top of page

ಯಕ್ಷಗಾನದ ಮೇಲೆ ಸಿನೆಮಾ ಮಾಧ್ಯಮದ ಪ್ರಭಾವ: ಒಂದು ಅಧ್ಯಯನ

ಡಾ.ಈಶ್ವರಚಂದ್ರ ಬಿ.ಜಿ.

ಸಂಶೋಧನಾ ವಿದ್ಯಾರ್ಥಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,

ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-೫೭೭೪೫೧, ಶಿವಮೊಗ್ಗ.

ಡಾ.ಸತೀಶ್ ಕುಮಾರ್

ಸಹ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,

ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-೫೭೭೪೫೧, ಶಿವಮೊಗ್ಗ.


ಸಾರಾಂಶ

ಯಕ್ಷಗಾನ ಮತ್ತು ಸಿನೆಮಾ ಎರಡೂ ಪ್ರಮುಖ ಮಾಧ್ಯಮಗಳು. ಕರ್ನಾಟಕದ ಶ್ರೇಷ್ಠ ಕಲೆಯಾದ ಯಕ್ಷಗಾನ ಒಂದು

ಸಾಂಪ್ರದಾಯಿಕ ಮಾಧ್ಯಮವಾದರೆ, ಸಿನೆಮಾ ಆಧುನಿಕ ಮಾಧ್ಯಮವಾಗಿ ಪ್ರಸಿದಿ ಪಡೆದಿದೆ. ಸಿನೆಮಾದ ವ್ಯಾಪ್ತಿ ಜಗತ್ತಿನಲ್ಲಿ ಅತ್ಯಂತ ವಿಶಾಲವಾದದ್ದಾದರೆ, ಯಕ್ಷಗಾನದ ವ್ಯಾಪ್ತಿ ಒಂದು ಪ್ರದೇಶದಲ್ಲಿ ನಿರ್ದಿಷ್ಟ ವರ್ಗವನ್ನು ಪ್ರಭಾವಿಸುವಂಥದ್ದು. ಆದರೆ ಎರಡೂ ಮಾಧ್ಯಮಗಳು ಸೃಷ್ಟಿ ಮಾಡುವ, ಪ್ರೇಕ್ಷಕನಲ್ಲಿ ಉಂಟುಮಾಡುವ ರಸೋತ್ಪತ್ತಿ, ಭಾವದೀಪ್ತಿಗಳು ಒಂದೇ ತೆರನಾದದ್ದು. ಆಧುನಿಕ ಕಾಲಘಟ್ಟದಲ್ಲಿ ಯಕ್ಷಗಾನದಂತಹ ಒಂದು ಪಾರಂಪರಿಕ ಮಾಧ್ಯಮ ಆಧುನಿಕ ಸಂವಹನ ಮಾಧ್ಯಮಗಳಿಂದ ವಿವಿಧ ರೀತಿಯಲ್ಲಿ ಪ್ರಭಾವಗಳನ್ನು ಪಡೆದಿದ್ದು, ಬಹಳಷ್ಟು ವಿಧದಲ್ಲಿ ಬದಲಾವಣೆಗೆ ಕಾರಣವಾಗಿದೆ. ಸಿನೆಮಾವೂ ಯಕ್ಷಗಾನವನ್ನು ಬಹುವಾಗಿ ಪ್ರಭಾವಿಸಿದೆ. ಇದಕ್ಕೆ ಯಕ್ಷಗಾನದಲ್ಲಿ ಬದಲಾದ ಕೆಲವೊಂದು ರಂಗಕ್ರಮಗಳು, ಪಾರಂಪರಿಕ ಶೈಲಿಗಳು, ಯಕ್ಷಗಾನದ ಪ್ರದರ್ಶನದ ಸಮಯ-ಪ್ರಸ್ತುತಿಗಳಲ್ಲಿ, ಪ್ರಸಂಗದ ಮೇಲೂ ಆಗಿರುವುದು ಉದಾಹರಣೆಯಾಗಿ ಹೆಸರಿಸಬಹುದು. ಪ್ರಸಂಗ ಸಾಹಿತ್ಯ, ಆಹರ‍್ಯ, ಅಭಿನಯ, ಗಾನವೈಭವ, ನಾಟ್ಯ ವೈಭವ ಮುಂತಾದ ಯಕ್ಷಗಾನದ ವಿವಿಧ ಆಯಾಮಗಳ ಮೇಲೆ ಸಿನೆಮಾದ ಪ್ರಭಾವ ಕುರಿತು ವಿವರವಾದ ವಿಶ್ಲೇಷಣೆ ಈ ಸಂಶೋಧನಾ ಪ್ರಬಂಧದಲ್ಲಿದೆ.


ಪ್ರಮುಖ ಪದಗಳು: ಯಕ್ಷಗಾನ, ಸಿನೆಮಾ, ಪಾರಂಪರಿಕ ಮಾಧ್ಯಮ, ಆಧುನಿಕ ಮಾಧ್ಯಮ, ಪ್ರಸಂಗ ಸಾಹಿತ್ಯ, ಆಹಾರ್ಯ, ತಾರಾಮೌಲ್ಯ, ಸಿನೆಮಾದ ಪ್ರಭಾವ.


ಪೀಠಿಕೆ

ಯಕ್ಷಗಾನ ಮತ್ತು ಸಿನೆಮಾ ಎರಡೂ ಪ್ರಮುಖ ಮಾಧ್ಯಮಗಳು. ಕರ್ನಾಟಕದÀ ಶ್ರೇಷ್ಠ ಕಲೆಯಾದ ಯಕ್ಷಗಾನ ಒಂದು ಸಾಂಪ್ರದಾಯಿಕ ಮಾಧ್ಯಮವಾದರೆ, ಸಿನೆಮಾ ಆಧುನಿಕ ಮಾಧ್ಯಮವಾಗಿ ಪ್ರಸಿದ್ಧಿ ಪಡೆದಿದೆ. ಸಿನೆಮಾದ ವ್ಯಾಪ್ತಿ ಜಗತ್ತಿನಲ್ಲಿ ಅತ್ಯಂತ ವಿಶಾಲವಾದದ್ದಾದರೆ, ಯಕ್ಷಗಾನದ ವ್ಯಾಪ್ತಿ ಒಂದು ಪ್ರದೇಶದಲ್ಲಿ ನಿರ್ದಿಷ್ಟ ವರ್ಗವನ್ನು ಪ್ರಭಾವಿಸುವಂಥದ್ದು. ಆದರೆ ಎರಡೂ ಮಾಧ್ಯಮಗಳು ಸೃಷ್ಟಿ ಮಾಡುವ, ಪ್ರೇಕ್ಷಕನಲ್ಲಿ ಉಂಟುಮಾಡುವ ರಸೋತ್ಪತ್ತಿ, ಭಾವದೀಪ್ತಿಗಳು ಒಂದೇ ತೆರನಾದದ್ದು.

ಆಧುನಿಕ ಕಾಲಘಟ್ಟದಲ್ಲಿ ಯಕ್ಷಗಾನದಂತಹ ಒಂದು ಪಾರಂಪರಿಕ ಮಾಧ್ಯಮ ಆಧುನಿಕ ಸಂವಹನ ಮಾಧ್ಯಮಗಳಿಂದ ವಿವಿಧ ರೀತಿಯಲ್ಲಿ ಪ್ರಭಾವಗಳನ್ನು ಪಡೆದಿದ್ದು, ಬಹಳಷ್ಟು ವಿಧದಲ್ಲಿ ಬದಲಾವಣೆಗೆ ಕಾರಣವಾಗಿದೆ. ಸಿನೆಮಾವೂ ಯಕ್ಷಗಾನವನ್ನು ಬಹುವಾಗಿ ಪ್ರಭಾವಿಸಿದೆ. ಇದಕ್ಕೆ ಯಕ್ಷಗಾನದಲ್ಲಿ ಬದಲಾದ ಕೆಲವೊಂದು ರಂಗಕ್ರಮಗಳು, ಪಾರಂಪರಿಕ ಶೈಲಿಗಳು, ಯಕ್ಷಗಾನದ ಪ್ರದರ್ಶನದ ಸಮಯ-ಪ್ರಸ್ತುತಿಗಳಲ್ಲಿ, ಪ್ರಸಂಗದ ಮೇಲೂ ಆಗಿರುವುದು ಉದಾಹರಣೆಯಾಗಿ ಹೆಸರಿಸಬಹುದು.

ಯಕ್ಷಗಾನದ ಮೇಲೆ ಸಿನೆಮಾದ ಪ್ರಭಾವ ಎಂಬ ಈ ಸಂಶೋಧನಾ ಪ್ರಬಂಧದಲ್ಲಿ, ಸಿನೆಮಾ ಪ್ರಭಾವ ಬೀರಿದ ಅಂಶಗಳ ಕುರಿತಾಗಿ ವಿವರವಾಗಿ ಚರ್ಚಿಸುವ ಉದ್ದೇಶವನ್ನು ಹೊಂದಲಾಗಿದೆ. ಅಲ್ಲದೆ ಈ ಪ್ರಭಾವದಿಂದಾಗುವ ಬದಲಾವಣೆಯಿಂದಾಗಿ, ಯಕ್ಷಗಾನದ ಮೇಲೆ ಒಳಿತಾಗಿದೆಯೇ? ಕೆಡುಕಾಗಿದೆಯೇ? ಸಿನೆಮಾ ಮತ್ತು ಯಕ್ಷಗಾನವನ್ನು ತುಲನಾತ್ಮಕವಾಗಿ ನೋಡುವುದಾದರೆ, ಅದರಲ್ಲಿರುವ ಸಾದೃಶ್ಯ ಮತ್ತು ಅಸಾದೃಶ್ಯ ಅಂಶಗಳೇನು? ಪಾರಂಪರಿಕ ಮಾಧ್ಯಮವಾಗಿ ಯಕ್ಷಗಾನ ಜನಮಾನಸದ ಮೇಲೆ ಪ್ರಭಾವಿಸಿದ ಅಂಶಗಳೇನು? ಇಂದಿಗೂ ನಿರ್ದಿಷ್ಟ ಪ್ರದೇಶವೊಂದರ ಜನರು ಸಿನೆಮಾ ಮತು ಯಕ್ಷಗಾನ ಏಕಕಾಲಕ್ಕೆ ಪ್ರದರ್ಶನಗೊಳ್ಳುವುದಾದರೆ, ಯಕ್ಷಗಾನದತ್ತಲೇ ಒಲವು ತೋರಿಸಲು ಕಾರಣೀಭೂತವಾಗುವ ಅಂಶಗಳೇನು, ಯಕ್ಷಗಾನವೆಂಬ ಕಲೆಯಲ್ಲಿ ಅಂತರ್ಗತವಾಗಿರುವ ಆಕರ್ಷಣೆಯ ಅಂಶವೇನು ಎಂಬುದನ್ನು ಇಲ್ಲಿ ಸೋದಾಹರಣವಾಗಿ ಉಲ್ಲೇಖಿಸಲಾಗಿದೆ.






ಯಕ್ಷಗಾನ

ಯಕ್ಷಗಾನ ವಿಶಿಷ್ಟವೂ, ನಾಡಿನ ಹೆಗ್ಗುರುತೂ ಆಗಿರುವ ಒಂದು ಕಲಾ ಮಾಧ್ಯಮ. ಬಹುಸಂಖ್ಯೆಯ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವ, ಇನ್ನಿಲ್ಲದಂತೆ ಪ್ರಸಿದ್ಧವಾದ ಒಂದು ಕಲೆಯೂ ಹೌದು. ನೃತ್ಯ, ಅರ್ಥಗಾರಿಕೆ, ವೇಷಭೂಷಣ, ಸಂಗೀತ ಮಿಳಿತಗೊಂಡಿರುವ ಒಂದು ಸಮಷ್ಟಿ ಕಲೆ. ಈ ಯಕ್ಷಗಾನದ ಹುಟ್ಟು ೧೨ನೇ ಶತಮಾನಗಳಷ್ಟು ಹಿಂದಕ್ಕೆ ಹೋದರೂ, ವರ್ತಮಾನದಲ್ಲಿ ಆಧುನಿಕತೆಗೆ ತಕ್ಕಂತೆ ಅದು ತನ್ನನ್ನು ರೂಪಿಸಿಕೊಳ್ಳುತ್ತಾ ಬಹುವಾಗಿ ವ್ಯಾಪಿಸಿಕೊಂಡಿದೆ. ಯಾವುದೇ ಆಧುನಿಕ ಮಾದರಿಯ ಮನರಂಜನೆಗಳು ಬಂದರೂ ಯಕ್ಷಗಾನ ಪರಿಭಾವಿಸುವ ಮಟ್ಟಕ್ಕೆ ಏನೂ ಕೊರತೆ ಆಗಿಲ್ಲ. ಕಾರಣ ಹೊಸ ಹೊಸತುಗಳನ್ನು ಮೊಗೆಯುವ ಒಂದು ಬಗೆಯ ಅಕ್ಷಯ ಪಾತ್ರೆ ಇದ್ದಂತೆ ಅದು. ಪ್ರತಿ ಪ್ರದರ್ಶನವೂ ನಿತ್ಯ ನೂತನ. ಹೊಚ್ಚ ಹೊಸದು. ಧರ್ಮ ಪ್ರಚಾರದ ನೆಲೆಗಟ್ಟಿನಲ್ಲಿ ಆವಿರ್ಭವಿಸಿದ ಯಕ್ಷಗಾನ ಪ್ರೇಕ್ಷಕರಿಗೆ ಒಳಿತು ಕೆಡುಕುಗಳ ವಿವೇಚನೆಗಳನ್ನು ಮಾಡಲು ಅವಕಾಶ ನೀಡುತ್ತದೆ. ಅತಿ ರಂಜಿತ, ಅತಿ ಮಾನುಷ ಅಂಶಗಳನ್ನು ತೋರಿಸಿದರೂ ರಸಸೃಷ್ಟಿಗೆ ಸ್ವಲ್ಪವೂ ಕೆಡುಕಾಗದಂತೆ, ಭಾವದೀಪ್ತಿಗಳನ್ನು ಉದ್ದೀಪಿಸುವ ಮಹತ್ವದ ಕೆಲಸ ಅದರದ್ದು. ಇದೇ ಕಾರಣಕ್ಕೆ ಇಂದು ಸುಮಾರು ೭೦ಕ್ಕೂ ಹೆಚ್ಚು ಮೇಳಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಪ್ರದರ್ಶನ ನೀಡುತ್ತಿವೆ. ನೂರಾರು ಹವ್ಯಾಸಿ ಕಲಾತಂಡಗಳು ನಾಡಿನಾದ್ಯಂತ, ಹೊರನಾಡಿನಲ್ಲೂ ಕಲಾವ್ಯವಸಾಯ ಮಾಡುತ್ತಿವೆ.

ಕಲಾ ಮಾಧ್ಯಮವಾಗಿ ಯಕ್ಷಗಾನ

ಮಾಧ್ಯಮ ಎಂದರೆ ವಿಚಾರವೊಂದನ್ನು ಮತ್ತೊಬ್ಬರಿಗೆ ತಲುಪಿಸವಂತಹ ಒಂದು ಮಧ್ಯವರ್ತಿ ವ್ಯವಸ್ಥೆ. ಯಕ್ಷಗಾನವೂ ಹೀಗೆಯೇ. ಅದು ಒಂದು ಸಾಮಾನ್ಯ ಮಾಧ್ಯಮ. ಅದು ತಿಳಿಸುವುದು, ಮಾಹಿತಿ ನೀಡುವುದು ಕಥೆಗಳ ಪ್ರಸ್ತುತಿ ಮೂಲಕ. ಕಥೆಗಳಲ್ಲಿ ಮೌಲ್ಯಗಳಿವೆ. ಮೌಲ್ಯಗಳು ನೋಡುಗನ ಜೀವನಕ್ಕೆ ಪೂರಕವಾದದ್ದು. ಒಳಿತು ಯಾವುದು ಕೆಡುಕು ಯಾವುದು ಎಂದು ತೋರಿಸುವಂಥದ್ದು. ಯಕ್ಷಗಾನದಲ್ಲಿ ಪ್ರದರ್ಶಿತವಾಗುವ ಪ್ರಸಂಗಗಳು ಪುರಾಣ ಕಥೆಯನ್ನು ಆಧರಿಸಿದ್ದು. ಕಥೆಯ ಪ್ರಸ್ತುತಿಯ ಮೂಲಕ ಮೌಲ್ಯ ಪ್ರತಿಪಾದನೆ. ಇದರೊಂದಿಗೆ ನವರಸಗಳ ಅಭಿವ್ಯಕ್ತಿ, ಪ್ರೇಕ್ಷಕನ ಭಾವನೆಗಳ ಮೇಲೆ ಛಾಪಿಸುವ ಉದ್ದೇಶ ಹೊಂದಿದೆ. ಪುರಾಣ ಕಥೆಗಳನ್ನು ಜನರಿಗೆ ತಿಳಿಸಲು ಅತಿ ಸರಳ ಮತ್ತು ಅತಿ ಸುಂದರವಾದ ಕಲಾ ಪ್ರಕಾರ ಎಂಬ ಹಿರಿಮೆ ಯಕ್ಷಗಾನದ್ದು. ಉದಾಹರಣೆಗೆ ಭರತನಾಟ್ಯದಲ್ಲೂ ಕಥೆಯನ್ನು ಬಣ್ಣಿಸಬಹುದಾದರೂ ಅದರ ವ್ಯಾಪ್ತಿ ನೃತ್ಯ, ಭಾವಾಭಿನಯಗಳಿಗೆ ಸೀಮಿತ. ಹರಿಕಥೆಯಲ್ಲಿ ಹಾಡು, ಅರ್ಥವನ್ನು ವರ್ಣಿಸುವುದಕ್ಕೆ, ಕಥೆ ಹೇಳುವುದಕ್ಕೆ ಸೀಮಿತ. ಆದರೆ ಯಕ್ಷಗಾನದಲ್ಲಿ ಹಾಗಲ್ಲ. ಕಥೆಯ ಕುರಿತ ಪದ್ಯವನ್ನು ಹೇಳಿ. ಆ ಸಂದರ್ಭ ಪಾತ್ರಗಳು ಅದಕ್ಕೆ ತಕ್ಕುದಾದಂತೆ ಅಭಿನಯಿಸಿ, ಬಳಿಕ ಪದ್ಯದ ಅರ್ಥವನ್ನು ಪಾತ್ರಗಳು ವಿವೇಚಿಸುವುದು. ಈ ಸಂದರ್ಭದಲ್ಲಿ ಪ್ರಸಕ್ತ ಸನ್ನಿವೇಶಗಳ ಹಿನ್ನೆಲೆಯಿಟ್ಟುಕೊಂಡು ಪಾತ್ರಧಾರಿ ಮಾತನಾಡುತ್ತ ಸಂದೇಶ ನೀಡುವಲ್ಲಿ ಜಾಣ್ಮೆಯನ್ನು ಮೆರೆಯಬಹುದು. ಜೀವನಾನುಭವಕ್ಕೆ ಪೂರಕವಾದ ವಿಚಾರಗಳನ್ನು ಪುರಾಣದ ಮುಖೇನ ಪ್ರಸ್ತಾವಿಸಬಹುದು. ಇದು ಕಲಾಮಾಧ್ಯಮವಾಗಿ ಯಕ್ಷಗಾನದಲ್ಲಿರುವ ವಿಶಿಷ್ಟ ಸಾಧ್ಯತೆ. ಪಾತ್ರ ನಿರ್ವಹಿಸುವ ಪಾತ್ರಧಾರಿ ತನ್ನ ಅರ್ಥಗಾರಿಕೆಯಲ್ಲಿ ಪ್ರತಿಬಾರಿಯೂ ಹೊಸತನ್ನು ಬಿಂಬಿಸಲು, ಹೊಸ ವಿಚಾರಗಳನ್ನು ಪ್ರಸ್ತುತ ಪಡಿಸಲು ಸಾಧ್ಯವಿದೆ. ಪ್ರತಿ ಪಾತ್ರವೂ ತನ್ನದೇ ಆದ ಬಣ್ಣಗಾರಿಕೆ, ರಂಗಕ್ರಮಗಳು, ವೇಷಭೂಷಣ, ನೃತ್ಯಾಭಿನಯಗಳನ್ನು ಒಳಗೊಂಡಿದ್ದು, ಪೂರಕ ಪ್ರಭಾವವನ್ನು ಬೀರುತ್ತದೆ. ಈ ಮೂಲಕ ಸಂವಹನದ ರೀತಿಯಲ್ಲಿ ಪಾತ್ರಧಾರಿ ಸೆಂಡರ್ ಆಗಿ, ಪ್ರೇಕ್ಷಕ ರಿಸೀವರ್ ಆಗಿ, ವಿಚಾರಧಾರೆ ಮೆಸೇಜ್ ಆಗಿ ತಲುಪಿ ಮೂಲ ಉದ್ದೇಶ ಈಡೇರುತ್ತದೆ.


ಸಿನೆಮಾದ ಪ್ರಭಾವ

೧೮೯೫ರಲ್ಲಿ ಲೂಮಿಯರ್ ಸಹೋದರರು ಆವಿಷ್ಕರಿಸಿದ ಸಿನೆಮಾದ ಮಾದರಿ ಇಂದು ಅಗಾಧವಾಗಿ ಬೆಳೆದಿದೆ. ಆಧುನಿಕ ದಿನಗಳನ್ನು ಸಿನೆಮಾ ಇಲ್ಲದೇ ಊಹಿಸುವುದೂ ಕಷ್ಟ. ಒಂದು ದೊಡ್ಡ ಉದ್ದಿಮೆಯಾಗಿ, ಮನರಂeನೆಯ ಪ್ರಮುಖ ಮಾಧ್ಯಮವಾಗಿ ಬೆಳೆದದ್ದು ಸಿನೆಮಾ. ಈ ಸಿನೆಮಾ ಕೂಡ ನಮ್ಮನ್ನು ಬಹುವಾಗಿ ಪ್ರಭಾವಿಸಿದೆ. ವಿಚಾರಗಳನ್ನು, ಮಾಹಿತಿಗಳನ್ನು ತಿಳಿಸಲು ಇದೊಂದು ಪರಿಣಾಮಕಾರಿ ಮಾಧ್ಯಮವೂ ಹೌದು. ಸಿನೆಮಾ ಆಧುನಿಕ ಸಂವಹನ ಮಾಧ್ಯಮವೆಂದು ಪರಿಗಣಿಸಿದರೆ, ಯಕ್ಷಗಾನ ಒಂದು ಪಾರಂಪರಿಕ ಮಾಧ್ಯಮ. ಯಾಂತ್ರಿಕ ಪ್ರಕ್ರಿಯೆಗಳೂ ಸೇರಿಕೊಂಡಿರುವ ಸಿನೆಮಾದಲ್ಲಿ ಅಭಿನಯ, ಮಾತುಗಾರಿಕೆಯ ಸೀಮಿತ ವ್ಯಾಪ್ತಿಯಿದ್ದರೆ, ಅದೇ ಯಕ್ಷಗಾನದಲ್ಲಿ ಇದರ ವ್ಯಾಪ್ತಿ ಅನಂತ. ಆದರೂ ಸಿನೆಮಾ ಹೆಚ್ಚು ಜನರನ್ನು ತಲುಪುವ ಸಾಧನವಾಗಿರುವುದರಿಂದ ಮತ್ತು ಬಹುಮಂದಿಯ ಮನರಂಜನೆಯೂ ಆದ್ದರಿಂದ ಅದರ ಪ್ರಭಾವದ ಪರಿಧಿಯೂ ವಿಸ್ತಾರವಾಗಿ ಇದೆ.

ಸಿನೆಮಾದ ಪ್ರಭಾವದ ಬಗ್ಗೆ ಹೇಳುವುದಾದರೆ ಅದು ವೈಯಕ್ತಿಕವಾಗಿ, ಸಾಮಾಜಿಕವಾಗಿ ಪ್ರಭಾವವನ್ನು ಬೀರಬಹುದು. ಸಾಮಾಜಿಕವಾಗಿ ಬೀರುವ ಪ್ರಭಾವಗಳಲ್ಲಿ ಅದು ಒಂದು ಕಲೆಯ ಮೇಲೂ ಪ್ರಭಾವವನ್ನು ಬೀರುಬಹುದು. ಯಕ್ಷಗಾನವೂ ನಿರ್ದಿಷ್ಟವಾಗಿ ಸಿನೆಮಾದಿಂದ ಪ್ರಭಾವಿತಗೊಂಡಿವೆ. ಸಿನೆಮಾದಿಂದ ಪ್ರಭಾವಗೊಂಡ ವಿಚಾರಗಳ ಬಗ್ಗೆ ವಿದ್ವತ್ ವಲಯಗಳಲ್ಲಿ ವ್ಯಾಪಕವಾದ ಚರ್ಚೆಯೂ ಇದೆ. ಯಕ್ಷಗಾನದ ಪರಂಪರೆಯ ಪ್ರಯೋಗಗಳು ಇದರಿಂದ ಹಿನ್ನೆಲೆಗೆ ಸರಿದಿವೆ ಎಂಬ ಆರೋಪವೂ ಇದೆ. ಆದರೂ ಸಿನೆಮಾದ ಪ್ರಭಾವದಿಂದ ಒಡಮೂಡಿದ ಕೆಲವು ನಿರ್ದಿಷ್ಟ ಕಥಾನಕಗಳು ಪ್ರೇಕ್ಷಕರನ್ನು ವ್ಯಾಪಿಸಿರುವುದೂ ಸುಳ್ಳಲ್ಲ. ಸಿನೆಮಾದ ಪ್ರಭಾವವನ್ನು ನಾವು ಪ್ರಸಂಗ, ಆಹರ‍್ಯ, ವಾಚಿಕಾಭಿನಯ ಮತ್ತು ಪ್ರದರ್ಶನದ ಮೇಲಾದ ಪರಿಣಾಮಗಳು ಎಂದು ವಿಂಗಡಿಸಬಹುದು.


ಪ್ರಸಂಗ ಸಾಹಿತ್ಯದ ಮೇಲೆ ಪ್ರಭಾವ

ಯಕ್ಷಗಾನದ ಪ್ರಸಂಗಗಳಲ್ಲಿ ಸಿನೆಮಾವನ್ನು ತಂದಿರುವುದು ಈಗ ಹೊಸತೇನಲ್ಲ, ದಶಕಗಳಿಂದ ಈ ಪ್ರಯೋಗಗಳಾಗಿವೆ. ಇತ್ತೀಚೆಗೆ ಬಾಹುಬಲಿ ಚಿತ್ರವನ್ನು ವಜ್ರಮಾನಸಿ ಹೆಸರಿನಲ್ಲಿ ಯಕ್ಷಗಾನಕ್ಕೆ ತಂದಿದ್ದು, ಸಾಲಿಗ್ರಾಮದ ಡೇರೆ ಮೇಳೆದವರು ಇದನ್ನು ಪ್ರದರ್ಶಿಸಿ ಸಾಕಷ್ಟು ಸುದ್ದಿ ಮಾಡಿದ್ದರು. ಯಕ್ಷಗಾನಕ್ಕೆ ಸಿನೆಮಾ ಕಥೆಯನ್ನು ತರುವುದರಿಂದ ಪ್ರೇಕ್ಷಕರ ವ್ಯಾಪ್ತಿ ದೊಡ್ಡದಾಗಿದೆ, ಸಿನೆಮಾದ ಕಥೆಯನ್ನು ಮಾತ್ರವೇ ಇಟ್ಟುಕೊಳ್ಳದೇ ಅದಕ್ಕೂ ಒಂದು ರೂಪು ನೀಡಿ ಯಕ್ಷಗಾನೀಯ ಪ್ರಸಂಗ ಮಾಡಿ ಒಳಿತನ್ನು ಹೇಳುವ ಕೆಲಸ ಆಗಿದೆ ಎಂಬ ಇನ್ನೊಂದು ವಾದವಿದೆ. ಯಕ್ಷಗಾನ ಹೆಚ್ಚು ಕಮರ್ಷಿಯಲ್ ಆದಂತೆ, ಯಕ್ಷಗಾನಕ್ಕೆ ಸಿನೆಮಾಗಳು ಪ್ರಸಂಗಗಳಾಗಿ ಬರತೊಡಗಿದವು. ಪ್ರಮುಖವಾಗಿ ಯಕ್ಷಗಾನಕ್ಕೆ ಸಿನೆಮಾ ಪ್ರಸಂಗಗಳಾಗಿ ಆಡತೊಡಗಿದ್ದು ಡೇರೆ ಮೇಳಗಳಲ್ಲಿ. ಏನಾದರೊಂದು ಗಿಮಿಕ್ ಮಾಡುತ್ತಿದ್ದ ಈ ಡೇರೆ ಮೇಳಗಳು ಕಾಲ್ಪನಿಕ ಇತಿಹಾಸಕ್ಕೆ ಹತ್ತಿರವಾದ ಪ್ರಸಿದ್ಧ ಪ್ರಸಂಗಗಳನ್ನು ಆಡತೊಡಗಿದವು. ಪಡೆಯಪ್ಪದಿಂದ ಶಿವರಂಜಿನಿ, ಮೂಂಡ್ರA ಪಿರೈನಿಂದ ಪಂಚಮ ವೇದ, ಸುವ್ವಿ ಸುವ್ವಲಾಲಿಯಿಂದ ಶಿವಾನಿ ಭವಾನಿ ಯಜಮಾನದಿಂದ ವಜ್ರಕುಟುಂಬ ತುಳು ಪ್ರಸಂಗ, ಆಪ್ತಮಿತ್ರದಿಂದ ನಾಗವಲ್ಲಿ, ಆಪ್ತರಕ್ಷಕದಿಂದ ನಾಗವಲ್ಲಿ-೨, ಬಾಹುಬಲಿಯಿಂದ ವಜ್ರಮಾನಸಿ ಹೀಗೆ ಪಟ್ಟಿ ಉದ್ದಕ್ಕೆ ಮುಂದುವರಿಯುತ್ತದೆ. ಕೆಲವೊಂದು ಪ್ರಸಂಗಗಳ ವಸ್ತು ವಿಷಯಗಳಲ್ಲಿ ಅಲ್ಪ ಮಾರ್ಪಾಡು ಮಾಡಲಾಗಿದ್ದರೆ, ಕೆಲವು ಪ್ರಸಂಗಗಳು ಯಥಾವತ್ತಾಗಿವೆ. ಯಕ್ಷಗಾನದ ಮೂಲಾಂಶವಾದ ರಂಜನೆ-ಬೋಧನೆಯಲ್ಲಿ ಬಹುತೇಕ ಪ್ರಸಂಗಗಳಲ್ಲಿ ಮನರಂಜನೆಯೇ ಮುಖ್ಯವಾಗಿರುವಂತೆ ಉದ್ದೇಶವಿಟ್ಟುಕೊಳ್ಳಲಾಗಿದೆ.


ಆಹರ‍್ಯ

ಪ್ರಸಂಗ ಸಿನೆಮಾ ಮೂಲ ಆದ ಬಳಿಕ ಆಹರ‍್ಯವೂ ಅದೇ ರೀತಿ ಮಾರ್ಪಾಡುಗೊಂಡಿದೆ. ನಾಟಕೀಯ ವೇಷಗಳು ಇಂತಹ ಪ್ರಸಂಗಗಳಲ್ಲಿ ಹೆಚ್ಚು. ಯಕ್ಷಗಾನೀಯ ಶೈಲಿಯ ವೇಷಭೂಷಣಗಳು, ಬಣ್ಣಗಾರಿಕೆಯಿಂದ ಸ್ವಲ್ಪ ದೂರ ಸರಿಯಿತು. ಉದಾಹರಣೆಗೆ ವಜ್ರಮಾನಸಿಯ ಶಿವರುದ್ರ, ಕಟ್ಟಪ್ಪ ಇತ್ಯಾದಿ ಪಾತ್ರಗಳನ್ನೇ ನೋಡಿದರೆ, ಅವುಗಳು ಪಕ್ಕಾ ನಾಟಕೀಯ. ಅಷ್ಟೇ ಅಲ್ಲದೇ ಯಕ್ಷಗಾನಕ್ಕೆ ಸಂಬAಧವೇ ಇಲ್ಲವೇನೋ ಎನಿಸುವಂತಹ ಬಣ್ಣಗಾರಿಕೆ, ವೇಷಭೂಷಣಗಳಿವೆ. ನಾಗವಲ್ಲಿ ಪ್ರಸಂಗದಲ್ಲೂ, ನಾಗವಲ್ಲಿಯ ಪಾತ್ರ ತಲೆಕೆದರಿಕೊಂಡು, ಮುಖಕ್ಕೆ ವಿಶಿಷ್ಟ ಬಣ್ಣಗಾರಿಕೆ ಮಾಡುತ್ತ ವೇದಿಕೆಗೆ ಬರುವುದನ್ನು ಕಾಣಬಹುದು. ಯಕ್ಷಗಾನದ ಮೂಲ ಪರಂಪರೆಯಲ್ಲೆಲ್ಲೂ ಕೆದರಿದ ಕೂದಲು, ಬಣ್ಣಗಳನ್ನು ಅಳಿಸಿದ ರೀತಿಯ ಬಣ್ಣಗಾರಿಕೆ ಎಲ್ಲೂ ಇಲ್ಲ. ಯಕ್ಷಗಾನವೆಂದರೆ ಅತಿ ಶಿಸ್ತಿನ ಮತ್ತು ಶಿಷ್ಟವಾದ ಒಂದು ಕಲೆಯಾಗಿದ್ದು, ಸಿನೆಮಾದ ಪ್ರಭಾವದಿಂದಾಗಿಯೇ ಇದೂ ಮಾರ್ಪಾಡುಗೊಂಡಿತು ಎಂಬುದನ್ನು ಒತ್ತಿ ಹೇಳಲೇ ಬೇಕಾಗಿದೆ.


ಅಭಿನಯ

ಅಭಿನಯದಲ್ಲೂ ಯಕ್ಷಗಾನದ ನೈಜತೆ ಮೀರಿದ, ಪ್ರೇಕ್ಷಕರ ಭಾವೋತ್ಪತ್ತಿಯನ್ನು ತೀವ್ರಗೊಳಿಸುವಂತೆ ಮಾಡುವ ಯತ್ನಗಳು ಯಕ್ಷಗಾನ ಪ್ರಸಂಗಗಳಲ್ಲಿವೆ. ಪ್ರಮುಖ ಸ್ತಿçà ವೇಷವೊಂದು ಅರ್ಧಗಂಟೆಗೂ ಮಿಕ್ಕಿ ಒಂದೇ ಪದ್ಯಕ್ಕೆ ಕುಣಿಯುವ, ಯಕ್ಷಗಾನಕ್ಕಿಂತ ವಿಚಿತ್ರವೂ ಆದ ರಂಗಕ್ರಮಗಳನ್ನು, ಅಭಿನಯಗಳನ್ನು ತೋರಿಸುವ ಪರಿಪಾಠಗಳು ಇಂದು ಬೆಳೆಯುತ್ತ ಬಂದಿವೆ.

ಒಟ್ಟಾರೆ ಪ್ರದರ್ಶನದ ಮೇಲಾದ ಪರಿಣಾಮಗಳು

ಯಕ್ಷಗಾನದ ಮೇಲೆ ಸಿನೆಮಾ ಮಾಧ್ಯಮದಿಂದಾಗಿ ಒಟ್ಟಾರೆ ಪ್ರದರ್ಶನದ ಮೇಲೆ ವ್ಯಾಪಕ ಪ್ರಭಾವಗಳಾಗಿವೆ. ೧೯೪೦ರಿಂದ ೭೦ರ ದಶಕದವರೆಗೆ ಯಕ್ಷಗಾನದ ಪ್ರಚಾರ, ಆಯೋಜನೆ, ರಂಗಸಜ್ಜಿಕೆ, ವಿದ್ಯುತ್ ಪರಿಕರಗಳ ಬಳಕೆ, ಇತ್ಯಾದಿಗಳಿಗೆ ಸಿನೆಮಾ-ನಾಟಕಗಳು ಕಾರಣವಾಗಿವೆ. ಆಯೋಜಕರು ಹೆಚ್ಚು ಗೌಜಿಯ ಪ್ರದರ್ಶನಕ್ಕೆ ಮನಸ್ಸು ಮಾಡುತ್ತಿರುವುದೂ ಸಿನೆಮಾದಿಂದ ಪ್ರೇರಿತವಾದ ವಿಚಾರವಾಗಿದೆ. ಇದರೊಂದಿಗೆ ಹೆಸರಿಸಬೇಕಾದ್ದು ಯಕ್ಷಗಾನ ನಾಟ್ಯವೈಭವ, ಗಾನವೈಭವ ಮತ್ತು ರೂಪಕಗಳ ಯತ್ನ.

ನಾಟ್ಯವೈಭವ: ನಾಟ್ಯವೈಭವದಲ್ಲಿ ಕೇವಲ ನಾಟ್ಯ ಮಾತ್ರ ಪ್ರದರ್ಶನವಿರುತ್ತದೆ. ಹಿಮ್ಮೇಳದಲ್ಲಿ ಭಾಗವತಿಕೆ, ಚೆಂಡೆ ಮದ್ದಳೆ ವಾದನಗಳೊಂದಿಗೆ ಎರಡು ಪಾತ್ರಗಳ (ಉದಾ: ಕೃಷ್ಣ-ರಾಧೆ) ಕುಣಿತವಿರುತ್ತದೆ. ಅಭಿನಯಕ್ಕೆ, ನೃತ್ಯಕ್ಕೆ ಇದರಲ್ಲಿ ಆದ್ಯತೆ ಹೆಚ್ಚು.


ಗಾನವೈಭವ: ಇದು ಯಕ್ಷಗಾನದ ಹಾಡುಗಳನ್ನು ಮಾತ್ರ ಹಾಡುವ ಕ್ರಮ. ನಮ್ಮ ಆರ್ಕೆಸ್ಟಾç ಮಾದರಿಯಲ್ಲಿ ಸಿನೆಮಾದ ಪದ್ಯಗಳನ್ನು ಹೇಳುವ ಮಾದರಿ ಇದೆ. ಅದೇ ರೀತಿ ಗಾನವೈಭವದಲ್ಲಿ ಪ್ರಸಿದ್ಧ ಪ್ರಸಂಗಗಳ ಹಾಡುಗಳನ್ನು ಹಿಮ್ಮೇಳ ಸಮೇತ ಭಾಗವತರು ಹಾಡುತ್ತಾರೆ. ಆಲಾಪನೆ, ಯಕ್ಷಗಾನದ ಮಟ್ಟುಗಳ ಶೈಲಿಯ ಹೊರತಾಗಿ ಶಾಸ್ತಿçÃಯ ಸಂಗೀತದ ಛಾಪು ಇದರಲ್ಲಿ ಹೆಚ್ಚಾಗಿದೆ.


ಯಕ್ಷಗಾನ ರೂಪಕಗಳು: ಯಕ್ಷಗಾನದ ವೇಷಭೂಷಣ, ರಂಗಕ್ರಮಗಳನ್ನು ಬಹಳವಾಗಿ ಇಟ್ಟುಕೊಂಡು ಒಂದು ನಿರ್ದಿಷ್ಟ ಕಥೆಯನ್ನು ಪ್ರಸ್ತುತ ಪಡಿಸುವ ಕ್ರಮ. ಭರತನಾಟ್ಯದ ನೃತ್ಯ ರೂಪಕದಂತೆ ಇದೂ ಇದ್ದು ನೃತ್ಯ, ಅಭಿನಯಗಳಿಗೆ ಹೆಚ್ಚು ಒಲವು ಹೊಂದಿರುತ್ತದೆ. ಈ ಮಾದರಿಯಲ್ಲಿ ಸಮೂಹ ನೃತ್ಯದ ಶೈಲಿಯೂ ಹೆಚ್ಚಾಗಿರುತ್ತದೆ.


ಕಲಾವಿದರಿಗೆ ತಾರಾ ಮೌಲ್ಯ: ಯಕ್ಷಗಾನದ ಕಲಾವಿದರಿಗೆ ಈಗ ತಾರಾ ಮೌಲ್ಯ. ಸಿನೆಮಾ ತಾರೆಯರಂತೆ ಇವರನ್ನೂ ಆರಾಧಿಸುವ ಒಂದು ಅಭಿಮಾನಿ ವರ್ಗ ಹುಟ್ಟಿಕೊಂಡಿದೆ. ಯಕ್ಷಗಾನದ ವೀಕ್ಷಕರ ಸಂಖ್ಯೆ ಹೆಚ್ಚಳದಲ್ಲಿ ಇದು ಪ್ರಮುಖ ಗುರುತು. ತಮ್ಮ ಆರಾಧ್ಯ ತಾರೆಯರ ಬಗ್ಗೆ ವಾಟ್ಸ್ಆಪ್, ಫೇಸುಬುಕ್ ಪೇಜ್‌ಗಳು, ಅವರ ಪ್ರದರ್ಶನ ಕುರಿತ ವಿವರಗಳು, ಹೆಚ್ಚುಗಾರಿಕೆ ಇತ್ಯಾದಿಗಳನ್ನೆಲ್ಲ ಇದರಲ್ಲಿ ಹಾಕಲಾಗುತ್ತದೆ. ಆದರೆ ಯಕ್ಷಗಾನದಂತಹ ಕಲೆಯಲ್ಲಿ ಕಲಾವಿದರನ್ನು ಆರಾಧಿಸುವುದೂ ಅಷ್ಟು ಸಮುಚಿತವಾದದ್ದಲ್ಲ. ಇದರಿಂದ ಸಮಗ್ರ ಪ್ರದರ್ಶನಗಳ ಮೇಲೆ ಪರಿಣಾಮ ಉಂಟಾಗಬಹುದು. ನಿರ್ದಿಷ್ಟ ಕಲಾವಿದರ ಪಾತ್ರ ಆಗಮಿಸುವಲ್ಲಿವರೆಗೆ ಅಥವಾ ನಿರ್ದಿಷ್ಟ ಭಾಗವತರ ಪ್ರದರ್ಶನದವರೆಗೆ ಪ್ರೇಕ್ಷಕರು ಕೂತು ಮತ್ತೊಂದು ಭಾಗದ ಪ್ರದರ್ಶನ ಸಂದರ್ಭದಲ್ಲಿ ಎದ್ದು ಹೋಗುವುದು, ಶಿಳ್ಳೆ, ಕೇಕೆ ಮೇಳೈಸುವುದು ಇತ್ಯಾದಿಗಳು ನಡೆದೇ ಇದೆ. ಇದರಿಂದ ಪ್ರದರ್ಶನದ ಮೇಲೆ ಒಂದು ರೀತಿಯ ಪರಿಣಾಮ ಬೀರುತ್ತದೆ.


ಕಾಲಮಿತಿ ಯಕ್ಷಗಾನ: ಯಕ್ಷಗಾನ ಬದಲಾವಣೆಗೆ ಒಡ್ಡಿಕೊಂಡ ಕಲೆ. ಕಾಲಾಂತರದಲ್ಲಿ ಅನೇಕ ಮಾರ್ಪಾಡುಗಳನ್ನು ಕಂಡಿದೆ. ಹೀಗೆ ಬದಲಾವಣೆಗೆ ಮರುರೂಪಿತವಾದ ಕಲೆಗಳೇ ಇಂದಿಗೂ ಅಸ್ತಿತ್ವವನ್ನು, ಪ್ರೇಕ್ಷಕವರ್ಗವನ್ನು ಉಳಿಸಿಕೊಂಡು, ವ್ಯಾಪಿಸಿವೆ. ೧೯೭೦ರ ದಶಕದಲ್ಲೂ, ಆಡಿಯೋ ಕ್ಯಾಸೆಟ್‌ಗಳಿಂದಾಗಿ ಯಕ್ಷಗಾನದ ಮೇಲೆ ಗಾಢ ಪರಿಣಾಮ ಬೀರಬಹುದು, ಯಕ್ಷಗಾನದ ಮೇಲೆ ಪೆಟ್ಟು ಬೀಳಬಹುದು ಎಂದೇ ಭಾವಿಸಾಗಿತ್ತು. ಆದರೆ ಅದು ಹಾಗಾಗಲಿಲ್ಲ. ಯಕ್ಷಗಾನದ ಪ್ರಚಾರಕ್ಕೆ ಹೊಸ ಬಗೆಯ ಆಯಾಮ ನೀಡಿತು. ಪ್ರಸಿದ್ಧ ವಿದ್ವಜ್ಜನರ ಅರ್ಥಗಾರಿಕೆ, ವಾಗ್‌ವಿಲಾಸಗಳು ಕ್ಯಾಸೆಟ್‌ನಲ್ಲಿ ಅಡಕಗೊಂಡು ಹೊಸ ಪೀಳಿಗೆಗೆ, ಪ್ರೇಕ್ಷಕ ವರ್ಗಕ್ಕೆ ಅಪ್ಯಾಯಮಾನವಾಯಿತು. ಯಕ್ಷಗಾನದಲ್ಲಿ ಪ್ರದರ್ಶನಗೊಳ್ಳುವುದು ಕಡಿಮೆ ಎಂದಿದ್ದ ಪ್ರಸಂಗಗಳೆಲ್ಲ ಮುನ್ನೆಲೆಗೆ ಬಂದು ಒಂದು ವಿಧದ ದಾಖಲೀಕರಣಕ್ಕೂ ನೆರವಾದಂತಾಯಿತು. ಹಾಗೆಯೇ ಆಧುನಿಕ ಯುಗದಲ್ಲಿ ಹೊಸತುಗಳು ಬಂದಿದ್ದು, ಯಕ್ಷಗಾನದ ಮಟ್ಟಿಗೆ ತೀರ ಹಾನಿಯಾಗಿಲ್ಲ. ಸಿನೆಮಾ ಮಾಧ್ಯಮದ ಹಿನ್ನೆಲೆಯಲ್ಲಿ, ಆಧುನಿಕ ಪ್ರವೃತ್ತಿಗಳು ಮನುಷ್ಯರಿಗೆ ಬೆಳೆದಂತೆಯೇ ರೂಪು ತಳೆದದ್ದು ಕಾಲ ಮಿತಿಯ ಪ್ರಯೋಗಗಳು. ಈಗಿನ ತಲೆಮಾರಿನಲ್ಲಿ ಯಕ್ಷಗಾನವನ್ನು ರಾತ್ರಿಯಿಡೀ ನೋಡುವ ಸಮಯ/ವ್ಯವಧಾನವಾಗಲಿ ಉಳಿದಿಲ್ಲ. ಆದ್ದರಿಂದ ಕಾಲಮಿತಿ ಪ್ರಯೋಗದಲ್ಲಿ ಸಿನೆಮಾದಂತೆಯೇ ಎರಡೂವರೆ ಗಂಟೆಗೆ ಸೀಮಿತವಾಗಿ ಪ್ರಸಂಗಗಳ ಪ್ರಸ್ತುತಿ. ವಿಶೇಷಗಾಗಿ ರಾತ್ರಿ ಇಡೀ ನಡೆಯುವ ಯಕ್ಷಗಾನವನ್ನು ಮೂರುವರೆ ಗಂಟೆಗಳಲ್ಲಿ ಉತ್ತಮ ಪ್ರದರ್ಶನವಾಗಿಸಿ ಅದರ “ಸಾರ” ಹಿಡಿದಿಡುವ ಯತ್ನ. ಇಂತದ್ದು ಯಕ್ಷಗಾನಕ್ಕೆ ಆಧುನಿಕದಲ್ಲಿ ಅಗತ್ಯವೂ ಆಗಿದ್ದು.


ಒಂದು ದೃಷ್ಟಿಯಿಂದ ನೋಡಿದರೆ, ಕಾಲಾನುಕ್ರಮದಲ್ಲಿ ಇಂತಹ ಕೆಲವೊಂದು ಬದಲಾವಣೆಗಳು ಬೇಕು. ಎರಡು ಮೂರು ಗಂಟೆಗಳಲ್ಲಿ ಸಿನೆಮಾ ಕೆಲವೊಂದಷ್ಟು ಅಂಶಗಳನ್ನು ಮನದಟ್ಟು ಮಾಡಿಸುತ್ತದೆ ಎಂದಾದರೆ ಆಶು ಪಟುತ್ವ ಪ್ರದರ್ಶಿತವಾಗುವ ಯಕ್ಷಗಾನಕ್ಕೂ ಅದರ ಸಾಧ್ಯತೆ ತುಸು ಹೆಚ್ಚೇ ಇದೆ. ಆದರೆ ಇಲ್ಲಿ ಯಕ್ಷಗಾನ ಹಿಂದೆ ಸರಿದದ್ದು ಅದರ ಸುದೀರ್ಘ ರಂಗಕ್ರಮಗಳಿAದ. ಪೀಠಿಕಾ ಸ್ತಿçÃವೇಶ, ಒಡ್ಡೋಲಗ ವಿಧಾನಗಳು, ಕುಣಿತದ ವೈವಿಧ್ಯಗಳು ಕಾಲಮಿತಿಯ ಕಾರಣ ಪ್ರದರ್ಶಿತಗೊಳ್ಳುತ್ತಿಲ್ಲ. ಅಬ್ಬರದ ಪ್ರವೇಶಗಳು ಕಡಿಮೆಯಾಗಿ ಕಥಾನಕ್ಕೆ ಸೀಮಿತವಾಗಿವೆ. ಬಣ್ಣಗಾರಿಕೆ ಕೂಡ ಹೃಸ್ವವಾಗಿವೆ. ಹೆಚ್ಚು ನಾಟಕೀಯವಾದ ವೇಷಗಳು ಕಲಾವಿದರಿಗೂ ಅಪ್ಯಾಯಮಾನವಾಗಿವೆ.


ಒಳಿತು-ಕೆಡುಕುಗಳು

ಯಕ್ಷಗಾನದ ಮೇಲೆ ಸಿನೆಮಾ ಪ್ರಭಾವದಿಂದಾಗಿ ಒಳಿತುಗಳೂ ಆಗಿವೆ, ಕೆಡುಕುಗಳೂ ಆಗಿವೆ. ಒಳಿತಾದ ಬಗೆ ಏನೆಂದರೆ, ಯಕ್ಷಗಾನಕ್ಕೆ ನಿರ್ದಿಷ್ಟ ಪ್ರೇಕ್ಷಕರಲ್ಲದವರೂ, ಅದರ ಬಗ್ಗೆ ಆಕರ್ಷಿತರಾದದ್ದು, ಇದರೊಂದಿಗೆ ಸಾಮಾಜಿಕ ಮೌಲ್ಯ ಪ್ರತಿಪಾದನೆಯ ಉದ್ದೇಶವುಳ್ಳ ಪ್ರಸಂಗಗಳು ಒಂದಷ್ಟು ಧನಾತ್ಮಕ ಪರಿಣಾಮ ಬೀರುವಲ್ಲಿ ಯಶಸ್ಸು ಕಂಡಿವೆ. ಒಂದಷ್ಟು ಜನಸ್ತೋಮದ ಅಚ್ಚುಮೆಚ್ಚಿನ ಮನರಂಜನೆ ಮಾಧ್ಯಮವಾಗಿ, ಕಾಲದ ಓಘದಲ್ಲಿ ಯಕ್ಷಗಾನ ಕಳೆಗುಂದದೇ ಮುನ್ನಡೆಯಲು ಸಾಧ್ಯವಾಗಿದೆ. ಸಿನೆಮಾ ಆಧರಿತ ಪ್ರಸಂಗಗಳನ್ನೇ ಬರೆದು ಪ್ರಖ್ಯಾತರಾದ ಪ್ರಸಂಗಕರ್ತ ದೇವದಾಸ ಈಶ್ವರಮಂಗಲ ಅವರು ಹೇಳುವ ಪ್ರಕಾರ ಸಿನೆಮಾ ಕಥೆಗಳನ್ನು ರಂಗಕ್ಕೆ ತರುವುದರಿಂದ ಪ್ರೇಕ್ಷಕವರ್ಗ ವಿಸ್ತರಣೆಯಾಗುತ್ತದೆ. ‘ಯಕ್ಷಗಾನ ನಮ್ಮ ನೆಲದ ಕಲೆ. ಅದನ್ನು ಉಳಿಸಿಕೊಳ್ಳಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದನ್ನು ಹೇಗೆ ಉಳಿಸಿಕೊಳ್ಳುವುದು? ಇಂದು ಯಕ್ಷಗಾನವು ಕರಾವಳಿ ಕಡೆಗಷ್ಟೇ ಪರಿಚಿತವಾದ ಕಲೆ. ಬೆಂಗಳೂರಿನAತಹ ನಗರದಲ್ಲಿ ಪ್ರದರ್ಶನಕ್ಕೆ ಬರುವವರೂ ಕರಾವಳಿ ಮೂಲದ ಪ್ರೇಕ್ಷಕರೇ. ಹೀಗೆ ಸಿನೆಮಾಗಳನ್ನು ಯಕ್ಷಗಾನವಾಗಿಸುವುದರಿಂದ ಸಿನೆಮಾದ ಪ್ರೇಕ್ಷಕರೂ ಯಕ್ಷಗಾನ ನೋಡಲು ಒಲವು ತೋರುತ್ತಾರೆ. ಇದೊಂದು ರೀತಿಯಲ್ಲಿ ಯಕ್ಷಗಾನದ ಪ್ರೇಕ್ಷಕವರ್ಗದ ವಿಸ್ತರಣೆಗೂ ಕಾರಣವಾಗುತ್ತದೆ’ (‘ಯಕ್ಷರಂಗದಲ್ಲಿ ಬಾಹುಬಲಿ’ ಪ್ರಜಾವಾಣಿ, ೨೦೧೫, ಸೆ.೩೦)


ಕೆಡುಕುಗಳ ವಿಚಾರದಲ್ಲಿ ಯಕ್ಷಗಾನೀಯ ಪರಂಪರೆಗೆ ಕೆಲವು ವಿಚಾರಗಳಲ್ಲಿ ಧಕ್ಕೆಯಾಗಿವೆ. ಯಕ್ಷಗಾನದ ಶಿಸ್ತು-ಮೌಲ್ಯ ಶ್ರೇಷ್ಠವಾಗಿದ್ದು ಸಿನೆಮಾ ಪ್ರಸಂಗಗಳನ್ನು ಅಳವಡಿಸುವ ಭರದಲ್ಲಿ ಅವುಗಳಿಗೆ ಹಾನಿಯಾಗಿವೆ. ಉದಾ ಕಟ್ಟಪ್ಪನಂತ ಪಾತ್ರಗಳು, ಕೆಲವೊಂದು ಪ್ರಸಂಗಗಳಲ್ಲಿ ಅತಿ ಎನಿಸುವ ಹಾಸ್ಯಗಳು, ಚೌಕಟ್ಟು ಮೀರುವ ಪಾತ್ರಗಳು. ಪರಂಪರೆಯ ಗಂಧ ಜ್ಞಾನವಿಲ್ಲದೇ ಮಾಡಿದ ಪ್ರಯೋಗಗಳು ಯಕ್ಷಗಾನೀಯತೆಗೆ ಹಾನಿಯನ್ನೆಸೆಗುತ್ತದೆ. ಗೌಜಿಯ ಉದ್ದೇಶದಿಂದ ತಂದ ಯಕ್ಷಗಾನದಲ್ಲಿ ಪಟಾಕಿ, ಮದ್ದುಗಳು, ಬ್ಯಾಂಡ್-ವಾಲಗದ ಪ್ರಯೋಗಗಳು, ಅಸಹನೀಯ ಎನ್ನಿಸುವ ಡಬಲ್ ಮೀನಿಂಗ್ ಸಂಭಾಷಣೆಗಳು ರಂಗಪ್ರಯೋಗಗಳ ಸಾವಿಗೆ ಕಾರಣವಾಗುವ ಕುಣಿತಗಳು ಯಕ್ಷಗಾನಕ್ಕೆ ಮಾರಕವಾಗಿವೆ.


ಒಟ್ಟಾರೆಯಾಗಿ ಸಿನೆಮಾದಿಂದ ಯಕ್ಷಗಾನಕ್ಕೆ ಒಳಿತು-ಕೆಡುಕುಗಳ ಪ್ರಭಾವಗಳಾಗಿವೆ. ಯಕ್ಷಗಾನದ ಮೌಲ್ಯವನ್ನು ಮತ್ತಷ್ಟು ಏರಿಸುವಲ್ಲಿ ಅದರ ಪ್ರಭಾವ ಕೆಲಸ ಮಾಡಿದರೆ ಕಲೆ ಉಳಿಯುತ್ತದೆ ಮತ್ತು ಬಾಳುತ್ತದೆ. ಒಳಿತುಗಳನ್ನು ಗಮನಿಸದೇ ಹೋದರೆ, ಒಂದು ರೀತಿಯ ಅವಜ್ಞೆಯ ಮನಸ್ಥಿತಿ ಇದ್ದರೆ ಕಲೆಯ ಹಿನ್ನೆಡೆಗೆ ನೇರ ಕಾರಣವೂ ಆಗಬಹುದು. ಇದನ್ನು ಯಕ್ಷಗಾನ ಪ್ರಸಂಗ ಕರ್ತರು, ಕಲಾವಿದರು ಮತ್ತು ಪ್ರೇಕ್ಷಕರು ಗಮನಿಸಬೇಕಾದ ಅಗತ್ಯವಿದೆ.


# # #



ಗ್ರಂಥ ಋಣ


ಗೌಡ, ಚಿನ್ನಪ್ಪ ಕೆ. (೨೦೧೨). ಯಕ್ಷಸಿರಿ (ಯಕ್ಷಮಂಗಳ ಕೃತಿಮಾಲಿಕೆ ೨). ಮಂಗಳೂರು: ಡಾ.ಪಿ.ದಯಾನಂದ ಪೈ, ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ.

ಜೋಶಿ, ಪ್ರಭಾಕರ ಎಂ. (೨೦೧೫). ಯಕ್ಷಗಾನ ಸ್ಥಿತಿಗತಿ. (ಪ್ರಸಾರಾಂಗ ರಜತ ಗ್ರಂಥ ಸರಣಿ, ಯಕ್ಷಮಂಗಳ ಕೃತಿಮಾಲಿಕೆ ೯) ಮಂಗಳೂರು: ಡಾ.ಪಿ.ದಯಾನಂದ ಪೈ, ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ.

ಕುಂಟಾರ್, ಮೋಹನ (೧೯೯೫). ಯಕ್ಷಗಾನ ಅರ್ಥಗಾರಿಕೆ ಮತ್ತು ಆಧುನಿಕತೆ. ಬೆಂಗಳೂರು: ಅಸೀಮ ಪ್ರಕಾಶನ.

ಕುಂಟಾರ್, ಮೋಹನ (೨೦೧೩). ಯಕ್ಷಗಾನ ಸ್ಥಿತ್ಯಂತರ. ಹೊಸಪೇಟೆ: ಯಾಜಿ ಪ್ರಕಾಶನ.

ಸೋಮೇಶ್ವರ ಅಮೃತ (೨೦೧೩). ಯಕ್ಷತರು (ಲೇಖನ ಸಂಚಯ). ಮಂಗಳೂರು: ಡಾ.ಪಿ.ದಯಾನಂದ ಪೈ, ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ.

ಪದ್ಮನಾಭ ಭಟ್ (೨೦೧೫) ಯಕ್ಷರಂಗದಲ್ಲಿ ಬಾಹುಬಲಿ. (ಮೆಟ್ರೋ) ಬೆಂಗಳೂರು ಆವೃತ್ತಿ ಪ್ರಜಾವಾಣಿ.

ತಲೆಂಗಳ ಕೃಷ್ಣಮೋಹನ (೨೦೧೭) ರಂಗಸ್ಥಳದಲ್ಲಿ ಬಾಹುಬಲಿ ೩ (ಸಚಿತ್ರ ಕರ್ನಾಟಕ). ಮಂಗಳೂರು ಆವೃತ್ತಿ ಕನ್ನಡಪ್ರಭ.

ಬೈಪಡಿತ್ತಾಯ, ಅವಿನಾಶ್ (೨೦೧೭) ಇ-ಕಾಲದ ಯಕ್ಷಗಾನ. ಬೆಂಗಳೂರು ಆವೃತ್ತಿ, ವಿಜಯ ಕರ್ನಾಟಕ.

Comments


bottom of page