top of page

ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯಗಳ ಹೋರಾಟದ ಕಥನ

ಡಾ. ಸಂತೋಷ್ ನಾಯಕ್ ಆರ್

ಸಹಾಯಕ ಪ್ರಾಧ್ಯಾಪಕರು, ಸಮಾಜಶಾಶಾಸ್ತ್ರ ವಿಭಾಗ,

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ೫೭೦೦೦೬.


ಸಾರಾಂಶ

ಭಾರತದಲ್ಲಿನ ಸುಮಾರು ೭೦೦ಕ್ಕೂ ಹೆಚ್ಚಿನ ಬುಡಕಟ್ಟು ಸಮುದಾಯಗಳು ತಮ್ಮ ವಿಶಿಷ್ಟವಾದ ಕಲೆ, ನೃತ್ಯ, ಸಂಗೀತ,

ಆಹಾರ, ಕೃಷಿ ಮತ್ತು ಕರಕುಶಲತೆಯ ಮೂಲಕ ದೇಶದ ಸಾಂಸ್ಕೃತಿಕ ಮತ್ತು ಜ್ಞಾನ ಪರಂಪರೆಯನ್ನು

ಶ್ರೀಮAತಗೊಳಿಸಿವೆ. ಹಾಗೆಯೇ ಬುಡಕಟ್ಟುಗಳ ಸಾಂಪ್ರದಾಯಿಕ ಜೀವನ ಪದ್ಧತಿ ಮತ್ತು ನಿಸರ್ಗ ಸಹಜ ಜೀವನ

ಶೈಲಿಯು, ಪರಿಸರದ ರಕ್ಷಣೆ ಮತ್ತು ಸುಸ್ಥಿರ ಬದುಕಿನ ಪಾಠಗಳನ್ನು ಕಲಿಸುವುದರ ಜೊತೆಗೆ ಇಂದು ಜಗತ್ತು

ಎದುರಿಸುತ್ತಿರುವ ಜಾಗತಿಕ ತಾಪಮಾನದ, ಹವಾಮಾನ ವೈಪರೀತ್ಯದ ಸವಾಲಿಗೆ ಉತ್ತರದಂತೆ ಕಾಣುತ್ತಿರುವುದು

ಇದೀಗ ಜಗತ್ತಿನ ಸಂಶೋಧನಾಸಕ್ತರ ವಿಷಯವಾಗಿದೆ. ಆದರೆ ಕೇವಲ ಅರಣ್ಯಾವಲಂಬಿತ ಜೀವನ ನಡೆಸುತ್ತಾ,

ದೇಶದ ರಾಜಕೀಯ ವಿದ್ಯಮಾನಗಳ ಅರಿವಿರದೆ, ಬುಡಕಟ್ಟು ಸಮುದಾಯಗಳು ಮುಖ್ಯವಾಹಿನಿಯಿಂದ

ಪ್ರತೇಕವಾಗಿದ್ದವು ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಈ ದೇಶದ ನಾಗರೀಕ ಸಮಾಜವು ಬ್ರಿಟೀಷರ ವಿರುದ

್ಧ ಸ್ವಾತಂತ್ರö್ಯ ಸಂಗ್ರಾಮ ನಡೆಸುವ ಮೊದಲೇ ಬುಡಕಟ್ಟು ಸಮುದಾಯಗಳು ಬಂಡಾಯವೆದ್ದ ಕುರಿತು ಮತ್ತು

ಹೋರಾಟವನ್ನು ನಡೆಸಿರುವ ಕುರಿತು ಬಹಳಷ್ಟು ಜನರಿಗೆ ತಿಳಿದಿಲ್ಲ. ಭಾರತದ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯಗಳ ಪಾತ್ರವನ್ನು ದಾಖಲಿಸುವ ಪ್ರಯತ್ನ ಈ ಲೇಖನದಲ್ಲಿದೆ.


ಪ್ರಮುಖ ಪದಗಳು: ಭಾರತದ ಸ್ವಾತಂತ್ರö್ಯ ಸಂಗ್ರಾಮ, ಬುಡಕಟ್ಟುಗಳು, ಬುಡಕಟ್ಟು ಸಮುದಾಯಗಳು, ಬಿರ್ಸಾ ಮುಂಡಾ, ತಿಲ್ಕಾ ಮಾಂಝಿ, ಈಸ್ಟ್ ಇಂಡಿಯಾ ಕಂಪನಿ, ಸುಸ್ಥಿರ ಬದುಕು.


ಪ್ರಸ್ತಾವನೆ

ಬುಡಕಟ್ಟು ಸಮುದಾಯಗಳು ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ನೀಡಿದ ಕೊಡುಗೆಯನ್ನು ಗೌರವಿಸಲು ಕೇಂದ್ರ ಸರ್ಕಾರವು ನವೆಂಬರ್ ೧೫ ಅನ್ನು ಬುಡಕಟ್ಟುಗಳ ಗೌರವ ದಿವಸ ಎಂದು ಕಳೆದ ವರ್ಷವಷ್ಟೇ ಘೋಷಿಸಿದೆ. ನವೆಂಬರ್ ೧೫ ಬುಡಕಟ್ಟು ವೀರ ಬಿರ್ಸಾ ಮುಂಡಾ ಅವರ ಜನ್ಮ ದಿನವಾಗಿದ್ದು, ಸ್ವಾತಂತ್ರ‍್ಯ ಹೋರಾಟದಲ್ಲಿ ಅವರು ವಹಿಸಿದ ಪಾತ್ರ ಆಧುನಿಕ ಭಾರತದ ಇತಿಹಾಸದ ಹಾದಿಯನ್ನೇ ಬದಲಾಯಿಸಿತು. ಬಿರ್ಸಾ ಮುಂಡಾ ಬ್ರಿಟಿಷರ ವಿರುದ್ಧ ಬುಡಕಟ್ಟು ಸಮುದಾಯವನ್ನು ಸಜ್ಜುಗೊಳಿಸಿವರು, ಆದಿವಾಸಿಗಳ ಭೂಮಿಯ ಹಕ್ಕುಗಳನ್ನು ರಕ್ಷಿಸುವ ಕಾನೂನುಗಳನ್ನು ಪರಿಚಯಿಸಲು ಒತ್ತಾಯಿಸಿದವರು. ಬದುಕಿದ ೨೫ ವರ್ಷಗಳ ತೀರಾ ಅಲ್ಪಾವಧಿಯಲ್ಲಿಯೇ, ದೇಶದಾದ್ಯಂತ ಇರುವ ಆದಿವಾಸಿಗಳ ಜೀವನದಲ್ಲಿ ಮೂಲಭೂತ ಬದಲಾವಣೆಗಳನ್ನು ತರಲು ಕಾರಣರಾದವರು.


ಬಿರ್ಸಾ ಮುಂಡಾಗಿAತಲೂ ಮೊದಲೇ ಬ್ರಿಟಿಷರ ವಿರುದ್ಧ ಅಸಮಾಧಾನಗಳು ಮತ್ತು ಹೋರಾಟಗಳು ಪ್ರಾರಂಭವಾಗಿದ್ದನ್ನು ಗಮನಿಸಬಹುದು. ಅನಾದಿ ಕಾಲದಿಂದಲೂ ಕಾಡುಗಳೊಳಗೆ ಬದುಕಿದ ಆದಿವಾಸಿಗಳು ಮತ್ತು ಕಾಡಿನ ಸಮೀಪದಲ್ಲಿಯೇ ವಾಸಿಸುವ ಹಲವಾರು ಗ್ರಾಮಸ್ಥರ ದಿನನಿತ್ಯದ ಜೀವನ ನಡೆಯುತ್ತಿದ್ದುದೇ ಕಾಡುಗಳಿಂದ. ಬೇಟೆಯಾಡಲು, ಗೆಡ್ಡೆಗಳು, ಹಣ್ಣುಗಳು, ಹೂವುಗಳು ಮತ್ತು ಗಿಡಮೂಲಿಕೆಗಳನ್ನು ಸಂಗ್ರಹಿಸಲು ಮತ್ತು ತಮ್ಮ ಸಾಕುಪ್ರಾಣಿಗಳನ್ನು, ಜಾನುವಾರುಗಳನ್ನು ಮೇಯಿಸಲು ಅವರು ಕಾಡುಗಳನ್ನು ಬಳಸುತ್ತಿದ್ದರು. ಒಂದು ರೀತಿಯಲ್ಲಿ ಅವರು ಕಾಡಿನ ಮಾಲೀಕರಾಗಿದ್ದರು. ಕೆಲವೆಡೆ ಅರಣ್ಯ ಕೃಷಿ ನಡೆಸುತ್ತಿದ್ದರು, ತಮ್ಮ ಸರಳವಾದ ಮನೆಗಳನ್ನು ನಿರ್ಮಿಸಲು ಮರಗಳನ್ನು ಅವಲಂಬಿಸಿದ್ದರು. ಕಾಡಿನ ಉತ್ಪನ್ನಗಳಿಂದಲೇ ಬಹುತೇಕ ಆದಾಯವಿದ್ದುದರಿಂದ ಕಾಡನ್ನು ತಮ್ಮ ಜೀವನದ ಭಾಗವಾಗಿ ಕಾಪಾಡಿಕೊಳ್ಳುತ್ತಿದ್ದರು.




ಬುಡಕಟ್ಟುಗಳ ಅಸ್ತಿತ್ವ ನಾಶ ಮಾಡಿದ ಬ್ರಿಟಿಷ್‌ರಾಜ್

ಬ್ರಿಟಿಷರ ಆಳ್ವಿಕೆಯಲ್ಲಿ ಪರಿಸ್ಥಿತಿ ಬದಲಾಯಿತು. ಕೋಲ್ಕತ್ತಾ ಮತ್ತು ಮುಂಬೈನAತಹ ಬೃಹತ್ ನಗರಗಳು ಕಟ್ಟಲ್ಪಡುತ್ತಿದ್ದಂತೆಯೇ ದೇಶದಾದ್ಯಂತ ಸಾವಿರಾರು ಕಿಲೋಮೀಟರ್ ರೈಲು ಮಾರ್ಗಗಳನ್ನು ಹಾಕುವುದು, ಬೃಹತ್ ಹಡಗುಗಳ ನಿರ್ಮಾಣ ಮೊದಲಾದವುಗಳ ಜೊತೆಗೆ ಕೈಗಾರಿಕಾ ವಲಯಗಳ ಸ್ಥಾಪನೆ, ಗಣಿಗಾರಿಕೆಗಳು ಪ್ರಾರಂಭವಾದವು. ಈ ಎಲ್ಲಾ ವಲಯಗಳಿಗೆ ಅಪಾರ ಪ್ರಮಾಣದ ಮರಗಳ ಅಗತ್ಯವಿದ್ದು, ಮರದ ವ್ಯಾಪಾರ, ಅರಣ್ಯಗಳ ಮೇಲೆ ಹಕ್ಕು ಸ್ಥಾಪನೆಯ ಕ್ರಮಗಳು ಹೆಚ್ಚಾಯಿತು.


ಜಲಮೂಲಗಳು ಸೇರಿದಂತೆ ಇಡೀ ಅರಣ್ಯ ಪರಿಸರ ವ್ಯವಸ್ಥೆಯು ಬುಡಕಟ್ಟು ಆರ್ಥಿಕತೆಯ ಆಧಾರವಾಗಿದ್ದು, ಆದಿವಾಸಿಗಳು ಸಹಜವಾಗಿ ಅನುಭವಿಸುತ್ತಿದ್ದ ಅರಣ್ಯ ಸ್ವಾತಂತ್ರö್ಯವನ್ನು ಬ್ರಿಟಿಷರು ಅಡ್ಡಿಪಡಿಸಿದ್ದಲ್ಲದೇ ಜಮೀನ್ದಾರ ವರ್ಗವನ್ನು ಸೃಷ್ಟಿಸಿ ಅವರಿಗೆ ಬುಡಕಟ್ಟುಗಳು ವಾಸಿಸುವ ಪ್ರದೇಶಗಳಲ್ಲಿನ ಭೂಮಿಯ ಮೇಲಿನ ಹಕ್ಕುಗಳನ್ನು ನೀಡಿದರು. ಇದು ಆದಿವಾಸಿಗಳು ಅವರ ಸ್ವಂತ ಭೂಮಿಯಲ್ಲಿಯೇ ಕೇವಲ ಕೂಲಿಕಾರರಾಗಿರುವಂತೆ ಮಾಡಿತು. ಈ ಶೋಷಣೆಯು ಮಿತಿಮೀರಿದ ಹಂತಕ್ಕೆ ತಲುಪಿದ ನಂತರ ಬುಡಕಟ್ಟುಗಳು ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಲು ಕಾರಣವಾಯಿತು.


ಬ್ರಿಟಿಷರ ಒಡೆದು ಆಳುವ ನೀತಿಯು ಬುಡಕಟ್ಟುಗಳ ಮೇಲೂ ತನ್ನ ಪ್ರ‍್ರತಿಕೂಲ ಪರಿಣಾಮಗಳನ್ನು ಬೀರಿತು. ಆದಿವಾಸಿಗಳಿಂದ ದೂರವಿದ್ದ ಆಡಳಿತವು ಈಗ ಬುಡಕಟ್ಟುಗಳ ನಾಯಕರುಗಳನ್ನು ಜಮೀನ್ದಾರರೆಂದು ಗುರುತಿಸಿ, ಜವಾಬ್ದಾರಿಯನ್ನು ನೀಡುವ ಮೂಲಕ ತಮ್ಮ ಆಡಳಿತದ ವ್ಯಾಪ್ತಿಗೆ ಇವರನ್ನು ತಂದರು. ಈ ಸಮುದಾಯಗಳ ಆದಾಯಗಳಿಗೆ ತೆರಿಗೆಯನ್ನು ನಿರ್ಧರಿಸಲಾಯಿತು. ಬುಡಕಟ್ಟುಗಳು ತಮ್ಮ ಮೂಲ ಕಸುಬುಗಳನ್ನು ಬಿಟ್ಟು ಕೃಷಿಕರಾಗಿ ಪರಿವರ್ತನೆಗೊಳ್ಳಬೇಕಾಯಿತು. ಬೇಸಾಯ ಮಾಡಲು ಜಮೀನು ಸಿಗದವರು ಕೃಷಿ ಕಾರ್ಮಿಕರಾದರು ಮತ್ತು ದೂರದ ಪ್ರದೇಶಗಳಲ್ಲಿದ್ದ ಬ್ರಿಟಿಷರ ತೋಟಗಳು, ಗಣಿಗಳು ಮತ್ತು ಕಾರ್ಖಾನೆಗಳಲ್ಲಿ ಕೂಲಿಗಳಾಗಿ ಕೆಲಸ ಮಾಡಲಾರಂಭಿಸಿದರು. ಆದರೆ, ಬಹು ಮುಖ್ಯವಾಗಿ, ಬ್ರಿಟಿಷ್ ಆಡಳಿತ ಮತ್ತು ಅದರ ಜೊತೆಗಿನ ವ್ಯಾವಹಾರಿಕ ಸಂಬAಧವಿರಿಸಿಕೊAಡಿದ್ದ ಹೊರಗಿನವರು ಅಂದರೆ ಬಯಲು ಸೀಮೆಯಿಂದ ಬಂದ ಲೇವಾದೇವಿಗಾರರು, ವ್ಯಾಪಾರಿಗಳು, ಭೂಗಳ್ಳರು ಮತ್ತು ಗುತ್ತಿಗೆದಾರರು ಬುಡಕಟ್ಟು ಪ್ರದೇಶಗಳಿಗೆ ನುಗ್ಗುವ ಪ್ರವೃತ್ತಿಯು ಹೆಚ್ಚಿತು.


ಮಧ್ಯವರ್ತಿಗಳೆಂದು ಕರೆಯಲ್ಪಡುವ ಕಂದಾಯ ರೈತರು ಬುಡಕಟ್ಟು ಸಮುದಾಯಗಳನ್ನು ವಸಾಹತುಶಾಹಿ ಆರ್ಥಿಕತೆ ಮತ್ತು ಶೋಷಣೆಯ ಸುಳಿಯೊಳಗೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಈ ಮಧ್ಯವರ್ತಿಗಳು ಹೊರಗಿನವರಾಗಿದ್ದು, ಅವರು ಬುಡಕಟ್ಟು ಸಮುದಾಯಗಳ ಭೂಮಿಯನ್ನು ಮೋಸದ ತಂತ್ರಗಳ ಮೂಲಕ ಕಬಳಿಸಿ ಆದಿವಾಸಿಗಳನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದರು. ಇದರಿಂದಾಗಿ ಬಹುತೇಕರು ತಮಗಿದ್ದ ಭೂಮಿಯನ್ನು ಸಹ ಕಳೆದುಕೊಂಡರು. ಹೀಗಾಗಿ, ಬ್ರಿಟಿಷ್ ಕಾನೂನಿನ ಸಂಪೂರ್ಣ ಖಾಸಗಿ ಆಸ್ತಿಯ ಪರಿಕಲ್ಪನೆಯು ಬುಡಕಟ್ಟುಗಳು ಅಲ್ಲಿಯವರೆವಿಗೂ ಪಾಲಿಸಿಕೊಂಡು ಬಂದಿದ್ದ ಭೂಮಿಯ ಮೇಲಿನ ಸಾಮೂಹಿಕವಾದ ಜಂಟಿ ಮಾಲೀಕತ್ವದ ಸಂಪ್ರದಾಯವನ್ನು ನಾಶಪಡಿಸಿತು. ವಸಾಹುತುಶಾಹಿ ಆಡಳಿತವು ಬುಡಕಟ್ಟುಗಳು ಮತ್ತು ಅರಣ್ಯದ ನಡುವಿನ ಸಾವಯವ ಸಂಬAಧವನ್ನೇ ಸಂಪೂರ್ಣವಾಗಿ ಬದಲಾಯಿಸಿತು. ಮೊದಲಿಗೆ ಅರಣ್ಯ ಕೃಷಿಯನ್ನು ನಿರ್ಬಂಧಿಸಲಾಯಿತು. ಅರಣ್ಯ ಮತ್ತು ಅದರ ಉತ್ಪನ್ನಗಳ ಮೇಲಿನ ಹಕ್ಕನ್ನು, ಅರಣ್ಯಗಳಲ್ಲಿ ವ್ಯವಸಾಯ, ಪಶುಪಾಲನೆ ಮೊದಲಾದ ಎಲ್ಲಾ ಚಟುವಟಿಕೆಗಳನ್ನು ನಿರಾಕರಿಸಿ, ನಿರ್ಬಂಧಗಳನ್ನು ಹೇರಲಾಯಿತು.


೧೮೫೭ಕ್ಕೂ ಮುಂಚೆಯೇ ಬುಡಕಟ್ಟುಗಳ ಬಂಡಾಯ

೧೮೫೭ರಲ್ಲಿ ಮೊದಲಿಗೆ ಕಾಣಸಿಗುವ ಸ್ವಾತಂತ್ರ‍್ಯ ಹೋರಾಟಕ್ಕೂ ಮುಂಚೆಯೇ ಭಾರತದಾದ್ಯಂತ ಅನೇಕ ಬುಡಕಟ್ಟುಗಳು, ಆದಿವಾಸಿಗಳು ಮತ್ತು ಅವರ ನಾಯಕರು ವಸಾಹತುಶಾಹಿ ಬ್ರಿಟೀಷರ ವಿರುದ್ಧ ದಂಗೆ ಎದ್ದಿದ್ದರು. ಪೂರ್ವದಲ್ಲಿ ಸಂತಾಲ್, ಕೋಲ್, ಹೋ, ಪಹಾಡಿಯಾ, ಮುಂಡಾ, ಓರಾನ್, ಚೆರೋ, ಲೆಪ್ಚಾ, ಭುಟಿಯಾ ಮತ್ತು ಭೂಯಾನ್ ಬುಡಕಟ್ಟುಗಳಿಂದ ಹಿಡಿದು ಈಶಾನ್ಯದಲ್ಲಿ ಖಾಸಿ, ನಾಗಾ, ಅಹೋಮ್, ಮೀಮಾರಿಯಾ, ಅಬೋರ್, ನೈಶಿ, ಜೈನ್ತಿಯಾ, ಗಾರೋ, ಮಿಜೋ, ಸಿಂಗ್ಪೋ, ಕುಕಿ ಮತ್ತು ಲುಶೈ ಬುಡಕಟ್ಟುಗಳು ಹಾಗೆಯೇ ದಕ್ಷಿಣದಲ್ಲಿ ಪದ್ಯಗಾರ್, ಕುರಿಚ್ಯಾ, ಬೇಡ, ಗೊಂಡ್ ಮತ್ತು ಗ್ರೇಟ್ ಅಂಡಮಾನೀಸ್, ಮಧ್ಯ ಭಾರತದಲ್ಲಿ ಹಾಲ್ಬಾ, ಕೋಲ್, ಮುರಿಯಾ, ಕೋಯಿ ಮತ್ತು ಪಶ್ಚಿಮದಲ್ಲಿ ದಂಗ್ ಭಿಲ್, ಮೈರ್, ನಾಯಿಕಾ, ಕೋಲಿ, ಮೀನಾ ಮತ್ತು ಡುಬ್ಲಾ ಬುಡಕಟ್ಟುಗಳು ಬ್ರಿಟಿಷರ ಮೇಲೆ ನಿರಂತರವಾದ ಮತ್ತು ಉಗ್ರವಾದ ದಾಳಿಗಳನ್ನು ಮುಂದುವರೆಸಿದರು.


ಈ ಹೋರಾಟಗಳು ಮತ್ತು ಚಳುವಳಿಗಳು ಅನೇಕ ವೀರರನ್ನು ಹೊರತಂದಿತು. ಅವರಲ್ಲಿ ತಿಲ್ಕಾ ಮಾಂಝಿ, ಟಿಕೇಂದ್ರಜಿತ್ ಸಿಂಗ್, ವೀರ್ ಸುರೇಂದ್ರ ಸಾಯಿ, ತೆಲಂಗಾ ಖರಿಯಾ, ವೀರ್ ನಾರಾಯಣ್ ಸಿಂಗ್, ಸಿಧು, ಕಾನು ಮುರ್ಮು, ರೂಪಚಂದ್ ಕೋನ್ವಾರ್ ಮತ್ತು ಲಕ್ಷ್ಮಣ್ ನಾಯಕ್ ಮೊದಲಾದವರು ಸೇರಿದ್ದಾರೆ. ನಮಗೀಗ ತಿಳಿದಿರುವ 'ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮ' (೧೮೫೭) ನಡೆಯುವ ದಶಕಗಳ ಹಿಂದೆಯೇ, ೧೭೭೧ರಲ್ಲಿ ಇಂದಿನ ಬಿಹಾರ ಮತ್ತು ಜಾರ್ಖಂಡ್‌ನ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ, ನಿರ್ಭೀತನಾದ ಆದಿವಾಸಿ ಯೋಧ ತಿಲ್ಕಾ ಮಾಂಝಿ ನೇತೃತ್ವದಲ್ಲಿ ಬುಡಕಟ್ಟುಗಳ ಬಂಡಾಯವು ಪ್ರಾರಂಭವಾಗಿ, ಆತನನ್ನು ೧೭೮೫ರಲ್ಲಿ ಮರಣದಂಡನೆಗೆ ಒಳಪಡಿಸುವವರೆಗೆ ತೀವ್ರವಾಗಿತ್ತು. ಇದು ಬ್ರಿಟೀಷ್ ವಸಾಹತುಶಾಹಿಗಳ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಶೋಷಣೆಯ ಅಭ್ಯಾಸಗಳಿಂದ ಪ್ರಚೋದಿಸಲ್ಪಟ್ಟ ಸ್ಥಳೀಯ ರಾಜಪ್ರಭುತ್ವದ ವರ್ಗ ಮತ್ತು ಜಮೀನ್ದಾರರ ದಬ್ಬಾಳಿಕೆಗಳ ವಿರುದ್ಧ ಭಾರತದ ಆದಿವಾಸಿ ಸಮುದಾಯಗಳ ಸಾಮಾನ್ಯ ಜನರು ನಡೆಸಿದ ಮೊದಲ ದಂಗೆಯಾಗಿದೆ. ತದನಂತರದಲ್ಲಿ ೧೭೭೪ರ ಹಲ್ಬಾ ದಂಗೆ, ೧೮೧೮ ರ ಭಿಲ್ ದಂಗೆ, ೧೮೩೧ ರ ಕೋಲ್ ದಂಗೆ ಮತ್ತು ೧೮೫೫-೫೬ ರ ಸಂತಾಲ್ ಹೂಲ್ (ಕ್ರಾಂತಿ) ಯಂತಹ ಇತರ ಆದಿವಾಸಿ ದಂಗೆಗಳಿಗೆ ಇದು ಸ್ಫೂರ್ತಿಯನ್ನು ಒದಗಿಸಿತು.


ಇದನ್ನು ಗಮನಿಸಿದಾಗ ನಮಗೆ ತಿಳಿಯುವುದೇನೆಂದರೆ, ವಸಾಹುತುಸಾಹಿಯ ಆರಂಭಿಕ ದಿನಗಳಲ್ಲಿ ಭಾರತದ ಯಾವುದೇ ವರ್ಗ ಅಥವಾ ಸಮುದಾಯಗಳು ಇಂದಿನ ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಸೇರಿದ ಬುಡಕಟ್ಟುಗಳಂತೆ ಸ್ಥಳೀಯ ಮತ್ತು ಪ್ರಬಲ ಪ್ರತಿರೋಧವನ್ನು ನೀಡಲಿಲ್ಲ. ಈ ಹೋರಾಟಗಳ ಮಂಚೂಣಿಯಲ್ಲಿದ್ದವರ ಸಂಕ್ಷಿಪ್ತ ವಿವರಗಳ ಮೂಲಕ ಹೋರಾಟಗಳ ಪ್ರಾರಂಭ ಮತ್ತು ಬೆಳವಣಿಗೆಯನ್ನು ಗುರುತಿಸಬಹುದು. ಮೊದಲಿಗೆ ಬಹುತೇಕ ವಿಸ್ಮೃತಿಯಲ್ಲಿರುವ, ಮೊದಲ ಬುಡಕಟ್ಟು ಹೋರಾಟ ಸಂಘಟಿಸಿದ ತಿಲ್ಕಾ ಮಾಂಝಿಯ ಪರಿಚಯ ಮಾಡಿಕೊಳ್ಳುವುದು ಉಚಿತ.


ತಿಲ್ಕಾ ಮಾಂಝಿ

ಬಿಹಾರದಲ್ಲಿರುವ ಭಾಗಲ್ಪುರ್ ಜಿಲ್ಲೆಯ ಸುಲ್ತಾನ್‌ಗಂಜ್ ಬ್ಲಾಕ್‌ನಲ್ಲಿನ ತಿಲಕ್‌ಪುರ ಗ್ರಾಮದಲ್ಲಿದ್ದ ಪಹಾಡಿಯಾ ಆದಿವಾಸಿ ಕುಟುಂಬದಲ್ಲಿ (ಕೆಲವರ ಪ್ರಕಾರ ಸಂತಾಲ್) ೧೭೫೦ರ ಫೆಬ್ರವರಿ ೧೧ರಂದು ತಿಲ್ಕಾ ಮಾಂಝಿ ಜನಿಸಿದರೆಂದು, ಅವರ ಮೊದಲ ಹೆಸರು ಜಬ್ರಾ ಪಹಾಡಿಯ ಎಂದೂ ಬ್ರಿಟಿಷ್ ಸರ್ಕಾರದ ದಾಖಲೆಗಳಲ್ಲಿ ಹೇಳಲಾಗಿದೆ.


ಈಸ್ಟ್ ಇಂಡಿಯಾ ಕಂಪನಿಯ ಜೊತೆ ಶಾಮೀಲಾದ ರಾಜಪ್ರಭುತ್ವ ಮತ್ತು ಜಮೀನ್ದಾರಿ ವರ್ಗಗಳು ಆದಿವಾಸಿಗಳನ್ನು ಬಹುವಿಧದಲ್ಲಿ ಶೋಷಿಸುವುದನ್ನು ತಿಲ್ಕಾ ಬಹಳ ಚಿಕ್ಕ ವಯಸ್ಸಿನಿಂದಲೇ ಗಮನಿಸಿದ್ದರು. ಕಂಪನಿಯ ಆಗಮನದ ಮೊದಲು ಸಹ, ಸ್ಥಳೀಯ ಜಮೀನ್ದಾರರು ಆದಿವಾಸಿಗಳಿಗೆ ಅಸಮಂಜಸ ತೆರಿಗೆಗಳನ್ನು ವಿಧಿಸುತ್ತಿದ್ದುದು ನಿಜವಾದರೂ ಈಸ್ಟ್ ಇಂಡಿಯಾ ಕಂಪನಿಯ ಆಗಮನದೊಂದಿಗೆ ಪರಿಸ್ಥಿತಿ ಹದಗೆಟ್ಟಿತು. ೧೭೬೪ರ ಬಕ್ಸರ್ ಕದನದಲ್ಲಿ ಮೀರ್ ಖಾಸಿಮ್ ವಿರುದ್ಧ ಗೆಲವನ್ನು ಸಾಧಿಸಿದ ಬ್ರಿಟೀಷರು, ಇಂದಿನ ಜಾರ್ಖಂಡ್, ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಭಾಗಗಳನ್ನು ಒಳಗೊಂಡಿರುವ ಛೋಟಾನಾಗ್‌ಪುರ ಪ್ರಸ್ಥಭೂಮಿ ಪ್ರದೇಶಗಳ ಮೇಲೆ ನೇರವಾಗಿ ಆಡಳಿತ ನಡೆಸಲು (೧೭೬೫) ಮತ್ತು ತೆರಿಗೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದಾಗ, ಆದಿವಾಸಿಗಳು ಸ್ಥಳೀಯ ಲೇವಾದೇವಿದಾರರ ಬಳಿ ಹೆಚ್ಚಿನ ಮಟ್ಟದಲ್ಲಿ ಸಾಲಗಾರರಾಗಲು ಕಾರಣವಾಯಿತು. ಈ ಲೇವಾದೇವಿದಾರ ಮಹಾಜನರೊಂದಿಗೆ ಪಿತೂರಿ ನಡೆಸಿದ ಬ್ರಿಟಿಷ್ ಕಂಪನಿಯು ಈ ಬುಡಕಟ್ಟು ಸಮುದಾಯಗಳಿಗೆ ಸೇರಿದ, ಪಾರಂಪರಿಕವಾದ, ಪಿರ್ತ್ರಾಜಿತವಾದ ಭೂಮಿಯನ್ನು, ಮಾಡಿದ ಸಾಲಗಳಿಗೆ ಬದಲಾಗಿ ಕಸಿದುಕೊಳ್ಳಲು, ವಸೂಲಿ ಮಾಡಲು ಪ್ರಾರಂಭಿಸಿತು. ಇದರ ಪರಿಣಾಮವಾಗಿ, ಅನೇಕ ಆದಿವಾಸಿಗಳು ಒಂದು ಕಾಲದಲ್ಲಿ ಅವರಿಗೆ ಸೇರಿದ್ದ ಭೂಮಿಯಲ್ಲಿಯೇ ಕೃಷಿ ಕಾರ್ಮಿಕರಾಗಿಯೋ ಅಥವಾ ಗೇಣಿದಾರರಾಗಿಯೋ ಆಗಿ ಪರಿವರ್ತನೆಗೊಂಡರು.


ಇದನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದ ೨೦ ವರ್ಷ ವಯಸ್ಸಿನ ತಿಲ್ಕಾ ಭಾಗಲ್ಪುರ್ ಪ್ರದೇಶದಲ್ಲಿನ ತಮ್ಮ ಸಹವರ್ತಿ ಆದಿವಾಸಿಗಳ ಸಣ್ಣ ಗುಂಪುಗಳನ್ನು ಸಜ್ಜುಗೊಳಿಸುವ ಮತ್ತು ಅವರನ್ನು ಉದ್ದೇಶಿಸಿ ಮಾತನಾಡುವ, ತಮಗಾಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಕಂಪನಿಯ ಆಡಳಿತದ ಜೊತೆಗೂಡಿರುವ ಸ್ಥಳೀಯ ಜಮೀನ್ದಾರರು ಮತ್ತು ಮಹಾಜನರಿಂದ ಆಗುತ್ತಿರುವ ಶೋಷಣೆಯನ್ನು ವಿರೋಧಿಸಲು ಜಾತಿ ಮತ್ತು ಬುಡಕಟ್ಟು ಸಂಬAಧಗಳನ್ನು ಮೀರಿ ಸಮೂಹಗಳು ಒಗ್ಗಟ್ಟಾಗಲು ಉತ್ತೇಜಿಸಿದರು.


ಇವೆಲ್ಲದರ ಜೊತೆಗೆ ೧೭೭೦ರಲ್ಲಿ ಉಂಟಾದ ಬಂಗಾಳದ ಕ್ಷಾಮವು ಸರಿಸುಮಾರು ಮೂರು ಕೋಟಿ ಜನರನ್ನು ಕೊಂದಿತು ಮತ್ತು ಸಂತಾಲ್ ಪರಗಣ ಪ್ರದೇಶ ಮತ್ತು ಇಂದಿನ ಜಾರ್ಖಂಡ್‌ನ ಪಕ್ಕದಲ್ಲಿರುವ ಬಿಹಾರದ ಭಾಗಗಳಲ್ಲಿ ಭೀಕರ ಪರಿಣಾಮವನ್ನು ಬೀರಿತು. ಮೊದಲೇ ಜರ್ಜರಿತರಾಗಿದ್ದ ಆದಿವಾಸಿಗಳು ಕ್ಷಾಮದ ಪರಿಸ್ಥಿತಿಯಲ್ಲಿ ಕೆಲವು ರೀತಿಯ ಮಾನವೀಯ ನೆರವು ಮತ್ತು ತೆರಿಗೆಗಳ ಮೇಲಿನ ವಿನಾಯಿತಿಯನ್ನು ನಿರೀಕ್ಷಿಸುತ್ತಿರುವಾಗ, ಕಂಪನಿ ಆಡಳಿತವು ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಬೇರೆಯದೇ ದಾರಿಯನ್ನು ಹಿಡಿಯಿತು. ತೆರಿಗೆ ಸಂಗ್ರಹಿಸಲು ಹೆಚ್ಚು ಕಠಿಣ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದರು, ಲಕ್ಷಾಂತರ ಜನರು ಹಸಿವಿನಿಂದಲೇ ಸಾಯತೊಡಗಿದರು.


ಈ ಪರಿಸ್ಥಿತಿಯಲ್ಲಿ ಕಂಪನಿಯ ಆಡಳಿತದ ವಿರುದ್ಧ ದಂಗೆಯೇಳುವುದನ್ನು ಬಿಟ್ಟು ಆದಿವಾಸಿಗಳಿಗೆ ಬೇರೆ ದಾರಿಯೇ ಇರಲಿಲ್ಲ. ಜನಪ್ರಿಯವಾಗಿರುವ ರಾಬಿನ್‌ಹುಡ್‌ನ ದಂತಕಥೆಯನ್ನು ನೆನಪಿಸುವ ರೀತಿಯಲ್ಲಿ, ತಿಲ್ಕಾ ಮತ್ತು ಅವರ ತಂಡವು ಭಾಗಲ್ಪುರದಲ್ಲಿ ಕಂಪನಿಯ ಖಜಾನೆಯನ್ನು ಲೂಟಿ ಮಾಡಿ ಸಿಕ್ಕಿದ ಸಂಪತ್ತನ್ನು ತಮ್ಮ ಸಹವರ್ತಿ ಆದಿವಾಸಿಗಳು ಮತ್ತು ರೈತರಿಗೆ ವಿತರಿಸಿದರು. ಇದರಿಂದ ಭೀಕರ ಕ್ಷಾಮ ಮತ್ತು ತೆರಿಗೆಗಳಿಂದ ಬಸವಳಿದ ಜನರಿಂದ ಅಪಾರ ಗೌರವ ದೊರೆಯಿತು.


ಈ ದಂಗೆಯ ಕೃತ್ಯಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಬಂಗಾಳದ ಆಗಿನ ಗವರ್ನರ್ ವಾರೆನ್ ಹೇಸ್ಟಿಂಗ್ಸ್, ತಿಲ್ಕಾನನ್ನು ವಶಪಡಿಸಿಕೊಳ್ಳಲು ಮತ್ತು ಆ ಪ್ರದೇಶದಲ್ಲಿ ಹರಡುತ್ತಿದ್ದ ದಂಗೆಯ ಕಿಡಿಗಳನ್ನು ಹತ್ತಿಕ್ಕಲು ಕ್ಯಾಪ್ಟನ್ ಬ್ರೂಕ್‌ನ ನೇತೃತ್ವದಲ್ಲಿ ೮೦೦ ಜನರಿದ್ದ ಪೊಲೀಸ್ ಪಡೆಯನ್ನು ಕಳುಹಿಸಿದರು. ಈ ಪಡೆಗಳು ಆದಿವಾಸಿಗಳ ಮೇಲೆ ಸಾಮೂಹಿಕ ದೌರ್ಜನ್ಯಗಳನ್ನು ನಡೆಸಿದರೂ, ತಿಲ್ಕಾ ಮತ್ತು ಅವರ ಸಹವರ್ತಿ ಆದಿವಾಸಿಗಳ ತಂಡವನ್ನು ಸೆರೆಹಿಡಿಯಲಾಗಲಿಲ್ಲ. ೧೭೭೮ರಲ್ಲಿ, ತಿಲ್ಕಾ ಮತ್ತವರ ತಂಡವು ರಾಮ್‌ಗಢ್ ಕಂಟೋನ್ಮೆAಟ್‌ನಲ್ಲಿ (ಇಂದಿನ ಜಾರ್ಖಂಡ್) ನೆಲೆಸಿದ್ದ ಈಸ್ಟ್ ಇಂಡಿಯಾ ಕಂಪನಿಯ ಪಂಜಾಬ್ ರೆಜಿಮೆಂಟ್‌ನ ಮೇಲೆ ದಾಳಿ ಮಾಡಿ ನಿರ್ಣಾಯಕ ವಿಜಯವನ್ನು ಗಳಿಸಿತು. ಈ ದಾಳಿಯ ಪರಿಣಾಮವಾಗಿ, ಬ್ರಿಟಿಷರು ರಾಮಗಢದಿಂದ ಓಡಿಹೋದರು.


ಈ ಅವಮಾನವನ್ನು ಸಹಿಸಲು ಸಾಧ್ಯವಿಲ್ಲದ ಬ್ರಿಟಿಷರು ಬುಡಕಟ್ಟುಗಳ ದಂಗೆಯನ್ನು ಹತ್ತಿಕ್ಕಲು ಅಗಸ್ಟಸ್ ಕ್ಲೀವ್ಲ್ಯಾಂಡ್ ಎಂಬ ಅಧಿಕಾರಿಯನ್ನು ಮುಂಗೇರ್, ಭಾಗಲ್ಪುರ್ ಮತ್ತು ರಾಜಮಹಲ್ ಜಿಲ್ಲೆಗಳಿಗೆ ಕಲೆಕ್ಟರ್ ಆಗಿ ನೇಮಿಸಿದರು. ಈ ದಂಗೆಯನ್ನು ಎದುರಿಸುವಲ್ಲಿ ಆಗಸ್ಟ್ನ ವಿಧಾನಗಳು ಅವನ ಹಿಂದಿನ ಅಧಿಕಾರಿಗಳಿಗಿಂತ ಹೆಚ್ಚು ಸೂಕ್ಷ್ಮವಾಗಿದ್ದವು. ವಿವಿಧ ಆದಿವಾಸಿ ಸಮುದಾಯಗಳ ನಡುವೆ ವಿಭಜನೆಯ ಬೀಜಗಳನ್ನು ಬಿತ್ತಲು ಆತ ಅನೇಕ ತಂತ್ರಗಳನ್ನು ಹೂಡಿದನು.


ಆತ ಸಂತಾಲಿ ಭಾಷೆಯನ್ನು ಕಲಿತು ಸ್ಥಳೀಯರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ತೊಡಗಿದನು. ಅತಿಯಾಗಿದ್ದ ತೆರಿಗೆಗಳನ್ನು ಹಿಂತೆಗೆದುಕೊAಡು, ಅದರ ಅನುಕೂಲಗಳನ್ನು ಸಂತಾಲ್ ಪರಗಣದಲ್ಲಿದ್ದ ಸುಮಾರು ೪೦ ಬುಡಕಟ್ಟುಗಳಿಗೆ ವಿಸ್ತರಿಸಿದನು. ತೆರಿಗೆ ವಿನಾಯಿತಿಗಳಂತಹ ಪ್ರಯೋಜನಗಳ ಜೊತೆಗೆ ಕೆಲವು ಆದಿವಾಸಿಗಳನ್ನು ಕಂಪೆನಿಯಲ್ಲಿ ಸಿಪಾಯಿಗಳಾಗಿ ಸೇರಿಸಿಕೊಂಡು ಉದ್ಯೋಗಾವಕಾಶ ನೀಡಿದನು. ಬುಡಕಟ್ಟುಗಳು ಜೇನು ಮತ್ತು ಮೇಣವನ್ನು ಮಾರಾಟ ಮಾಡಲು ಅನುಮತಿಸಿದನು ಮತ್ತು ಅರಣ್ಯ ಪ್ರದೇಶಗಳಲ್ಲಿ ತಮ್ಮ ಪರವಾಗಿ ಕೆಲಸ ಮಾಡಬಲ್ಲ ಬುಡಕಟ್ಟುಗಳ ವ್ಯಕ್ತಿಗಳನ್ನೇ ನೇಮಿಸಿಕೊಳ್ಳುವ ಮೂಲಕ ಇದುವರೆಗೆ ಒಗ್ಗಟ್ಟಿನಿಂದಿದ್ದ ಸಮುದಾಯಗಳನ್ನು ಒಡೆಯಲು ಯಶಸ್ವಿಯಾದನು.


ಇನ್ನೊಂದೆಡೆ ತಿಲ್ಕಾ, ಎಲ್ಲಾ ಬುಡಕಟ್ಟು ಸಮುದಾಯಗಳನ್ನು ಸಂಘಟಿಸಲು ಮತ್ತು ಸಜ್ಜುಗೊಳಿಸುವುದನ್ನು ಮುಂದುವರೆಸಿದನು. ಕೆಲವು ದಾಖಲೆಗಳು ಹೇಳುವಂತೆ ಅವನು ತನ್ನ ಸಹವರ್ತಿ ಬುಡಕಟ್ಟು ಮುಖ್ಯಸ್ಥರಿಗೆ ಸಂದೇಶಗಳನ್ನು ಕಳುಹಿಸಿ ಬ್ರಿಟಿಷರನ್ನು ಓಡಿಸಲು ಮತ್ತು ತಮ್ಮ ಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಒಗ್ಗಟ್ಟಾಗುವಂತೆ ಕೇಳಿಕೊಳ್ಳುತ್ತಾನೆ. ಆದಿವಾಸಿಗಳ ಐಕ್ಯತೆಯ ಅಡಿಪಾಯವು ಆಗಸ್ಟಸ್‌ನ ಪ್ರಲೋಭನೆಯಿಂದಾಗಿ ಸಡಿಲಗೊಂಡಿದ್ದರೂ ಸಹ, ತಿಲ್ಕಾಗೆ ಇನ್ನೂ ಹೆಚ್ಚಿನ ಬೆಂಬಲ ದೊರಕುವಂತಾಯಿತು. ಮತ್ತು ೧೭೮೪ ರಲ್ಲಿ ಭಾಗಲ್ಪುರದಲ್ಲಿ ಮತ್ತೊಮ್ಮೆ ಕಂಪನಿಯ ಪಡೆಗಳ ವಿರುದ್ಧ ಹಠಾತ್ ಆಕ್ರಮಣವನ್ನು ಪ್ರಾರಂಭಿಸಿದರು. ಈ ದಾಳಿಯಲ್ಲಿ ಆಗಸ್ಟಸ್‌ನನ್ನು ವಿಷದ ಬಾಣದಿಂದ ಕೊಲ್ಲಲಾಯಿತು.


ದಂಗೆಯನ್ನು ಹತ್ತಿಕ್ಕಲು ಮತ್ತು ತಿಲ್ಕಾನನ್ನು ಕೊಲ್ಲಲು ಅಥವಾ ವಶಪಡಿಸಿಕೊಳ್ಳಲು ಲೆಫ್ಟಿನೆಂಟ್ ಜನರಲ್ ಐರ್‌ಕೂಟ್ ಅವರ ನೇತೃತ್ವದಲ್ಲಿ ಬಲವಾದ ಪಡೆಯನ್ನು ರಚಿಸಲಾಯಿತು. ಬುಡಕಟ್ಟಿನವನೇ ಆದ ಒಬ್ಬನು ತಿಲ್ಕಾನ ತಂಡ ಇರುವ ಸ್ಥಳದ ಬಗ್ಗೆ ಬ್ರಿಟಿಷರಿಗೆ ಮಾಹಿತಿ ತಿಳಿಸಿದ. ಬ್ರಿಟಿಷರು ಅರಣ್ಯವನ್ನು ಸುತ್ತುವರೆದರು. ಅಂತಿಮವಾಗಿ ೧೭೮೫ರ ಜನವರಿ ೧೨ರಂದು ಅವನನ್ನು ವಶಪಡಿಸಿಕೊಂಡರು ದಂಗೆಯನ್ನು ಹತ್ತಿಕ್ಕಿದರು. ತಿಲ್ಕಾನ ಉದಾಹರಣೆಯಿಂದ ಜನರಲ್ಲಿ ಭೀತಿ ಮೂಡಿಸುವ ಸಲುವಾಗಿ, ಅವನನ್ನು ಕುದುರೆಗಳಿಗೆ ಕಟ್ಟಿ ಭಾಗಲ್ಪುರದ ಕಲೆಕ್ಟರ್ ನಿವಾಸಕ್ಕೆ ಎಳೆದು ತರಲಾಯಿತು. ಭಾಗಲ್ಪುರ್ ತಲುಪಿದಾಗಲೂ ತೀವ್ರ ಗಾಯಗಳಾಗಿ ತಿಲ್ಕಾ ಜೀವಂತವಾಗಿದ್ದರು. ಜನವರಿ ೧೩ರಂದು ತಿಲ್ಕಾ ಮಾಂಝಿಯನ್ನು ಗಲ್ಲಿಗೇರಿಸಲಾಯಿತು. ಆಗ ಆತನಿಗೆ ಕೇವಲ ೩೫ ವರ್ಷ ವಯಸ್ಸು.


ಕೊನೆಯ ಮಾತು

೧೯೯೧ರಲ್ಲಿ ಬಿಹಾರ ಸರ್ಕಾರವು ಭಾಗಲ್ಪುರ್ ವಿಶ್ವವಿದ್ಯಾಲಯವನ್ನು ತಿಲ್ಕಾ ಮಾಂಝಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡುವ ಮೂಲಕ ಅವರನ್ನು ಗೌರವಿಸಿತು. ಆದಾಗ್ಯೂ, ಬ್ರಿಟಿಷರು ನಿರ್ವಹಿಸಿದ ದಾಖಲೆಗಳು, ಈ ಆದಿವಾಸಿ ಸಮುದಾಯಗಳ ಮೌಖಿಕ ಸಂಪ್ರದಾಯಗಳು ಮತ್ತು ಮಹಾಶ್ವೇತಾ ದೇವಿ ಮತ್ತು ಹಿಂದಿ ಕಾದಂಬರಿಕಾರ ರಾಕೇಶ್ ಕುಮಾರ್ ಸಿಂಗ್ ಅವರ ಜನಪ್ರಿಯ ಬರಹಗಳು ಇಲ್ಲದಿದ್ದರೆ, ವಸಾಹತುಶಾಹಿಯ ಗುಲಾಮಗಿರಿ ಮತ್ತು ಶೋಷಣೆಯ ವಿರುದ್ಧ ಬುಡಕಟ್ಟುಗಳು ನಡೆಸಿದ ಹೋರಾಟಗಳನ್ನು ನಾವು ಎಂದಿಗೂ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ತಿಲ್ಕಾನ ನಂತರವೂ ಸ್ವಾತಂತ್ರ‍್ಯ ಚಳವಳಿಗೆ ಬುಡಕಟ್ಟು ಸಮುದಾಂiÀಗಳು ನಿರಂತರ ಹೋರಾಟವನ್ನು ನಡೆಸಿತು. ಇದರಲ್ಲಿ ಭಾಗವಹಿಸಿದ ಮಹಿಳೆಯರ ಸಂಖ್ಯೆ ಸಹ ಅಪಾರ. ರಾಣಿ ಗೈಡಿನ್ಲಿಯು, ಫುಲೋ, ಜಾನೋ ಮುರ್ಮು, ಹೆಲೆನ್ ಲೆಪ್ಚಾ ಮತ್ತು ಪುತಲಿ ಮಾಯಾ ತಮಾಂಗ್ ಮೊದಲಾದ ಹೆಸರುಗಳು ಅಜರಾಮರವಾಗಿರುವಂತದ್ದು. ಅದೇ ರೀತಿ ಇತರೆ ಹಲವಾರು ಬುಡಕಟ್ಟು ಸಮುದಾಯಗಳು ಸಹ ವಸಾಹತುಶಾಹಿ ಶಕ್ತಿಯ ವಿರುದ್ಧ ಮತ್ತು ಜಮೀನ್ದಾರರು, ಲೇವಾದೇವಿಗಾರರು, ಭೂಮಾಲೀಕರು ಮತ್ತು ಕಂದಾಯ ಅಧಿಕಾರಿಗಳ ದಂಗೆಯೆದ್ದವು. ಇವುಗಳಲ್ಲಿ ಪ್ರಮುಖವಾಗಿ ನಾಗಾ, ಗರೋಸ್ ಮತ್ತು ಕೋಲಿ ಸಮುದಾಯಗಳನ್ನು ಇಲ್ಲಿ ಉಲ್ಲೇಖಿಸಬಹುದು.


ಸ್ವಾತಂತ್ರ‍್ಯಕ್ಕಾಗಿ, ಪ್ರತಿಯೊಂದು ಪ್ರದೇಶವೂ ತನ್ನದೇ ಆದ ರೀತಿಯಲ್ಲಿ ಯುದ್ಧವನ್ನು ಮಾಡುತ್ತಿತ್ತು. ಬುಡಕಟ್ಟು ವೀರರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧದ ಅನೇಕ ಪ್ರತಿಭಟನೆಗಳು ನಡೆದವು. ಈ ಹೋರಾಟಗಳು ಅವರ ಪರಂಪರಾಗತ ಭೂಮಿಗಾಗಿ ಮತ್ತು ಅವರ ಜನರಿಗಾಗಿ ನಡೆದವು. ಬಾಂಬು, ಟ್ಯಾಂಕುಗಳAತಹ ಆಧುನಿಕ ಪರಿಕರಗಳ ಬಳಕೆಯಿಲ್ಲದೆ ನಡೆದ ಈ ಆದಿವಾಸಿ ಸಮುದಾಯಗಳ ಹೋರಾಟವು ಮುಂದೆ ಕ್ರಾಂತಿಯಾಗಿ ಬೆಳೆದದ್ದನ್ನು ಇತಿಹಾಸದಲ್ಲಿ ಗಮನಿಸಬಹುದು. ಇದೇ ಸಾಲಿನಲ್ಲಿ ಶಹೀದ್ ವೀರ್ ನಾರಾಯಣ ಸಿಂಗ್, ಬಿರ್ಸಾ ಮುಂಡ, ಅಲ್ಲೂರಿ ಸೀತಾ ರಾಮರಾಜು, ರಾಣಿ ಗೈಡಿನ್ಲಿಯು, ಸಿಧು ಮತ್ತು ಕನ್ಹು ಮುರ್ಮು ಮೊದಲಾದವರು ರೂಪಿಸಿದ ಹೋರಾಟಗಳನ್ನು ಗಮನಿಸಿದರೆ ಬುಡಕಟ್ಟುಗಳು ತಮ್ಮ ಸ್ವಾತಂತ್ರö್ಯಕ್ಕಾಗಿ ತೆತ್ತ ಬೆಲೆ ಮತ್ತು ಹೋರಾಟದ ಹಾದಿಗಳ ಅರಿವು ಉಂಟಾಗುತ್ತದೆ.



ಉಲ್ಲೇಖಗಳು ಮತ್ತು ಆಧಾರ


Shubha Johari, Tribal Dissatisfaction Under Colonial Economy of 19th Century, Vidyasagar University Journal of History ,Vol.1,2012-13

Sumit Sarkar, Modern India 1885 to 1947, 1983, p. 44.

Bipan chandra, India's Struggle for Independence 1857 to 1947, New Delhi, 1988, p. 45.https://www.hindustantimes.com/opinion/recognising-the-role-of-tribal-communities-in-indian-independence-101636898590636.html https://www.thebetterindia.com/270899/history-tilka-manjhi-fearless-adivasi-led-indias first-peoples-revolt-british/

George, Goldy M. (2020) Tilka Manjhi: The Adivasi warrior who led the first people’s revolt against the British. https://www.forwardpress.in/2020/02/tilka-manjhi-the-adivasi-warrior-who-led-the-first-peoples-revolt-against-the-british/ Retrieved on 30 November from https://amritmahotsav.nic.in/unsung-heroes-detail.htm?281

Anurag, Akash. (2020) Tilka Manjhi: A Tribal Hero Our History Books Forgot. Retrieved on 30 November 2021 from https://www.livehistoryindia.com/story/snapshort-histories/tilka-manjhi/

Sumit Sarkar, Modern India 1885 to 1947, 1983.

https://www.youthkiawaaz.com/2019/08/tribal-freedom-fighters-who-fought-for-indias-independence/

Dagar, Nisha. (2019). Tilka Manjhi: Bharatiya Swatantrata Sangram Ka Pahla Swatantrata Senani. Retrieved on 5 February 2020 from https://hindi.thebetterindia.com/11842/tilka-manjhi-was-the-first-indian-freedom-fighter/

https://www.ambedkaritetoday.com/2019/11/tilka-manjhi.html

Sumit Sarkar, op. cit., p. 45.

Arundaya, 18th September 1879, Report on Native Indian Papers,Bombay, p. 4 [MF, IOL, London].

Dagar, Nisha. (2019). Tilka Manjhi: Bharatiya Swatantrata Sangram Ka Pahla Swatantrata Senani. Retrieved on 5 February 2020 from

Anurag, Akash. (2020) Tilka Manjhi: A Tribal Hero Our History Books Forgot. Retrieved on 30 November 2021 from https://www.livehistoryindia.com/story/snapshort-histories/tilka-manjhi/

George, Goldy M. (2020) Tilka Manjhi: The Adivasi warrior who led the first people’s revolt against the British. Retrieved on 30 November from .





Comments


bottom of page