top of page

ಸಣ್ಣ ಪತ್ರಿಕೆಗಳ ಮೇಲೆ ಕೋವಿಡ್ -19 ಪ್ರಭಾವ

ಪದ್ಮಾವತಿ ಕೆ.

ಸಂಶೋಧನಾರ್ಥಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ,ಶಂಕರಘಟ್ಟ- 577 451, ಶಿವಮೊಗ್ಗ, ಕರ್ನಾಟಕ.


ಸತೀಶ್‌ಕುಮಾರ್

ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ,ಶಂಕರಘಟ್ಟ- 577 451, ಶಿವಮೊಗ್ಗ, ಕರ್ನಾಟಕ.



ಸಾರಾಂಶ: ಪತ್ರಿಕೆಗಳು ಸಮಾಜದ ವಿವಿಧ ರಂಗಗಳಲ್ಲಿನ ವಿದ್ಯಮಾನಗಳನ್ನು ತಿಳಿಸುವಲ್ಲಿ ಮತ್ತುಜನಜಾಗೃತಿ ಮೂಡಿಸುವಲ್ಲಿ ಅತ್ಯಂತ ಪ್ರಬಲ ಮತ್ತು ಪ್ರಭಾವಿಯುತ ಸಾಧನಗಳು. ಚೀನಾದ ವುಹಾನ್ ನಗರದಲ್ಲಿ ಡಿಸೆಂಬರ್ 2019 ರಲ್ಲಿ ಮೊದಲು ಕಂಡು ಬಂದ ಕರೋನಾ ಎಂಬ ಸಾಂಕ್ರಮಿಕ ರೋಗ ಇಡೀ ಜಗತ್ತನ್ನೇ ತಲ್ಲಣಗೊಳಿಸಿತು. ಪ್ರಪಂಚವನ್ನೇ ಕೆಲವು ತಿಂಗಳುಗಳ ಕಾಲ ಸ್ತಬ್ದಗೊಳಿಸಿತು. ಜನರನ್ನು ಮನಯಲ್ಲೇ ಬಂಧಿಸಿತು. ನಮ್ಮ ಊಹೆಗೂ ಮೀರಿದ ಪರಿಸ್ಥಿತಿ ಜಗತ್ತಿನಾದ್ಯಂತ ನಿರ್ಮಾಣವಾಯಿತು. ಕೋವಿಡ್-೧೯ ನಂತಹ ಆರೋಗ್ಯ ತುರ್ತು ಪರಿಸ್ಥಿತಿಯಲ್ಲೂ ಸಣ್ಣ, ಮಧ್ಯಮ ಮತ್ತು ದೊಡ್ಡ ಪತ್ರಿಕೆಗಳು ಜನಸಾಮಾನ್ಯರಿಗೆ ಸಕಾಲಕ್ಕೆ ಮಾಹಿತಿಯನ್ನು ಮುಟ್ಟಿಸುವ ಮೂಲಕ ವೃತ್ತಿಪರತೆಯನ್ನು ಕಾಯ್ದುಕೊಂಡವು.ದಿನಪತ್ರಿಕೆಗಳ ಮುಖ್ಯ ಆದಾಯದ ಮೂಲ ಒಂದು ಓದುಗರು, ಮತ್ತೊಂದು ಜಾಹೀರಾತು. ಸಾರಿಗೆ ಸಂಚಾರ ಸ್ಥಗಿತಗೊಳ್ಳುತ್ತಿದ್ದಂತೆ ಪತ್ರಿಕೆಗಳ ಪ್ರಸರಣೆ ಕುಸಿಯಿತು. ಇದರ ಪರಿಣಾಮವಾಗಿ ಪತ್ರಿಕೆಗಳ ಪುಟ ಸಂಖ್ಯೆ ಕಡಿಮೆಯಾಯಿತು. ಪತ್ರಿಕೆಗಳಿಗೆ ಬರುತ್ತಿದ್ದ ಜಾಹೀರಾತುಗಳ ಪ್ರಮಾಣವೂ ಕಡಿಮೆಯಾಯಿತು. ಈ ಸಂದರ್ಭದಲ್ಲಿ ಪತ್ರಿಕೆಗಳು ಆರ್ಥಿಕವಾಗಿ ನಷ್ಟಕ್ಕೊಳಗಾದವು. ಅದರಲ್ಲೂ ಸಣ್ಣ ಪತ್ರಿಕೆಗಳು ಮುದ್ರಣ ಕಾಗದ ಖರೀದಿ ಸಮಸ್ಯೆ, ಪತ್ರಿಕೆ ವಿತರಣೆಯಲ್ಲಿ ತೊಂದರೆ, ಪತ್ರಕರ್ತರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗದಿರುವುದು ಸೇರಿದಂತೆ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಈ ಹಿನ್ನಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಸಣ್ಣ ಪತ್ರಿಕೆಗಳು ನಿರ್ವಹಿಸಿದ ಪಾತ್ರ ಮಹತ್ವದ್ದಾಗಿದೆ.


ಮುಖ್ಯಪದಗಳು: ಸಣ್ಣ ಪತ್ರಿಕೆಗಳು, ಕೋವಿಡ್-19, ಆರೋಗ್ಯ ಜಾಗೃತಿ, ಪ್ರಸರಣೆ, ಪತ್ರಕರ್ತರು


ಪ್ರಸ್ತಾವನೆ

ನಮ್ಮ ದೇಶದಲ್ಲಿ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಮಾನದಂಡವಾಗಿಟ್ಟುಕೊಂಡು ಪತ್ರಿಕೆಗಳನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಪತ್ರಿಕೆಗಳೆಂದು ವರ್ಗಿಕರಣ ಮಾಡಲಾಗಿದೆ. ಈ ಮಾನದಂಡದ ಪ್ರಕಾರ 25 ಸಾವಿರಕ್ಕಿಂತ ಕಡಿಮೆ ಪ್ರಸಾರ ಹೊಂದಿರುವ ಪತ್ರಿಕೆಗಳನ್ನು ಸಣ್ಣ ಪತ್ರಿಕೆಗಳೆಂದು, 25 ಸಾವಿರದಿಂದ 25 ಸಾವಿರ ಪ್ರಸಾರವನ್ನು ಹೊಂದಿರುವ ಪತ್ರಿಕೆಗಳನ್ನು ಮಧ್ಯಮ ಪತ್ರಿಕೆಗಳೆಂದು, 25 ಸಾವಿರ ಮೇಲ್ಪಟ್ಟು ಪ್ರಸಾರವನ್ನು ಹೊಂದಿರುವ ಪತ್ರಿಕೆಗಳನ್ನು ದೊಡ್ಡ ಪತ್ರಿಕೆಗಳೆಂದು ಗುರುತಿಸಲಾಗಿದೆ. ಸರ್ಕಾರ ಇದೇ ನಿಯಮದ ಪ್ರಕಾರ ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡುತ್ತದೆ.



ಸಣ್ಣ ಪತ್ರಿಕೆಗಳು ಸಾಮಾನ್ಯವಾಗಿ ಸ್ಥಳೀಯ ಭಾಷೆಯಲ್ಲಿ ಪ್ರಕಟವಾಗುತ್ತವೆ. ಈ ಪತ್ರಿಕೆಗಳು ಸ್ಥಳೀಯ ಸಮಸ್ಯೆಗಳನ್ನು ಹೆಚ್ಚಾಗಿ ಚರ್ಚಿಸುವ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಇವುಗಳನ್ನು ಸ್ಥಳೀಯ ಪತ್ರಿಕೆಗಳು ಮತ್ತು ಜಿಲ್ಲಾ ಪತ್ರಿಕೆಗಳು ಎಂದು ಕರೆಯಲಾಗುತ್ತದೆ. ಸಣ್ಣ ಪತ್ರಿಕೆಗಳು ಸಾಮಾನ್ಯವಾಗಿ ಏಕವ್ಯಕ್ತಿ ಮಾಲೀಕತ್ವದಲ್ಲಿರುತ್ತವೆ. ಸಣ್ಣ ಪತ್ರಿಕೆಗಳ ಪ್ರಸಾರವು ಸ್ಥಳೀಯ ಅಥವಾ ಪ್ರಾದೇಶಿಕವಾಗಿರುತ್ತದೆ. ಕೆಲವೊಂದು ಸಣ್ಣ ಪತ್ರಿಕೆಗಳು ಅನಿವಾರ್ಯ ಕಾರಣದಿಂದ ನಗರ ಇಲ್ಲವೇ ಪಟ್ಟಣಗಳಲ್ಲಿ ಪ್ರಕಟಗೊಂಡರೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಸಾರವಾಗುತ್ತವೆ. ರಾಷ್ಟ್ರೀಯ ಪತ್ರಿಕೆಗಳಿಗಿಂತ ಇವು ಹೆಚ್ಚು ಪರಿಣಾಮಕಾರಿಯಾಗಿ ಗ್ರಾಮೀಣ ಜನರನ್ನು ತಲುಪುತ್ತವೆ.


“ಪ್ರಜಾಪ್ರಭುತ್ವದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾದುದು. ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ರಾಜ್ಯ ಮತ್ತು ಪ್ರಾದೇಶಿಕ ಸಂಗತಿ, ಸಮಸ್ಯೆಗಳ ಮೇಲೆ ಹೆಚ್ಚು ಬೆಳಕು ಚೆಲ್ಲಬಲ್ಲವು. ಜನತೆಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಲು ವೇದಿಕೆಯನ್ನೊದಗಿಸುತ್ತವೆ. ಈ ಪತ್ರಿಕೆಗಳು ಅನೇಕ ವಿಷಯಗಳಲ್ಲಿ ಆಡಳಿತಯಂತ್ರ ಮತ್ತು ಜನತೆಯ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಸಣ್ಣ ಪತ್ರಿಕೆಗಳು ಸೀಮಿತ ಪ್ರದೇಶದಲ್ಲಿ ಕೆಲವು ದೊಡ್ಡ ಪತ್ರಿಕೆಗಳಿಗಿಂತ ಜನತೆಯೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರುತ್ತವೆ. ಸರ್ಕಾರದ ಧೋರಣೆ ಮತ್ತು ಕಾರ್ಯಕ್ರಮಗಳನ್ನು ಜನತೆಯ ಮುಂದಿಟ್ಟು ಸಾರ್ವಜನಿಕ ಅನಿಸಿಕೆಗಳನ್ನು ಸರ್ಕಾರದ ಗಮನಕ್ಕೆ ತರುತ್ತವೆ. ಈ ದೃಷ್ಠಿಯಿಂದ ಸಣ್ಣ ಪತ್ರಿಕೆಗಳು ರಾಷ್ಟ್ರ ಮತ್ತು ರಾಜ್ಯಕ್ಕೆ ಅತಿ ಮುಖ್ಯ” ಎಂದು ಮಾಜಿ ಮುಖ್ಯಮಂತ್ರಿ ಆರ್. ಗುಂಡುರಾವ್ ಅವರು ಸುದ್ದಿ ಹಾಗೂ ಮಾಧ್ಯಮ ಪತ್ರಿಕೆಗಳ ಸಂಘದ ವಾರ್ಷಿಕಾಧಿವೇಶನದ ಭಾಷಣದಲ್ಲಿ ಹೇಳಿರುವುದನ್ನು ಕೆ.ರಾಮಣ್ಣ ಅವರು ನಮ್ಮ ಪತ್ರಿಕೋದ್ಯಮ ಕೃತಿಯಲ್ಲಿ ದಾಖಲಿಸಿದ್ದಾರೆ.


ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಜಿಲ್ಲಾ ಪತ್ರಿಕೆಗಳ ಪಾತ್ರವೂ ಮಹತ್ವದ್ದು. ಸ್ಥಳೀಯ ಸುದ್ದಿ ಪ್ರಕಟಣೆಯ ಜೊತೆಗೆ ಆಯಾ ಪ್ರದೇಶದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಮುಖ ಜಿಲ್ಲಾ ಪತ್ರಿಕೆಗಳಾದ ಮೈಸೂರಿನ `ಆಂದೋಲನ', `ಮೈಸೂರು ಮಿತ್ರ', ದಕ್ಷಿಣ ಕನ್ನಡದ `ಜನವಾಹಿನಿ', `ಕರಾವಳಿ ಅಲೆ', ಬೆಳಗಾವಿಯ `ಕನ್ನಡಮ್ಮ', ಉತ್ತರ ಕನ್ನಡದ `ಕರಾವಳಿ ಮುಂಜಾವು' `ಲೋಕಧ್ವನಿ', ರಾಯಚೂರಿನ `ಸುದ್ದಿಮೂಲ', ಗುಲ್ಬರ್ಗದ `ಕ್ರಾಂತಿ', ಬಳ್ಳಾರಿಯ ಬಳ್ಳಾರಿ ಬೆಳಗಾಯಿತು, ಹೊಸಪೇಟಿಯ ಹೊಸಪೇಟೆ ಟೈಮ್ಸ್ ಮತ್ತು ಸ್ವತಂತ್ರ ಹೋರಾಟ ಸೇರಿದಂತೆ ಹಲವು ಜಿಲ್ಲಾಮಟ್ಟದ ದಿನಪತ್ರಿಕೆಗಳು ಕಾರ್ಯನಿರ್ವಹಿಸಿರುವುದನ್ನು ಗುರುತಿಸಬಹದು.

ಕರ್ನಾಟಕದಲ್ಲಿ ಸುಮಾರು ಒಂದು ಸಾವಿರದ ಎಂಟು ಸಣ್ಣ ಪತ್ರಿಕೆಗಳಿವೆ. ಬೆಂಗಳೂರು ನಗರ ಜಿಲ್ಲೆಯಲ್ಲೇ ೬೫೪ ಸಣ್ಣ ಪತ್ರಿಕೆಗಳಿವೆ ಎಂದು ಜಿ.ಎನ್ ರಂಗನಾಥ ರಾವ್ ಅವರು ಪತ್ರಿಕೋದ್ಯಮ ಸಮಗ್ರ ಸಂಪುಟ ಕೃತಿಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 401 ಸಣ್ಣ ಪತ್ರಿಕೆಗಳು ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ರಾಜ್ಯಮಟ್ಟದ ದಿನಪತ್ರಿಕೆಗಳ ಪೈಪೋಟಿಯ ನಡುವೆ ಹಲವು ಸಂಕಷ್ಟಗಳನ್ನು ಎದುರಿಸಿಯೂ ಮುನ್ನಡೆಯುತ್ತಿರುವ ಜಿಲ್ಲಾ ಪತ್ರಿಕೆಗಳೂ ಕಾಲಕಾಲಕ್ಕೆ ಬದಲಾವಣೆಗಳನ್ನು ಕಂಡಿವೆ.ಇತ್ತೀಚಿಗೆ ಜಿಲ್ಲಾ ಪತ್ರಿಕೆಗಳು ಸ್ಥಳೀಯ ಸುದ್ದಿ, ಮಾಹಿತಿಗಳನ್ನು ವೆಬ್‌ಸೈಟ್ ಮತ್ತು ಇ-ಪತ್ರಿಕೆಗಳಲ್ಲಿ ಪ್ರಸಾರ ಮಾಡುವ ಮೂಲಕ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ. ಕೋವಿಡ್ ಕಾಲದಲ್ಲಿ ಸಣ್ಣ ಪತ್ರಿಕೆಗಳು ಸಹ ಸಕ್ರೀಯವಾಗಿ ಕಾರ್ಯನಿರತವಾಗಿ ಜನರಿಗೆ ಸಾಂಕ್ರಮಿಕ ರೋಗದ ಬಗ್ಗೆ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿವೆ.


ಸಾಹಿತ್ಯ ವಿಮರ್ಶೆ

ಧನಶ್ರೀ ಮತ್ತಿತರರು (2021) ಬರೆದ‘The Role of Mass media and its impact on general public during coronavirus disease 2019 pandemic in North India: An online Assessment' ಲೇಖನದಲ್ಲಿ ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ವಿವಿಧ ಮಾಧ್ಯಮಗಳ ಬಳಕೆ ಮತ್ತು ಪ್ರಭಾವ ಹೇಗಿತ್ತು ಎಂಬುದನ್ನು ವಿಶ್ಲೇಷಿಸಿದ್ದಾರೆ. ಕರೋನಾ ಲಾಕ್‌ಡೌನ್ ನಂತರದ ದಿನಗಳಲ್ಲಿ ಪತ್ರಿಕೆ, ರೇಡಿಯೋ ಮತ್ತು ನಿಯಕಾಲಿಕೆಗಳ ಬಳಕೆಯು ಗಮನಾರ್ಹವಾಗಿ ಕುಸಿತ ಕಂಡಿವೆ. ಇದೇ ಸಂದರ್ಭದಲ್ಲಿ ಟೆಲಿವಿಷನ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ಪ್ರಮಾಣ ಹೆಚ್ಚಾಗಿರುವುದನ್ನು ಅವರು ಗುರುತಿಸಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾದ ಕರೋನ ಸಂಬಂಧಿತ ಮಾಹಿತಿ, ಸುದ್ದಿಗಳಿಂದ ಶೇ. 50ರಷ್ಟು ಜನರು ಭಯ, ಆತಂಕ, ಒತ್ತಡಕ್ಕೆ ಒಳಗಾಗಿರುವುದನ್ನು ಕಂಡುಕೊಂಡಿದ್ದಾರೆ.


ದೀಪಾ ತಟ್ಟಿಮನಿ (2020) ಅವರು ಬರೆದ ‘The Role of Public Service Advertisements in creating Covid 19 Awarness’ ಲೇಖನದಲ್ಲಿ. ಸಮಾಜದಲ್ಲಿ ಜಾಹೀರಾತಿನ ಪಾತ್ರ ಮತ್ತು ಹೊಣೆ ಗುರುತರವಾದುದು. ಯಾವುದೇ ಲಾಭದ ಉದ್ದೇಶವಿಲ್ಲದೇ ಕೆಲವು ಉತ್ಪನ್ನ ಮತ್ತು ಸೇವೆಗಳನ್ನು ಪ್ರಚಾರಗೊಳಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿಯನ್ನು ಉತ್ತೇಜಿಸುತ್ತವೆ. ಕೋವಿಡ್-19 ಕುರಿತಂತೆ ಜಾಗೃತಿ ಮೂಡಿಸುವಲ್ಲಿ ಸಾರ್ವಜನಿಕ ಹಿತಾಸಕ್ತಿಯ ಜಾಹೀರಾತುಗಳ ಪಾತ್ರ ಹೇಗಿದೆ ಎಂಬುದನ್ನು ಕುರಿತು ವಿಶ್ಲೇಷಣೆ ನಡೆಸಿದ್ದಾರೆ. ಕೋವಿಡ್ ೧೯ ಕುರಿತ ಸಾರ್ವಜನಿಕ ಹಿತಾಸಕ್ತಿಯ ಜಾಹೀರಾತುಗಳ ಪ್ರಸಾರದಲ್ಲಿ ಟಿವಿ ಮಾಧ್ಯಮ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಶೇ.60ರಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಶೇ.14ರಷ್ಟು ಜನರು ಪತ್ರಿಕೆಗಳೆಂದು, ಶೇ.20ರಷ್ಟು ಜನರು ಡಿಜಿಟಲ್ ಮಾಧ್ಯಮ ಎಂದು, ಶೇ.6ರಷ್ಟು ಜನರು ರೇಡಿಯೋ ಎಂದು ಪ್ರತಿಕ್ರಿಯಿಸಿರುವ ಅಂಶ ತಿಳಿದು ಬಂದಿದೆ. ಕೋವಿಡ್-19 ಕುರಿತ ಸಾರ್ವಜನಿಕ ಹಿತಾಸಕ್ತಿ ಜಾಹೀರಾತುಗಳು ಶೇ.60ರಷ್ಟು ಜನರ ಮೇಲೆ ಪ್ರಭಾವ ಬೀರಿವೆ ಎಂಬ ಅಂಶವನ್ನು ಕಂಡುಕೊಂಡಿದ್ದಾರೆ.


ಚಂದ್ರಕಾಂತ್ ಕಬಾಡೆ ಮತ್ತು ನಿತೀನ್‌ರಣದೀವ್ (2020) ಬರೆದ‘Editorial Coverage of Covid 19 in Marthi Dailies Sakal and Pudari’ ಲೇಖನವು ಕೋವಿಡ್-19 ಕುರಿತು ಜನರಿಗೆ ಅಗತ್ಯವಾದ ಮಾಹಿತಿಯನ್ನು ನಿಖರವಾಗಿ ಮತ್ತು ವಸ್ತುನಿಷ್ಟವಾಗಿ ತಲುಪಿಸುವಲ್ಲಿ ಜಾಗತೀಕ ಮಾಧ್ಯಮಗಳಿಗಿಂತ ಪ್ರಾದೇಶಿಕ ಪತ್ರಿಕೆಗಳು ಮುಂಚೂಣಿಯಲ್ಲಿದ್ದು, ಹೆಚ್ಚು ಪ್ರಭಾವಿಯುತವಾಗಿವೆ. ಈ ಹಿನ್ನೆಲೆಯಲ್ಲಿ ಮರಾಠಿಯ ಸಕಾಲ ಮತ್ತು ಪುಧಾರಿ ಪತ್ರಿಕೆಗಳು ಸಂಪಾದಕೀಯ ಬರಹಗಳಲ್ಲಿ ಕೋವಿಡ್-19 ಸಂಬಂಧಿತ ವಿಚಾರಗಳಿಗೆ ನೀಡಿರುವ ಮಹತ್ವವನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದ್ದಾರೆ. ಸಕಾಲ ಮತ್ತು ಪುಧಾರಿ ಎರಡು ಪತ್ರಿಕೆಗಳು ಸಂಪಾದಕೀಯ ಬರಹಗಳಲ್ಲಿ ಕೋವಿಡ್-19 ಕುರಿತಂತೆ ಜನಜಾಗೃತಿ ಮೂಡಿಸುವಲ್ಲಿ, ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ನೀಡುವಲ್ಲಿ, ಸರ್ಕಾರದ ಯೋಜನೆಗಳನ್ನು ಟೀಕಿಸುವಲ್ಲಿ ಮತ್ತು ಓದುಗರ ಪತ್ರ, ಅಂಕಣದಲ್ಲಿ ಓದುಗರ ಟೀಕೆ ಟಿಪ್ಪಣಿಗಳನ್ನು ಪ್ರಕಟಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಪುಧಾರಿ ಪತ್ರಿಕೆ ಶೇ.೪೦ರಷ್ಟು ಮತ್ತು ಸಕಾಲ ಪತ್ರಿಕೆಯು ಶೇ30 ರಷ್ಟು ಸ್ಥಳಾವಕಾಶವನ್ನು ಕರೋನಾ ಸಂಬಂಧಿತ ಸುದ್ದಿಗಳನ್ನು ಪ್ರಕಟಿಸಲು ಮೀಸಲಿಟ್ಟಿರುವುದು ಈ ಸಂಶೋಧನಾ ಲೇಖನದಿಂದ ತಿಳಿದುಬಂದಿದೆ.


ಅಧ್ಯಯನದ ಉದ್ದೇಶಗಳು

  1. ಕೋವಿಡ್-19 ಜಾಗೃತಿ ಮೂಡಿಸುವಲ್ಲಿ ಸಣ್ಣ ಪತ್ರಿಕೆಗಳ ಪಾತ್ರವನ್ನು ತಿಳಿಯುವುದು

  2. ಸಣ್ಣ ಪತ್ರಿಕೆಗಳ ಮೇಲೆ ಕೋವಿಡ್-19 ಪ್ರಭಾವವನ್ನು ತಿಳಿಯುವುದು.

  3. ಕೋವಿಡ್-19 ಕಾಲದಲ್ಲಿ ಪತ್ರಕರ್ತರು ಎದುರಿಸಿದ ಸವಾಲುಗಳನ್ನು ತಿಳಿಯುವುದು.


ಅಧ್ಯಯನದ ವ್ಯಾಪ್ತಿ:ಸಣ್ಣ ಪತ್ರಿಕೆಗಳ ಮೇಲೆ ಕೋವಿಡ್-19 ಪ್ರಭಾವ ಎಂಬ ಸಂಶೋಧನಾ ಲೇಖನಕ್ಕೆ ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಯ 8 ಸಣ್ಣ ಪತ್ರಿಕೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.


ಅಧ್ಯಯನದ ವಿಧಾನ

ಸಣ್ಣ ಪತ್ರಿಕೆಗಳ ಮೇಲೆ ಕೋವಿಡ್-19 ಪ್ರಭಾವ ಎಂಬ ಸಂಶೋಧನಾ ಲೇಖನಕ್ಕೆ ಸಂದರ್ಶನ ವಿಧಾನವನ್ನು ಬಳಸಲಾಗಿದೆ. ಈ ಅಧ್ಯಯನಕ್ಕಾಗಿ ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಯ ಸಣ್ಣ ಪತ್ರಿಕೆಗಳ ಸಂಪಾದಕರು, ಸ್ಥಾನಿಕ ಸಂಪಾದಕರು, ವರದಿಗಾರರು ಸೇರಿದಂತೆ 8 ಜನರನ್ನು ಸಂದರ್ಶಿಸಿ ಅವರು ನೀಡಿದ ಮಾಹಿತಿಯನ್ನು ಗುಣಾತ್ಮಕವಾಗಿ ವಿಶ್ಲೇಷಣೆ ಮಾಡಲಾಗಿದೆ.



ಅಧ್ಯಯನದ ಪ್ರಾಮುಖ್ಯತೆ: ಕರೋನಾ ಎಂಬ ಸಂಕ್ರಾಮಿಕ ರೋಗದಿಂದಾಗಿ ಸಣ್ಣ ಪತ್ರಿಕೆಗಳು ಹೊಸ ಸಮಸ್ಯೆ - ಸವಾಲುಗಳಿಗೆ ಮುಖಾಮುಖಿಯಾದವು. ಸರ್ಕಾರ ರೋಗ ಹರಡುವುದನ್ನು ತಡೆಯಲು ಕರ್ಫ್ಯೂ, ಲಾಕ್‌ಡೌನ್ ಹೇರಿದಾಗ ಎಲ್ಲವೂ ಸ್ತಬ್ಧವಾಗಿತ್ತು. ಸರಕು-ಸಾರಿಗೆ, ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತು. ಲಾಕ್‌ಡೌನ್‌ನಿಂದಾಗಿ ಮುದ್ರಣ ಮಾಧ್ಯಮ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಸಂದರ್ಭದಲ್ಲಿ ಸಣ್ಣ ಪತ್ರಿಕೆಗಳ ಪಾತ್ರ, ಉದ್ದೇಶ, ಪ್ರಮಾಣ ಮತ್ತು ಪರಿಣಾಮಗಳೆಷ್ಟು ಎಂಬುದನ್ನು ಪರಾಮರ್ಶಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಸಣ್ಣ ಪತ್ರಿಕೆಗಳ ಮೇಲೆ ಕೋವಿಡ್-೧೯ ಪ್ರಭಾವ ಎಂಬ ಅಧ್ಯಯನ ಮಹತ್ವ ಪಡೆದುಕೊಳ್ಳುತ್ತದೆ.

ಫಲಿತಾಂಶಗಳು ಮತ್ತು ಮಾಹಿತಿ ವಿಶ್ಲೇಷಣೆ

1. ಸಣ್ಣ ಪತ್ರಿಕೆಗಳು ಮತ್ತು ಕೋವಿಡ್-19 ಜಾಗೃತಿ

ಮಾಹಿತಿ, ಶಿಕ್ಷಣ, ಮನರಂಜನೆಯನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದ ಪತ್ರಿಕಾರಂಗ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಉದ್ದೇಶಗಳಾಚೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕರೋನಾ ಕುರಿತು ಜನಜಾಗೃತಿ ಮೂಡಿಸುವಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡವು. ಕರೋನಾ ಮೊದಲ ಅಲೆಯಲ್ಲಿ ಸರ್ಕಾರ ತುರ್ತಾಗಿ ಜಾರಿಗೊಳಿಸಿದ ಲಾಕ್‌ಡೌನ್ ಜನರನ್ನು ಬೆಚ್ಚಿಬೀಳಿಸಿತು. ಬಹುತೇಕರು ಮಾನಸಿಕ ಖಿನ್ನತೆಗೆ ಒಳಗಾದರು. ಹಿರಿಯರಲ್ಲಿ ಹೆಚ್ಚಾಗಿ ಸೋಂಕಿನ ಲಕ್ಷಣಗಳು ಕಂಡುಬಂದವು. ಈ ಸಂದರ್ಭದಲ್ಲಿ ಸಣ್ಣ ಪತ್ರಿಕೆಗಳು ಸಹ ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಛತೆ, ಆರೋಗ್ಯದ ಕಾಳಜಿ, ಮಾನಸಿಕ ಧೈರ್ಯ ತುಂಬುವಲ್ಲಿ ಪ್ರಮುಖ ಪಾತ್ರವಹಿಸಿದವು. ಕೋವಿಡ್-19 ರೋಗ ಹರಡುವ ಪರಿ, ರೋಗದ ಲಕ್ಷಣಗಳು, ಚಿಕಿತ್ಸಾ ಕ್ರಮಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಶೇಷ ವರದಿ, ಲೇಖನ, ನುಡಿಚಿತ್ರಗಳನ್ನು ಪ್ರಕಟಿಸಿದವು. ಸಣ್ಣ ಪತ್ರಿಕೆಗಳ ಮುದ್ರಿತ ಪ್ರತಿಗಳು ಜನರಿಗೆ ತಲುಪಲು ಸಾಧ್ಯವಾಗದಿದ್ದಾಗ ಕೆಲವು ಪತ್ರಿಕೆಗಳು ತಂತ್ರಜ್ಞಾನದ ನೆರವಿನಿಂದ ಇ-ಪತ್ರಿಕೆಗಳನ್ನು ಮತ್ತು ವೆಬ್‌ಸೈಟ್‌ಗಳನ್ನು ಆರಂಭಿಸಿದವು. ಆನ್‌ಲೈನ್‌ನಲ್ಲಿ ಇ-ಪತ್ರಿಕೆಗಳನ್ನು ಉಚಿತವಾಗಿ ಓದಲು ಅವಕಾಶ ಮಾಡಿಕೊಟ್ಟವು. ಬಳ್ಳಾರಿ ಬೆಳಗಾಯಿತು ಎಂಬ ಸಣ್ಣ ಪತ್ರಿಕೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಆದ ಯೂಟ್ಯೂಬ್ ಚಾನಲ್‌ನ್ನು ಆರಂಭಿಸಿ ಅದರ ಮೂಲಕ ಜನರಿಗೆ ಮಾಹಿತಿ ನೀಡಿತು. ಹೀಗೆ ಸಣ್ಣ ಪತ್ರಿಕೆಗಳು ವಿವಿಧ ಆಯಾಮಗಳನ್ನು ಬಳಸಿಕೊಂಡು ಜನರಲ್ಲಿ ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದ್ದವು.


ಸಣ್ಣಪತ್ರಿಕೆಗಳ ಮೇಲೆ ಕೋವಿಡ್ ಪ್ರಭಾವ

ಪತ್ರಿಕೆಗಳ ಪ್ರಸರಣೆ ಕುಸಿತ: ಕೋವಿಡ್-19 ಮಹಾಮಾರಿ ದೇಶದ್ಯಾಂತ ಹರಡಲು ಪ್ರಾರಂಭಿಸಿದ್ದರಿಂದ ಸರ್ಕಾರ ಲಾಕ್‌ಡೌನ್ ವಿಧಿಸಿತು. ಜನರು ಮನೆಗಳಲ್ಲೇ ಇರುವಂತಾಯಿತು. ಅಗತ್ಯ ವಸ್ತುಗಳನ್ನು ಮಾತ್ರ ನಿಗಧಿಪಡಿಸಿದ ಸಮಯದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಲಾಕ್‌ಡೌನ್‌ನಿಂದ ಸಾರಿಗೆ ಸಂಚಾರ ಸ್ಥಗಿತಗೊಂಡಿತು. ಪತ್ರಿಕಾ ಸಂಸ್ಥೆಗಳು ತಮ್ಮ ಪತ್ರಿಕೆಗಳ ಪ್ರತಿಗಳನ್ನು ಒಂದೆಡೆಯಿಂದ ಮತ್ತೊಂದಡೆಗೆ ಸಾಗಿಸುವುದು ಕಷ್ಟವಾಯಿತು. ಇದರಿಂದ ಪತ್ರಿಕೆಗಳ ಪ್ರಸರಣೆಯು ಕುಸಿಯಿತು. ಪತ್ರಿಕೆಗಳಿಂದಲೂ ಕೋವಿಡ್-19 ಹರಡುವುದು ಎಂಬ ಸುಳ್ಳು ಸುದ್ದಿಯು ಸಹ ಪತ್ರಿಕೆಗಳ ಪ್ರಸರಣೆ ಕಡಿಮೆಯಾಗಲು ಕಾರಣವಾಯಿತು ಎಂಬುದು ಬಹುತೇಕ ಸಣ್ಣ ಪತ್ರಿಕೆಗಳ ಸಂಪಾದಕರ ಅಭಿಪ್ರಾಯವಾಗಿದೆ.


ಜಾಹೀರಾತು ಅಭಾವ: ದಿನಪತ್ರಿಕೆಗಳ ಮುಖ್ಯ ಆದಾಯದ ಮೂಲ ಒಂದು ಓದುಗರಾದರೇ, ಮತ್ತೊಂದು ಜಾಹೀರಾತು. ಕೋವಿಡ್-19 ಕಾಲಘಟ್ಟದಲ್ಲಿ ವಿಧಿಸಿದ ಲಾಕ್‌ಡೌನ್ ಪರಿಣಾಮವಾಗಿ ಪತ್ರಿಕೆಗಳ ಪುಟ ಸಂಖ್ಯೆ ಕಡಿಮೆಯಾಯಿತು. ಪತ್ರಿಕೆಗಳಿಗೆ ಬರುತ್ತಿದ್ದ ಜಾಹೀರಾತುಗಳ ಪ್ರಮಾಣವೂ ಕಡಿಮೆಯಾಯಿತು. ಈ ಸಂದರ್ಭದಲ್ಲಿ ಪತ್ರಿಕೆಗಳು ಆರ್ಥಿಕವಾಗಿ ದುರ್ಬಲವಾದವು. ಅದರಲ್ಲೂ ಸಣ್ಣ ಪತ್ರಿಕೆಗಳು ಮುದ್ರಣ ಕಾಗದ ಖರೀದಿ ಸಮಸ್ಯೆ, ಪತ್ರಿಕೆ ವಿತರಣೆಯ ತೊಂದರೆ, ಪತ್ರಿಕೆಗಳ ಮುದ್ರಣ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಕೋವಿಡ್-19 1ನೇ ಅಲೆಯ ನಂತರದ ದಿನಗಳಲ್ಲಿ ಮುದ್ರಣ ವೆಚ್ಚ ದುಪ್ಪಟ್ಟಾಗಿದ್ದು, ಸಣ್ಣ ಪತ್ರಿಕೆಗಳು ನಷ್ಟ ಅನುಭವಿಸುತ್ತಿವೆ ಎಂಬುದನ್ನು ಅಧ್ಯಯನವು ಪ್ರಸ್ತುತಪಡಿಸುತ್ತಿದೆ.


ಸಹಾಯಧನ ಕೊರತೆ: ಕೋವಿಡ್-19 ಸಂದರ್ಭದಲ್ಲಿ ಬಹುತೇಕ ಸಣ್ಣ ಪತ್ರಿಕೆಗಳು ಹಣಕಾಸಿನ ಸಮಸ್ಯೆಯನ್ನು ಎದುರಿಸಿದವು. ಈ ಸಂದರ್ಭದಲ್ಲಿ ಸರ್ಕಾರ ಸಣ್ಣ ಪತ್ರಿಕೆಗಳ ನೆರವಿಗೆ ಬರದಿರುವುದು ಕಂಡು ಬರುತ್ತದೆ. ಇದರಿಂದ ಕೆಲವು ಸಣ್ಣ ಪತ್ರಿಕೆಗಳು ಕೆಲವು ತಿಂಗಳುಗಳ ಕಾಲ ಸ್ಥಗಿತಗೊಂಡಿವೆ. ಆದರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಒತ್ತಾಯದ ಮೇರೆಗೆ ಕೋವಿಡ್ ಕಾಲದಲ್ಲಿ ಮರಣ ಹೊಂದಿದ ಪತ್ರಕರ್ತರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡಿದೆ.


ಪತ್ರಕರ್ತರು ಎದುರಿಸಿದ ಸವಾಲುಗಳು

ಗ್ರಾಮೀಣ ಪ್ರದೇಶಗಳನ್ನು ತ್ವರಿತವಾಗಿ ತಲುಪುವ ಸಣ್ಣ ಪತ್ರಿಕೆಗಳು ಸರ್ಕಾರದ ನಿರ್ಧಾರಗಳನ್ನು ಜನತೆಗೆ ತಿಳಿಸುವಲ್ಲಿ ಮುಂಚೂಣಿ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿದವು. ವೈದ್ಯರಂತೆ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಬೇಕಾಯಿತು. ಕೆಲವು ಪತ್ರಕರ್ತರು ಕೋವಿಡ್-19 ರೋಗಕ್ಕೆ ಪ್ರಾಣ ಕಳೆದುಕೊಂಡರು.ಕೋವಿಡ್ ಕಾಲದಲ್ಲಿ ಪತ್ರಕರ್ತರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗಲಿಲ್ಲ. ಇದರಿಂದ ಅವರ ಜೀವನ ನಿರ್ವಹಣೆ ಮಾಡುವುದು ಕಷ್ಟವಾಯಿತು. ಸಣ್ಣ ಪತ್ರಿಕೆಗಳು ಆರ್ಥಿಕವಾಗಿ ನಷ್ಟ ಅನುಭವಿಸಿದ್ದರಿಂದ ಕೆಲವು ಪತ್ರಕರ್ತರು ಕೆಲಸ ಕಳೆದುಕೊಂಡರು. ಕೋವಿಡ್ ಕಾಲದಲ್ಲಿ ವರದಿಗಾರಿಕೆಗೆಂದು ಹೊರಗಡೆ ಬಂದ ಸಂದರ್ಭದಲ್ಲಿ ಪತ್ರಕರ್ತರ ಮೇಲೆ ಹಲ್ಲೆಗಳಾದವು. ಪತ್ರಕರ್ತರಲ್ಲಿ ಅನಿಶ್ಚಿತತೆ ಮತ್ತು ಅಭದ್ರತೆ ಉಂಟಾಯಿತು. ಹೀಗೆ ಸಣ್ಣ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಸಹ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು.


ಉಪಸಂಹಾರ

ಸ್ಥಳೀಯ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿದಿರುವ ಸಣ್ಣ ಪತ್ರಿಕೆಗಳು ಜನರ ನಾಡಿಮಿಡಿತಕ್ಕೆ ಸ್ಪಂದಿಸುತ್ತವೆ. ಕೋವಿಡ್ ಕಾಲದಲ್ಲಿ ಸಣ್ಣ ಪತ್ರಿಕೆಗಳು ಜನರಿಗೆ ಕ್ಷಣ-ಕ್ಷಣದ ಮಾಹಿತಿ ನೀಡುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವಲ್ಲಿ ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸಿವೆ. ಕೋವಿಡ್-19 ಪೂರ್ವದಿಂದಲೂ ಸಣ್ಣ ಪತ್ರಿಕೆಗಳು ಬಂಡವಾಳದ ಕೊರತೆ, ಮುದ್ರಣ ಕಾಗದದ ಕೊರತೆ, ಜಾಹಿರಾತು ಕೊರತೆ, ಸುದ್ದಿ ಮೂಲಗಳ ತಾರತಮ್ಯ ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಕೋವಿಡ್-19 ಕಾಲಘಟ್ಟದಲ್ಲಿ ಈ ಎಲ್ಲ ಸಮಸ್ಯೆಗಳು ಮತಷ್ಟು ಉಲ್ಬಣಗೊಂಡವು. ಸಣ್ಣ ಪತ್ರಿಕೆಗಳಿಗೆ ಬರುತ್ತಿದ್ದ ಜಾಹಿರಾತುಗಳು ಪ್ರಸರಣೆ ಕಡೆಮೆಯಾದ್ದರಿಂದ ನಿಂತು ಹೋದವು. ಸರ್ಕಾರ ನೀಡಿದ ಜಾಹಿರಾತುಗಳ ಹಣ ಸರಿಯಾದ ಸಮಯಕ್ಕೆ ಸಣ್ಣ ಪತ್ರಿಕೆಗಳನ್ನು ತಲುಪಲಿಲ್ಲ. ಪತ್ರಿಕೆಗಳ ಉಳಿವಿಗಾಗಿ ಸರ್ಕಾರ ಸೂಕ್ತ ಸಹಾಯಧನವನ್ನು ಒದಗಿಸಲಿಲ್ಲ. ಇದರಿಂದ ಸಣ್ಣ ಪತ್ರಿಕೆಗಳು ಆರ್ಥಿಕವಾಗಿ ಮತಷ್ಟು ದುರ್ಬಲವಾದವು.



ಪರಾಮರ್ಶನ ಗ್ರಂಥಗಳು

ಚಂದ್ರಶೇಖರ್ ಬಿ.ಎಸ್. (1979). ಸಮೂಹ ಮಾಧ್ಯಮಗಳು-ಭಾರತೀಯ ಸಮಾಜದಲ್ಲಿ. ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ.

ರಂಗನಾಥರಾವ್, ಜಿ.ಎನ್. (2006). ಪತ್ರಿಕೋದ್ಯಮ. ಬೆಂಗಳೂರು: ಕಾಮಧೇನು ಪ್ರಕಾಶನ.

ರಾಮಣ್ಣ, ಕೆ. (2009). ನಮ್ಮ ಪತ್ರಿಕೋದ್ಯಮ. ಮೈಸೂರು : ಆಶಾ ಪ್ರಕಾಶನ

ಈಶ್ವರ ದೈತೋಟ (2015) ಅಭ್ಯುದಯ ಪತ್ರಿಕೋದ್ಯಮ,ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು

ಡಿ ವಿ ಗುಂಡಪ್ಪ(2014) ವೃತ್ತಪತ್ರಿಕೆ,ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು

ಕೆ.ಜೆ. ಜೋಸೆಫ್ (2012).ಪತ್ರಿಕೋದ್ಯಮ ಪರಿಚಯ,ಮೈಸೂರು: ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗ

Narayanagouda, T. R. (2010). Small newspapers and readers. Master’s dissertation of Journalism submitted to Kuvempu University, Shankaraghatta. (in kannada)

Chanderkanth Kabade and Nithin Ranadev (2020) Editorial Coverage of Covid 19 in Marthi Dailies Sakal and Pudari, Communication Today - April-December 2020 Covid and Media Special Issue.

Deepa Tattimani and Onkar Kakde (2020) The Role of Public Service Advertisements in creating Covid 19 Awarness,Communication Today - April-December 2020 Covid and Media Special Issue.

Dhanashree, Himani Garg, Anjali Chauhan, Manisha Bhatia, Gaurav Sethi, Gopal Chauhan (2021).The Role of Mass media and its impact on general public during coronavirus disease 2019 pandemic in North India: An online Assessment, IndianJournal of Medical Sciences, January to April -2021 Vol – 73, Issu -1

Gitalikakati and Debahuti Chakraverthy (2020). Role of Regional newspapers During Covid 19 : Content Analysis of Selected Newspapers of Assam,Communication Today - April-December 2020 Covid and Media Special Issue

Supriya Shelar and Nisha Power (2020). Covid 19 Lockdown and Environment : A Study of Western Ghats, Communication Today - April-December 2020 Covid and Media Special Issue.

Vahini (2020) Covid and Print Industry: Financial Implications and Strategies, Communication Today - April-December 2020 Covid and Media Special Issue.


Comments


bottom of page