ಇಲ್ಲಿನ ಚಿತ್ರೋದ್ಯಮಗಳೂ ಭಾಷಾ ಆಧಾರದಲ್ಲಿ ಗುರುತಿಸಲಾಗಿದೆ. ‘ಪ್ರಾದೇಶಿಕ ಸಿನಿಮಾ’ ಆಯಾ ಪ್ರದೇಶದ ಭಾಷೆಗಳ ಮೇಲೆ ಗುರುತಿಸಲಾಗುತ್ತಿದೆ. ಈ ಪ್ರಾದೇಶಿಕ ಸಿನಿಮಾಗಳು ಅಲ್ಲಿನ ಸ್ಥಳೀಯ ಸಂಸ್ಕೃತಿ, ಸಂಗೀತ, ನಾಟಕ, ಪ್ರಭಾವಿ ಮಾಧ್ಯಮ ಹಾಗೂ ಸ್ಥಳೀಯ ಗುಣಲಕ್ಷಣಗಳನ್ನು ಹೊಂದಿರುತ್ತವೆ. ನ್ಯೂಯಾರ್ಕ್ನ ಸಿನಿಮಾ ಮತ್ತು ಸಾಂಸ್ಕೃತಿಕ ಪ್ರಾಧ್ಯಾಪಕಿ ಸುಮಿತಾಎಸ್. ಚಕ್ರವರ್ತಿ ಹೇಳುವಂತೆ, ‘ಹಿಂದಿ ಸಿನಿಮಾವು ದೇಶಾದ್ಯಂತ ಒಪ್ಪಿತಾದ ತನ್ನದೇ ಸಿನಿಮಾ ಸಂಸ್ಕೃತಿಯನ್ನು ನಿರ್ಮಿಸಿಕೊಂಡಿದೆ. ಆದರೆ, ಪ್ರಾದೇಶಿಕ ಸಿನಿಮಾವು ಸ್ಥಳೀಯ ಸಂಸ್ಕೃತಿ, ಭಾಷೆಯ ಆಧಾರದಲ್ಲಿ ಬೇರೂರಿದ್ದು, ಇದನ್ನುಆಯಾ ಭಾಷಿಕರು ಹಾಗೂ ಅಲ್ಲಿನ ಪ್ರದೇಶದಜನರು ವೀಕ್ಷಿಸುತ್ತಿದ್ದಾರೆ’.
ಭಾರತೀಯ ಸಿನಿಮಾ ಎಂದರೆ ಕೇವಲ ಬಾಲಿವುಡ್ ಎಂಬ ದಶಕಗಳ ಹಿಂದಿನ ಪರಿಕಲ್ಪನೆಯನ್ನು ದಕ್ಷಿಣ ಭಾರತದ ಇಂದಿನ ಸಿನಿಮಾಗಳು ಬದಲಾಯಿಸುತ್ತಿವೆ. ಈ ಪೈಕಿ ‘ಕಾಂತಾರ’ ಸಿನಿಮಾ ಅನನ್ಯವಾಗಿದೆ. ದಕ್ಷಿಣ ಭಾರತದ ಸ್ಯಾಂಡಲ್‌ವುಡ್ (ಕನ್ನಡ), ಟಾಲಿವುಡ್ (ತೆಲುಗು) ಹಾಗೂ ತಮಿಳು (ಕಾಲಿವುಡ್) ಸಿನಿಮೋದ್ಯಮಗಳು ಈಚಿನ ವರ್ಷಗಳಲ್ಲಿ ಕೇವಲ ದೇಶ (ಪ್ಯಾನ್‌ಇಂಡಿಯಾ) ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಭಾರಿ ಬಂಡವಾಳದ ಬಾಹುಬಲಿ, ಆರ್‌ಆರ್‌ಆರ್, ಪುಷ್ಪ, ಕೆಜಿಎಫ್-೧ ಮತ್ತು ೨, ಚಾರ್ಲಿ ೭೭೭ ಇತ್ಯಾದಿ ಸಿನಿಮಾಗಳು ಪ್ಯಾನ್ ಇಂಡಿಯಾ ಹಾಗೂ ಜಾಗತಿಕ (ಓವರ್ ಸೀಸ್) ಮಟ್ಟದಲ್ಲಿ ತೆರೆಕಂಡು ಸಾವಿರಾರು ಕೋಟಿ ರೂಪಾಯಿ ಗಳಿಕೆ ಕಂಡಿವೆ.
ಆದರೆ, ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿ ಬಳಿಕ ತನ್ನ ಚಿತ್ರಕತೆ, ಮೇಕಿಂಗ್, ಅಂತಸತ್ವದ ಮೂಲಕ ಪ್ಯಾನ್‌ಇಂಡಿಯಾ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಸಿನಿಮಾ ಕಾಂತಾರ. ಕೇವಲ ೧೬ ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡು ೪೨೦ ಕೋಟಿ ರೂಪಾಯಿಗೂ ಅಧಿಕ ಲಾಭ ಗಳಿಸಿದ ಅನನ್ಯ ಸಿನಿಮಾ. ಸಿನಿಮಾ ಭಾಷೆ, ಕತೆ, ತಾಂತ್ರಿಕತೆ, ಸಂಗೀತ, ನಿರೂಪಣಾ ಶೈಲಿ, ಕ್ಯಾಮೆರಾ ಕೆಲಸ, ಕಲಾ ವಿನ್ಯಾಸ, ವೇಷಭೂಷಣ, ಸ್ಥಳದ ಆಯ್ಕೆ ಇತ್ಯಾದಿ ಸಿನಿಮಾ ಪರಿಭಾಷೆಯ ಆಯಾಮಗಳಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಉತ್ಕೃಷ್ಟತೆಯನ್ನೇ ಕೊಟ್ಟಿದ್ದರೂ, ಸಿನಿಮಾ ನೀಡಿದ ದೇಸೀಯತೆಯೊಳಗಿನ ಸ್ಥಳೀಯತೆ ಅಸ್ತಿತ್ವವು ಜಾಗತಿಕ ಸಿನಿಮಾಕ್ಕೆ ಹೊಸ ಭಾಷ್ಯ ಬರೆಯಲು ಹೊರಟಿದೆ.
ದೇಸಿಯ ಅಥವಾ ಸ್ಥಳೀಯ ಕತೆಯೊಂದು ಜಾಗತಿಕ ಮಟ್ಟದಲ್ಲಿ ಯಶಸ್ಸು ಗಳಿಸುವುದು ಇದೇ ಮೊದಲಲ್ಲ. ಹಾಲಿವುಡ್‌ನಿಂದ ಹಿಡಿದು ಜಪಾನ್, ಕೊರಿಯಾ, ಫ್ರೆಂಚ್, ಜರ್ಮನಿ, ಇರಾನ್ ಸಿನಿಮಾಗಳೂ ಈ ದಿಶೆಯಲ್ಲಿ ಕೊಡುಗೆ ನೀಡಿವೆ. ಆದರೆ, ‘ಕಾಂತಾರ’ ಸಿನಿಮಾವು ಕನ್ನಡ (ಮೂಲ)ದಲ್ಲಿ ಬಿಡುಗಡೆಯಾದರೂ, ಅದು ಕರಾವಳಿ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಿರುವ ಸೂಕ್ಷ್ಮದಲಿ ್ಲ ಅತಿಸೂಕ್ಷ್ಮ ಎನ್ನಬಹುದಾದ ನೆಲದ ಸಂಸ್ಕೃತಿಯನ್ನು ಬಿಂಬಿಸಿದೆ. ಪಶ್ಚಿಮ ಘಟ್ಟದ ತಪ್ಪಲಿನ ಕಾಡಂಚಿನಲ್ಲಿ ನೆಲೆಸಿರುವ ದೈವನರ್ತಕ ಸಮುದಾಯದ ಬದುಕಿನ ಸಂಘರ್ಷವನ್ನು ತೆರೆದಿಟ್ಟಿದೆ. ಇದು ತುಳು ಸಂಸ್ಕೃತಿ ಅಥವಾ ತುಳು ನಾಡಿನ ಸಂಸ್ಕೃತಿಯೂ ಹೌದು. ಕೇವಲ ಸಮುದಾಯದ ಪರಿಸ್ಥಿತಿ ಮಾತ್ರವಲ್ಲ. ಸಮುದಾಯ, ಪ್ರಕೃತಿ ಹಾಗೂ ಊಳಿಗಮಾನ್ಯ ವ್ಯವಸ್ಥೆ ನಡುವಿನ ಸಂಘರ್ಷವನ್ನು ಕಾಂತಾರ ಪ್ರತಿಬಿಂಬಿಸುತ್ತದೆ.
ಈ ಸಿನಿಮಾದಲ್ಲಿ ತೌಳವ ಬದುಕಿನ ಬಿಂಬಗಳನ್ನು ಯಥೇಚ್ಛವಾಗಿ ಬಳಕೆ ಮಾಡಿಕೊಳ್ಳಲಾಗಿದ್ದು, ಸಿನಿಮಾವು ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಯಶಸ್ವಿ ಕಥನಕದಲ್ಲಿನ ತುಳು ಸಂಸ್ಕೃತಿಯನ್ನು ಅರಿಯುವುದು ಈ ಅಧ್ಯಯನದ ಪ್ರಮುಖಉದ್ದೇಶವಾಗಿದೆ. ಕಾಂತಾರ ಸಿನಿಮಾದಲ್ಲಿನ ತುಳು ಸಂಸ್ಕೃತಿಯ ವಿಚಾರಗಳನ್ನು ಶೋಧಿಸುವುದು ಹಾಗೂ ಕನ್ನಡ ಸಿನಿಮಾವೊಂದರಲ್ಲಿ ತೌಳವ ಸಂಸ್ಕೃತಿಯ ಪ್ರತಿಬಿಂಬವನ್ನು ವಿಶ್ಲೇಷಿಸುವುದು ಈ ಅಧ್ಯಯನದ ಉದ್ದೇಶವಾಗಿದೆ.
ಇದನ್ನು ಸಿನಿಮಾವನ್ನು ವೀಕ್ಷಿಸಿ, ಗುಣಾತ್ಮಕ ವಿಷಯ ವಿಶ್ಲೇಷಣೆಯ ತತ್ವಗಳ ಮೂಲಕ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುವುದು. ಸಂಶೋಧನಾಕೃತಿ, ಲೇಖನಗಳು, ನಿಯತಕಾಲಿಕೆಗಳ ಲೇಖನಗಳು, ವರದಿಗಳು, ವೆಬ್‌ಸೈಟ್, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಕಟಿತ ವರದಿಗಳ ಮೂಲಕ ಎರಡನೇ ಹಂತದ ಮಾಹಿತಿ ಸಂಗ್ರಹಿಸುವುದು ವಿಧಾನವಾಗಿದೆ.
Key words: Kantara, Tulu, Culture, Film, Sandalwood, Rishab shetty

ಪ್ರಸ್ತಾವನೆ:
ಬಹುತ್ವ ಭಾರತದ ಅಂತಃಸತ್ವ. ಇದು ದೇಶದ ಅಸ್ಮಿತೆಯೂ ಹೌದು. ಇಲ್ಲಿ ಅನೇಕ ಭಾಷೆ, ಧರ್ಮ, ಸಂಸ್ಕೃತಿ, ಆಚರಣೆ, ಉಡುಗೆ–ತೊಡುಗೆ ಇತ್ಯಾದಿ ವೈವಿಧ್ಯತೆಗಳಿವೆ. ಇಂತಹ ವೈವಿಧ್ಯತೆಯನ್ನು ನಾವು ಅನಾದಿ ಕಾಲದ ಜನಪದ ಮಾಧ್ಯಮಗಳಿಂದ ಹಿಡಿದು ಈಗಿನ ಪತ್ರಿಕೆ, ರೇಡಿಯೊ, ದೂರದರ್ಶನ, ಡಿಜಿಟಲ್ ಮಾಧ್ಯಮ, ಸಿನಿಮಾಗಳಲ್ಲೂ ಕಾಣಬಹುದು. ಭಾರತದಲ್ಲಿ ಸುಮಾರು ೧೯,೫೬೯ ಭಾಷೆಗಳಿದ್ದು, ಈ ಪೈಕಿ ೧೨೧ ಭಾಷೆಗಳನ್ನು ೧೦ ಸಾವಿರಕ್ಕೂ ಹೆಚ್ಚು ಜನರು ಮಾತನಾಡುತ್ತಾರೆ (ಜನಗಣತಿ, ೨೦೧೧). ಇದರಲ್ಲಿ ೩೦ ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗೊಂಡಿವೆ. ಈ ಪೈಕಿ ಬಹುತೇಕ ಭಾಷೆಗಳು, ಭಾಷಾವಾರು ರಾಜ್ಯ ವಿಂಗಡಣೆ ಸಂದರ್ಭದಲ್ಲಿ ರಾಜಕೀಯ ಮತ್ತು ಭೌಗೋಳಿಕ ಅಸ್ತಿತ್ವವನ್ನು ಪಡೆದುಕೊಂಡರೆ, ಇತರ ಭಾಷೆಗಳು ವಿವಿಧ ಆರ್ಥಿಕ, ಆಡಳಿತಾತ್ಮಕ ಸ್ಥಾನಮಾನಗಳಿಗೆ ಪಾತ್ರವಾಗಿವೆ. ಇವು ಆಯಾ ಭಾಷೆಗಳ ಸಂಸ್ಕೃತಿಯ ಬೆಳವಣಿಗೆಗೂ ಪೂರಕವಾಗಿವೆ. ‘ಭಾರತದಲ್ಲಿನ ನಾಡು–ನುಡಿ, ಆಚಾರ–ವಿಚಾರ, ಉಡುಗೆ–ತೊಡುಗೆ, ಸಂಸ್ಕೃತಿಯಲ್ಲಿರುವ ವೈವಿಧ್ಯತೆಯೇ ‘ಭಾರತೀಯ ಸಂಸ್ಕೃತಿ’. ವೈವಿಧ್ಯತೆ ಇಲ್ಲಿನ ಸಂಸ್ಕೃತಿಯ ಜೀವಾಳ.’ ಎನ್ನುತ್ತಾರೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ.
ಭಾರತೀಯ ಸಿನಿಮಾ:
ಜನ ಸಾಮಾನ್ಯರ ನಡುವೆ ‘ಭಾರತೀಯ ಚಿತ್ರರಂಗ’ ಎಂದರೆ ‘ಬಾಲಿವುಡ್’ (ಹಿಂದಿ ಚಲನಚಿತ್ರರಂಗ) ಎಂಬ ಕಲ್ಪನೆ ಇದ್ದರೂ, ಭಾರತೀಯ ಚಲನಚಿತ್ರರಂಗದ ಉಗಮವು ಪ್ರಾದೇಶಿಕ ಭಾಷಾ ಸಿನಿಮಾದೊಂದಿಗೆ ಆಗಿರುವುದು ಗಮನಾರ್ಹವಾಗಿದೆ. ಭಾರತೀಯ ಚಿತ್ರರಂಗದ ಪಿತಾಮಹ ಎಂಬ ಹಿರಿಮೆಗೆ ಪಾತ್ರರಾದ ದುಂಡಿರಾಜ್ ಗೋವಿಂದ ಫಾಲ್ಕೆ (ದಾದಾ ಸಾಹೇಬ ಫಾಲ್ಕೆ) ೧೯೧೩ರಲ್ಲಿ ಮೊದಲ ಸಿನಿಮಾ ನಿರ್ಮಿಸಿದ್ದರು. ಭಾರತೀಯ ಚಿತ್ರೋದ್ಯಮವು ಹಲವಾರು ಭಾರತೀಯ ಭಾಷೆಗಳಿಗೆ ವ್ಯಾಪಿಸಿರುವುದಲ್ಲದೇ, ಬೃಹತ್ ಉದ್ಯಮವಾಗಿಯೂ ಬೆಳೆದು ನಿಂತಿದೆ.
ಕನ್ನಡ ಚಲನಚಿತ್ರರಂಗ:
ಗುಬ್ಬಿ ವೀರಣ್ಣನವರು ೧೯೨೮ರಲ್ಲಿ ಬೆಂಗಳೂರಿನಲ್ಲಿ ‘ಕರ್ನಾಟಕ ಫಿಲಂ ಸ್ಟುಡಿಯೊ’ವನ್ನು ಪ್ರಾರಂಭಿಸಿ ಕನ್ನಡದಲ್ಲಿ ಸಿನಿಮಾ ನಿರ್ಮಾಣದ ಆದ್ಯ ಪ್ರವರ್ತಕರಾದರು. ಆರಂಭದಲ್ಲಿ ವೈ.ವಿ.ರಾವ್, ಹಿಮಾಂಶು ಶಾಸ್ತ್ರಿ, ಗುಬ್ಬಿ ವೀರಣ್ಣ, ಜೆ.ಡಿ. ಪವಾರ, ಎಂ.ವಿ. ಸುಬ್ಬಯ್ಯ ನಾಯ್ಡು, ಎಚ್.ಎಲ್.ಎನ್. ಸಿಂಹ, ರಾಜಮ್ಮ, ಪಾರ್ವತಮ್ಮ, ಜಿ. ಸುಂದರಮ್ಮ, ಬಿ. ಜಯಮ್ಮ, ಲಲಿತಾ ಪವಾರ್, ಮೊದಲಾದವರು ನಿರ್ಮಾಣ, ನಟ–ನಟಿಯರಾಗಿ ಹೆಸರು ಮಾಡಿದರು. ಗುಬ್ಬಿ ವೀರಣ್ಣ, ವೈ.ವಿ. ರಾವ್, ಶಿವರಾಮ ಕಾರಂತ ಮತ್ತಿತರರು ನಿರ್ದೇಶಕರಾಗಿ ಕೊಡುಗೆ ನೀಡಿದರು. ೧೯೨೯ರಲ್ಲಿ ನಿರ್ಮಾಣಗೊಂಡ ‘ವಸಂತ ಸೇನಾ’ ಸಿನಿಮಾವು ಕನ್ನಡ ನೆಲದಲ್ಲಿ ತಯಾರಾದ ಕನ್ನಡಿಗರೂ ನಟಿಸಿದ ಪ್ರಥಮ ಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿದೆ.
೧೯೩೪ರಲ್ಲಿ ತೆರೆಕಂಡ ‘ಸತಿ ಸುಲೋಚನಾ’ ಸಿನಿಮಾವು ಕನ್ನಡದ ಮೊದಲ ವಾಕ್ಚಿತ್ರ. ೧೯೫೪ರ ವೇಳೆಗೆ ಕನ್ನಡ ಚಲನಚಿತ್ರರಂಗವು ಮಹತ್ತರ ಬೆಳವಣಿಗೆ ಕಂಡಿತು. ಆ ವರ್ಷ ತೆರೆಕಂಡÀ ‘ಬೇಡರ ಕಣ್ಣಪ್ಪ’ ಸಿನಿಮಾವು ರಾಜ್‌ಕುಮಾರ್ ಅವರ ಮೊದಲ ಚಿತ್ರ. ಇದು ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಮೊದಲ ಚಿತ್ರವೂ ಹೌದು. ಕರ್ನಾಟಕದ ಚಲನಚಿತ್ರೋದ್ಯಮಕ್ಕೆ ಹೊಸ ಭಾಷ್ಯ ಬರೆಯಿತು.
ಕರ್ನಾಟಕ ಸರ್ಕಾರವು ೧೯೬೬ರಲ್ಲಿ ರಾಜ್ಯದ ಭಾಷಾ ಚಿತ್ರಗಳಿಗೆ ಪ್ರಶಸ್ತಿ ಹಾಗೂ ೧೯೬೭ ಸಬ್ಸಿಡಿ ನೀಡಲು ಆರಂಭಿಸಿದ್ದು, ರಾಜ್ಯದಲ್ಲಿ ಚಿತ್ರರಂಗಕ್ಕೆ ಹೆಚ್ಚಿನ ಉತ್ತೇಜನ ದೊರೆಯಿತು. ಕರ್ನಾಟಕದಲ್ಲಿ ಕೇವಲ ಕನ್ನಡ ಭಾಷಾ ಸಿನಿಮಾಗಳಿಗೆ ಮಾತ್ರವಲ್ಲ, ಇಲ್ಲಿನ ತುಳು, ಕೊಂಕಣಿ, ಕೊಡವ, ಲಂಬಾಣಿ, ಬ್ಯಾರಿ ಮತ್ತಿತರ ಭಾಷೆಗಳ ಸಿನಿಮಾಗಳಿಗೂ ಪ್ರೇರಣೆ ಆಯಿತು.
ತುಳುನಾಡಿನಲ್ಲಿ ಚಿತ್ರರಂಗ:
ಭಾರತವು ವೈವಿಧ್ಯಮಯ ಸಂಸ್ಕೃತಿಯ ನೆಲವಾಗಿದ್ದು, ಇಲ್ಲಿನ ಚಿತ್ರೋದ್ಯಮಗಳನ್ನೂ ಭಾಷಾ ಆಧಾರದಲ್ಲಿ ಗುರುತಿಸಲಾಗಿದೆ. ‘ಪ್ರಾದೇಶಿಕ ಸಿನಿಮಾ’ಗಳನ್ನು ಆಯಾ ಪ್ರದೇಶದ ಭಾಷೆಗಳ ಮೇಲೆ ಗುರುತಿಸಲಾಗುತ್ತಿವೆೆ. ಈ ಪ್ರಾದೇಶಿಕ ಸಿನಿಮಾಗಳು ಅಲ್ಲಿನ ಸ್ಥಳೀಯ ಸಂಸ್ಕೃತಿ, ಸಂಗೀತ, ನಾಟಕ, ಪ್ರಭಾವಿ ಮಾಧ್ಯಮ ಹಾಗೂ ಸ್ಥಳೀಯ ಗುಣಲಕ್ಷಣಗಳನ್ನು ಹೊಂದಿರುತ್ತವೆ.
ನ್ಯೂಯಾರ್ಕ್ನ ಸಿನಿಮಾ ಮತ್ತು ಸಾಂಸ್ಕೃತಿಕ ಪ್ರಾಧ್ಯಾಪಕಿ ಸುಮಿತಾ ಎಸ್. ಚಕ್ರವರ್ತಿ ಹೇಳುವಂತೆ, ‘ಹಿಂದಿ ಸಿನಿಮಾವು ದೇಶಾದ್ಯಂತ ಒಪ್ಪಿತವಾದ ತನ್ನದೇ ಸಿನಿಮಾ ಸಂಸ್ಕೃತಿಯನ್ನು ನಿರ್ಮಿಸಿಕೊಂಡಿದೆ. ಆದರೆ, ಪ್ರಾದೇಶಿಕ ಸಿನಿಮಾವು ಸ್ಥಳೀಯ ಸಂಸ್ಕೃತಿ, ಭಾಷೆಯ ಆಧಾರದಲ್ಲಿ ಬೇರೂರಿದ್ದು, ಇದನ್ನು ಆಯಾ ಭಾಷಿಕರು ಹಾಗೂ ಅಲ್ಲಿನ ಪ್ರದೇಶದ ಜನರು ವೀಕ್ಷಿಸುತ್ತಿದ್ದಾರೆ’. ತುಳುನಾಡಿನಲ್ಲಿ ೧೯೩೦–೩೧ರಲ್ಲೇ ಸಿನಿಮಾ ನಿರ್ಮಾಣಗೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶಿವರಾಮ ಕಾರಂತರು ‘ಭೂತರಾಜ್ಯ’ ಮತ್ತು ‘ಡೊಮಿಂಗೊ’ ಎಂಬ ಎರಡು ಮೂಕಚಿತ್ರಗಳನ್ನು ತಯಾರಿಸಿದ್ದರು ಎಂದು ಲೇಖಕ ಗಂಗಾಧರ ಮೊದಲಿಯಾರ್ (೧೯೯೮) ದಾಖಲಿಸಿದ್ದಾರೆ.
‘ಪ್ರಾದೇಶಿಕ ಸಿನಿಮಾವು ಜನ ತಮ್ಮ ಜೀವನದ ಹಲವಾರು ಅಂಶಗಳನ್ನು ಗ್ರಹಿಸುವ ವಿಧಾನ, ಮೌಲ್ಯ ಹಾಗೂ ಸಂಸ್ಕೃತಿಯನ್ನು ಅರ್ಥೈಸುವ ವಿಧಾನ, ರೂಪಿಸುವ ಮತ್ತು ಅಭಿವ್ಯಕ್ತಿಸುವ ಕೆಲಸ ಮಾಡಿದೆ.’ ಎಂದು ಸಿನಿಮಾ ಅಧ್ಯಯನಕಾರರು ದಾಖಲಿಸಿದ್ದಾರೆ. ಚಲನಚಿತ್ರದಲ್ಲಿ ಅಭಿರುಚಿ ಬೆಳೆಸಿಕೊಂಡು ಅದು ಪ್ರಖರವಾಗಿ ಸಮಾಜದಲ್ಲಿ ಒಂದು ಸಾಮೂಹಿಕ ಪ್ರಜ್ಞೆಯಾಗಿ ಬೆಳೆದರೆ ಅದನ್ನು ‘ಚಲನಚಿತ್ರ ಸಂಸ್ಕೃತಿ’ ಎಂದು ಕರೆಯಬಹುದು ಎನ್ನುತ್ತಾರೆ ಸಿನಿಮಾ ಬರಹಗಾರ ಎಚ್.ಎನ್. ನರಹರಿ (೨೦೧೧).
ತುಳು ನಾಟಕಗಳ ಜನಪ್ರಿಯತೆ, ಸರ್ಕಾರ ಘೋಷಿಸಿದ ಸಬ್ಸಿಡಿ ಮತ್ತಿತರ ಅಂಶಗಳು ತುಳು ಚಿತ್ರರಂಗದ ಆರಂಭಕ್ಕೆ ಕಾರಣವಾದವು. ಕೊಡಗಿನವರಾದ ಎಸ್.ಆರ್. ರಾಜನ್ ತುಳುನಾಡಿನ ಕಲಾವಿದರನ್ನೇ ಬಳಸಿಕೊಂಡು ‘ಎನ್ನ ತಂಗಡಿ’ ಎಂಬ ತುಳು ಸಿನಿಮಾವನ್ನು ನಿರ್ಮಿಸಿದರು. ತುಳು ಭಾಷೆಯ ಮೊದಲ ಚಲನಚಿತ್ರ ‘ಎನ್ನ ತಂಗಡಿ’ ೧೯೭೧ರ ಫೆಬ್ರುವರಿ ೧೯ರಂದು ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು.
ಇದಕ್ಕೂ ಪೂರ್ವದಲ್ಲೇ ತುಳು ರಂಗಕರ್ಮಿ ಕೆ.ಎನ್.ಟೇಲರ್ ತುಳು ಸಿನಿಮಾ ನಿರ್ಮಾಣದ ಪ್ರಯತ್ನಕ್ಕೆ ಕೈ ಹಾಕಿದ್ದರು. ‘ದಾರೆದ ಬುಡೆದಿ’ ಎಂಬ ತಮ್ಮದೇ ಜನಪ್ರಿಯ ನಾಟಕವನ್ನು ಸಿನಿಮಾ ಮಾಡಲು ಮುಂದಾಗಿದ್ದರು. ೧೯೭೧ರ ಮಾರ್ಚ್ ೨೬ರಂದು ಮಂಗಳೂರಿನ ರೂಪವಾಣಿ ಚಿತ್ರಮಂದಿರದಲ್ಲಿ ‘ದಾರೆದ ಬುಡೆದಿ’ ಬಿಡುಗಡೆ ಮಾಡಿದರು. ಇದು ಬಿಡಗಡೆಯಾದ ೨ನೇ ಸಿನಿಮಾವಾದರೂ, ೧೯೭೦ರಲ್ಲೇ ಚಿತ್ರೀಕರಣ ನಡೆದಿದ್ದು, ತುಳುವಿನಲ್ಲಿ ಮೊದಲು ಚಿತ್ರೀಕರಣವಾದ ಸಿನಿಮಾ ಎಂಬ ಖ್ಯಾತಿ ಪಡೆಯಿತು. ತುಳುವಿನಲ್ಲಿ ಈ ವರೆಗೆ ಸುಮಾರು ೧೪೧ ಸಿನಿಮಾಗಳು ತೆರೆ ಕಂಡಿವೆ.
ಭಾಷಿಕ ತುಳುನಾಡು–ಸಂಸ್ಕೃತಿ:
ಕನ್ನಡ ಆಡಳಿತ ಭಾಷೆಯಾಗಿರುವ ಕರ್ನಾಟಕದ ಪ್ರಮುಖ ಪ್ರಾದೇಶಿಕ ಭಾಷೆ ತುಳು. ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣಗಳ ಪಿತಾಮಹ ಎಂದೆನಿಸಿಕೊAಡಿರುವ ರಾಬರ್ಟ್ ಕಾಲ್ಡ್ವೆಲ್, ತನ್ನ ಉದ್ಗ್ರಂಥ ‘ಎ ಕಂಪಾರೆಟಿವ್ ಗ್ರಾಮರ್ ಆಫ್ ದಿ ದ್ರಾವಿಡಿಯನ್ ಓರ್ ಸೌತ್ ಇಂಡಿಯನ್ ಫ್ಯಾಮಿಲಿ ಆಫ್ ಲ್ಯಾಂಗ್ವೇಜಸ್’ (೧೮೫೬) ಗ್ರಂಥದಲ್ಲಿ ತುಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದೆ ಎಂಬುದಾಗಿ ಪರಿಗಣಿಸಿದ್ದಾರೆ. ತುಳು ಸುಮಾರು ೨,೬೦೦ ವರ್ಷಗಳ ಇತಿಹಾಸ (ತಮಿಳು ಸಂಗಮ ಸಾಹಿತ್ಯ) ಹೊಂದಿದ್ದರೂ, ಪ್ರಸ್ತುತ ಯಾವುದೇ ರಾಜ್ಯದ ಆಡಳಿತ ಭಾಷೆಯಾಗಿ, ರಾಜ್ಯ ಭಾಷೆಯಾಗಿ ಅಥವಾ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಮಾನ್ಯತೆ ಪಡೆದಿಲ್ಲ.
ಭಾಷಿಕ ತುಳುನಾಡಿನ ಮೇರೆಗಳನ್ನು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿ, ದಕ್ಷಿಣದಲ್ಲಿ ಚಂದ್ರಗಿರಿ ಹೊಳೆ ಹಾಗೂ ಉತ್ತರದಲ್ಲಿ ಸೀತಾನದಿ ಎಂಬುದಾಗಿ ಗುರುತಿಸಲಾಗಿದೆ. (ಕೆ. ಮೋಹನ ಕೃಷ್ಣ ರೈ, ೨೦೦೭). ಉತ್ತರರೇಖಾಂಶ ೧೨ ರಿಂದ ೧೩.೫ ಡಿಗ್ರಿ ಹಾಗೂ ಪೂರ್ವಅಕ್ಷಾಂಶ ೭೪ ರಿಂದ ೭೫ರ ನಡುವಿನ ಭೌಗೋಳಿಕ ವ್ಯಾಪ್ತಿ ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ತುಳು ಭಾಷಿಕರು ದೇಶದ ಪ್ರಮುಖ ನಗರಗಳಾದ ಮುಂಬೈ, ಬೆಂಗಳೂರು, ಚೆನ್ನೈ, ಬರೋಡಾ ಹಾಗೂ ಗಲ್ಫ್ ಮತ್ತಿತರ ರಾಷ್ಟ್ರಗಳಲ್ಲೂ ನೆಲೆಸಿದ್ದಾರೆ.
ದೇಶದಾದ್ಯಂತ ೧೮,೪೬,೪೨೭ ಮಂದಿ ‘ತುಳು ಮಾತೃಭಾಷಿಗರು’ ಎಂದು ೨೦೧೧ರ ಜನಗಣತಿಯಲ್ಲಿ ನೋಂದಾಯಿಸಿಕೊAಡಿದ್ದಾರೆ. ಈ ಪೈಕಿ ೧೫,೯೫,೦೩೮ ಮಂದಿ ಕರ್ನಾಟಕದಲ್ಲಿ (ಪ್ರಮುಖವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ) ಇದ್ದರೆ, ೧,೨೪,೨೬೬ ಮಂದಿ ಕೇರಳದಲ್ಲಿ (ಪ್ರಮುಖವಾಗಿ ಕಾಸರಗೋಡುಜಿಲ್ಲೆ) ಇದ್ದಾರೆ. ಆದರೆ, ಜಮ್ಮುಕಾಶ್ಮೀರದಿಂದ ಹಿಡಿದು ತಮಿಳುನಾಡಿನವರೆಗೆ ದೇಶದ ೨೯ ರಾಜ್ಯಗಳು ಹಾಗೂ ೬ ಕೇಂದ್ರಾಡಳಿತ ಪ್ರದೇಶಗಳಲ್ಲಿ ತುಳುವರು ಇರುವುದು ಜನಗಣತಿಯ ಭಾಷಾ ವರದಿಯಲ್ಲಿದೆ.
ತುಳುನಾಡಿನಲ್ಲಿ ತುಳು ಪ್ರಮುಖ ಸಂವಹನ ಭಾಷೆಯಾಗಿದ್ದು, ಇಲ್ಲಿನ ೪೫.೭೪ ಲಕ್ಷ ಜನಸಂಖ್ಯೆಯಲ್ಲಿ ಬ್ಯಾರಿ, ಕೊಂಕಣಿ, ಕನ್ನಡ ಮತ್ತಿತರ ಮಾತೃ ಭಾಷಿಗರೂ ತುಳು ಬಲ್ಲವರಾಗಿದ್ದಾರೆ. ಇತರೆ ರಾಜ್ಯಗಳು ಹಾಗೂ ವಿದೇಶದಲ್ಲಿ ನೆಲೆಗೊಂಡವರನ್ನು ಸೇರಿಸಿದರೆ ಸುಮಾರು ೧ ಕೋಟಿಗೂ ಹೆಚ್ಚು ತುಳುವರು ಇದ್ದಾರೆ ಎನ್ನುವುದು ತುಳು ಅಧ್ಯಯನಕಾರರ ವಾದವಾಗಿದೆ. ಬಹುಭಾಷೆಗಳ ಆಡಂಬೋಲವಾದ ಈ ಪ್ರದೇಶದಲ್ಲಿ ಜಾತಿ, ಧರ್ಮ, ವರ್ಗಗಳಿಗೆ ಅತೀತವಾಗಿ ಬಹುತೇಕರು ಮಾತನಾಡುವ, ವ್ಯವಹರಿಸುವ ಭಾಷೆ ತುಳು. ಜನಪದ ಕಲೆ, ಸಂವಹನ ಮಾಧ್ಯಮಗಳ ಜೊತೆಗೆ ಭೂತಾರಾಧನೆ, ಪಾಡ್ದನ, ಯಕ್ಷಗಾನ, ಕೃಷಿ, ಕಂಬಳ, ಕೋಳಿ ಅಂಕ ಮತ್ತಿತರ ಗುಣಲಕ್ಷಣಗಳಿಂದ ತುಳುನಾಡು ಗುರುತಿಸಿಕೊಂಡಿದೆ.
‘ಸಂಸ್ಕೃತಿ ಎಂದರೆ ಸಮಾಜ ಕೊಟ್ಟ ದೇಣಿಗೆ. ಅದು ಒಬ್ಬೊಬ್ಬನ ವೈಯಕ್ತಿಕ ಸೊತ್ತಲ್ಲ. ಮನುಷ್ಯ ಮನುಷ್ಯನ ನಡುವೆ ಉಂಟಾದ ಅಂತರಕ್ರಿಯೆ. ಮಾನವೀಯ ಗುಣಧರ್ಮಕ್ಕಾಗಿ ಸಹಕಾರ ಕೊಡುವುದು ಸಂಸ್ಕೃತಿಯ ಕೆಲಸ. ಸಂಸ್ಕೃತಿ ಇಲ್ಲದೇ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿರುವ ತುಳು ಸಂಸ್ಕೃತಿಯು ಈ ಒಂದು ಸಂಕೀರ್ಣ ಸಂಸ್ಕೃತಿಯಾಗಿದೆ’ (ಪಾಲ್ತಾಡಿ ರಾಮಕೃಷ್ಣ ಆಚಾರ್, ೨೦೦೮).
‘ತುಳು ಸಂಸ್ಕೃತಿ ಎಂದರೆ ಕೇವಲ ಭೂತಕೋಲ, ಕಂಬಳ, ಕೋಳಿಕಟ್ಟ, ಯಕ್ಷಗಾನಕ್ಕೆ ಸೀಮಿತವಾಗಿಲ್ಲ. ಇದು ಸಾಂಸ್ಕೃತಿಕ ಬದುಕಿನ ಒಂದು ಭಾಗ ಅಷ್ಟೆ. ಇದಲ್ಲದೆ ತುಳುನಾಡಿನಲ್ಲಿ ವಿಶಿಷ್ಟ ರೀತಿಯ ಎಷ್ಟೋ ಆಚರಣೆಗಳಿವೆ. ನಡವಳಿಕೆ, ಸಂಪ್ರದಾಯ, ಕಟ್ಟುಪಾಡುಗಳಿವೆ. ಅದು ಉಡುಗೆ–ತೊಡುಗೆಗಳಿರಬಹುದು, ಅಡುಗೆಯಾಗಿರಬಹುದು, ಮಾತನಾಡುವ ಧಾಟಿಯಾಗಿರಬಹುದು, ಒಟ್ಟು ಬದುಕಿನ ರೀತಿ ಆಗಿರಬಹುದು (ಹೇಮಶ್ರೀ, ೨೦೦೭).
ಸಂಸ್ಕೃತಿ ಎಂಬ ಪದವನ್ನು ‘ಸಮ್ಯಕ್ ಕೃತಿ’ ಎಂಬುದಾಗಿ ವಿಸ್ತರಿಸಬಹುದು. ‘ಸಮ್ಯಕ್’ ಎಂದರೆ ಒಳ್ಳೆಯ, ಕೃತಿ ಎಂದರೆ ಕೆಲಸ, ಸಮಾಜದ ಬಹುತೇಕ ಜನರು ಒಪ್ಪುವಂತಹ ಯಾವ ಕೆಲಸಗಳಿವೆಯೋ ಬಹುಜನರು ಯಾವುದನ್ನು ಅನುಸರಣೆ ಮಾಡುತ್ತಾರೋ ಅದು ಆ ಪ್ರದೇಶದ ಸಂಸ್ಕೃತಿ, ನಾವು ಆಡುವ ಭಾಷೆ- ನಡೆ- ನುಡಿ, ಆಚಾರ-ವಿಚಾರ, ನಂಬಿಕೆ-ನಡವಳಿಕೆ, ಊಟ- ತಿಂಡಿ, ಉಡುಗೆ-ಕೊಡುಗೆ ಎಲ್ಲದರಲ್ಲೂ ನಮ್ಮ ಸಂಸ್ಕೃತಿಯ ದರ್ಶನವಾಗುತ್ತದೆ. ‘ಸಂಸ್ಕೃತಿಯಲ್ಲಿ ಕೆಲವು ಕಣ್ಣಿಗೆ ಕಾಣದೇ ಇರಬಹುದು. ಹಾಲಿನಲ್ಲಿರುವ ತುಪ್ಪದಂತೆ ಮನುಷ್ಯರ ನಡೆ-ನುಡಿ, ಆಚಾರ-ವಿಚಾರದಲ್ಲಿ ಅವ್ಯಕ್ತವಾಗಿ ಅಡಗಿರಬಹುದು. ಪ್ರಾಚೀನ ಸಮಾಜದಲ್ಲಿ ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ಸಂಸ್ಕೃತಿಯು ಸೃಷ್ಟಿಗೊಳ್ಳುತ್ತಿತ್ತು. ಜನರ ಆರಾಧನೆ, ಆಚರಣೆ, ಹಬ್ಬ, ಜೀವನಾವರ್ತನ ಆಚರಣೆಗಳಲ್ಲಿ ಅದು ಪ್ರತ್ಯಕ್ಷಗೊಳ್ಳುತ್ತಿತ್ತು. ಇಂದಿಗೂ ಸಂಸ್ಕೃತಿಯನ್ನು ನಾವು ಜನರ ನಂಬಿಕೆ ಮತ್ತು ಆಚರಣೆಗಳಲ್ಲಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಂಸ್ಕೃತಿಯಲ್ಲಿ ಭಾವನಾತ್ಮಕ ಬಂಧನ, ಧಾರ್ಮಿಕ ನಂಬಿಕೆ, ಬೌದ್ಧಿಕ ಸಾಧನೆಎಲ್ಲವೂ ಬೆರೆಯುತ್ತದೆ. ಭಾರತೀಯ ಸಂಸ್ಕೃತಿಯು ಸಂಕೀರ್ಣವಾಗಿದೆ.
ಸಿನಿಮಾದಲ್ಲಿ ತುಳುನಾಡಿನ ಪರಿಕಲ್ಪನೆ:
ಕನ್ನಡ ಚಲನಚಿತ್ರರಂಗಕ್ಕೂ ತುಳುನಾಡಿಗೂ ನಿಕಟ ಸಂಬಂಧವಿದೆ. ತುಳುನಾಡಿನ ಹಲವಾರು ಕಲಾವಿದರು, ನಿರ್ದೇಶಕರು, ಸಂಗೀತ ನಿರ್ದೇಶಕರು, ತಂತ್ರಜ್ಞರು, ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಅದನ್ನು ನಾವು ಒಟ್ಟು ಭಾರತೀಯ ಚಿತ್ರರಂಗದಲ್ಲೂ ಕಾಣಬಹುದು. ಇಲ್ಲಿನ ಪ್ರಾಕೃತಿಕ ಚಿತ್ರಣವಾದ ಕಡಲು, ಪಶ್ಚಿಮ ಘಟ್ಟ ಇತ್ಯಾದಿಗಳನ್ನೂ ಸಿನಿಮಾಗಳಲ್ಲಿ ಬಿಂಬಿಸಲಾಗಿದೆ. ಆದರೆ, ಸಂಸ್ಕೃತಿಯನ್ನು ಬಿಂಬಿಸುವ ಭಾಷೆ ಹಾಗೂ ಪಾತ್ರಗಳಿಗೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದಲ್ಲಿ ಮಂಗಳೂರು ಕನ್ನಡ ಎನ್ನಲಾದ ಭಾಷೆಯ ಬಳಕೆ ಇದೆ. ತುಳುನಾಡಿನ ಪಾತ್ರಗಳೂ ಹೆಚ್ಚಾಗಿ ಅಡುಗೆ ಭಟ್ಟ, ರೌಡಿ, ಉದ್ಯಮಿ ರೂಪದಲ್ಲಿ ಕಾಣಿಸಿಕೊಂಡಿವೆ. ‘ಮಾರಾಯ್ರೇ’, ‘ಮಂಡೆಬಿಸಿ’ ‘ಉಂಟಲ್ಲಾ’ ಎಂಬಿತ್ಯಾದಿ ಪದಗಳ ಮೂಲಕ ಇವರ ಆಡುಭಾಷೆಯನ್ನು ಬಿಂಬಿಸಲಾಗಿದೆ. ಆದರೆ, ಅದು ಸಂಪೂರ್ಣವಾಗಿ ಬಳಕೆಯಾಗಿರುವುದು ಹಾಸ್ಯಕ್ಕೆ ಎಂಬುದು ಸಿನಿಮಾ ನೋಡಿದಾಗ ಅರಿವಾಗುತ್ತದೆ. ಇದೇ ಮಾದರಿಯನ್ನು ನಾವು ಬಾಲಿವುಡ್‌ನ ‘ಮದರಾಸಿ’ ಪಾತ್ರಗಳಲ್ಲೂ ಕಾಣಬಹುದು.
ತುಳುವೇತರ ಕೆಲವೇ ಕೆಲವು ಸಿನಿಮಾಗಳಲ್ಲಿ ಮಾತ್ರ ತುಳು ಪದಗಳನ್ನು ಬಳಸಲಾಗಿದ್ದು, ಮಲೆಯಾಳ, ಕನ್ನಡ, ಹಿಂದಿ, ಕೊಂಕಣಿ ಮತ್ತಿತರ ಭಾಷಾ ಚಿತ್ರಗಳಲ್ಲಿ ನಾವು ಕೇಳಬಹುದಾಗಿದೆ. ತುಳುನಾಡಿನಿಂದ ವಲಸೆ ಹೋಗಿ ಹೋಟೆಲ್, ಬ್ಯಾಂಕ್, ಅಂಡರ್‌ವರ್ಲ್ಡ್ ಇತ್ಯಾದಿಗಳಲ್ಲಿ ತೊಡಗಿಸಿಕೊಂಡವರ ಪಾತ್ರಗಳೇ ಸಿನಿಮಾದಲ್ಲಿ ಪಾತ್ರವಾಗಿದ್ದವೇ ಹೊರತು, ತುಳುನಾಡಿನ ನೈಜ ಸಂಸ್ಕೃತಿಯನ್ನು ಸೂಕ್ಷö್ಮತೆಯಿಂದ ಕಂಡ ಸಿನಿಮಾಗಳೇ ಅತಿ ವಿರಳ.
ಪರಿಕಲ್ಪನೆಯ ಬದಲಾವಣೆ:
ಭಾರತೀಯ ಸಿನಿಮಾ ಎಂದರೆ ಕೇವಲ ಬಾಲಿವುಡ್ ಎಂಬ ದಶಕಗಳ ಹಿಂದಿನ ಪರಿಕಲ್ಪನೆಯನ್ನು ದಕ್ಷಿಣ ಭಾರತದ ಇಂದಿನ ಸಿನಿಮಾಗಳು ಬದಲಾಯಿಸುತ್ತಿವೆ. ದಕ್ಷಿಣ ಭಾರತದ ಸ್ಯಾಂಡಲ್‌ವುಡ್ (ಕನ್ನಡ), ಟಾಲಿವುಡ್ (ತೆಲುಗು) ಹಾಗೂ ತಮಿಳು (ಕಾಲಿವುಡ್) ಉದ್ಯಮಗಳ ಸಿನಿಮಾಗಳು ಈಚಿನ ವರ್ಷಗಳಲ್ಲಿ ಕೇವಲ ದೇಶ (ಪ್ಯಾನ್‌ಇಂಡಿಯಾ) ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಭಾರಿ ಬಂಡವಾಳದ ‘ಬಾಹುಬಲಿ’, ‘ಆರ್‌ಆರ್‌ಆರ್’, ‘ಪುಷ್ಪ’, ‘ಕೆಜಿಎಫ್-೧ ಮತ್ತು ೨’, ‘ಚಾರ್ಲಿ ೭೭೭’ ಇತ್ಯಾದಿ ಸಿನಿಮಾಗಳು ಪ್ಯಾನ್‌ಇಂಡಿಯಾ ಹಾಗೂ ಜಾಗತಿಕ (ಓವರ್ ಸೀಸ್) ಮಟ್ಟದಲ್ಲಿ ತೆರೆಕಂಡು ಸಾವಿರಾರು ಕೋಟಿ ರೂಪಾಯಿ ಗಳಿಕೆ ಕಂಡಿವೆ. ಆದರೆ, ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿ ಬಳಿಕ ತನ್ನ ಚಿತ್ರಕತೆ, ಮೇಕಿಂಗ್, ಅಂತಸತ್ವದ ಮೂಲಕ ಪ್ಯಾನ್‌ಇಂಡಿಯಾ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಸಿನಿಮಾ ‘ಕಾಂತಾರ’. ಸಿನಿಮಾ ಭಾಷೆ, ಕತೆ, ತಾಂತ್ರಿಕತೆ, ಸಂಗೀತ, ನಿರೂಪಣಾ ಶೈಲಿ, ಕ್ಯಾಮೆರಾ ಕೆಲಸ, ಕಲಾ ವಿನ್ಯಾಸ, ವೇಷಭೂಷಣ, ಸ್ಥಳದ ಆಯ್ಕೆ ಇತ್ಯಾದಿ ಸಿನಿಮಾ ಪರಿಭಾಷೆಯ ಆಯಾಮಗಳಲ್ಲಿ ‘ಕಾಂತಾರ’ ಉತ್ಕೃಷ್ಟತೆಯನ್ನೇ ಕೊಟ್ಟಿದ್ದರೂ, ಸಿನಿಮಾ ನೀಡಿದ ದೇಸೀಯತೆಯೊಳಗಿನ ಸ್ಥಳೀಯತೆ ಅಸ್ಮಿತೆಯು ಜಾಗತಿಕ ಸಿನಿಮಾಕ್ಕೆ ಹೊಸ ಭಾಷ್ಯ ಬರೆಯಲು ಹೊರಟಿದೆ.
ದೇಸಿಯ ಅಥವಾ ಸ್ಥಳೀಯ ಕತೆಯೊಂದು ಜಾಗತಿಕ ಮಟ್ಟದಲ್ಲಿ ಯಶಸ್ಸು ಗಳಿಸುವುದು ಇದೇ ಮೊದಲಲ್ಲ. ಹಾಲಿವುಡ್‌ನಿಂದ ಹಿಡಿದು ಜಪಾನ್, ಕೊರಿಯಾ, ಫ್ರೆಂಚ್, ಜರ್ಮನಿ, ಇರಾನ್ ಸಿನಿಮಾಗಳೂ ಈ ದಿಶೆಯಲ್ಲಿ ಕೊಡುಗೆ ನೀಡಿವೆ. ಆದರೆ, ‘ಕಾಂತಾರ’ ಸಿನಿಮಾವು ಕನ್ನಡ (ಮೂಲ)ದಲ್ಲಿ ಬಿಡುಗಡೆಯಾದರೂ, ಅದು ಕರಾವಳಿ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಿರುವ ಸೂಕ್ಷö್ಮದಲ್ಲಿ ಅತಿ ಸೂಕ್ಷö್ಮ ಎನ್ನಬಹುದಾದ ನೆಲದ ಸಂಸ್ಕೃತಿಯನ್ನು ಬಿಂಬಿಸಿದೆ. ಪಶ್ಚಿಮ ಘಟ್ಟದ ತಪ್ಪಲಿನ ಕಾಡಂಚಿನಲ್ಲಿ ನೆಲೆಸಿರುವ ದೈವನರ್ತಕ ಸಮುದಾಯದ ಬದುಕಿನ ಸಂಘರ್ಷವನ್ನು ತೆರೆದಿಟ್ಟಿದೆ. ಇದು ತುಳು ಸಂಸ್ಕೃತಿ ಅಥವಾ ತುಳುನಾಡಿನ ಸಂಸ್ಕೃತಿಯೂ ಹೌದು. ಕೇವಲ ಸಮುದಾಯದ ಪರಿಸ್ಥಿತಿ ಮಾತ್ರವಲ್ಲ. ಸಮುದಾಯ, ಪ್ರಕೃತಿ ಹಾಗೂ ಊಳಿಗಮಾನ್ಯ ವ್ಯವಸ್ಥೆ ನಡುವಿನ ಸಂಘರ್ಷವನ್ನು ‘ಕಾಂತಾರ’ ಪ್ರತಿಬಿಂಬಿಸಿದೆ.
ಅಧ್ಯಯನದ ಉದ್ದೇಶ:
‘ಕಾಂತಾರ –ಒಂದು ದಂತಕತೆ’ ಸಿನಿಮಾವು ತುಳು ಸಂಸ್ಕತಿ ಹಾಗೂ ತುಳುನಾಡಿನ ಭೌಗೋಳಿಕ ವ್ಯಾಪ್ತಿಗೆ ಸಂಬಂಧಿಸಿದ ಸಿನಿಮಾ. ಈ ಸಿನಿಮಾದಲ್ಲಿ ತೌಳವ ಬದುಕಿನ ಬಿಂಬಗಳನ್ನು ಯಥೇಚ್ಛವಾಗಿ ಬಳಕೆ ಮಾಡಿಕೊಳ್ಳಲಾಗಿದ್ದು, ಸಿನಿಮಾವು ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಯಶಸ್ವಿ ಕಥಾನಕದಲ್ಲಿನ ತುಳು ಸಂಸ್ಕೃತಿಯನ್ನು ಅರಿಯುವುದು ಈ ಅಧ್ಯಯನದ ಪ್ರಮುಖ ಉದ್ದೇಶವಾಗಿದೆ.
೧. ‘ಕಾಂತಾರ’ ಸಿನಿಮಾದಲ್ಲಿನ ತುಳು ಸಂಸ್ಕೃತಿಯ ವಿಚಾರಗಳನ್ನು ಶೋಧಿಸುವುದು
೨. ಕನ್ನಡ ಸಿನಿಮಾವೊಂದರಲ್ಲಿ ತೌಳವ ಸಂಸ್ಕೃತಿಯ ಪ್ರತಿಬಿಂಬವನ್ನು ವಿಶ್ಲೇಷಿಸುವುದು
ಅಧ್ಯಯನ ವಿಧಾನ:
ಸಿನಿಮಾವನ್ನು ವೀಕ್ಷಿಸಿ, ಗುಣಾತ್ಮಕ ವಿಷಯ ವಿಶ್ಲೇಷಣೆಯ ತತ್ವಗಳ ಮೂಲಕ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುವುದು. ಸಂಶೋಧನಾ ಕೃತಿ, ಲೇಖನಗಳು, ನಿಯತಕಾಲಿಕೆಗಳ ಲೇಖನಗಳು, ವರದಿಗಳು, ವೆಬ್‌ಸೈಟ್, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಕಟಿತ ವರದಿಗಳ ಮೂಲಕ ಎರಡನೇ ಹಂತದ ಮಾಹಿತಿ ಸಂಗ್ರಹಿಸುವುದು.
ಸಿನಿಮಾದ ವಿಶ್ಲೇಷಣೆ
ಹೆಸರು: ಕಾಂತಾರ
ನಿರ್ದೇಶನ: ರಿಷಬ್ ಶೆಟ್ಟಿ
ನಿರ್ಮಾಣ: ವಿಜಯ್ ಕಿರಗಂದೂರು
ಬಿಡುಗಡೆ: ೨೦೨೨ರ ಸೆಪ್ಟೆಂಬರ್ ೩೦
ಸಂಗೀತ: ಬಿ. ಅಜನೀಶ್ ಲೋಕನಾಥ್
ತಾರಾಗಣ: ರಿಷಬ್ ಶೆಟ್ಟಿ,, ಕಿಶೋರ್, ಅಚ್ಯುತ, ಸಪ್ತಮಿ ಗೌಡ
‘ತುಳುನಾಡು’ ಎಂದು ಕರೆಯಲ್ಪಡುವ ಕರಾವಳಿ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಕಾಡಿನ ಮಡಿಲಾದ ಕೆರಾಡಿ ಬೀಡಿನಲ್ಲಿ ಮೂರು ಕಾಲ ಘಟ್ಟದಲ್ಲಿ (೧೮೪೭, ೧೯೭೦ ಹಾಗೂ ೧೯೯೦) ನಡೆಯುವ ಕಥಾ ವಸ್ತುವನ್ನು ಕಾಂತಾರ ಸಿನಿಮಾ ಹೊಂದಿದೆ. ೧೮೪೭ರಲ್ಲಿ ನೆಮ್ಮದಿಯನ್ನು ಅರಸಿ ಹೊರಟ ರಾಜನೊಬ್ಬನಿಗೆ ಕಾಡಿನಲ್ಲಿ ಪಂಜುರ್ಲಿ ದೈವವನ್ನು ಆರಾಧಿಸುತ್ತಿರುವ ಬುಡಕಟ್ಟು ಜನರ ದರ್ಶನವಾಗುತ್ತದೆ. ಆ ದೈವವನ್ನು ಕೇಳಿದ ರಾಜನು, ಬುಡಕಟ್ಟು ಜನರಿಗೆ ಭೂಮಿಯನ್ನು ನೀಡುತ್ತಾನೆ. ಆದರೆ, ಕೊಟ್ಟ ಮಾತಿನಲ್ಲಿ ವ್ಯತ್ಯಯವಾದರೆ, ಗುಳಿಗ ದೈವದ ಕೋಪಕ್ಕೆ ಗುರಿಯಾತ್ತದೆ ಎಂದು ರಾಜನನ್ನು ಬುಡಕಟ್ಟು ಜನರು ಎಚ್ಚರಿಸುತ್ತಾರೆ.
೧೯೭೦ರ ಕಾಲಘಟ್ಟದಲ್ಲಿ ಇದೇ ಸ್ಥಳದಲ್ಲಿ ಪಂಜುರ್ಲಿ ದೈವಕ್ಕೆ ಭೂತ ಕೋಲ ನಡೆಯುವ ಸಂದರ್ಭದಲ್ಲಿ ರಾಜನ ಕುಟುಂಬದ ಉತ್ತರಾಧಿಕಾರಿ, ತನ್ನ ಪೂರ್ವಜರು ನೀಡಿದ ಭೂಮಿಯನ್ನು ವಾಪಸ್ ನೀಡಬೇಕು. ಇಲ್ಲದಿದ್ದರೆ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ಎಚ್ಚರಿಸುತ್ತಾನೆ. ದೈವವು ಮದಿಪು (ಹೇಳಿಕೆ) ನೀಡಿದ್ದನ್ನೇ ಪ್ರಶ್ನಿಸುತ್ತಾನೆ. ಕೊಟ್ಟ ಮಾತಿನಂತೆ ದೈವ ಪಾತ್ರಧಾರಿ ಕಾಡಿನ ನಿಗೂಢತೆಯಲ್ಲಿ ಲೀನವಾಗುತ್ತಾನೆ. ರಾಜ ಕುಟುಂಬದ ಉತ್ತರಾಧಿಕಾರಿಯು ನ್ಯಾಯಾಲಯದ ಮೆಟ್ಟಿಲುಗಳ ಮೇಲೆ ಕೆಲವು ತಿಂಗಳ ನಂತರ ನಿಗೂಢ ಮರಣವನ್ನು ಹೊಂದುತ್ತಾನೆ.
೧೯೯೦ರಲ್ಲಿ ನಡೆಯುವ ಮೂರನೇ ಕಾಲಘಟ್ಟದಲ್ಲಿ ಅರಣ್ಯಾಧಿಕಾರಿ ಮುರಳೀಧರ್, ಈ ಭೂಮಿಯನ್ನು ಮೀಸಲು ಅರಣ್ಯವನ್ನಾಗಿ ಪರಿವರ್ತಿಸಲು ಯತ್ನಿಸುತ್ತಾರೆ. ಆಗ ಅಲ್ಲಿನ ಬುಡಕಟ್ಟು ಜನರ ಜೊತೆ ಸಂಘರ್ಷ ಉಂಟಾಗುತ್ತದೆ. ಆಗ, ಬುಡಕಟ್ಟು ಜನಾಂಗದ ಕಾಡಬೆಟ್ಟುವಿನ ಶಿವ ಅವರಿಗೆ ಪ್ರತಿ ಸವಾಲು ಹಾಕುತ್ತಾನೆ. ಶಿವನಿಗೆ ಗ್ರಾಮದ ಜಮೀನುದಾರÀ, ಮೂಲ ರಾಜನ ವಂಶಸ್ಥರಾದ ದೇವೇಂದ್ರ ಸುತ್ತೂರು ಬೆಂಬಲ ನೀಡುತ್ತಾನೆ. ಆದರೆ, ವಾಸ್ತವದಲ್ಲಿ ತಮ್ಮ ಪೂರ್ವಜರು (ರಾಜ) ನೀಡಿದ ಭೂಮಿಯನ್ನು ಮತ್ತೆ ವಶ ಪಡಿಸುವ ಹುನ್ನಾರವು ದೇವೇಂದ್ರ ಸುತ್ತೂರು ತಂತ್ರಗಾರಿಕೆಯಾಗಿದ್ದರೆ, ಅರಣ್ಯಾಧಿಕಾರಿ ಮುರಳೀಧರ ಪರೋಕ್ಷವಾಗಿ ಬುಡಕಟ್ಟು ಜನರಿಗೆ ನೆರವಾಗುತ್ತಾನೆ. ಇದು ಸಿನಿಮಾದ ಪ್ರಮುಖ ಹಂದರವಾಗಿದೆ.
ಕಾಂತಾರದಲ್ಲಿನ ತುಳು ಸಂಸ್ಕೃತಿ:
ಒಂದು ಪ್ರದೇಶದ ಸಂಸ್ಕೃತಿಯ ಹುಟ್ಟಿಗೆ ಅಲ್ಲಿನ ವಾಯುಗುಣ, ಭೌಗೋಳಿಕ ಲಕ್ಷಣಗಳು, ಸಹಜ ಸಸ್ಯ ಮತ್ತು ಅಲ್ಲಿ ಬೆಳೆಯಲಾಗುವ ಆಹಾರದ ಬೆಳೆಗಳು ಮುಖ್ಯ ಕಾರಣಗಳಾಗುತ್ತವೆ. ಕಾಸರಗೋಡಿನಿಂದ ಗೋಕರ್ಣದವರೆಗೆ ಪೂರ್ವಕಾಲದಲ್ಲಿ ಒಂದು ಸಂಸ್ಕೃತಿ ಪಸರಿಸಿತ್ತು. ಹೀಗಾಗಲು ಇಲ್ಲಿನ ಕಡಲ ತೀರದ ವಾಯುಗುಣ, ಇನ್ನೊಂದು ಕಡೆಯಿಂದ ಸಹ್ಯಾದ್ರಿಯ ಸಾಲು ಇಲ್ಲಿಯ ಜನರ ಮೂಲೋದ್ಯೋಗವಾದ ಭತ್ತದ ಬೇಸಾಯ ಮತ್ತು ಮುಖ್ಯ ಆಹಾರವಾದ ಅನ್ನ ಮತ್ತು ಮೀನು- ಮುಖ್ಯ ಕಾರಣ ಎನ್ನಬಹುದು. ಇಲ್ಲಿನ ಪ್ರಾಚೀನ ಸಂಸ್ಕೃತಿಯನ್ನು ಕೃಷಿ ಸಂಸ್ಕೃತಿ ಎಂಬುದಾಗಿ ಕರೆಯಬಹುದು’ ಎಂದು ‘ಕರಾವಳಿ ಜನಪದ’ ಕೃತಿಯಲ್ಲಿ ಸಂಸ್ಕೃತಿ ಸಂಶೋಧಕ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ದಾಖಲಿಸಿದ್ದಾರೆ.
ತುಳುವರ ಸಾಂಸ್ಕೃತಿಕ ಗ್ರಹಿಕೆ ಹಾಗೂ ಚಿಂತನೆಗಳು ಪ್ರಮುಖವಾಗಿ ೧. ಜನಪದ ಸಾಹಿತ್ಯ (ಕತೆಗಳು, ಪುರಾಣಗಳು, ಐತಿಹ್ಯ, ಗಾದೆಗಳು, ಹೇಳಿಕೆಗಳು, ಅರಿಕೆಯ ಮಾತುಗಳು, ಪಾಡ್ದನ-ಸಂಧಿಗಳು, ಕಬಿತೆಗಳು, ಆಚರಣೆಯ ಹಾಡುಗಳು) ೨. ಭೌತಿಕ ಸಂಸ್ಕೃತಿ (ಗೃಹೋಪಯೋಗಿ ವಸ್ತುಗಳು, ವೃತ್ತೀ ಸಂಬಂಧಿ ಸಲಕರಣೆಗಳು, ಉಡುಪುಗಳು, ವಾಸ್ತುಶಿಲ್ಪ ಕಟ್ಟಡಗಳು, ಅಲಂಕಾರ ಸಾಮಗ್ರಿಗಳು, ಚಿತ್ರಕಲೆ, ಆಭರಣಗಳು, ಮಾಪನಗಳು, ಆಹಾರ ಸಾಮಗ್ರಿಗಳು, ವೈದ್ಯ ಪದ್ಧತಿ), ೩. ಸಾಮಾಜಿಕ ಆಚರಣೆಗಳು (ಜೀವನಾವರ್ತನ ಮತ್ತು ವಾರ್ಷಿಕಾವರ್ತನ) ಹಾಗೂ ೪. ರಂಗ ಪ್ರದರ್ಶನಗಳ ಕಲೆಗಳಲ್ಲಿ (ಕುಣಿಗಳು ಹಾಗೂ ಆರಾಧನೆಗಳು) ಅಭಿವ್ಯಕ್ತಿಗೊಂಡಿರುತ್ತವೆ. ಈ ನಾಲ್ಕು ಬಗೆಗಳು ಸೇರಿ ತುಳು ಜಾನಪದದ ಸ್ವರೂಪ ನಿರ್ಣಯಗೊಳ್ಳುತ್ತದೆ. ಇದು ನೆಲದ ತುಳು ಸಂಸ್ಕೃತಿಯಾಗಿದೆ.
ಈ ತುಳು ಸಂಸ್ಕೃತಿಯನ್ನು ತಜ್ಞರು ‘ಬೆನ್ನಿ ಸಂಸ್ಕೃತಿ (ಕೃಷಿ ಸಂಸ್ಕೃತಿ)’, ‘ಜಲ ಸಂಸ್ಕೃತಿ’ ಹಾಗೂ ‘ಮಾತೃಮೂಲೀಯ ಸಂಸ್ಕೃತಿ’ ಎಂದೂ ಗುರುತಿಸಿದ್ದಾರೆ. ಬೇಸಾಯ, ಬೇಟೆ, ಕೆಲಸ, ನಂಬಿಕೆಗಳು, ಮತ್ತು ಆಚರಣೆಗಳು ತುಳುವರ ಸಂಸ್ಕೃತಿಯ ಬಹುಮುಖ್ಯ ಆಯಾಮವಾಗಿವೆ. ತುಳುವರು ನೆಲವನ್ನು ಹೆಣ್ಣಾಗಿ, ತಾಯಿಯಾಗಿ, ದೈವವಾಗಿ, ಫಲವಂತಿಕೆಯ ಮತ್ತು ಸಂಸ್ಕೃತಿಯ ಸಂಕೇತವಾಗಿ, ಎಲ್ಲ ಜೀವರಾಶಿಗಳಿಗೂ ಆಶ್ರಯದಾತೆಯಾಗಿ ಪರಿಗಣಿಸಿದ್ದಾರೆ. ಕಾಡಿನ ಸಂಸ್ಕೃತಿಯು ನಾಡಿನ ಸಂಸ್ಕೃತಿಯಾಗಿ ರೂಪುಗೊಂಡ ಇತಿಹಾಸದ ಚಿತ್ರಣಗಳು ತುಳು ಸಂಸ್ಕೃತಿಯ ಜನಪದ ಕಾವ್ಯಗಳಲ್ಲಿ ದೊರೆಯುತ್ತವೆ. ಅವುಗಳಲ್ಲಿ ಜೀವನಾವರ್ತನ ಸಾಮಾಜಿಕ ಆಚರಣೆಗಳು, ಸಾಂಸ್ಕೃತಿಕ ವೀರರ ಹೋರಾಟಗಳು, ನೆಲ, ದುಡಿಮೆ, ಕುಟುಂಬ, ಕಾಲ, ಸೃಷ್ಟಿ, ನಾಶ, ಬೇಟೆ, ಮದುವೆ ಮೊದಲಾದ ಪರಿಕಲ್ಪನೆಗಳಿವೆ. ಇದು ಅಲಕ್ಷಿತ ಸಮುದಾಯದ ಚಿಂತನ ಕ್ರಮವಾಗಿದ್ದು, ಲಿಖಿತ ಶಿಷ್ಟ ಮಾದರಿಯ ಚಿಂತನ ಕ್ರಮಕ್ಕಿಂತ ವಿಭಿನ್ನವಾಗಿದೆ ಎಂದು ‘ತುಳು ಜಾನಪದ ಕಾವ್ಯ ಇಹಪರ ಲೋಕದೃಷ್ಟಿ’ ಅಧ್ಯಯನ ಕೃತಿಯಲ್ಲಿ ರಾಜಶ್ರೀ ದಾಖಲಿಸಿದ್ದಾರೆ.
ಶಿಷ್ಟ, ಲಿಖಿತ, ಶಾಸ್ತ್ರೀಯ ಮತ್ತಿತರ ಚೌಕಟ್ಟಿನೊಳಗಿನ ಕಥನಕ್ಕಿಂತ ವಿಭಿನ್ನವಾಗಿ ಅನನ್ಯವಾದ ಕಥನವೇ ‘ಕಾಂತಾರ’. ಈ ತುಳು ಸಂಸ್ಕೃತಿಯ ಕಥನವೇ ಸಿನಿಮಾದ ಯಶಸ್ಸಿನ ಪ್ರಮುಖ ಕಾರಣ. ಇದು ತುಳು ಸಂಸ್ಕೃತಿಯ ಅಭಿವ್ಯಕ್ತಿಯಾಗಿದೆ. ಇದನ್ನು ನಿರ್ದೇಶಕ ರಿಷಬ್ ಶೆಟ್ಟಿ ಮಾತುಗಳಲ್ಲಿ ಹೇಳುವುದಾದರೆ, ‘ಲೋಕಲ್ ಈಸ್ ಗ್ಲೋಬಲ್’.
ಜೋಗ- ಮಾಯಕದ ಜಗತ್ತು:
ಅಲೌಕಿಕ ಜಗತ್ತಿನ ದೈವಗಳು ಪಾತ್ರಿ ಮೂಲಕ ಕಾಣಿಸಿಕೊಳ್ಳುವುದು ದೈವಾರಾಧನೆ. ದೈವಾರಾಧನೆ ಸಂದರ್ಭದಲ್ಲಿ ಹೇಳುವ ನುಡಿಕಟ್ಟುಗಳಲ್ಲಿ ‘ಮಾಯ’ ಮತ್ತು ‘ಜೋಗ’ ಪದಗಳನ್ನು ಕೇಳಬಹುದು. ‘ಜೋಗ’ ಎಂದರೆ ಕಣ್ಣಿಗೆ ಕಾಣಿಸುವಂತದ್ದು, ಲೌಕಿಕ ಜಗತ್ತು ಅಥವಾ ಮೂರ್ತ ರೂಪ. ‘ಮಧ್ಯಂತರ ಜಗತ್ತು’ ಅಥವಾ ‘ಮಾಯಕ’ ಎಂದರೆ ಅಲೌಕಿಕ, ಅಮೂರ್ತರೂಪ, ಅದೃಶ್ಯರೂಪ. ಅದು ದೈವಗಳು ವಾಸಿಸುವ ಜಗತ್ತು. ‘ಮಾಯಕ’ದಲ್ಲಿರುವ ದೈವಗಳು ಭೂತಾರಾಧನೆ ಸಂದರ್ಭದಲ್ಲಿ ಲೌಕಿಕಕ್ಕೆ ಬರುತ್ತವೆ. ತುಳು ಸಂಸ್ಕೃತಿಯ ಭೂತಾರಾಧನೆಯಲ್ಲಿ ‘ಜೋಗ’/ ‘ಸೋಯ’ ಮತ್ತು ‘ಮಾಯಕ’ದ ಪರಿಕಲ್ಪನೆ ಬಹುಮುಖ್ಯವಾಗಿದೆ.
ವಾಸ್ತವ ಲೋಕದ ವ್ಯಕ್ತಿಯ ಲೌಕಿಕ ಬದುಕಿನ ಘಟನೆಗಳನ್ನು ಮತ್ತು ಕ್ರಿಯೆಗಳನ್ನು ‘ಜೋಗ’ ಮತ್ತು ‘ಮಧ್ಯಂತರ ಜಗತ್ತಿನ’ ವ್ಯಾಪ್ತಿಯೊಳಗೆ ತುಳುವರು ಗ್ರಹಿಸಿದ್ದಾರೆ. ಹಾಗಾಗಿ ‘ಜೋಗ’ ಎಂದರೆ ‘ವಾಸ್ತವ ಜಗತ್ತು’ ಮತ್ತು ಆರಾಧನೆಯ ಸಂದರ್ಭದಲ್ಲಿ ನಿರ್ಮಾಣಗೊಳ್ಳುವ ‘ಮಧ್ಯಂತರ ಜಗತ್ತು’ ಅಥವಾ ‘ಮಾಯಕ’ ಎಂದರೆ ವಾಸ್ತವ ಜಗತ್ತಿನಿಂದ ವ್ಯಕ್ತಿ ನಿಗೂಢವಾಗಿ ಅದೃಶ್ಯವಾಗಿ ಮನುಷ್ಯರ ಕಣ್ಣಿಗೆ ಕಾಣದಂತೆ ವಾಸಿಸುವ ಜಗತ್ತು. ‘ಜೋಗ- ಮಾಯಕ’ಗಳು ಅಂತರ ಸಂಬಂಧವಿರುವ ಜಗತ್ತುಗಳು ಎಂಬುದಾಗಿ ತುಳುವರು ಭಾವಿಸಿದ್ದಾರೆ.
ಮೂರು ಕಾಲಘಟ್ಟದಲ್ಲಿ ಪ್ರಸ್ತುತ ಪಡಿಸಲಾದ ‘ಕಾಂತಾರ’ವು ‘ಜೋಗ’ ಹಾಗೂ ‘ಮಾಯಕ’ ಜಗತ್ತಿನ ಮುಖಾಮುಖಿಯಾಗಿದೆ. ಮಾಯಕ ಜಗತ್ತಿನಿಂದ ಬರುವ ಪಂಜುರ್ಲಿ ಅಥವಾ ಗುಳಿಗ ದೈವಗಳು, ಮಾತಿಗೆ ತಕ್ಕಂತೆ ‘ಮಾಯಕ ಜಗತ್ತು’ ಸೇರುವ ನಾಯಕ ಪಾತ್ರಧಾರಿ ಶಿವನ ತಂದೆ ಹಾಗೂ ಕೊನೆಯಲ್ಲಿ ಸೇರುವ ಶಿವ ಇತ್ಯಾದಿಗಳೆಲ್ಲ ಜೋಗದ ಜಗತ್ತಿನಲ್ಲಿ ನಡೆಯುವ ಹೋರಾಟಗಳೆಲ್ಲವೂ ಇವುಗಳನ್ನು ಚಿತ್ರಿಸಿವೆ.
ಭೂತಗಳ ಮದಿಪು, ನುಡಿಕಟ್ಟು ಮತ್ತು ನ್ಯಾಯ ತೀರ್ಮಾನವನ್ನು ಪ್ರಶ್ನಿಸುವ ಮತ್ತು ಧಿಕ್ಕರಿಸಿ ಸವಾಲೆಸೆಯುವ ವ್ಯಕ್ತಿಯ ಉದ್ಧಟತನಕ್ಕೆ ಕೆರಳಿದ ಪಂಜುರ್ಲಿ ಭೂತವು ಕೋಲ ಕಟ್ಟಿದ ಕಲಾವಿದನ ಸಹಿತ ಮಾಯವಾಗುತ್ತದೆ. ತುಳು ಆರಾಧನಾ ಜಗತ್ತಿನ ಅತ್ಯಂತ ವಿಶಿಷ್ಟವಾದ ಮಾಯಕದ ಪರಿಕಲ್ಪನೆಯನ್ನು ಈ ಘಟನೆಯ ಮೂಲಕ ಜನರಿಗೆ ಪರಿಚಯಿಸಲಾಗಿದೆ.
‘ದೈವವಾ.. ನರ್ತಕನಾ ಇಂದೇ ತೀರ್ಮಾನವಾಗಲಿ. ನರ್ತಕನಾದರೆ ನಾನು ನಿಮಗೆ ಸಿಗುವಂತವನಾಗಲಿ. ದೈವವಾದರೆ.. ವೋ..’ ಎಂದು ನುಡಿಗಟ್ಟು ಹೇಳಿದ ದೈವ ಆಹ್ವಾನಿಸಿಕೊಂಡಿದ್ದ (ಭೂತ- ದೈವ ಪಾತ್ರಧಾರಿ), ಶಿವನ ತಂದೆ ಕಗ್ಗತ್ತಲಲ್ಲಿ ಸೂಟೆಯ ಬೆಳಕಿನಲ್ಲಿ ಕಾಡಿಗೆ ಓಡುತ್ತಾನೆ. ಇದು ಜೋಗ ಮತ್ತು ಮಾಯಕದ ಜಗತ್ತಿನ ಅಭಿವ್ಯಕ್ತಿಯಾಗಿದೆ.
ಸಾಂಸ್ಕೃತಿಕ ನಾಯಕರು:
ವಾಸ್ತವ ಮತ್ತು ಅಲೌಕಿಕದ ನಡುವಿನ ‘ಮಧ್ಯಂತರ ಜಗತ್ತು’, ಅದು ಮಾಯಕದ ಜಗತ್ತು, ಅಲ್ಲಿಂದ ಜೋಗದಲ್ಲಿ ನಿರ್ದಿಷ್ಟ ಕಾಲ ಸ್ಥಳ ಸಂದರ್ಭ ಮತ್ತು ನಿರ್ದಿಷ್ಟ ವ್ಯಕ್ತಿಯ ಮೇಲೆ ಭೂತ ಪೂಜಿಸುವವರ ವಿನಂತಿಯ ಮೇರೆಗೆ ಬರುತ್ತವೆ. ನಂಬಿದವರಿಗೆ ಇಂಬು ನೀಡಿ ಕಾಪಾಡುತ್ತವೆ. ಅಗೋಚರ ಜಗತ್ತಿನಲ್ಲಿ ಇದ್ದುಕೊಂಡು ಅಲ್ಲಿಂದಲೇ ರಕ್ಷಿಸುವ, ಶಿಕ್ಷಿಸುವ ಕೆಲಸವನ್ನು ಮಾಡುತ್ತವೆ ಎಂಬುದು ತುಳುವರ ನಂಬಿಕೆ (ಕೆ. ಚಿನ್ನಪ್ಪಗೌಡ, ೨೦೨೨).
ಈ ಪರಿಕಲ್ಪನೆಗಳು ತುಳುವರ ಬದುಕು ಮತ್ತು ಹೋರಾಟಕ್ಕೆ ಸಂಬಂಧಿಸಿದೆ. ‘ಸಾಂಸ್ಕೃತಿಕ ವೀರ’ರ ಕುರಿತ ತುಳುವರ ದೃಷ್ಟಿಕೋನವು ಅನನ್ಯವಾದದ್ದು. ಮನುಷ್ಯ ಪ್ರಯತ್ನ ಮತ್ತು ನಿರಂತರವಾದ ಹೋರಾಟದ ಮೂಲಕವೇ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂಬುದು ತುಳುವರ ಗ್ರಹಿಕೆಯಾಗಿದೆ. ಏನೂ ಇಲ್ಲದಿರುವ ಅಥವಾ ಸಾಮಾನ್ಯವಾಗಿರುವ ಒಂದು ಸ್ಥಿತಿಯಿಂದ ವ್ಯಕ್ತಿಯೊಬ್ಬ ಕೆಚ್ಚು, ಸಾಹಸ, ಸ್ವಾಭಿಮಾನ, ಪ್ರತಿಭಟನೆಗಳ ಮೂಲಕ ‘ಆಗುವಿಕೆ’ಯ ಅಂದರೆ ‘ನಾಯಕನಾಗುವ’ ಪ್ರಕ್ರಿಯೆಯನ್ನು ಸಾಂಸ್ಕೃತಿಕ ವೀರರ ಪರಿಕಲ್ಪನೆಯಲ್ಲಿ ಕಾಣಬಹುದು. ತುಳು ಜಾನಪದ ಕಾವ್ಯಗಳು ಜನ್ಮ -ಪುನರ್ಜನ್ಮದ ಸಂಬಂಧವನ್ನು ವಿವೇಚಿಸುವುದಕ್ಕಿಂತ ಹೆಚ್ಚಾಗಿ ಇಹಲೋಕ ಮತ್ತು ಪರಲೋಕದ ಸಂಬAಧವನ್ನು ಸ್ಥಾಪಿಸುವ ಕಡೆಗೆ ಗಮನ ಹರಿಸಿವೆ. ‘ಕಾಂತಾರ’ ಸಿನಿಮಾದ ಮೂಲಕ ಅಂತಸತ್ವವೂ ಇದೇ ಆಗಿದೆ. ಲೌಕಿಕ ಜಗತ್ತಿನಲ್ಲಿ ಹೆಜ್ಜೆಯೂರಿದ ನಾಯಕ ಶಿವ, ‘ಮಾಯಕ’ ಜಗತ್ತಿನಿಂದ ದೊರೆತ ‘ವರ’ದೊಂದಿಗೆ ಸಾಂಸ್ಕೃತಿಕ ನಾಯಕನಾಗಿ ರೂಪುಗೊಂಡಿದ್ದಾನೆ.
ತುಳುವರದ್ದು ಇಹಪರ ಲೋಕ ದೃಷ್ಟಿ. ತುಳುವರ ಚಿಂತನೆಯಲ್ಲಿ ಲೌಕಿಕ ಜಗತ್ತು ಕೇಂದ್ರ ಸ್ಥಾನದಲ್ಲಿದೆ. ತುಳುವರ ಸಂಸ್ಕೃತಿಯು ಜೀವಪರವಾದುದು. ತುಳುವರ ನಂಬಿಕೆಯAತೆ ದೇವರು, ಧರ್ಮ ಎಲ್ಲವೂ ಭೂಮಿಗೆ ಸಂಬಂಧ ಪಟ್ಟಿದೆ ಮತ್ತು ಭೂಮಿಯಲ್ಲೇ ಇದೆ. ತುಳುವರ ಲೋಕದೃಷ್ಟಿಯು ಅಲಕ್ಷಿತ ಸಮುದಾಯಗಳ ಚಿಂತನಕ್ರಮದ ಪ್ರಮುಖ ಮಾದರಿಯಾಗಿದೆ.
ತುಳುನಾಡಿನಲ್ಲಿ ಆರಾಧನೆಗೊಳ್ಳುವ ‘ಸಾಂಸ್ಕೃತಿಕ ವೀರ’ರು ‘ಮಾಯಕ’ದಲ್ಲಿ ಇದ್ದುಕೊಂಡು ಜನಪದರನ್ನು ರಕ್ಷಿಸುತ್ತಾರೆ ಎಂಬುದು ತುಳು ಸಂಸ್ಕೃತಿಯ ನಂಬಿಕೆಯಾಗಿದೆ. ತುಳುವರ ನಂಬಿಕೆಯಲ್ಲಿ ವರ ಮತ್ತು ಶಾಪ ಪ್ರಮುಖವಾಗಿದ್ದು, ಇದು ಲೋಕದ ಹಿತದೃಷ್ಟಿಯಿಂದ ಬಳಕೆಯಾಗುತ್ತದೆ. ವೈಯಕ್ತಿಕ ನೆಲೆಗಟ್ಟಿನಲ್ಲಿ ಬಳಕೆಯಾಗುವುದು ವಿರಳ. ಈ ಲೋಕದೃಷ್ಟಿಯನ್ನು ನಾವು ಕಾಂತಾರ ಸಿನಿಮಾದಲ್ಲಿ ಕಾಣಬಹುದು. ನಾಯಕ ಶಿವನನ್ನು ಸಾಂಪ್ರದಾಯಿಕ ವೀರನಂತೆ ಚಿತ್ರಿಸಲಾಗಿದೆ.
ಪಂಜುರ್ಲಿ- ಗುಳಿಗ:
ಬೆಳೆಗಳಿಗೆ ಕಾಡು ಹಂದಿಗಳಿಂದ ಆಗುವ ಹಾನಿಯನ್ನು ನಿವಾರಿಸಲು ಕಾಡು ಹಂದಿಯನ್ನು ‘ಪಂಜುರ್ಲಿ’ ಭೂತ (ದೈವ)ದ ಹೆಸರಿನಲ್ಲಿ ಆರಾಧನೆ ಮಾಡಲು ತೊಡಗಿರಬೇಕು. ಇದಕ್ಕೆ ನಿದರ್ಶನಗಳು ಪಾಡ್ದನಗಳಲ್ಲಿ ದೊರೆಯುತ್ತವೆ. ಪಂಜುರ್ಲಿಯನ್ನು ಕುಲದೇವತೆಯಾಗಿ ಆಚರಿಸುವುದಕ್ಕೆ ನಿದರ್ಶನಗಳಿವೆ. ಭೂತಸ್ಥಾನಗಳಲ್ಲಿ ಹಂದಿಯ ಮುಖವಾಡಗಳು ಕುಲದೇವತಾ ಚಿಹ್ನೆಯಾಗಿ ಹಾಗೂ ಘಂಟಾಮಣಿಯ ಹಿಡಿಯಲ್ಲಿಯೂ ಇರುತ್ತವೆ ಎಂದು ತುಳು ಸಂಸ್ಕೃತಿ ಸಂಶೋಧಕ, ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಅಧ್ಯಯನದಲ್ಲಿ ದಾಖಲಿಸಿದ್ದಾರೆ.
ಈಶ್ವರನಿಂದ ಜೀವಕಳೆ ಹೊಂದಿದ ಹಂದಿ ಭೂತ ಸ್ವರೂಪ ಹೊಂದಿದ್ದು, ‘ಕಾಡಿನಲ್ಲಿ ಹಂದಿಯಾಗಿ, ಊರಲ್ಲಿ ದೈವವಾಗು, ನೀರಿನಲ್ಲಿ ಮೀನಾಗು, ದಿಕ್ಕಿಗೊಂದು ಹೆಸರು ಕರೆಯಿಸಿಕೊಳ್ಳು, ಬೆಟ್ಟ-ಗದ್ದೆಗಳಲ್ಲಿ ಗುಡಿ, ಮನೆ- ಮನೆಗಳಲ್ಲಿ ಕೋಣೆ ನಿನಗೆ ಸಿಗಲಿ ದಶ ದಿಕ್ಕುಗಳಿಗೂ ಹೋಗು ಎಂದು ಈಶ್ವರ ವರ ನೀಡುತ್ತಾನೆ’ ಎಂದು ಅಮೃತಸೋಮೇಶ್ವರ ಅವರು ‘ತುಳು ಪಾಡ್ದನ ಸಂಪುಟ’(೧೯೯೭) ದಲ್ಲಿ ದಾಖಲಿಸಿದ್ದಾರೆ.
ತುಳುನಾಡಿನ ಸಂಸ್ಕೃತಿಯಲ್ಲಿ ಪಂಜುರ್ಲಿ ದೈವದಷ್ಟೇ ಪ್ರಮುಖವಾಗಿ ಆರಾಧಿಸುವ ದೈವ ಗುಳಿಗ. ಗುಳಿಗ ದೈವವು ‘ಕ್ಷೇತ್ರ ರಕ್ಷಣ ದೈವ’ ಎನ್ನಲಾಗುತ್ತದೆ. ದೇವರು-ದೈವ ಸೌಮ್ಯ ರೂಪದಲ್ಲಿದ್ದರೂ, ರಕ್ಷಣೆಗಾಗಿ ಉಗ್ರ ರೂಪ ತಾಳುವ ವಿಶಿಷ್ಟತೆಯನ್ನು ಗುಳಿಗ ದೈವ ಹೊಂದಿದೆ. ರಕ್ಷಣೆಗಾಗಿ ಗುಳಿಗ ಜೊತೆಗಿರುತ್ತಾನೆ ಎಂಬ ಉಲ್ಲೇಖದ ಸಂಭಾಷಣೆಯೂ ಸಿನಿಮಾದಲ್ಲಿ ಬರುತ್ತದೆ. ಗುಳಿಗ ದೈವವನ್ನು ಕಪ್ಪು ವರ್ಣದಿಂದ ಸಂಕೇತಿಸಲಾಗುತ್ತದೆ. ಸಿನಿಮಾದ ಕ್ಲೈಮ್ಯಾಕ್ಸ್ ಎನ್ನಲಾದ ಕೊನೆಯ ೨೦ ನಿಮಿಷಗಳಲ್ಲಿ ನಾಯಕ ನಟ ಶಿವ ತೋರುವ ಉಗ್ರ ಸ್ವರೂಪವು ಗುಳಿಗ ದೈವದ ಆರಾಧನ ವಿಧಾನದಲ್ಲಿ ಬರುವ ಮಾದರಿಯಲ್ಲಿದೆ. ಇದು ಒಟ್ಟಾರೆ ಸಿನಿಮಾದಲ್ಲಿ ಜನರನ್ನು ಸೆಳೆದ, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಹುಚರ್ಚೆಗೆ ಒಳಪಟ್ಟ ದೃಶ್ಯಾವಳಿ.
ಪಾರ್ವತಿ ಭೂ ಲೋಕ ಸಂಚಾರಕ್ಕೆ ಶಿವಗಣದಲ್ಲಿದ್ದ ಈ ಗುಳಿಗನನ್ನು ನಾವಿಕನನ್ನಾಗಿ ನೇಮಿಸುತ್ತಾಳೆ. ತುಳುನಾಡಿಗೆ ಬರುವಾಗ ಇಲ್ಲಿಯ ಪವಿತ್ರತೆಯನ್ನು ಕಂಡು ವಿವಿಧ ಸ್ಥಳಗಳಲ್ಲಿ ಲಿಂಗರೂಪಿಯಾಗಿ ಕೊನೆ ನಿಲ್ಲುತ್ತಾಳೆ. ಆವಾಗ ಸ್ವಾಮಿ ಭಕ್ತಿ ಗುಳಿಗನಿಗೆ ತಾನಿರುವ ಕಡೆಯಲ್ಲಿ ಕ್ಷೇತ್ರ ರಕ್ಷಕನಾಗಿ ನೀನು ನೆಲೆ ನಿಲ್ಲು ಎಂದು ಅಪ್ಪಣೆ ಮಾಡುತ್ತಾಳೆ. ಈ ಹಿನ್ನಲೆಯಲ್ಲೂ ದೇವಿಯ ಸನ್ನಿಧಿಯ ಕ್ಷೇತ್ರಪಾಲನನ್ನು ಕೂಡ ‘ಗುಳಿಗ’ ಎಂಬ ನಂಬಿಕೆ ಇದೆ ಎಂದು ಪುರಾಣ ಕತೆಗಳಲ್ಲಿ ತಿಳಿಸಲಾಗಿದೆ. ಸಿನಿಮಾದಲ್ಲೂ ಮಾತೃ ಸ್ವರೂಪಿಯಾದ ಭೂಮಿಯ ರಕ್ಷಣೆಯನ್ನು ಗುಳಿಗ ದೈವದ ಸ್ವರೂಪದಲ್ಲೇ ಬಿಂಬಿಸಲಾಗಿದೆ.
ಬೇಟೆ:
ತುಳುವರ ಪ್ರಮುಖ ಮನೋರಂಜನೆಯಲ್ಲಿ ಬೇಟೆಯೂ ಒಂದು. ಬೇಟೆಯು ಜನರ ಹಾಗೂ ಅವರ ಬೆಳೆಗಳ ರಕ್ಷಣೆಗೆ ಅನಿವಾರ್ಯವೂ ಆಗಿತ್ತು. ಮನೋರಂಜನೆಗಾಗಿ ತುಳುವರು ಬೇಟೆಯಾಡಿರುವ ವಿವರಗಳು ತುಳು ಜನಪದ ಸಾಹಿತ್ಯದಲ್ಲಿ ದಾಖಲಾಗಿವೆ. ಬೇಟೆಗೆ ಹೋಗುವಾಗ ತಮ್ಮ ನಂಬುಗೆಯ ದೈವವನ್ನು ಆರಾಧಿಸುವುದು, ನೆನೆಯುವುದ ಸಾಮಾನ್ಯ. ಬೇಟೆಯು ತುಳುವರ ಸಾಹಸ, ಪ್ರತಿಷ್ಠೆ, ಶೌರ್ಯತ್ವ, ಮನೋರಂಜನೆ, ಆಚರಣೆ, ಕೃಷಿ ರಕ್ಷಣೆಯ ಉದ್ದೇಶದಿಂದ ಬಳಕೆಯಾಗಿದೆ. ಪಂಜುರ್ಲಿ ಭೂತದ ವಿವಿಧ ಪಾಡ್ದನಗಳಲ್ಲಿ ಪಿಲಿ-ಪಂಜಿ ಕತೆಗಳಲ್ಲಿ ಬೇಟೆ ಹಾಗೂ ಬೇಟೆಯೊಳಗಿನ ತುಳುವರ ಮನೋಧರ್ಮ ದಾಖಲಾಗಿದೆ ಎಂದು ಸಂಶೋಧಕಿ ಡಾ.ರಾಜಶ್ರೀ ಅವರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ.
ಪಂಜುರ್ಲಿ ಹುಟ್ಟಿಗೆ ಕಾರಣವಾದ ವಿವರಗಳ ಪಾಡ್ದನಗಳಲ್ಲೂ ಬೇಟೆಯ ವಿವರಗಳು ದೊರೆಯುತ್ತವೆ ಎಂದು ‘ತುಳು ಜನಪದ ಸಾಹಿತ್ಯ’ (೧೯೮೫) ಕೃತಿಯಲ್ಲಿ ಸಂಶೋಧಕ, ವಿಶ್ರಾಂತ ಕುಲಪತಿ ಬಿ.ಎ.ವಿವೇಕ ರೈ ಅವರು ದಾಖಲಿಸಿದ್ದಾರೆ. ತುಳು ಜನಪದ ಸಾಹಿತ್ಯದಲ್ಲಿ ಬರುವ ‘ಈಶ್ವರನೇ ಬೇಟೆಗೆ ಬಂದಿದ್ದಾನೆ’ ಎನ್ನುವ ಪಾಡ್ದನಗಳಿಗೂ ಕಾಂತಾರಾದಲ್ಲಿ ನಾಯಕ ‘ಶಿವ’ ಬೇಟೆಯಾಡುವುದಕ್ಕೂ ಬಹಳ ಸಾಮ್ಯವಿದೆ.
ಅಳಿಯ ಸಂತಾನಕಟ್ಟಿನ ಹಿನ್ನೆಲೆ:
ಮೊದಲ ಕಾಲಘಟ್ಟದಲ್ಲಿ ನೆಮ್ಮದಿ ಅರಸಿ ಹೊರಟ ರಾಜನಿಗೆ ಪಂಜುರ್ಲಿಯ ದರ್ಶನವಾದ ಸಂದರ್ಭದಲ್ಲಿ ‘ತಂದೆ ತಲೆ ನೇವರಿಸಿದ ಹಾಗೆ, ಮಾವ ಮೈದಡವಿದ ಹಾಗೆ’ ಎಂಬ ಹಿನ್ನೆಲೆ ಧ್ವನಿ ಇದ್ದು, ಇದು ತುಳುನಾಡಿನ ಅಳಿಯಕಟ್ಟು ಸಂತಾನದ ಪ್ರತೀಕವಾಗಿದೆ. ತುಳು ರಾಜ್ಯವನ್ನು ಭೂತಾಳಪಾಂಡ್ಯ ಎಂಬ ರಾಜನು ಆಳಿದ್ದನು ಎಂದು ಜರ್ಮನ್ ಮಿಶನ್ ಪ್ರೆಸ್ ೧೮೫೭ರಲ್ಲಿ ಮುದ್ರಿಸಿದ ‘ಭೂತಾಳ ಪಾಂಡ್ಯನ ಅಳಿಯ ಸಂತಾನದ ಕಟ್ಟುಕಟ್ಟಳೆ’ ಕೃತಿಯಲ್ಲಿ ಇದೆ. ಭೂತಾಳ ಪಾಂಡ್ಯನ ರಾಜ್ಯಭಾರ ಕಾಲದಲ್ಲಿ ಕುಂಡೋದರದೈವದ (ಭೂತದ) ಅಣತಿಯಂತೆ ತುಳುನಾಡಿನ ಬ್ರಾಹ್ಮಣರನ್ನು ಹೊರತುಪಡಿಸಿ ಇತರ ತ್ರಿವರ್ಣದವರಿಗೆ ಮಕ್ಕಳ ಸಂತಾನಕ್ರಮವನ್ನು ತೊರೆದು ಅಳಿಯ ಸಂತಾನಕಟ್ಟನ್ನು ಅನುಸರಿಸಲು ರಾಜ ಶಾಸನ ಮಾಡಿ, ಕಟ್ಟುಕಟ್ಟಳೆಗಳನ್ನು ೧೬ ಬಳಿಗಳನ್ನು ನಿಯಮಿಸಿರುವ ಉಲ್ಲೇಖವಿದೆ. (ಬನ್ನಂಜೆ ಬಾಬು ಅಮೀನ್ -೨೦೧೦). ನಾಯಕ ಶಿವನ ಮೇಲೆ ಆತನ ತಾಯಿ ಕಮಲ ಹೊಂದಿರುವ ನಿಯಂತ್ರಣವು ತುಳುನಾಡಿನಲ್ಲಿರುವ ಮಾತೃಪ್ರಧಾನ ಸಂಸ್ಕೃತಿ ಹಾಗೂ ಪೂರಕ ಭೂತಾಳ ಪಾಂಡ್ಯನ ಕಥನ ಅಳಿಯಕಟ್ಟು ಸಂಸ್ಕೃತಿ ಪ್ರತೀಕವಾಗಿದೆ. ಅಳಿಯಕಟ್ಟು ಎಂಬುದು ಸ್ತ್ರೀಪ್ರಾತಿನಿಧ್ಯದ ಒಂದು ವ್ಯವಸ್ಥೆ. ಇದನ್ನು ಸಿನಿಮಾದಲ್ಲಿ ಕಮಲನ ರೂಪದಲ್ಲಿ ಅಭಿವ್ಯಕ್ತಿಸಲಾಗಿದೆ.
ನಾಟಿ ವೈದ್ಯ ಪದ್ಧತಿ:
ಕಾಂತಾರ ಸಿನಿಮಾದಲ್ಲಿ ಬಹು ಮೆಚ್ಚಿಗೆ ಪಡೆದ ದೃಶ್ಯಗಳ ಪೈಕಿ ಸುಂದರನು ಅರಣ್ಯಾಧಿಕಾರಿ ಮುರಳೀಧರ ಅವರಿಗೆ, ‘ಕಾಡಿನಲ್ಲಿ ಒಂದು ಸೊಪ್ಪು ಉಂಟು’ ಎಂದು ಹೇಳುವ ಮಾತಿನ ಚಿತ್ರಣ. ಇದು ತುಳುವರ ನಾಟಿ ವೈದ್ಯಕೀಯ ಪದ್ಧತಿಯ ಪ್ರತಿಬಿಂಬವಾಗಿದೆ. ತುಳುವ ಸಂಸ್ಕೃತಿಯ ಚಿಕಿತ್ಸಾ ಪದ್ಧತಿಯಲ್ಲಿ ಮೌಢ್ಯ ಕ್ರಮಗಳಿಗಿಂತ ವಿಭಿನ್ನವಾಗಿ ವೈಜ್ಞಾನಿಕ ಹಾಗೂ ಪರಿಸರ ಪೂರಕ ಕ್ರಮಗಳನ್ನು ಅನುಸರಿಸುವುದನ್ನು ಕಾಣಬಹುದು. ಅನಾರೋಗ್ಯ ನಿವಾರಣೆಗೆ ಕಾಡಲ್ಲಿರುವ ಸಸ್ಯೋತ್ಪನ್ನಗಳ ತಂದು ಔಷಧಿ ತಯಾರಿಸಿ ನೀಡುತ್ತಾರೆ. ಈ ರೀತಿಯ ವೃತ್ತಿ ನಿರ್ವಹಿಸುವವರನ್ನು ನಾಟಿ ವೈದ್ಯರು ಎನ್ನುತ್ತಾರೆ. ಸಿನಿಮಾದಲ್ಲಿ ತಾಯಿ ಕಮಲ ನಾಟಿ ವೈದ್ಯವನ್ನು ಅರಿತಿರುವುದು ವ್ಯಕ್ತವಾಗಿದೆ.
ಕೆಲಸದ ಪರಿಕಲ್ಪನೆ:
ಪ್ರಾಚೀನ ಕಾಲದಿಂದಲೂ ತುಳುನಾಡಿನ ಹೆಚ್ಚಿನ ಜನಾಂಗಗಳು ಒಂದೊಂದು ನಿರ್ದಿಷ್ಟ ಕಸುಬನ್ನು ಮಾಡುವ ಸಾಮಾಜಿಕ ಗುಂಪುಗಳಾಗಿ ಕಾಣಿಸಿಕೊಂಡಿವೆ. ಇದೇ ಜನಾಂಗ ಮುಂದೆ ಜಾತಿ ರೂಪದಲ್ಲಿ ಕಾಣಿಸಿಕೊಂಡಿವೆ. ಈ ಸಮುದಾಯದ ಸಾಂಸ್ಕೃತಿಕ ವೀರರ ಕಥನವನ್ನು ಪಾಡ್ದನಗಳು ಹೇಳಿವೆ. ತುಳು ಸಂಸ್ಕೃತಿಯಲ್ಲಿ ಕುಲಕಸುಬು ಆಧಾರಿತ ಸಮುದಾಯಗಳು ಇತ್ತು. ಇದನ್ನು ನಾವು ನಾಯಕ ಶಿವ ಹಾಗೂ ಆತನ ತಾಯಿ ಕಮಲ ಪಾತ್ರಗಳ ಮೂಲಕ ಅರಿಯಬಹುದಾಗಿದೆ. ತಾಯಿ ಕಮಲ (ಮಾನಸಿ ಸುಧೀರ್) ಭೂತ ಪಾತ್ರಧಾರಿ ನಿರ್ವಹಿಸುವಂತೆ ಹಿರಿಯ ಮಗನಾದ ಶಿವನಿಗೆ ಒತ್ತಾಯಿಸುವುದು. ಪಂಜುರ್ಲಿ ದೈವಾರಾಧನೆ ಮಾಡುವ ಕಾರಣ, ಹಂದಿ ಬೇಟೆಗೆ ವಿರೋಧಿಸುವುದನ್ನು ಕಾಣಬಹುದು. ಆದರೆ, ಆಧುನಿಕ ವ್ಯಕ್ತಿತ್ವದ ಅಥವಾ ಪ್ರತಿರೋಧ ನಾಯಕನಾಗಿರುವ ಶಿವನು ಆರಂಭದಲ್ಲಿ ಇದನ್ನು ನಿರಾಕರಿಸುತ್ತಾನೆ. ಕೊನೆಯಲ್ಲಿ ತಮ್ಮವರ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಒಪ್ಪಿಕೊಳ್ಳುತ್ತಾನೆ.
ತುಳು ಸಂಸ್ಕೃತಿಯ ಜನಪದ ಕ್ರೀಡೆಗಳು:
ತುಳು ಸಂಸ್ಕೃತಿಯ ವಿಶೇಷವಾದ ಒಂದು ಸ್ಪರ್ಧೆ ಎಂದರೆ ಪಂಥದಲ್ಲಿ ಕೋಣಗಳನ್ನು ಓಡಿಸುವುದು. ಗದ್ದೆ ಬೇಸಾಯದ ಮುಕ್ತಾಯದ ಬಳಿಕ ಈ ಸ್ಪರ್ಧೆಯನ್ನು ನಾವು ಕಾಣುತ್ತೇವೆ. ಕೋಣದ ಓಟಕ್ಕೆ ಎರಡು ಕರೆ ಮಾಡಿರುತ್ತಾರೆ. ಅವುಗಳಲ್ಲಿ ಎರಡು ಜೋಡಿ ಕೋಣಗಳು ಓಡುತ್ತವೆ. ಜೋಡಿ ಕೋಣಗಳನ್ನು ಕಟ್ಟಿ ಗದ್ದೆ ಉಳುಮೆ ಮಾಡುವ ಮಾದರಿಯಲ್ಲೇ, ಕಂಬಳದ ಕರೆಯಲ್ಲಿ ಕೋಣವನ್ನು ಓಡಿಸಲಾಗುತ್ತದೆ. ಮೊದಲು ಗುರಿ ತಲುಪಿದ ಕೋಣಕ್ಕೆ ಪ್ರಶಸ್ತಿ ನೀಡಲಾಗುತ್ತದೆ. ತುಳುನಾಡಿನ ಪ್ರಸಿದ್ಧ ಜನಪದ ಸ್ಪರ್ಧೆ ಕೋಳಿ ಅಂಕ. ಈ ಪಂದ್ಯಕ್ಕಾಗಿಯೇ ಒಳ್ಳೆಯ ಗರ್ವದ ಜಾತಿ ಹುಂಜಗಳನ್ನು ಸಾಕುತ್ತಾರೆ. ಸ್ಪರ್ಧಾ ಕಣದಲ್ಲಿ ಅವುಗಳ ಕಾಲಿಗೆ ಬಾಲ್ (ಹರಿತದ ಸಣ್ಣ ಕತ್ತಿ) ಕಟ್ಟಿ ಎದುರು ಬದುರಾಗಿ ಬಿಡುತ್ತಾರೆ. ಅವುಗಳ ಕಾದಾಟವೇ ‘ಕೋಳಿ ಅಂಕ’ ಅಥವಾ ‘ಕೋರಿ ಕಟ್ಟ’ ಎಂದು ಕರೆಯುತ್ತಾರೆ. ಈ ಕೋಳಿ ಕಟ್ಟಕ್ಕೆ ಹೊರಡುವ ವಿಧಾನ ಮತ್ತಿತರ ಕ್ರಮಗಳಲ್ಲಿ ತುಳು ಸಂಸ್ಕೃತಿ ಹಾಸು ಹೊಕ್ಕಿದ್ದು, ಸಿನಿಮಾವು ಚಿತ್ರಿಸಿದೆ.
‘ಕಾಯಿ ಕುಟ್ಟುವುದು’ ತುಳು ನಾಡಿನ ಇನ್ನೊಂದು ಜನಪದ ಕ್ರೀಡೆ. ಇಬ್ಬರು ವ್ಯಕ್ತಿಗಳು ಎದುರು ಬದುರಾಗಿ ತಮ್ಮ ಒಂದೊಂದು ಮೊಣಕಾಲನ್ನು ನೆಲಕ್ಕೂರಿ ಕುಳಿತು ಸುಲಿಯಲ್ಪಟ್ಟ ಒಂದೊAದು ತೆಂಗಿನಕಾಯಿಯನ್ನು ಬಲಗೈಯಲ್ಲಿ ನೆಲಕ್ಕೆ ಒತ್ತಿಟ್ಟು, ಜಾರಿಸಿ, ಒಂದನ್ನು ಇನ್ನೊಂದರಿAದ ಕುಟ್ಟಿ ಒಡೆಯುವ ಸ್ಪರ್ಧೆಯೇ ಕಾಯಿ ಕುಟ್ಟುವುದು. ಹೀಗೆ ಕುಟ್ಟುವಾಗ ಒಡೆಯದೇ ಉಳಿದ ಕಾಯಿಯ ಒಡೆಯನೇ ವೀರ ಎನಿಸಿಕೊಳ್ಳುತ್ತಾನೆ. ತುಳು ಸಂಸ್ಕೃತಿಯ ಅವಿಭಾಜ್ಯ ಅಂಗವಾಗದ ಕಂಬಳ, ಕೋಳಿ ಅಂಕ ಹಾಗೂ ಕಾಯಿ ಕುಟ್ಟುವ ಜನಪದ ಕ್ರೀಡೆಗಳನ್ನು ಕಾಂತಾರ ಸಿನಿಮಾದಲ್ಲಿ ಮನೋಜ್ಞವಾಗಿ ಬಿಂಬಿಸಲಾಗಿದೆ. ಕ್ರೀಡಾ ಸಾಮರ್ಥ್ಯವು ಪ್ರಮುಖವಾಗಿ ದೈಹಿಕ ಬಲದ ಪ್ರತೀಕವಾಗಿದ್ದು, ನಾಯಕ ಶಿವನ ದೈಹಿಕ ತಾಕತ್ತನ್ನು ಕಂಬಳದ ಮೂಲಕವೇ ಪರಿಚಯಿಸಲಾಗಿದೆ. ಭಾರತೀಯ ಸಿನಿಮಾಗಳಲ್ಲಿ ‘ಹಿರೋ’ ಎಂದರೆ ತಾಕತ್ತಿನ ಪ್ರದರ್ಶನ ಎನ್ನುವಂತೆಯೇ ಬಿಂಬಿಸಲಾಗುತ್ತದೆ. ಅದಕ್ಕೆ ಈ ಕ್ರೀಡೆಗಳೂ ಪೂರಕ ಎನಿಸುವಂತಿವೆ.
ಸಾಂಸ್ಕೃತಿಕ ಕಲೆ ಮತ್ತು ಕಲಾಕೃತಿಗಳು:
ಧಾರ್ಮಿಕ ರಂಗಭೂಮಿಯಾಗಿರುವ ಕೋಲವನ್ನು, ಸಂಘರ್ಷದ ಆಶಯಗಳಿರುವ ಕಂಬಳ ಮತ್ತು ಕೋಳಿ ಅಂಕವನ್ನು, ತುಳು ಸಂಸ್ಕೃತಿ ಮತ್ತು ಬದುಕನ್ನು ಕಟ್ಟಿಕೊಡುವ ಜಾತ್ರೆ, ಆಹಾರ ಪದ್ಧತಿ, ವೃತ್ತಿಪರಂಪರೆಗಳನ್ನು, ಹಳ್ಳಿಯ ಪುಂಡುಪೋಕರಿಗಳ ಹೊಡಿಬಡಿ ಜಗಳವನ್ನು ಹಾಸ್ಯವನ್ನು ಸನ್ನಿವೇಶಗಳ ಭಾಗವಗಿಯೇ ತರಲಾಗಿದೆ. ತನ್ನ ರಹಸ್ಯವನ್ನು ಇನ್ನೂ ಪೂರ್ತಿಯಾಗಿ ಬಿಟ್ಟುಕೊಡದ ಭೂತಾರಾಧನೆ, ಶಕ್ತಿಯುತವಾದ ಪ್ರತಿಮೆ/ ರೂಪಕಗಳಾಗಿರುವ ಕಂಬಳ, ಕೋಳಿ ಅಂಕ, ಜಾತ್ರೆ ಇತ್ಯಾದಿ ಸಾಂಸ್ಕೃತಿಕ ಕಲಾಪಗಳೇ ಈ ಸಿನಿಮಾದ ಸಿರಿವಂತಿಕೆಯಾಗಿದೆ.
ತುಳುವರ ಉಡುಗೆ-ತೊಡಿಗೆಗಳಲ್ಲೂ ಅನನ್ಯತೆ ಇದೆ. ಕಾಂತಾರ ಸಿನಿಮಾದಲ್ಲಿ ಮೂರು ಕಾಲಘಟ್ಟಕ್ಕೆ ಅನುಗುಣವಾಗಿ ತುಳುವರ ಉಡುಗೆ ತೊಡಿಗೆಗಳನ್ನು ಗಮನಿಸಬಹುದಾಗಿದೆ. ಮೊದಲ ಕಾಲಘಟ್ಟದಲ್ಲಿ ರವಿಕೆಯು ತಳಸಮುದಾಯದ ಮಹಿಳೆಯರ ಉಡುಗೆಯ ಭಾಗವಾಗಿಲ್ಲ. ಪುರುಷರು ಅಂಗಿ ಧರಿಸಿಲ್ಲ. ಅಲ್ಲದೇ, ದೈವಾರಾಧನೆ ಸಂದರ್ಭ ಸುತ್ತಮ ಬಿಳಿಮುಂಡು, ಸೊಂಟಕ್ಕೆ ಸುತ್ತುವ ಕೆಂಪು ಬಟ್ಟೆ ಇತ್ಯಾದಿಗಳು ನೆಲದ ಸಂಸ್ಕೃತಿಯ ಸಂಕೇತಗಳಾಗಿವೆ. ‘ಗುತ್ತು’ (ಪಟೇಲ) ಸೇರಿದಂತೆ ಉಳ್ಳವರ ಮನೆತನದವರು ತಲೆಗೆ ಸುತ್ತುವ ಮುಂಡಾಸು, ಮಹಿಳೆಯರ ಕೊರಳ ಹಾರಗಳು, ಮುಟ್ಟಾಳೆ ಇತ್ಯಾದಿಗಳನ್ನು ಕಾಣಬಹುದು. ಅಲ್ಲದೇ, ಆಯಾ ಧರ್ಮ ಹಾಗೂ ಜಾತಿಗೆ ಅನುಗುಣವಾಗಿ ಉಡುಗೆಯೂ ವಿಭಿನ್ನವಾಗಿರುತ್ತಿತ್ತು. ತುಳುನಾಡಿನಲ್ಲಿ ಹೆಚ್ಚಾಗಿ ಬಿಳಿ ಬಣ್ಣದ ವಸ್ತçಗಳನ್ನು ಬಳಸುತ್ತಾರೆ. ಇದು ಇಲ್ಲಿನ ಹವಾಗುಣ, ಶುಭ್ರತೆ, ಜೀವನ ಮೌಲ್ಯದ ಸಂಕೇತವಾಗಿದೆ. ಉಡುಗೆ ತೊಡುಗೆಯು ಸಂಸ್ಕೃತಿಯ ಬಹುಮುಖ್ಯ ಚಿಹ್ನೆಯಾಗಿದೆ. ಇದನ್ನು ‘ಕಾಂತಾರ’ದಲ್ಲಿ ದೃಶ್ಯರೂಪಕದಂತೆ ಬಳಸಲಾಗಿದೆ.
ಗಗ್ಗರ, ತೂಟೆ, ಪಿಂಗಾರದ ರೂಪಕ:
ಸಾಹಿತ್ಯದಲ್ಲಿ ರೂಪಕದಂತೆ ಸಿನಿಮಾ ಭಾಷೆಯಲ್ಲಿ ದೃಶ್ಯರೂಪಕವನ್ನು ಬಳಸಲಾಗುತ್ತದೆ. ಇವುಗಳನ್ನು ದೃಶ್ಯ, ಬಣ್ಣ, ಶಬ್ದ ಇತ್ಯಾದಿಗಳ ಮೂಲಕ ಬಿಂಬಿಸಲಾಗುತ್ತದೆ. ಕಾಂತಾರಾದಲ್ಲಿನ ಗಗ್ಗರದ ಧ್ವನಿ, ತೂಟೆಯ ಬೆಳಕು, ಕಲ್ಲಿನ ಆರಾಧನೆ, ಪಿಂಗಾರ ನೀಡುವುದೆಲ್ಲ ತುಳು ಸಂಸ್ಕೃತಿಯ ರೂಪಕಗಳಾಗಿವೆ. ಗಗ್ಗರದ ಶಬ್ದ ಅದರಲ್ಲಿ ಪ್ರಮುಖವಾದುದು. ಹಂದಿ ಮತ್ತು ಗಗ್ಗರದ ಧ್ವನಿಯ ಮೂಲಕ ಬೆಚ್ಚಿಬೀಳಿಸುವ ರೀತಿಯಲ್ಲಿ ಭೂತ ಪ್ರತ್ಯಕ್ಷವಾಗುವುದನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಪಾಡ್ದನ, ಸಂದಿ ಹಾಗೂ ಮದಿಪು ತುಳು ಮೌಖಿಕ ಸಂಸ್ಕೃತಿಯ ಪ್ರತೀಕ. ಮೊದಲ ಕಾಲಘಟ್ಟದಲ್ಲಿ ಅರಸನಿಗೆ ಅಭಯ ನೀಡುವುದು, ಪಂಜುರ್ಲಿ ಪಾತ್ರಧಾರಿ ನೀಡುವ ಅಭಯ, ಭೂತಾರಾಧನೆ ಸಂದರ್ಭದಲ್ಲಿ ಉಲಿಯುವ ಪಾಡ್ದನಗಳೆಲ್ಲವೂ ತುಳು ಸಂಸ್ಕೃತಿಯ ರೂಪಕವಾಗಿ ಬಳಕೆಯಾಗಿವೆ. ಉಳಿದಂತೆ ಗಂಗಸರ (ಶರಾಬು), ಬೀಡಿ, ಗರ್ನಾಲ್, ಗೋಳಿಸೋಡ, ಪಂಜಿ ಕಜಿಪು, ಮೀನು ಇತ್ಯಾದಿಗಳು ತುಳು ಸಾಂಸ್ಕೃತಿಕ ಜೀವನದ ಭಾಗವಾಗಿದ್ದು, ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಇದರೊಂದಿಗೆ ತುಳುವರ ಜೀವನಾವರ್ತನ ಆಚರಣೆಗಳು, ಸಾಮಾಜಿಕ ಆಚರಣೆಗಳನ್ನೂ ಸೂಕ್ಷö್ಮವಾಗಿ ಪ್ರದರ್ಶಿಸಲಾಗಿದೆ.
ವಿವಾದ:
ಕಾಂತಾರದ ಆಶಯಗೀತೆಯಲ್ಲಿ ಪಂಜುರ್ಲಿಯನ್ನು ವರಾಹವತಾರ ಎಂಬಂತೆ ಉಲ್ಲೇಖಿಸಿದ್ದಾರೆ ಎಂಬುದು ಒಂದು ಆಕ್ಷೇಪ. ವಾಸ್ತವವಾಗಿ ಹಾಡಲ್ಲಿ ಇರುವುದು ವರಾಹರೂಪಂ ಎಂದು. ವರಾಹವತಾರಂ.... ಎಂದು ಹೇಳಿಲ್ಲ. ಹಂದಿಯರೂಪದ ಪಂಜುರ್ಲಿ. ಇದು ಪಾಡ್ದನಕ್ಕೆ ಅನುಸಾರವಾಗಿಯೇ ಇದೆ. ಹಾಡನ್ನು ಸಂಸ್ಕೃತ ಸ್ತೂತ್ರದ ಹಾಗೆ, ಶಾಸ್ತ್ರೀಯ ರಾಗ ಸಂಯೋಜನೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ ಎಂಬುದು ಇನ್ನೊಂದು ಆಕ್ಷೇಪ. ಭೂತಾರಾಧನೆಯ ಸಂಸ್ಕೃತೀಕರಣ, ವೈದಿಕೀಕರಣ ಅನೇಕ ವಿನ್ಯಾಸಗಳಲ್ಲಿ ಹಲವು ವರ್ಷಗಳಲ್ಲಿ ನಡೆಯುತ್ತಾ ಬಂದಿದೆ ಎಂದು ಉಲ್ಲೇಖಿಸುತ್ತಾರೆ ಕರ್ನಾಟಕ ಜನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ. ಚಿನ್ನಪ್ಪಗೌಡ.
ಉಪಸಂಹಾರ:
‘ಕಾಂತಾರ’ವು ಉದ್ದೇಶಿತ ವಿಷಯದ ಸಮರ್ಥ ನಿರ್ವಹಣೆ, ತುಳುತನದ ಸಾಂಸ್ಕೃತಿಕ ಸಿರಿವಂತಿಕೆಯ ಕನ್ನಡ ಸಿನಿಮಾ, ಒಳ್ಳೆಯ ಸಿನಿಮಾಕ್ಕೆ ಭಾಷೆಯ ನಿರ್ಬಂಧವಿಲ್ಲ ಎನ್ನುತ್ತಾರೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ. ಚಿನ್ನಪ್ಪ ಗೌಡ. ಹೀಗಾಗಿ ತುಳು ಸಂಸ್ಕೃತಿಯಯ ಕಥನವೊಂದು ಮೂಲತಃ ಕನ್ನಡ ಹಾಗೂ ಇತರ ಭಾಷೆಗಳಲ್ಲಿ ಸಾಕಾರಗೊಂಡಿದೆ. ಸ್ಥಳೀಯವಾಗಿ ಕರೆಯಲ್ಪಡುವ ಮೇಲ್ವರ್ಗ, ಉಳ್ಳವರು ಅಥವಾ ಭೂಮಾಲೀಕರಿಗಿಂತ ಪ್ರಜಾಪ್ರಭುತ್ವದಲ್ಲಿರುವ ಅರಣ್ಯ ಇಲಾಖೆಯ ಉದ್ದೇಶ ಹಾಗೂ ನಿಲುವು ಕಾಡು ಮತ್ತು ಕಾಡಿನಲ್ಲಿನ ಆದಿವಾಸಿ ಜನರ ಪರವಾಗಿದೆ ಎಂಬ ಸಂದೇಶ ಸಿನಿಮಾದಲ್ಲಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರದರ್ಶಿಸುವ ಅಥವಾ ಅನುಷ್ಠಾನಗೊಳಿಸುವ ಹಲವಾರು ಕ್ರಮಗಳು ಮನುಷ್ಯ ವಿರೋಧಿ ಎಂಬಂತೆ ಕಂಡುಬಂದರೂ, ಮೂಲದಲ್ಲಿ ನೆಲದ ಮೂಲ ನಿವಾಸಿಗಳಂತೆಯೇ ಕಾಡು ರಕ್ಷಣೆಯ ಆಶಯವನ್ನು ಅರಣ್ಯ ಇಲಾಖೆ ಹಾಗೂ ಇಲ್ಲಿನ ಆದಿವಾಸಿಗಳು ಹೊಂದಿದ್ದಾರೆ ಎಂಬ ಸಂದೇಶವು ಸಿನಿಮಾದಲ್ಲಿ ಸೂಚ್ಯವಾಗಿದೆ. ಇದು ನೆಲದ ಸಂಸ್ಕೃತಿಯ ಉಳಿವಿಗೂ ಕಾರಣವಾಗುತ್ತದೆ.
ನೆಲಸಂಬಂಧೀ ಪಲ್ಲಟಗಳನ್ನು ಕಾಂತಾರ ಒಂದು ಮಿತಿಯೊಳಗೆ ಕಲಾತ್ಮಕವಾಗಿ ದಾಖಲಿಸುವ ಪ್ರಯತ್ನವನ್ನು ಮಾಡಿದೆ. ಭೂತದ ಪರಿಕಲ್ಪನೆಯಲ್ಲಿ ಬಹಳ ವಿಶೇಷವಾಗಿ ಇರುವುದು ಅದರ ನಿಗೂಢತೆ. ಈ ನಿಗೂಢತೆ, ಗೋಚರ- ಅಗೋಚರ ದ್ವಂದ್ವ, ಮಾಯಕದಲ್ಲಿ ಇದ್ದುಕೊಂಡೇ ತುಳುವರ ನೆರವಿಗೆ ಬರುವ ಜೋಗದ ಜಗತ್ತು, ಪ್ರತಿಭಟನೆ ಮತ್ತು ಹೋರಾಟದ ನೆಲೆಗಳು ಇವು ಕಾಂತಾರ ಸಿನಿಮಾವನ್ನು ರೂಪಿಸಿದ ಅಂಶಗಳಾಗಿವೆ.
ತುಳು ಸಂಸ್ಕೃತಿಯ ಅಳಿಯಕಟ್ಟು, ಕಂಬಳ, ಕೋಳಿ ಅಂಕ, ಉಡುಗೆ ತೊಡುಗೆ ಇತ್ಯಾದಿ ಮೂಲಕ ಕಾಂತಾರವು ಅಪ್ಪಟ ತುಳು ಸಂಸ್ಕೃತಿಯ ಅಭಿವ್ಯಕ್ತಿಯಾಗಿದೆ. ಸಿನಿಮಾದ ಭಾಷೆ, ವ್ಯಾಕರಣ, ಕಮರ್ಷಿಯಲ್ ಆಯಾಮ ಮತ್ತು ಒಟ್ಟು ನಿರ್ಮಾಣವು ಬಂಡವಾಳ, ವಿತರಣೆ ಮತ್ತು ಮಾರುಕಟ್ಟೆಯ ಒತ್ತಡಗಳ ನಡುವೆ ತುಳು ಸಂಸ್ಕೃತಿಯನ್ನು ಯಶಸ್ವಿಯಾಗಿ ಕಾಂತಾರ ಬಿಂಬಿಸಿದೆ. ಸಿನಿಮಾದ ಹೆಸರು ‘ಕಾಂತಾರ’ ಸೂಚಿಸುವ ‘ನಿಗೂಢ ಕಾಡು’ ಎಂಬರ್ಥವು ಈ ನಿಟ್ಟಿನಲ್ಲಿ ಅಪ್ಯಾಯಮಾನವಾಗಿದೆ.
ಪರಾಮರ್ಶನ ಗ್ರಂಥಗಳು:
• ಅಭಯಸಿಂಹ (೨೦೦೯). ಕನ್ನಡಚಿತ್ರರಂಗಕ್ಕೆ ತುಳುನಾಡಿನಕೊಡುಗೆ, ಕೊಡಿಪು. ಉಜಿರೆ: ಸಂಘಟನಾಸಮಿತಿ, ವಿಶ್ವ ತುಳುಸಮ್ಮೆಳನೊ ೨೦೦೯
• ಅಮೃತಸೋಮೇಶ್ವರ (೨೦೦೯). ತುಳುಸಂಸ್ಕೃತಿಯ ಕೆಲವು ಒಳನೋಟಗಳು, ಕೊಡಿಪು. ಉಜಿರೆ: ಸ್ವಾಗತ ಸಮಿತಿ, ವಿಶ್ವ ತುಳು ಸಮ್ಮೆಳನೊ ೨೦೦೯
• ಅರವಿಂದ ಬಿಜೈ(೨೦೧೬). ತುಳು ಸಿನಿಮಾ: ಒಂದುಅಧ್ಯಯನ. ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
• ಬಿ.ವೈ.ಕೃಷ್ಣಮೂರ್ತಿ (೨೦೧೧). ಕನ್ನಡ ಚಲನಚಿತ್ರರಂಗ–ಇತಿಹಾಸ, ಪ್ರವೃತ್ತಿಮತ್ತುಸಮಸ್ಯೆಗಳ ಒಂದು ಸೂಕ್ಷ್ಮ ಅವಲೋಕನ. ಪಿಎಚ್‌ಡಿಗಾಗಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧ.
• ಎಸ್.ಕೃಷ್ಣಯ್ಯ (೨೦೦೯). ತಂತ್ರಜ್ಞಾನ ಮತ್ತು ತುಳುಭಾಷೆ, ಕೊಡಿಪು. ಉಜಿರೆ: ಸಂಘಟನಾ ಸಮಿತಿ, ವಿಶ್ವ ತುಳುಸಮ್ಮೆಳನೊ.
• ಗಂಗಾಧರ ಮೊದಲಿಯಾರ್ (೧೯೯೮). ಕನ್ನಡ ಸಿನಿಮಾಇತಿಹಾಸದ ಪುಟಗಳಲ್ಲಿ. ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ
• ತಮ್ಮ ಲಕ್ಷ್ಮಣ (೨೦೧೫). ತುಳು ಭಾಷೆಯ ಸುವರ್ಣ ಚಲನಚಿತ್ರಗಳು. ಬೆಂಗಳೂರು: ಕರ್ನಾಟಕ ಚಲನಚಿತ್ರಅಕಾಡೆಮಿ
• ದಾಮೋದರ ಎನ್.ಶೆಟ್ಟಿ ಮತ್ತುಕುಮಾರ್‌ರತ್ನ ಎನ್. (೨೦೦೬). ಚಿತ್ರಭಾರತಿ–೩೫, ಮಂಗಳೂರು: ಚಿತ್ರಭಾರತಿ
• ಎಚ್.ಎನ್.ನರಹರಿರಾವ್ (೨೦೧೧). ಚಲನಚಿತ್ರಸಂಸ್ಕೃತಿ. ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ
• ಪಾಲ್ತಾಡಿ ರಾಮಕೃಷ್ಣಆಚಾರ್ (೨೦೦೮). ತುಳುಸಂಸ್ಕೃತಿದ ಪೊಲಬು. ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
• ಪಾಲ್ತಾಡಿ ರಾಮಕೃಷ್ಣಆಚಾರ್ (೨೦೦೮). ಕರಾವಳಿ ಕರ್ನಾಟಕದ ಜಾನಪದ ಸಂಸ್ಕೃತಿ, ಕರಾವಳಿ ಜಾನಪದ, ೭೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉಡುಪಿ
• ಜಿ. ಪ್ರಶಾಂತ ನಾಯಕ (೨೦೦೯). ಕನ್ನಡ ಸಿನಿಮಾಲೋಕ. ಮೈಸೂರುÀ: ರಚನಾ ಪ್ರಕಾಶನ, ಕುವೆಂಪು ನಗರ
• ಕೆ. ಮೋಹನ ಕೃಷ್ಣರೈ (೨೦೦೭). ತುಳು ನಾಡಿನ ಭೌಗೋಳಿಕ ಎಲ್ಲೆ ಕಟ್ಟುಗಳು– ತುಳುನಾಡು ಇತಿಹಾಸ. ಹಂಪಿ: ಪ್ರಸಾರಾಂಗ, ಹಂಪಿ ಕನ್ನಡ ವಿಶ್ವವಿದ್ಯಾಲಯ
• ಲೋಕೇಶ್ ಕಾಯರ್ಗ(೧೯೯೫). ತುಳುಚಿತ್ರರಂಗ ಒಂದು ಅಧ್ಯಯನ. ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂಪರ್ಕ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ನಡೆಸಿದ ಸಂಶೋಧನಾ ಅಧ್ಯಯನ
• ಕೆ. ಚಿನ್ನಪ್ಪ ಗೌಡ (೨೦೦೩). ಸಂಸ್ಕೃತಿ ಸಿರಿ, ಮದಿಪು ಪ್ರಕಾಶನ, ಮಂಗಳೂರು
• ಚಂದ್ರಶೇಖರ ದಾಮ್ಲೆ(೨೦೧೩). ಕರಾವಳಿಯ ಜಾತ್ರೆಗಳು, ಉತ್ಸವಗಳು, ಕರಾವಳಿ ಕರ್ನಾಟಕ, ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ೨೦೧೩ ಸಂಪುಟ, ಮೂಡುಬಿದಿರೆ
• ಡಾ.ಕೆ.ವಿ. ಜಲಜಾಕ್ಷಿ (೨೦೧೩). ತುಳು ಭಾಷೆ ಸಾಹಿತ್ಯ ಸಂಪ್ರದಾಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
• ಕೆ.ವಿ. ಸುಬ್ಬಣ್ಣ ಮತ್ತುಅಕ್ಷರ (೧೯೮೧). ಸಿನಿಮಾದ ಯಂತ್ರಭಾಷೆ. ಸಾಗರ: ಅಕ್ಷರಪ್ರಕಾಶನ, ಹೆಗ್ಗೋಡು
• ಹೇಮಶ್ರೀ (೨೦೦೭). ಚಲನಚಿತ್ರ–ಮಾಧ್ಯಮಗಳಲ್ಲಿ ತುಳು, ತುಳು ಸಾಹಿತ್ಯ ಚರಿತ್ರೆ. ಹಂಪಿ: ಪ್ರಸಾರಾಂಗ, ಹಂಪಿ ಕನ್ನಡ ವಿಶ್ವವಿದ್ಯಾಲಯ
• ಹೇಮಶ್ರೀ (೨೦೦೯). ತುಳುಚಿತ್ರರಂಗ: ಹೆಜ್ಜೆ ಗುರುತುಗಳು, ಕೊಡಿಪು. ಉಜಿರೆ: ಸಂಘಟನಾಸಮಿತಿ, ವಿಶ್ವ ತುಳುಸಮ್ಮೆಳನೊ ೨೦೦೯
• ಡಾ. ಹಂಪೇಶ ಕೆ.ಎಸ್. (೨೦೦೮). ತುಳು ಸಿನಿಮಾದ ಪ್ರಸ್ತುತತೆ. ಶೋಧ. ಉಜಿರೆ: ಡಾ.ಹಾಮಾನಾ ಸಂಶೋಧನಾ ಕೇಂದ್ರ (ಜುಲೈ)
ಪ್ರಮುಖ ಪದ: ಕಾಂತಾರ, ತುಳು ಸಂಸ್ಕೃತಿ, ಕಂಬಳ, ಬೇಟೆ, ಜನಪದ


Comments